ADVERTISEMENT

ಹಾಗಲಬಳ್ಳಿ ಕೊಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಪಟ್ಟಣ ಪ್ರದೇಶದಲ್ಲಿ ಕೈತೋಟ ಮಾಡಲು ಮನೆ ಮುಂದೆ ಅಥವಾ ಹಿತ್ತಲಿನಲ್ಲಿ ಜಾಗ ಇಲ್ಲ ಎಂದು ಕೊರಗುವವರೇ ಹೆಚ್ಚು. ಆದರೆ ಇರುವ ಸ್ವಲ್ಪ ಜಾಗದಲ್ಲಿ ವಿವಿಧ ಬಗೆಯ ತರಕಾರಿ ಬೆಳೆದುಕೊಳ್ಳುವವರಿಗೇನೂ ಕೊರತೆ ಇಲ್ಲ. ಅಂತಹವರ ಪೈಕಿ, ಗುಲ್ಬರ್ಗದ ವೆಂಕಟೇಶ ನಗರ ಬಡಾವಣೆಯ ಅಶೋಕ ಪಾಟೀಲ ಹಾಗೂ ನಾಗವೇಣಿ ದಂಪತಿಗಳೂ ಒಬ್ಬರು.

ಮನೆ ಕಾಂಪೌಂಡ್‌ಗೆ ಅಂಟಿಕೊಂಡೇ ಇರುವ ಜಾಗದಲ್ಲಿ ಇವರು ಟೊಮೆಟೊ, ಮೆಣಸಿನಕಾಯಿ, ಪುಂಡಿಪಲ್ಯೆ, ಹಾಗಲ, ಹೀರೆಕಾಯಿ ಬೆಳೆಸಿದ್ದಾರೆ. ಇದಲ್ಲದೇ ಚೆಂಡು ಹೂವು ಹಾಗೂ ಇತರ ಹೂವುಗಳೂ ಇಲ್ಲಿ ನಳನಳಿಸುತ್ತಿವೆ. ಈ ಎಲ್ಲದರ ಪೈಕಿ ಆಕರ್ಷಕವಾಗಿ ಕಾಣಿಸುವುದು ಹಾಗಲಕಾಯಿ ಬಳ್ಳಿ.

ಮೊದಲು ಒಂದು ಕಡೆ ಅಲ್ಲಿ ಹಾಗಲ ಬಿತ್ತನೆ ಮಾಡಿದರು. ಅದು ಬೆಳೆಯುತ್ತಲೇ ಬಿದಿರಿನ ಆಸರೆ ಕೊಟ್ಟು ಮೇಲಕ್ಕೆ ಬರುವಂತೆ ನೋಡಿಕೊಂಡರು. ಮನೆ ಸುತ್ತಲೂ ಬಳ್ಳಿ ಹಬ್ಬುವಂತೆ ಮಾಡಬಹುದಾಗಿತ್ತು. ಆದರೆ ಅವರು ಮಾಡಿದ ವಿಧಾನ ಬೇರೆ.

ಬಿದಿರಿನ ಸಣ್ಣ ಕೋಲುಗಳನ್ನು `ಪ್ಲಸ್~ ಆಕಾರದಲ್ಲಿ ಬಿಗಿದು, ತೆಳ್ಳನೆಯ ಬಿದಿರನ್ನು ಇದಕ್ಕೆ ವೃತ್ತಾಕಾರವಾಗಿ ಕಟ್ಟಿದರು. ನೋಡಲು ಇದು ಛತ್ರಿ (ಕೊಡೆ) ಆಕಾರ ಪಡೆಯಿತು. ಇದನ್ನು ಕಟ್ಟಿಗೆ ಮೇಲೆ ಇಟ್ಟರು. ನೋಡ ನೋಡುತ್ತಿದ್ದಂತೆಯೇ, ಈ ಛತ್ರಿಯ ತುಂಬ ಆವರಿಸಿಕೊಂಡ ಹಾಗಲ ಬಳ್ಳಿ, ಎಲ್ಲರ ಗಮನ ಸೆಳೆಯುವಂತಾಯಿತು. ಎರಡು- ಮೂರು ವಾರಗಳಿಂದ ಬಳ್ಳಿಯಲ್ಲಿ ಯಥೇಚ್ಛ ಕಾಯಿ ಬಿಡುತ್ತಿವೆ.

ರಸ್ತೆಯಲ್ಲಿ ಸಾಗುವವರು ಇಲ್ಲಿ ನಿಂತು, ಕುತೂಹಲದಿಂದ ವಿಚಾರಿಸಿಕೊಂಡು ಮುಂದೆ ಸಾಗುತ್ತಾರೆ. ಸ್ವಲ್ಪ ಜಾಗದಲ್ಲೇ ಹೇಗೆ ತರಕಾರಿ ಬೆಳೆಯಬಹುದು ಎಂಬುದಕ್ಕೆ ಉದಾಹರಣೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.