ADVERTISEMENT

40 ಎಕರೆ ಹುಣಸೆ ಕೃಷಿ ಕಥೆ

ಶಿವಗಂಗಾ ಚಿತ್ತಯ್ಯ
Published 2 ಜುಲೈ 2019, 10:05 IST
Last Updated 2 ಜುಲೈ 2019, 10:05 IST
ಹುಣಸೆ ಕೃಷಿ
ಹುಣಸೆ ಕೃಷಿ   

ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳು ಕಡಿಮೆ ಮಳೆ ಬೀಳುವ ಪ್ರದೇಶಗಳು. ಈ ನೆಲಕ್ಕೆ ಹುಣಸೆ ಸೂಕ್ತವಾದ ಬೆಳೆ ಎನ್ನುತ್ತಾರೆ ತಜ್ಞರು. ಆದರೆ, ತಜ್ಞರ ಮಾತನ್ನು ಒಪ್ಪಿ, ಹುಣಸೆ ಕೃಷಿ ಮಾಡಿದವರು ವಿರಳ.

ಚಳ್ಳಕೆರೆಯ ಕುರುಡಿಹಳ್ಳಿಯ ನಿವೃತ್ತ ಎಂಜಿನಿಯರ್ 91ರ ಹರೆಯದ ಜಿ.ಸಿ.ತಿಪ್ಪಾರೆಡ್ಡಿ ಇಂಥ ವಿಚಾರದ ಬಗ್ಗೆ 19 ವರ್ಷಗಳ ಹಿಂದೆಯೇ ಗಂಭೀರವಾಗಿ ಚಿಂತಿಸಿದ್ದರು. ಭವಿಷ್ಯ ದಲ್ಲಿ ಉಂಟಾಗಬಹುದಾದ ಹವಾಮಾನ ವೈಪರೀತ್ಯದ ಬಗ್ಗೆ ದೂರದೃಷ್ಟಿ ಹೊಂದಿದ್ದ ಅವರು ಆ ಕಾಲದಲ್ಲೇ 40 ಎಕರೆ ಜಮೀನಿನಲ್ಲಿ 12 ವಿವಿಧ ತಳಿಗಳ, 1500 ಹುಣಸೆ ಗಿಡಗಳನ್ನು ನಾಟಿ ಮಾಡಿಸಿದ್ದಾರೆ. ಅಂದು ಬರದ ನೆಲದಲ್ಲಿ ಚಿಗುರಿದ ಹುಣಸೆ ಗಿಡಗಳು, ಮರವಾಗಿ ಬೆಳದು ದಶಕದಿಂದ ಫಲಕೊಡುತ್ತಿವೆ.

ಕೃಷಿಗೆ ಮರಳಿದವರು

ADVERTISEMENT

ಕೃಷಿ ಕುಟುಂಬದ ಹಿನ್ನೆಲೆಯ ರೆಡ್ಡಿ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದರು. ನಿವೃತ್ತಿಯ ನಂತರ ಕೃಷಿ ಜೀವನಕ್ಕೆ ಹಿಂತಿರುಗಿದರು. ತಂದೆ ಪೋಲಣ್ಣರೆಡ್ಡಿ ಮಾಡುತ್ತಿದ್ದ ಮಳೆಯಾಶ್ರಿತ ಭೂಮಿಯಲ್ಲಿ ಕಡಲೆ, ನವಣೆ, ಜೋಳ, ಕುಸುಬಿಯಂತಹ ಆಹಾರ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಅಷ್ಟೇ ಅಲ್ಲ, 90ರ ದಶಕದಲ್ಲಿ ಪಪ್ಪಾಯ ಬೆಳೆದು ಯಶಸ್ವಿಯಾಗಿದ್ದರು.

ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದ ತಿಪ್ಪಾರೆಡ್ಡಿ ಅವರಿಗೆ, ಬೆಳೆ ನಿರ್ವಹಣೆ ಹಾಗೂ ಕೊಯ್ಲಿನ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಕಾಡಿತು. ಮಳೆಯ ಅನಿಶ್ಚತತೆ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನೂ ತೀವ್ರವಾಗಬಹ ದೆಂದು ಅಂದಾಜಿಸಿದ ತಿಪ್ಪಾರೆಡ್ಡಿ, ಕಡಿಮೆ ನೀರಿಗೆ ಹೊಂದುವ, ಕಡಿಮೆ ಆರೈಕೆ ಬೇಡುವ, ಸ್ಥಿರ ಹಾಗೂ ನಿರಂತರ ಆದಾಯ ನೀಡುವ ಬೆಳೆಯ ಹುಡುಕಾಟದಲ್ಲಿದ್ದರು. ಆಗಲೇ ಹೊಳೆದಿದ್ದು ಈ ಹುಣಸೆ ಕೃಷಿ ಮಾಡುವ ಐಡಿಯಾ.

ನಿರಂತರ ಅಧ್ಯಯನ, ಕ್ಷೇತ್ರ ಭೇಟಿ

ಐಡಿಯಾ ಬಂದ ಕೂಡಲೇ ಕೃಷಿ ಶುರು ಮಾಡಲಿಲ್ಲ. ಅದಕ್ಕೂ ಮೊದಲು ರಾಜ್ಯದ ಹುಣಸೆ ಬೆಳೆಯುವ ಸ್ಥಳಗಳಿಗೆ ಭೇಟಿ ನೀಡಿದರು. ತಳಿಗಳ ಅಧ್ಯಯನ ನಡೆಸಿದರು. ಮಾರುಕಟ್ಟೆಯ ಬಗ್ಗೆಯೂ ಸಮೀಕ್ಷೆ ಮಾಡಿದರು. ಹುಣಸೆ ಬೆಳೆ ಕುರಿತ ಪುಸ್ತಕಗಳನ್ನು ಓದಿದರು. ಆನಂತರವೇ ಹುಣಸೆ ಗಿಡಗಳ ನಾಟಿಗೆ ಮುಂದಾದರು.

ಅದು 2000ನೇ ಇಸವಿಯ ಆಗಸ್ಟ್ – ಸೆಪ್ಟೆಂಬರ್ ತಿಂಗಳು. ರೆಡ್ಡಿ ಅವರ ಹುಣಸೆ ಕೃಷಿ ಆರಂಭವಾಯಿತು. 40 ಎಕರೆ ಎರೆಭೂಮಿಯನ್ನು ಹದಗೊಳಿಸಿ, ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 40 ಅಡಿ ಅಂತರ ಬಿಟ್ಟು, 2 ಅಡಿ ಆಳ ಮತ್ತು 2 ಅಡಿ ಅಗಲ ಗುಂಡಿ ತೆಗೆದು ಅದರೊಳಗೆ ಕೊಟ್ಟಿಗೆ ಗೊಬ್ಬರ ಹಾಕಿ ಗಿಡಗಳನ್ನು. 1500 ಗಿಡಗಳನ್ನು ಒಟ್ಟಿಗೆ ನಾಟಿ ಮಾಡಿಸಿದರು. ಇದರಲ್ಲಿ ಆಂಧ್ರದ ಪಿಕೆಎಂ 600 ಗಿಡಗಳು, ತಮಿಳುನಾಡಿನ ಉರಿಗಾಂ 400 ಮತ್ತು ಅರಣ್ಯ ಇಲಾಖೆಯವರು ಸ್ಥಳೀಯವಾಗಿ ಸಿದ್ಧಪಡಿಸಿದ 800 ಗಿಡಗಳು ಸೇರಿವೆ.

ಆರೈಕೆ- ನಿರ್ವಹಣೆ

ಹುಣಸೆ ಕೃಷಿ ಆರಂಭಿಸಿದಾಗ ಮಳೆ ಸ್ವಲ್ಪ ಉತ್ತಮವಾಗಿತ್ತು. ಹಾಗಾಗಿ, ವಾತಾವರಣ ನೋಡಿಕೊಂಡ ಗಿಡಗಳಿಗೆ ನೀರು ಕೊಡುತ್ತಿದ್ದರು. ಗಿಡಗಳ ಆರೈಕೆಯಲ್ಲಿ ರೆಡ್ಡಿಯವರು ಎಂದೂ ಹಿಂದೆ ಬೀಳಲಿಲ್ಲ. ಕ್ರಮೇಣ ಮಳೆಯ ಅನಿಶ್ಚತತೆ ಕಂಡಾಗ, ಹುಣಸೆಗೆ ನೀರು ಕೊಡುವುದಕ್ಕಾಗಿಯೇ ಕೊಳವೆಬಾವಿಗಳನ್ನು ಕೊರೆಸಿದರು. ಬೋರ್‌ನಲ್ಲಿ ಸಿಕ್ಕಿದ ಅತ್ಯಲ್ಪ ನೀರನ್ನೇ ಹನಿ ನೀರಾವರಿ ಮೂಲಕ ಗಿಡಗಳಿಗೆ ಪೂರೈಸಿದರು. ಬೇಸಿಗೆಯ ಮೂರು ತಿಂಗಳಲ್ಲಿ ಗಿಡಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಆ ವೇಳೆ ಕೊಟ್ಟಿಗೆ ಗೊಬ್ಬರವನ್ನೂ ಕೊಡಬೇಕು. ಬುಡದಲ್ಲಿ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಎಲ್ಲವೂ ಕ್ರಮ ಬದ್ಧವಾಗಿ ಮಾಡಿದರು ರೆಡ್ಡಿಯವರು.

‘ಈ ಬೆಳೆಗೆ ಕೀಟಬಾಧೆ ಕಡಿಮೆ. ಸಾಮಾನ್ಯವಾಗಿ ಬಿಳಿಜೀಡೆ, ಕರಿಜೀಡೆ ಎಂಬ ಕೀಟಗಳು ಬರುತ್ತವೆ. ಔಷಧ ಸಿಂಪಡಿಸಿದರೆ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ’ ಎನ್ನುವುದು ರೆಡ್ಡಿ ಅವರ ಅಭಿಪ್ರಾಯ. ಒಂದು ನೆನಪಿಟ್ಟುಕೊಳ್ಳುವ ವಿಷಯವೆಂದರೆ; ಗಿಡಗಳನ್ನು ನಾಟಿ ಮಾಡಿದ ಮೊದಲ ವರ್ಷ ಗಿಡದಲ್ಲಿ ಹೂವು ಮತ್ತು ಕಾಯಿಗಳು ಬಿಡುತ್ತವೆ. ಅವುಗಳನ್ನು ಚಿವುಟಿ ಹಾಕಬೇಕು. ಇದರಿಂದ ಗಿಡಗಳು ಹೆಚ್ಚು ಕಾಯಿ ಕಚ್ಚುತ್ತವೆ ಎಂಬುದು ಅವರ ಸಲಹೆ. ಅಂದ ಹಾಗೆ, ಹುಣಸೆ ಗಿಡಗಳು ಬೆಳೆದು ದೊಡ್ಡದಾಗುವವರೆಗೂ ನಾಲ್ಕೈದು ವರ್ಷಗಳ ಕಾಲ ಗಿಡಗಳ ನಡುವಿನ ಖಾಲಿ ಜಾಗದಲ್ಲಿ ಆಹಾರ ಧಾನ್ಯಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ರೆಡ್ಡಿಯವರು ಈ ಜಾಗದಲ್ಲಿ ಅಷ್ಟೂ ವರ್ಷ ಕಡಲೆ, ನವಣೆ, ಜೋಳವನ್ನು ಬೆಳೆದುಕೊಂಡಿದ್ದಾರೆ.

ಆರೇಳು ವರ್ಷಗಳಿಂದ ಫಸಲು

ನಾಟಿ ಮಾಡಿದ ಹುಣಸೆಗಿಡಗಳು ನಾಲ್ಕೈದು ವರ್ಷಗಳ ನಂತರ ಫಸಲು ಕೊಡುತ್ತವೆ. ರೆಡ್ಡಿಯವರ ಹುಣಸೆ ತೋಪಿನಲ್ಲೂ ಅಂದಾಜು ಆರೇಳು ವರ್ಷಗಳ ನಂತರ ಮರಗಳು ಫಸಲು ಕೊಡಲು ಆರಂಭಿಸಿದವು. ಪ್ರತಿ ವರ್ಷ ಗುತ್ತಿಗೆದಾರರಿಗೆ ಹುಣಸೆ ಮರ ಗುತ್ತಿಗೆ ನೀಡಲು ಶುರು ಮಾಡಿದರು ರೆಡ್ಡಿಯವರು. ಈಗಲೂ ಸೆಪ್ಟೆಂಬರ್ – ಅಕ್ಟೋಬರ್ ಹೊತ್ತಿಗೆ ಗುತ್ತಿಗೆದಾರರು ರೆಡ್ಡಿಯವರ ಹುಣಸೆ ತೋಪಿಗೆ ಬಂದು, ಮರದಲ್ಲಿರುವ ಫಸಲು ನೋಡಿ ರೇಟ್ ಬಿಡ್ ಮಾಡುತ್ತಾರೆ. ಉತ್ತಮ ದರ ನೀಡುವವರಿಗೆ ಗುತ್ತಿಗೆ ಕೊಡುತ್ತಾರೆ. ವ್ಯಾಪಾರಸ್ಥರು ಮುಂಗಡ ಹಣ ಕೊಟ್ಟು, ಬುಕ್ ಮಾಡಿ ಹೋಗುತ್ತಾರೆ.

‘ಈಗಲೂ ಇದೇ ಪ್ರಕ್ರಿಯೆ ಮುಂದುವರಿಸಿದ್ದೇನೆ. ಏಳೆಂಟು ವರ್ಷಗಳಾಗಿದ್ದಾಗ 2 ರಿಂದ 3 ಲಕ್ಷ ಆದಾಯ ಸಿಗುತ್ತಿತ್ತು. ಉತ್ತಮ ಮಳೆ, ಆರೈಕೆಯೊಂದಿಗೆ ಮರಗಳು ಬೆಳೆಯುತ್ತಿದ್ದಾಗ ಫಸಲೂ ಹೆಚ್ಚಾಗಿತ್ತು, ವಹಿವಾಟು ಹೆಚ್ಚಾಗಿತ್ತು. ಈಗ್ಗೆ ಮೂರು ವರ್ಷಗಳಿಂದ ಮಳೆ ಕೊರತೆ. ಕೊಳವೆಬಾವಿಗಳಲ್ಲೂ ನೀರಿಲ್ಲ. ಫಸಲು ತುಂಬಾ ಅಂದರೆ ತುಂಬಾ ಕಡಿಮೆಯಾಗಿದೆ. ನೀರು ಗೊಬ್ಬರ ಕೊಟ್ಟು ಆರೈಕೆ ಮಾಡಿದರೆ ಈಗಲೂ ಉತ್ತಮ ಆದಾಯವೂ ಪಡೆಯಬಹುದು. ಆ ಪ್ರಯತ್ನ ಮುಂದುವರಿಸಿದ್ದೇನೆ' ಎನ್ನುತ್ತಾರೆ ತಿಪ್ಪಾರೆಡ್ಡಿ.
ಹುಣಸೆ ಕೃಷಿ ಕುರಿತ ಮಾಹಿತಿಗಾಗಿ ತಿಪ್ಪಾರೆಡ್ಡಿ ಅವರ
ಸಂಪರ್ಕ ಸಂಖ್ಯೆ: 9845149347.

ಆರೈಕೆ ಮಾಡಿದರೆ, ಆದಾಯವೂ ಬರುತ್ತದೆ!

‘ಹುಣಸೆಗೆ ನೀರು ಯಾಕೆ, ಗೊಬ್ಬರ ಯಾಕೆ’ ಎಂದು ಕೇಳುತ್ತಾರೆ. ಮಳೆ ಸರಿಯಾಗಿ ಬಂದು, ಭೂಮಿಯಲ್ಲಿ ಪೋಷಕಾಂಶ ಉತ್ತಮವಾಗಿದ್ದರೆ ಆರೈಕೆ ಬೇಕಾಗಿಲ್ಲ. ಆದರೆ, ಈಗಿನ ಮಳೆಯ ಅನಿಶ್ಚತತೆಯಲ್ಲಿ ಒಂದೇ ಕಡೆ ಹುಣಸೆ ಮರಗಳನ್ನು ಬೆಳೆಸುವವರು, ನಿಗದಿತವಾಗಿ ಆದಾಯ ನಿರೀಕ್ಷಿಸುವವರು ಕಡ್ಡಾಯವಾಗಿ ಗಿಡಗಳಿಗೆ ನೀರು, ಗೊಬ್ಬರ ಕೊಟ್ಟು ಆರೈಕೆ ಮಾಡಬೇಕು’ ಎನ್ನುತ್ತಾರೆ ತಿಪ್ಪಾರೆಡ್ಡಿ. ‘ತೆಂಗು, ಅಡಿಕೆ, ಮೋಸಂಬಿ, ಕಿತ್ತಳೆ, ಸಪೋಟದಂತಹ ತೋಟಗಾರಿಕೆ ಬೆಳೆಗಳಿಗೆ ವರ್ಷ ಪೂರ್ತಿ ನೀರು, ಗೊಬ್ಬರ ಕೊಟ್ಟು ಆರೈಕೆ ಮಾಡುತ್ತೀವಲ್ಲವಾ. ಇದೂ ಹಾಗೆಯೇ’ ಎಂದು ಉಲ್ಲೇಖಿಸುತ್ತಾರೆ ಅವರು.

‘ನಾನು ಮರಗಳಿಗೆ ಗೊಬ್ಬರ, ನೀರು ಕೊಟ್ಟಿದ್ದು ಕಡಿಮೆ. ಆದರೂ ಫಸಲು ಬರುತ್ತಿತ್ತು. ಏಕೆಂದರೆ ಆಗ ಮಳೆ ಚೆನ್ನಾಗಿತ್ತು. ಭೂಮಿಯಲ್ಲಿ ಕಸುವಿತ್ತು. ಈಗ ಎರಡೂ ಇಲ್ಲ. ಹಾಗಾಗಿ ಫಸಲು ತುಂಬಾ ಕಡಿಮೆಯಾಗಿದೆ. ಆದರೂ, ಎರಡು ವರ್ಷಗಳ ಹಿಂದೆ 150 ಗಿಡಗಳಿಗೆ ನೀರು ಕೊಟ್ಟು ನೋಡಿದೆ. ಉತ್ತಮ ಫಸಲು ಬಂದಿತ್ತು. ಈ ವರ್ಷ ಮರಗಳಿಗೆ ಪುನಃ ನೀರು, ಗೊಬ್ಬರ ಕೊಡುವ ಯೋಚನೆ ಮಾಡಿದ್ದೇನೆ’ ಎಂದು ಹೇಳುತ್ತಾರೆ ತಿಪ್ಪಾರೆಡ್ಡಿ.

ಬಂಜರು ಭೂಮಿ ಹೊಂದಿರುವ ರೈತರು ಈಗಲೂ ಆ ಜಮೀನಿನಲ್ಲಿ ಹುಣಸೆ ಗಿಡಗಳನ್ನು ಬೆಳೆಸಬಹುದು. ಸ್ವಲ್ಪ ಗಮನಕೊಟ್ಟು, ಆರೈಕೆ ಮಾಡಿದರೆ, ಪ್ರತಿ ಹುಣಸೆ ಮರದಿಂದ ₹8 ಸಾವಿರದವರೆಗೂ ಆದಾಯ ಪಡೆಯಲು ಸಾಧ್ಯವಿದೆ ಎಂಬುದು ರೆಡ್ಡಿಯವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.