ADVERTISEMENT

ಸ್ವಂತ ಖರ್ಚಿನಲ್ಲಿ ಗೋ ಮೇಳ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಅದೊಂದು ಭಾನುವಾರ. ಆ ದಿನ ತೀರ್ಥಹಳ್ಳಿ ತಾಲೂಕು ಬುಕ್ಲಾಪುರದ ಹೊರಬೈಲಿನಲ್ಲಿ ಹಬ್ಬದ ಸಂಭ್ರಮ. ತಮ್ಮ ಪ್ರೀತಿಯ ಗೋವುಗಳಿಗೆ ಚೆನ್ನಾಗಿ ಸ್ನಾನ ಮಾಡಿಸಿ ಸಿಂಗರಿಸಿದ ಗೋಪಾಲಕರು ಗಂಟೆ ಹತ್ತಾಗುವ ಮುನ್ನವೆ ಅವುಗಳೊಂದಿಗೆ ಅನಂತರಾಜರವರ ತೋಟದ ಮನೆಯತ್ತ ಹೆಜ್ಜೆ ಹಾಕಿದರು.

ನೋಡ ನೋಡುತ್ತಿದ್ದಂತೆ ಜನ- ಜಾನುವಾರುಗಳ ಜಾತ್ರೆಯೇ ಸೇರಿ ಬಿಟ್ಟಿತು.  `ಗ್ರಾಮೀಣ ಗೋಮೇಳ~  ಎಂಬ ವಿಶಿಷ್ಟ ಕಾರ್ಯಕ್ರಮ ಅಲ್ಲಿ ಮೈದಳೆದಿತ್ತು.
ಇದು ಈ ಹಳ್ಳಿಯ ಕಮಕಾರು ಅನಂತರಾಜ ಎಂಬ ಕ್ರಿಯಾಶೀಲ ಯುವಕನ ಸಂಘಟನೆಯ ಫಲ. ಸಣ್ಣ ಕೃಷಿಕರು, ಕೃಷಿ ಕಾರ್ಮಿಕರೇ ಹೆಚ್ಚಿರುವ ಈ ಕುಗ್ರಾಮದಲ್ಲಿ ಮಲೆನಾಡು ಗಿಡ್ಡ ತಳಿಯ ದನಗಳೇ ಜಾಸ್ತಿ, ಮಿಶ್ರ ತಳಿಗಳು ಕಮ್ಮಿ. ಹಳ್ಳಿಕಾರ್, ಅಮೃತ್‌ಮಹಲ್ ಜಾತಿಯ ದನಗಳು ಸಾಕಷ್ಟಿವೆ.

ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ತಮ್ಮ ಜಾನುವಾರುಗಳನ್ನು ಅಲ್ಲಿಗೆ ತಂದಿದ್ದರು. ಚುರುಕು ಬುದ್ಧಿಯ, ಗಿಡ್ಡ ದೇಹದ, ಗಾಬರಿ ಪ್ರಕೃತಿಯ, ಹಾಯಲು, ಒದೆಯಲು ಹೆಸರುವಾಸಿಯಾಗಿರುವ, ರೋಗ ನಿರೋಧಕ ಶಕ್ತಿ ಹೊಂದಿರುವ ಮಲೆನಾಡು ಗಿಡ್ಡ ತಳಿಯ ಹಸುಗಳಿಗೆ ಹಗ್ಗ ಹಾಕಿ ಕಟ್ಟಿ ತರುವುದು ತುಂಬಾ ಕಷ್ಟ. ಆದರೂ ತಮ್ಮ ಮಾಲೀಕರ ಉತ್ಸಾಹಕ್ಕೆ ತಲೆಬಾಗಿ ಶಿಸ್ತಿನ ಸಿಪಾಯಿಗಳಂತೆ ನಡೆದು ಬಂದು ಗೋ ಮೇಳಕ್ಕೆ ಕಳೆಕಟ್ಟಿದವು.

ಮಲೆನಾಡಿನ ಹಳ್ಳಿಯಾದರೂ ನೂರಾರು ಜನ ತಮ್ಮ ದನಕರುಗಳೊಡನೆ ನಿಗದಿತ ಸಮಯದೊಳಗೆ ಅಲ್ಲಿ ಹಾಜರಾಗಿದ್ದೇ ವಿಶೇಷ. ಪಾಪದ ಮೂಕ ಪ್ರಾಣಿಗಳು. ಬೆಳಿಗ್ಗೆ ಮೇವು ತಿಂದಿದ್ದವೋ ಇಲ್ಲವೋ ಎಂದು ಸಂಘಟಕರಿಗೆ ಸಂದೇಹ. ಅದಕ್ಕಾಗಿ ನಾಲ್ಕು ಕಾಲಿನ ಎಲ್ಲಾ ಅತಿಥಿಗಳ ಮುಂದೆ ಹುಲ್ಲು ಮೇವು ಹರಡಿಸಿಯೇ ಬಿಟ್ಟರು.
 
ಕುಡಿಯಲು ತಂಪಾದ ನೀರಿನ ವ್ಯವಸ್ಥೆ ಮೊದಲೇ ಆಗಿತ್ತು. ಹುಲ್ಲಿನ ಹಿಂದೆಯೇ ಬಂದ ಹಿಂಡಿಯ ಕಂಡು ದನಗಳೋ ದಿಲ್‌ಖುಶ್! ಅಷ್ಟೇ ಅಲ್ಲ, ಪಾಲ್ಗೊಂಡ ಜಾನುವಾರುಗಳಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನಗಳೂ ಇದ್ದವು. ಉತ್ತಮ ದೇಸಿ ತಳಿಗಳು, ಮಿಶ್ರ ತಳಿಗಳು, ಗಾಡಿ ಎತ್ತುಗಳು, ಅಲಂಕೃತ ಗೋವುಗಳು, ಗೋ ಮೇಳಕ್ಕೆ  ಅತಿ ಹೆಚ್ಚು ಜಾನುವಾರು ತಂದವರು... ಹೀಗೆ ವಿಧ ವಿಧ ಪ್ರಶಸ್ತಿ, ಪುರಸ್ಕಾರಗಳು ಗೋವುಗಳು ಮತ್ತು ಅವುಗಳ ಮಾಲೀಕರನ್ನು ಅಲಂಕರಿಸಿದವು.

ಸಾಮೂಹಿಕ ಗೋ ಪೂಜೆಯಿಂದ ಆರಂಭಗೊಂಡ ಮೇಳದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳ ಮಹತ್ವ, ಹಸುಗಳ ಪಾಲನೆ, ಪೋಷಣೆ, ಗೋ ಉತ್ಪನ್ನಗಳ ಔಷಧೀಯ ಗುಣಗಳು, ಮಲೆನಾಡು ಗಿಡ್ಡ ತಳಿಯ ವಿಶೇಷತೆಗಳು ಮುಂತಾದ ವಿಷಯಗಳ ಕುರಿತು ಪರಿಣಿತರಿಂದ ಉಪನ್ಯಾಸಗಳು ನಡೆದವು.

ಸಾಮಾನ್ಯ ಅಭಿಪ್ರಾಯದಲ್ಲಿ ಹೈನುಗಾರಿಕೆ ಎಂಬುದು ನಷ್ಟದ ಕೆಲಸ. ಆದರೆ, ಹಾಲಿನಿಂದ ತುಪ್ಪ, ಬೆಣ್ಣೆ, ಗೋಮೂತ್ರದಿಂದ ಅರ್ಕದ ತಯಾರಿಕೆ, ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆ, ಎರೆಗೊಬ್ಬರ ತಯಾರಿಸುವುದರಿಂದ ಉತ್ಪನ್ನಗಳ ಮೌಲ್ಯ ವರ್ಧನೆಯಾಗಿ ಉತ್ತಮ ಆದಾಯ ಪಡೆಯಬಹುದು.

ಹಸುಗಳ ಒಡನಾಟದಿಂದ ಸಿಗುವ ನಿಷ್ಕಲ್ಮಷ ಪ್ರೀತಿ, ಮಾನಸಿಕ ನೆಮ್ಮದಿ, ಸಾಕಾಣಿಕೆಯನ್ನು ಸ್ವತಃ ಮಾಡಿದಾಗ ಮೂಡುವ ಶಿಸ್ತು, ದೈಹಿಕ ವ್ಯಾಯಾಮ, ಆರೋಗ್ಯ... ಹೀಗೆ ಹೈನುಗಾರಿಕೆಯ ಎಲ್ಲಾ ಆಯಾಮಗಳನ್ನು ಪರಿಗಣಿಸಿದಾಗ ಈ ಉದ್ಯೋಗ ನಿಜಕ್ಕೂ ಲಾಭದಾಯಕ ಎಂದು ಮನದಟ್ಟು ಮಾಡಿಸುವಲ್ಲಿ ಮೇಳ ಯಶಸ್ವಿಯಾಗಿತ್ತು.

ಹಸು ಸಾಕದಿದ್ದವರೂ ಕಾರ್ಯಕ್ರಮದಿಂದ ಪ್ರೇರಿತರಾಗಿ ಒಂದೋ, ಎರಡೋ ಗೋವುಗಳನ್ನು ಸಾಕುವ ನಿರ್ಧಾರಕ್ಕೆ ಬಂದದ್ದು ವಿಶೇಷ!
ಹೌದು, ಈಗ ಪರಿಸ್ಥಿತಿ ಹಿಂದಿನಂತಿಲ್ಲ.  ಕಣ್ಮರೆಯಾಗಿರುವ ಗೋಮಾಳಗಳು, ಗಗನಮುಖಿಯಾಗಿರುವ ಪಶು ಆಹಾರದ ಬೆಲೆ, ಮೇವು ಬೆಳೆಯಲು ನಿರುತ್ಸಾಹ, ದಿನೇ ದಿನೇ ಹೆಚ್ಚುತ್ತಿರುವ ಹಾಲಿನ ಉತ್ಪಾದನಾ ವೆಚ್ಚ, ಕೆಲಸಗಾರರ ಬರ... ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.


ಈ ನಿಟ್ಟಿನಲ್ಲಿ ಹಸು ಸಾಕಣೆಯತ್ತ ಜನರ ಆಸಕ್ತಿ ಬೆಳೆಸುವಂತ ಇಂತಹ ವಿಶಿಷ್ಟ ಪ್ರಯೋಗಗಳು ಸದಾ ಅನುಕರಣೀಯ.ಒಟ್ಟಿನಲ್ಲಿ ತನ್ನ ಪ್ರಸ್ತುತತೆ, ಉಪಯುಕ್ತತೆ, ಅಚ್ಚುಕಟ್ಟುತನದಿಂದ ಈ ಗ್ರಾಮೀಣ ಗೋ ಮೇಳ ಗೋ ಪ್ರೇಮಿಗಳ ಮನಗೆಲ್ಲುವಲ್ಲಿ ಸಫಲವಾಗಿತ್ತು.

ಇದರ ಪೂರ್ಣ  ಖರ್ಚನ್ನು ತಮ್ಮ ಕಿಸೆಯಿಂದಲೇ ಭರಿಸಿ ಮತ್ತೆ ಮತ್ತೆ ಮೆಲುಕು ಹಾಕುವಂತ ಕಾರ್ಯಕ್ರಮ ಸಂಘಟಿಸಿದ ಕಮಕಾರು ಅನಂತರಾಜರ ಈ ಕಾರ್ಯ ನಿಜಕ್ಕೂ ಪ್ರಶಂಸನಾರ್ಹ!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.