ADVERTISEMENT

ಶುಂಠಿ ಮಧ್ಯೆ ತರಕಾರಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಹೊಸನಗರ ತಾಲೂಕಿನ ಬಾಳೂರಿನ ರೈತ ಬಾಬಣ್ಣ ಮಳೆಯಾಶ್ರಯದಲ್ಲಿ ಶುಂಠಿ ನಡುವೆ ತರಕಾರಿ ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಸಾಗರ- ತೀರ್ಥಹಳ್ಳಿ ರಸ್ತೆಯಲ್ಲಿ ಆನೆಕೆರೆ ಗ್ರಾಮದ ಬಳಿ ಅವರು ಎರಡು ಎಕರೆ ಹೊಲದಲ್ಲಿ ಶುಂಠಿ ಬೆಳೆದಿದ್ದಾರೆ.

 ಶುಂಠಿ ಗಿಡಗಳ ನಡುವೆ ಬೇರೆ ಯಾವ ಬೆಳೆ ಬೆಳೆಯಲು ಸಾಧ್ಯವಿಲ್ಲ. ಬೆಳೆದರೆ ಶುಂಠಿ ಇಳುವರಿ ಕಡಿಮೆ ಆಗುತ್ತದೆ ಎಂಬ ಭಾವನೆ ರೈತರಲ್ಲಿದೆ. ಅದು ತಪ್ಪು ಎಂದು ಬಾಬಣ್ಣ ತೋರಿಸಿಕೊಟ್ಟಿದ್ದಾರೆ.

ಅವರು ಕಳೆದ ವರ್ಷ ಮನೆಯ ಹಿತ್ತಲಲ್ಲಿ ಕಾಲು ಎಕರೆ ಜಾಗದಲ್ಲಿ ಶುಂಠಿ ನಡುವೆ ಸಾಕಷ್ಟು ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆದಿದ್ದರು. ಶುಂಠಿ ಇಳುವರಿಯೂ ಚೆನ್ನಾಗಿತ್ತು. ಈ ಅನುಭವದ ಆಧಾರದ ಮೇಲೆ ಅವರು ಎರಡು ಎಕರೆಯಲ್ಲಿ ಶುಂಠಿ ನಡುವೆ ತರಕಾರಿ ಬೆಳೆಯಲು ನಿರ್ಧರಿಸಿದರು.

ಶುಂಠಿ ಜತೆಗೆ ಬೆಂಡೆ, ಸೌತೆ, ಹೀರೆ, ಮೆಣಸು, ಕುಂಬಳ, ಅರಿಶಿನ, ಕೆಸುವು, ಅಲಸಂದೆ, ಬೀನ್ಸ್, ತೊಗರಿ ಇತ್ಯಾದಿ ತರಕಾರಿಗಳನ್ನು ಹಾಕಿದರು. ಮನೆಗೆ ಬೇಕಾಗುವಷ್ಟು ಬಳಸಿಕೊಂಡು ಹೆಚ್ಚಾಗಿದ್ದನ್ನು ಅವರು ಸಮೀಪದ ಸಂತೆಯಲ್ಲಿ ಮಾರಿ ಹಣ ಗಳಿಸುತ್ತಾರೆ.  

ಶುಂಠಿ ಪಟ್ಟೆ ನಡುವೆಯೇ 30 ಕೇಜಿ ಬೆಂಡೆಕಾಯಿ, 60 ಕೇಜಿ ಬೀನ್ಸ್, 20 ಕೇಜಿ ಹೀರೆಕಾಯಿ,50 ಕೇಜಿ ಹಲಸಂದೆ, ಮತ್ತು ಅರಿವೆ ಸೊಪ್ಪು ಬೆಳೆದಿದ್ದಾರೆ. 30 ಕೇಜಿ ಹಸಿ ಮೆಣಸಿನಕಾಯಿ, 25 ಕೇಜಿ ತೊಗರಿ ನಿರೀಕ್ಷಿಸಿದ್ದಾರೆ. ಸುಮಾರು ಐದು ಕ್ವಿಂಟಲ್ ಶುಂಠಿ ಇಳುವರಿ ನಿರೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.