ADVERTISEMENT

ಶಾಲೆಯಲ್ಲಿ ಸಾವಯವ ಪಾಠ

ಆರ್.ಚೌಡರೆಡ್ಡಿ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ವಿವಿಧ ನೈಸರ್ಗಿಕ ತಿನಿಸುಗಳ ತಯಾರಿಕೆಯಲ್ಲಿ ಎಂ.ಶ್ರೀರಾಮರೆಡ್ಡಿ
ವಿವಿಧ ನೈಸರ್ಗಿಕ ತಿನಿಸುಗಳ ತಯಾರಿಕೆಯಲ್ಲಿ ಎಂ.ಶ್ರೀರಾಮರೆಡ್ಡಿ   

ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ಬೈರಪ್ಪಲ್ಲಿ ಗ್ರಾಮದ ಸಮೀಪದ ಭೈರವೇಶ್ವರ ವಿದ್ಯಾನಿಕೇತನದ ವಿಶಾಲವಾದ ಆವರಣದಲ್ಲಿ ಸಾವಯವ ಗೊಬ್ಬರ ಬಳಸಿ ಹುಲುಸಾಗಿ ಬೆಳೆಯಲಾಗಿರುವ ಬಾಳೆಯ ತೋಟ ಸಾವಯವ ಕೃಷಿಯ ಮಹತ್ವವನ್ನು ಸಾರುತ್ತಿದೆ. ಸಾವಯವ ಕೃಷಿಯ ಬಗ್ಗೆ ಒಲವಿರುವ ರೈತರನ್ನು ಕೈಬೀಸಿ ಕರೆಯುತ್ತಿದೆ.

ಶಾಲೆಯ ಪಕ್ಕದ ಬಾಳೆಯ ತೋಟದ ಹಿಂದೆ ಶಿಕ್ಷಣ ಹಾಗೂ ತೋಟಗಾರಿಕಾ ತಜ್ಞ ಎಂ.ಶ್ರೀರಾಮರೆಡ್ಡಿ ಅವರ ದೂರದೃಷ್ಟಿ ಹಾಗೂ ಪರಿಶ್ರಮ ಅಡಗಿದೆ. ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಂ.ಶ್ರೀರಾಮರೆಡ್ಡಿ ಈಗಾಗಲೇ ಶಿಕ್ಷಣ ಹಾಗೂ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಜನರ ಗಮನ ಸೆಳೆದಿದ್ದಾರೆ. ಅವರು ಶಾಲೆಯ ಆವರಣದಲ್ಲಿ ಕೈಗೊಂಡ ಪ್ರಯೋಗದ ಫಲವೇ ಈ ಬಾಳೆಯ ತೋಟ.

ಸುಮಾರು ಎರಡು ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಭೈರವೇಶ್ವರ ವಿದ್ಯಾನಿಕೇತನದಲ್ಲಿ ನಾಲ್ಕು ಶೌಚ ಗುಣಿಗಳಿವೆ. ಅವು ತುಂಬಿದಾಗ ಶೌಚವನ್ನು ಹೊರಗೆ ಸಾಗಿಸುವ ಅಗತ್ಯ ಬಿದ್ದಿತು. ಅದನ್ನು ಪಿಟ್‌ನಿಂದ ಎತ್ತಿ ಹೊರಗೆ ಸಾಗಿಸಲು ಹೆಚ್ಚು ವೆಚ್ಚ ತಗಲುತ್ತಿತ್ತು. ಆ ವೆಚ್ಚವನ್ನು ತಪ್ಪಿಸುವ ದೃಷ್ಟಿಯಿಂದ ಶ್ರೀರಾಮರೆಡ್ಡಿ ಅವರು ವಿಶೇಷವಾದ ಮೋಟಾರ್ ತರಿಸಿದರು. ಶಾಲೆಯ ಆವರಣದಲ್ಲಿ ಪಚ್ಚೆಬಾಳೆ ಗಡ್ಡೆಯನ್ನು ನಾಟಿ ಮಾಡಿಸಿ, ಕೊಳವೆಯ ಮೂಲಕ ಶೌಚವನ್ನು ತೋಟಕ್ಕೆ ಹರಿಸಿದರು. ಜೊತೆಗೆ ನೀರನ್ನೂ ಉಣಿಸಿದರು.

  ತೋಟಕ್ಕೆ ರಾಸಾಯನಿಕ ಗೊಬ್ಬರವನ್ನಾಗಲಿ, ಕೀಟನಾಶಕವನ್ನಾಗಲಿ ಬಳಸಿಲ್ಲ. ಶಾಲೆಯ ತೋಟದಲ್ಲಿ ನಾಟಿ ಮಾಡಲಾಗಿದ್ದ ಸುಮಾರು 300 ಸಸಿಗಳು ಆರೋಗ್ಯಪೂರ್ಣವಾಗಿ ಬೆಳೆದು ನಿಂತಿವೆ. ಪ್ರತಿ ಗೊನೆಯಲ್ಲೂ 180ಕ್ಕಿಂತ ಹೆಚ್ಚು ಕಾಯಿಗಳಿವೆ. ಗೊನೆಯೊಂದು 65 ಕೆ.ಜಿ ತೂಗುತ್ತದೆ. ಇದು ಶಾಲೆಯೊಂದರ ಸಾಧನೆ. ಈ ತೋಟದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸಲಾಗಿದೆ. ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಆಸಕ್ತ ರೈತರು ತೋಟಕ್ಕೆ ಭೇಟಿ ನೀಡಿ ಸಾವಯವ ಕೃಷಿಯ ಮಹತ್ವವನ್ನು ಅರಿತುಕೊಳ್ಳುತ್ತಿದ್ದಾರೆ.

ಭೈರವೇಶ್ವರ ವಿದ್ಯಾನಿಕೇತನದ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ ಅವರು ಹೇಳುವಂತೆ, ಸಾವಯವ ಕೃಷಿಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದಿರುವುದರಿಂದ ಉತ್ಪನ್ನ ಹೆಚ್ಚು ಆರೋಗ್ಯಪೂರ್ಣವಾಗಿರುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸಿ ಮಾಡುವ ಬೇಸಾಯಕ್ಕೆ ಹೋಲಿಸಿದರೆ ಖರ್ಚು ತುಂಬಾ ಕಡಿಮೆ. ರೈತರು ತಾವು ಮೇಯಿಸುವ ಕೆಲವೇ ಜಾನುವಾರುಗಳಿಂದ ಹೆಚ್ಚು ಫಲವತ್ತಾದ ಗೊಬ್ಬರವನ್ನು ಪಡೆದುಕೊಳ್ಳಬಹುದು.

ವೈಜ್ಞಾನಿಕವಾಗಿ ಸಾವಯವ ಕೃಷಿ ಕೈಗೊಂಡು ಬಾಳೆ ಬೆಳೆದಲ್ಲಿ ಒಳ್ಳೆ ಲಾಭವಿದೆ. ಆದರೆ ಶ್ರೀರಾಮರೆಡ್ಡಿ ಈಗ ಬಂದಿರುವ ಬಾಳೆಯ ಫಸಲನ್ನು ಮಾರದಿರಲು ನಿರ್ಧರಿಸಿದ್ದಾರೆ. ಶಾಲೆಯ ಮಕ್ಕಳು ಪ್ರತಿ ದಿನ ಬಾಳೆ ಗೊನೆಗಳನ್ನು ನೋಡಿ ಖುಷಿಪಡುತ್ತಾರೆ. ಆದ್ದರಿಂದ ಬಲಿತ ಮೇಲೆ ಗೊನೆಗಳನ್ನು ಕತ್ತರಿಸಿ, ಯಾವುದೇ ರಾಸಾಯನಿಕ ಬಳಸದೆ ಸಾಂಪ್ರದಾಯಿಕ ವಿಧಾನದಲ್ಲಿ ಹಣ್ಣು ಮಾಡಿ ಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ವಿತರಿಸಲು ಬಯಸಿದ್ದಾರೆ. ಈ ಹಿಂದೆಯೂ ಹಾಗೇ ಮಾಡಲಾಗಿತ್ತು.

ಶ್ರೀರಾಮರೆಡ್ಡಿ ಅವರು ಈಗಾಗಲೇ ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಸಾಬೂನು, ಹಲ್ಲು ಪುಡಿ, ಶಾಂಪು ಮುಂತಾದ ದಿನಬಳಕೆ ವಸ್ತುಗಳ ತಯಾರಿಕೆ ಮತ್ತು ನೆಲ್ಲಿಕಾಯಿ, ವಿವಿಧ ಹಣ್ಣುಗಳಿಂದ ಪಾನೀಯ ಮತ್ತು ತಿನಿಸುಗಳನ್ನು ತಯಾರಿಸುವುದರ ಬಗ್ಗೆ ರಾಜ್ಯಾದ್ಯಂತ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಗೆ ತರಬೇತಿ ನೀಡಿದ್ದಾರೆ.   ಸ್ವತಃ ಕೃಷಿಕರಾದ ಅವರು ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಯೋಗಗಳನ್ನು ಮಾಡುವುದರ ಮೂಲಕ ಕೃಷಿಕ ಸಮುದಾಯದ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.