ADVERTISEMENT

ತಳಿ ಸಂರಕ್ಷಣೆ | ಭತ್ತದ ಮೇಲೆ ಬತ್ತದ ಪ್ರೀತಿ

ಶರತ್‌ ಹೆಗ್ಡೆ
Published 22 ಅಕ್ಟೋಬರ್ 2022, 19:30 IST
Last Updated 22 ಅಕ್ಟೋಬರ್ 2022, 19:30 IST
ಅಬೂಬಕ್ಕರ್‌ ದಂಪತಿ ಬೆಳೆದ ಗಂಧಸಾಲೆ (ಹಸಿರಾಗಿರುವುದು), ಕಲಾಬಾತ್‌ (ಗಾಢ ಕಂದು ಕಪ್ಪು ಬಣ್ಣದಲ್ಲಿರುವುದು)
ಅಬೂಬಕ್ಕರ್‌ ದಂಪತಿ ಬೆಳೆದ ಗಂಧಸಾಲೆ (ಹಸಿರಾಗಿರುವುದು), ಕಲಾಬಾತ್‌ (ಗಾಢ ಕಂದು ಕಪ್ಪು ಬಣ್ಣದಲ್ಲಿರುವುದು)   

ಹಸಿರು ಕ್ರಾಂತಿಗೂ ಮುನ್ನ ದೇಶದಲ್ಲಿ ಅಸಂಖ್ಯ ಭತ್ತದ ತಳಿಗಳಿದ್ದವು. ಈಗ ಕೆಲವೇ ನೂರು ತಳಿಗಳು ಉಳಿದಿವೆಯಂತೆ. ಅಂತಹ ತಳಿಗಳನ್ನು ಸಂರಕ್ಷಿಸಲು ಪಣತೊಟ್ಟಿರುವ ಕೆಲವೇ ಜನರ ಪೈಕಿ ಕಾರ್ಕಳದ ಅಬೂಬಕ್ಕರ್‌– ಆಸ್ಮಾ ಬಾನು ದಂಪತಿ ಕೂಡಾ ಸೇರಿದ್ದಾರೆ. ಕೃಷಿ ಭೂಮಿಯೇ ಇಲ್ಲದವರು ದೇಶ ಸುತ್ತುತ್ತಾ ತಳಿ ಸಂರಕ್ಷಣೆ ಮಾಡಿ, ವ್ಯಾಪಕಗೊಳಿಸಿದ ಕತೆ ಇಲ್ಲಿದೆ.

***

‘ಇದು ಮನೆಯಲ್ಲೇ ಬೆಳೆದ ಭತ್ತದ ಅಕ್ಕಿ. ಬಳಸಿ ನೋಡಿ’ ಎಂದು ಅವರು ಒಂದಿಷ್ಟು ಅಕ್ಕಿ ಕೊಟ್ಟರು. ಇವರು ಆ ಅಕ್ಕಿಗೆ ಮನಸೋತು, ಆ ತಳಿಯನ್ನೇ ಹುಡುಕಿ ಮನೆಯಲ್ಲೇ ಬೆಳೆಸಿದರು. ಇದಕ್ಕಾಗಿಯೇ ಕಾರ್ಕಳದ ಫ್ಲ್ಯಾಟಿನ ಮಹಡಿಯಿಂದ ಮುರತ್ತಂಗಡಿಯ ಭೂಮಿಯ ಮನೆಗೆ ಇಳಿದರು.

ADVERTISEMENT

ಹೀಗೆ ತಳಿ ಹುಡುಕಾಟದ ಪ್ರಯಾಣಕ್ಕೀಗ ಆರು ವರ್ಷ ತುಂಬಿದೆ. 600ಕ್ಕೂ ಹೆಚ್ಚು ಭತ್ತದ ತಳಿಗಳು ಇವರ ಮನೆಯ ಅಂಗಳದಲ್ಲಿವೆ. ಈ ದಂಪತಿ ಬೆಳಿಗ್ಗೆ ಮತ್ತು ಸಂಜೆ ಆ ಪುಟ್ಟ ಸಸಿಗಳ ಆರೈಕೆಯಲ್ಲೇ ತಮ್ಮನ್ನು ಮರೆತುಬಿಡುತ್ತಾರೆ. ಆಯ್ದ ತಳಿಗಳ ಅಕ್ಕಿ ಉಡುಪಿ ಕೃಷ್ಣನಿಗೂ ಅರ್ಪಣೆಯಾಗಿದೆ.

ಅಬೂಬಕ್ಕರ್‌, ಆಸ್ಮಾ ಬಾನು ದಂಪತಿಯ ಭತ್ತದ ತಳಿ ಸಂರಕ್ಷಣೆಯ ಕಥೆ ಇದು.

‘ಒಂದು ಕಾಳು ಸಿಕ್ಕಿದರೂ ಸಾಕು. ನಾವು ಅದನ್ನು ಸಸಿ ಮಾಡಿ ಬೆಳೆಸಿ ತೆನೆ ತೆಗೆದಿಟ್ಟು ಮತ್ತೊಂದಿಬ್ಬರಿಗೆ ಹಂಚುತ್ತೇವೆ. ಅವರೂ ಒಂದಿಷ್ಟು ಸಸಿಗಳನ್ನು ಬೆಳೆಸುತ್ತಾರೆ. ಅವರಲ್ಲಿಯೂ ಈ ತಳಿ ಇದ್ದಂತಾಯಿತಲ್ವಾ? ನೀವು ಕಂಪ್ಯೂಟರ್‌ನಲ್ಲಿ ಬ್ಯಾಕ್‌ ಅಪ್‌ ಅಂತ ಫೈಲ್‌ಗಳನ್ನು ಒಂದೆಡೆ ಇಡುತ್ತೀರಲ್ಲಾ, ಹಾಗೆಯೇ ಈ ಭತ್ತದ ತಳಿಗಳ ರಕ್ಷಣೆ. ಒಂದು ವೇಳೆ ನನ್ನಲ್ಲೂ ಒಂದು ಮಾದರಿ ಕಳೆದುಹೋದರೆ ಅವರಿಂದ ಮತ್ತೆ ಪಡೆದು ಸಸಿ ಬೆಳೆಸಬಹುದು’ ಎಂಬುದು ಅಬೂಬಕ್ಕರ್‌ ತರ್ಕ.

ಅಬೂಬಕ್ಕರ್‌ ಉಡುಪಿ ಜಿಲ್ಲೆ ಕಾರ್ಕಳದ ಸಾಗರ್‌ಹೋಟೆಲ್‌ನಲ್ಲಿ ವ್ಯವಸ್ಥಾಪಕ. ಆಸ್ಮಾ ಬಾನು ಅಲ್ಲಿಯೇ ಪೆರ್ವಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಅದೆಷ್ಟೇ ಒತ್ತಡ ಇದ್ದರೂ ಭತ್ತದ ಮೇಲಿನ ಪ್ರೀತಿ ಬತ್ತದಷ್ಟು ಇದೆ.

ಇವರಿಗೆ ಕೃಷಿ ಭೂಮಿ ಇಲ್ಲ. ಈ ಸಸಿ ನೆಡುವ ಭೂಮಿ ಅದುವರೆಗೆ ಯಾವುದೇ ಕೃಷಿಗೆ ಒಡ್ಡಿಕೊಳ್ಳದ, ಗೊಬ್ಬರ, ಕೀಟನಾಶಕದ ಸೋಂಕೂ ಇಲ್ಲದ ನೆಲವಾಗಿರಬೇಕು. ಮುರತ್ತಂಗಡಿ ಸಮೀಪದ ಬಾರಾಡಿ ಎಂಬಲ್ಲಿ ವೆಂಕಟೇಶ ಮಯ್ಯ ಎಂಬ ಉದ್ಯಮಿಗೆ ಸೇರಿದ ಹಡಿಲು ಭೂಮಿಯಲ್ಲಿ ಈ ಭತ್ತದ ತಳಿಗಳನ್ನು ಬಿತ್ತಿ ಪ್ರಯೋಗಕ್ಕಿಳಿದರು. ಮೂರು ವರ್ಷ ಹಲವು ವೈಫಲ್ಯಗಳನ್ನು ಕಂಡರು.

ವಿವಿಧ ತಳಿಯ ಭತ್ತ

‘ಇವೆಲ್ಲವೂ ನಮ್ಮ ಕಲಿಕೆ. ನಾವು ಎಲ್ಲಿ ತಪ್ಪು ಮಾಡುತ್ತೇವೆ ಎಂಬುದನ್ನು ತಿಳಿಯಲಿಕ್ಕೆಂದೇ ಇಷ್ಟು ಕಾಲ ಆಗಿ ಹೋಯಿತು. ಈಗ ಆರು ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆದು ವಾರ್ಷಿಕ ಸರಾಸರಿ 25ರಿಂದ 30 ಕ್ವಿಂಟಲ್‌ ಫಸಲು ತೆಗೆಯುತ್ತಿದ್ದೇವೆ’ ಎಂದರು ಅಬೂಬಕ್ಕರ್‌ ಮತ್ತು ಆಸ್ಮಾ.

‘ನಮಗೆ ಕೃಷಿ ಬಗ್ಗೆ ಆಸಕ್ತಿಯೇನೋ ಇತ್ತು. ಆದರೆ ಹೇಗೆ ನಿರ್ವಹಿಸುವುದು ಎಂಬ ಸಮಸ್ಯೆಯೂ ಇತ್ತು. ಫ್ಲ್ಯಾಟಿನಲ್ಲಿ ವಾಸವಿದ್ದಾಗ, ಆಹಾರ ವಸ್ತುಗಳನ್ನು ಗಮನಿಸಿದ್ದೆವು. ಅಂಗಡಿಯಿಂದ ತರುವ ಅಕ್ಕಿಯಲ್ಲಿ ಏನೆಲ್ಲಾ ರಾಸಾಯನಿಕಗಳು ಬೆರೆತಿರುತ್ತವೆ ಎಂಬ ಸಂದೇಹ, ಅದರಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ಇದ್ದೇ ಇತ್ತು. ದುಬಾರಿಯಾದರೂ ಸರಿ. ನಾವು ಉಣ್ಣುವ ಅಕ್ಕಿಯನ್ನು ನಾವೇ ಬೆಳೆಯಬೇಕು ಎಂದು ದೃಢವಾಗಿ ನಿಶ್ಚಯಿಸಿದೆವು. ಹಾಗೇ ಒಂದೊಂದೇ ತಳಿ ಬೆಳೆಯುತ್ತಾ ಇಲ್ಲಿಯವರೆಗೆ ಬಂದಿದ್ದೇವೆ’ ಎಂದರು ಆಸ್ಮಾ.

ಕರ್ನಾಟಕ, ಕೇರಳದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಪರೂಪದ ತಳಿಯ ಬೀಜಗಳನ್ನು ಕೊಟ್ಟಿದ್ದಾರೆ. ಬ್ರಹ್ಮಾವರ ಕೃಷಿ ಪಾಠಶಾಲೆಯ ವಿಜ್ಞಾನಿಗಳು ಮಾರ್ಗದರ್ಶನ ಮಾಡಿದ್ದಾರೆ. ಹಲವಾರು ಕೃಷಿ ಅಧ್ಯಯನಾಸಕ್ತರು, ವಿದ್ಯಾರ್ಥಿಗಳು ಇವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇವರ ಮನೆಯೇ ಒಂದು ತಳಿ ಪ್ರಯೋಗಶಾಲೆಯಂತಿದೆ.

ಕೃಷ್ಣನ ನೈವೇದ್ಯಕ್ಕೆ ಅಕ್ಕಿ: ಈ ದಂಪತಿಯ ಪ್ರಯೋಗಶಾಲೆಯಲ್ಲಿ ಬೆಳೆದ ಅಕ್ಕಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೃಷ್ಣನ ನೈವೇದ್ಯಕ್ಕೂ ಬಳಕೆಯಾಗಿತ್ತು. ಮೂರು ವರ್ಷಗಳ ಹಿಂದೆ ಸುಮಾರು 105 ತಳಿಗಳ ಅಕ್ಕಿಯನ್ನು ಒಂದೊಂದು ದಿನ ಬಳಸಿ ನೈವೇದ್ಯ ಅರ್ಪಿಸಲಾಗಿತ್ತು. ಈಗ ತೀರ್ಥಹಳ್ಳಿಯ ಎನ್‌ಜಿಒ ನೆರವಿನಿಂದ ಇವರ ಬಿತ್ತನೆ ಬೀಜಗಳನ್ನು ಪಡೆದು ರೈತರಿಗೆ ವಿತರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನೈವೇದ್ಯಕ್ಕೆ ಅಕ್ಕಿ ಒದಗಿಸುವ ಯೋಜನೆಯ ಸಿದ್ಧತೆ ನಡೆದಿದೆ.

ಕೀಟವಿಲ್ಲ, ಗೊಬ್ಬರದ ಹಂಗಿಲ್ಲ...: ‘ಬೆಳೆಗೆ ಒಮ್ಮೆ ಬಿಳಿ ನುಸಿ ಹಾವಳಿ ಕಾಣಿಸಿಕೊಂಡಿತ್ತು. ಆ ನುಸಿ ನಿಂತ ನೀರಿನಲ್ಲಿ ಮೊಟ್ಟೆ ಇಡುತ್ತದೆ. ನಾನು ಗದ್ದೆಯ ನೀರನ್ನು ಖಾಲಿ ಮಾಡಿಬಿಟ್ಟೆ. ನುಸಿಯ ಕಾಟ ತಾನಾಗಿಯೇ ನಿಂತಿತು. ಯಾವುದೇ ಕೀಟನಾಶಕ ಬಳಸಿಲ್ಲ. ಅದು ಬಿಟ್ಟರೆ ಯಾವ ರೋಗಬಾಧೆಯೂ ಬರಲಿಲ್ಲ’ ಎಂದರು ಅಬೂಬಕ್ಕರ್‌.

‘ಕೀಟ ಎಷ್ಟು ತಿಂದೀತು ಹೇಳಿ? ಅದರ ಪುಟ್ಟ ಹೊಟ್ಟೆಗೆ ಬೇಕಾದಷ್ಟು ಮಾತ್ರ ತಿನ್ನುತ್ತದೆ. ಮನುಷ್ಯನಷ್ಟು ದುರಾಸೆ ಕೀಟಕ್ಕಿದೆಯೇ ಹೇಳಿ. ಹಾಗಾಗಿ ಕೀಟದಿಂದ ದೊಡ್ಡ ಪ್ರಮಾಣದ ನಷ್ಟವಾಗುತ್ತದೆ ಎಂದು ಹೇಳಲಾರೆ. ಕೀಟ ನಿಯಂತ್ರಣಕ್ಕೆಂದು ರಾಸಾಯನಿಕ ಬಳಸುತ್ತೇವಲ್ಲಾ ಇದರಿಂದ ನಮಗೆ, ನಮ್ಮ ಜೀವಕ್ಕೇ ನಷ್ಟವಲ್ಲವೇ’ ಎಂದು ಪ್ರಶ್ನಿಸಿದರು ಅಬೂಬಕ್ಕರ್‌.

ಅಬೂಬಕ್ಕರ್‌ – ಆಸ್ಮಾ ದಂಪತಿ

‘ಗೊಬ್ಬರವನ್ನೂ ಹಾಕುವುದಿಲ್ಲ. ನೋಡಿ, ಖಾಲಿ ಭೂಮಿಯಲ್ಲಿ ಸೊಂಪಾಗಿ ಹುಲ್ಲು ಬೆಳೆಯುತ್ತದೆ. ಹುಲ್ಲಿಗೆ ಗೊಬ್ಬರ ಹಾಕಿದವರು ಯಾರು? ಹಾಗೆಯೇ ನಮ್ಮದು ಸಾವಯವ ಅನ್ನುವುದಕ್ಕಿಂತಲೂ ಸಹಜ ಕೃಷಿ. ಎಷ್ಟು ಫಲ ಬರಬೇಕೋ ಅಷ್ಟೇ ಬಂದರೆ ಸಾಕು’ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

ಬೆಳೆಸುವುದು ಹೇಗೆ?: ಪುಟ್ಟ ಫುಡ್‌ ಕಂಟೈನರ್‌ಗಳಲ್ಲಿ ಕಪ್ಪು, ಕೆಂಪು ಮಣ್ಣು ತುಂಬಿಭತ್ತದ ಬೀಜಗಳನ್ನು ಅದರೊಳಗೆ ಊರುತ್ತಾರೆ. ದನದ ಸೆಗಣಿಯನ್ನೂ ಬೆರೆಸುತ್ತಾರೆ. ನಿರಂತರವಾಗಿ ನೀರುಣಿಸುತ್ತಾರೆ. ನಿಧಾನವಾಗಿ ಮೊಳಕೆಯೊಡೆದ ಸಸಿ ಸುಮಾರು ಒಂದೂವರೆ ಅಡಿ ಬೆಳೆಯುವವರೆಗೂ ಅತ್ಯಂತ ಕಾಳಜಿ ವಹಿಸಿ, ಮುಂದೆ ಅದನ್ನು ಗಟ್ಟಿ ನೆಲದಲ್ಲಿ ನಾಟಿ ಮಾಡುತ್ತಾರೆ. ಚೆನ್ನಾಗಿ ಬಲಿತ ಸಸಿ ಕ್ರಮೇಣ ತೆನೆ ಮೂಡಿಸುತ್ತದೆ. ಚೆನ್ನಾಗಿ ಕಾಯಿಕಟ್ಟಿದ ಬಳಿಕ ಕಾಳುಗಳನ್ನಷ್ಟೇ ತೆಗೆದು ಬೀಜಗಳನ್ನು ನಿಗದಿತ ತೇವಾಂಶದವರೆಗೆ ಒಣಗಿಸಿ ಬಳಿಕ ಕಂಟೈನರ್‌ಗಳಲ್ಲಿ ಅವುಗಳ ತಳಿ ನಮೂದಿಸಿ ಸಂಗ್ರಹಿಸಿಡುತ್ತಾರೆ.

ಮಾರ್ಗದರ್ಶಕರು: ಕಾಸರಗೋಡು ಸಮೀಪ ನೆಟ್ಟಣಿಗೆ ಗ್ರಾಮದ ಬೇಳೇರಿ ಸತ್ಯನಾರಾಯಣ, ಮಂಡ್ಯದ ಘನಿ ಸಾಬ್‌, ಬ್ರಹ್ಮಾವರಅಖಿಲ ಭಾರತ ಸಂಯೋಜಿತ ಅಕ್ಕಿ ಅಭಿವೃದ್ಧಿ ಯೋಜನೆಯ ಕಿರಿಯ ತಳಿ ತಜ್ಞೆ ಶ್ರೀದೇವಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಉಲ್ಲಾಸ್‌ ಮತ್ತು ಕೇರಳದ ಹಿತೈಷಿಗಳಿಂದ ಸಾಂಪ್ರದಾಯಿಕ ಬಿತ್ತನೆ ಬೀಜಗಳನ್ನು ಪಡೆದು ಸಂರಕ್ಷಿಸಿದ್ದಾರೆ. ಈಗ ಅವರ ಪ್ರಯಾಣ ತಮಿಳುನಾಡು ಮತ್ತು ಛತ್ತೀಸಗಡದತ್ತ ಸಾಗಿದೆ. ಉತ್ತರ ಭಾರತದ ತಳಿಗಳನ್ನು ಸಂಗ್ರಹಿಸುವ ಕೆಲಸ ಸಾಗಿದೆ.

ಸಂಗ್ರಹಿತ ಪ್ರಮುಖ ತಳಿಗಳು
ನಾಗಸಂಪಿಗೆ, ಸರಸ್ವತಿ, ಮೊಗದ ಸುಗಂಧ, ಮೈಸೂರು ಬೆಣ್ಣೆ, ಕಜೆ ಜಯ, ಬಿಳಿಜಯ, ಬಿಳಿ ಮುದುಗ, ರತ್ನ ಸಾಗರ, ಸಹ್ಯಾದ್ರಿ, ಚಂಪಕ, ರಾಜಮುಡಿ(ಬಿಳಿ), ರಾಜಮುಡಿ(ಕೆಂಪು), ಕಡಲಚಂಪ, ಕುಂಬಲೂರ ಸಲೈ, ಗುಜಗುಂಡ, ಸಿಂಧೂರು ಮಧುಸಲೈ, ರತ್ನಚೂರಿ, ಕಿಚ್‌ಡಿಸಾಂಬ, ದೆಹಲಿ ಬಾಸ್ಮತಿ, ಕಾಶ್ಮೀರಿ ಬಾಸ್ಮತಿ, ಜೀರಿಗೆ ಸಣ್ಣ, ರಾಮ್‌ಗಲ್ಲಿ, ಮಲ್ಲಿಗೆ, ದಪ್ಪಪಲ್ಯ, ಅಂದನೂರು ಸಣ್ಣ, ಮಾಲ್‌ಗುಡಿ ಸಣ್ಣ, ಕಾಳಝೀರ, ಮಾಪಿಳ್ಳೆಸಾಂಬ, ಗಿರಿಸಲೈ, ಹೆಚ್‌ಎಂಟಿ, ಗಂಧಸಲೆ, ಡೆಹ್ರಾಡೂನ್‌ ಬಾಸ್ಮತಿ, ರಾಜಬೋಗ, ಸಿದ್ದಸಣ್ಣ, ರಬ್ಲೆಕ್‌, ಬಂಗಾರಸಣ್ಣ, ಕರಿಕಗ್ಗ, ಪುಟ್ಟುಭತ್ತ, ಡಾಂಬರ್‌ಸಲೆ, ಆಂಧ್ರಬಾಸ್ಮತಿ, ಚೆನ್ನಿಪೊನ್ನಿ, ಕರಿಬಾಸ್ಮತಿ, ಆನಂದಿನವರ, ಕಲಾಬಾತ್‌, ಕಾಗಿ ಸಲೈ....ಹೀಗೆ ನೂರಾರು ಭತ್ತದ ತಳಿಗಳು ಇವರ ಬಳಿ ಇವೆ.

ವಿಜ್ಞಾನಿಗಳು ಏನೆನ್ನುತ್ತಾರೆ?: ಬ್ರಹ್ಮಾವರದಲ್ಲಿರುವ ಅಖಿಲ ಭಾರತ ಸಂಯೋಜಿತ ಅಕ್ಕಿ ಅಭಿವೃದ್ಧಿ ಯೋಜನೆಯ ಕಿರಿಯ ತಳಿತಜ್ಞೆ ಶ್ರೀದೇವಿ ಹೇಳುವಂತೆ, ನಾವು ಅಬೂಬಕ್ಕರ್‌ ಅವರ ಬಿತ್ತನೆ ಕ್ಷೇತ್ರಕ್ಕೆ ಭೇಟಿ ನೀಡಿ, ಅವರು ಸಂರಕ್ಷಿಸಿದ ಪಾರಂಪರಿಕ ಬಿತ್ತನೆ ಬೀಜಗಳ ಮಾದರಿಯನ್ನು ಸಂಗ್ರಹಿಸಿದ್ದೇವೆ. ಅವುಗಳ ಪರೀಕ್ಷೆ ನಡೆದಿದೆ. ಇಂಥ ಹಲವಾರು ಮಾದರಿಗಳನ್ನು ಸಂಗ್ರಹಿಸಿ ಬಿತ್ತನೆ ಬೀಜಗಳನ್ನು ಆಯಾ ಪ್ರಾದೇಶಿಕ ವಿಶಿಷ್ಟ ತಳಿ ಎಂದು ಗುರುತಿಸುವ, ದಾಖಲೀಕರಣ ಕಾರ್ಯ ನಡೆದಿದೆ. ಇವರ ಬಳಿ ಆಯಾ ಅವಧಿ ಸಂಬಂಧಿಸಿದ ಮತ್ತು ಔಷಧೀಯ ಗುಣಗಳಿರುವ ಪಾರಂಪರಿಕ ತಳಿಗಳೂ ಇವೆ ಎಂದು ದಂಪತಿಯ ಪ್ರಯತ್ನವನ್ನು ಶ್ಲಾಘಿಸಿದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಉಲ್ಲಾಸ್‌ ಈ ದಂಪತಿಗೆ ಹಲವಾರು ಅಪರೂಪದ ತಳಿಯ ಬಿತ್ತನೆ ಬೀಜ ನೀಡಿದ್ದಾರೆ. ಅವರು ಹೇಳುವುದು ಹೀಗೆ: ‘ನಮ್ಮ ರಾಜ್ಯದಲ್ಲಿ ಈ ರೀತಿ ಪಾರಂಪರಿಕ ತಳಿಗಳನ್ನು ಸಂರಕ್ಷಿಸುವ ಆಸಕ್ತರ ದೊಡ್ಡ ಕಾರ್ಯಜಾಲವೇ ಇದೆ. ಈ ಸಂರಕ್ಷಣೆ ಕಾರ್ಯನಾವು ಪ್ರಯೋಗಾಲಯದಲ್ಲಿ ಮಾಡುವ ಕೆಲಸಕ್ಕಿಂತ ಭಿನ್ನವಾದದ್ದು. ತಳಿ ವೈವಿಧ್ಯ ಸಂರಕ್ಷಣೆ ಸವಾಲಿನದ್ದೂ ಹೌದು. ಒಮ್ಮೆ ಉತ್ಪಾದಿಸಿ ದೀರ್ಘ ಕಾಲ ಸಂಗ್ರಹಿಸಿಡುವಂತಿಲ್ಲ. ಪ್ರತಿ ವರ್ಷವೂ ಬೆಳೆಯಬೇಕು. ಇದರಲ್ಲಿ ಲಾಭ ಇಲ್ಲ. ಆದರೆ ಪಾರಂಪರಿಕ ತಳಿಯನ್ನು ಸಂರಕ್ಷಿಸುವುದು ಅಗತ್ಯವೂ ಹೌದು.

‘ಏಕರೂಪದ ತಳಿಯನ್ನೇ ಬೆಳೆದರೆ ಒಮ್ಮೆ ಒಂದು ರೋಗ ಬಾಧಿಸಿದರೆ ಎಲ್ಲವೂ ನಾಶವಾಗುವ ಅಪಾಯವಿದೆ. ಬಹುವಿಧದ ತಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಒಂದು ನಾಶವಾದರೂ ಇನ್ನೊಂದು ಉಳಿಯುತ್ತದೆ. ಪಾರಂಪರಿಕ ತಳಿಗಳಿಗೆ ಪ್ರತಿರೋಧ ಶಕ್ತಿಯೂ ಚೆನ್ನಾಗಿಯೇ ಇರುತ್ತದೆ. ಇಂಥ ಸಂರಕ್ಷಣೆ ಆಗಲೇಬೇಕಾದ ಅಗತ್ಯವಿದೆ’ ಎಂದರು.

ಹಸಿರು ಕ್ರಾಂತಿಗೆ ಮುನ್ನ ದೇಶದಲ್ಲಿ ಲೆಕ್ಕವಿಲ್ಲದಷ್ಟು ಭತ್ತದ ತಳಿಗಳಿದ್ದವು. ಈಗ ಅವುಗಳ ಸಂಖ್ಯೆಕೆಲವೇ ನೂರಕ್ಕೆ ಇಳಿದಿದೆ. 20 ವರ್ಷಗಳ ಹಿಂದೆ ಸಾಗರ ತಾಲ್ಲೂಕಿನಲ್ಲೇ ಸುಮಾರು 60 ಬಗೆಯ ಭತ್ತದ ತಳಿಗಳಿದ್ದವು. ಈಗ ಅವುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆಹಾರದ ಬೇಡಿಕೆಗೆ ತಕ್ಕಂತೆ ಸುಧಾರಿತ ತಳಿಗಳು ಬೇಕು ನಿಜ. ಹಾಗೆಂದು ಪಾರಂಪರಿಕ ತಳಿಗಳು ನಶಿಸಲು ಬಿಡಬಾರದು ಎಂದು ಹೇಳಿದರು.

ಅಬೂಬಕ್ಕರ್‌ ದಂಪತಿಯ ಮಕ್ಕಳಿಗೂ ಈ ಕೆಲಸದ ಮೇಲೆ ಅತೀವ ಪ್ರೀತಿ ಇದೆ. ಪುಟ್ಟ ಮಗಳು ಮರಿಯಂ ಆಫ್ನಾ ಸುಮಾರು ನೂರಕ್ಕೂ ಅಧಿಕ ತಳಿಗಳ ಹೆಸರುಗಳನ್ನು ಬಾಯಿಪಾಠ ಮಾಡಿಕೊಂಡಿದ್ದಾಳೆ. ಮಗ ಅಫ್ರಾನ್‌ ಕೂಡಾ ಸಸಿ ಸಂರಕ್ಷಣೆಯಲ್ಲಿ ಕೈ ಜೋಡಿಸಿದ್ದಾನೆ. ಪಿಯು ಓದುತ್ತಿರುವ ಅಫ್ರಾನ್‌ ಎಂಥ ವಿಷಕಾರಿ ಹಾವನ್ನೂ ಹಿಡಿಯಬಲ್ಲ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಅಪರೂಪದ ಚಿಟ್ಟೆಗಳು, ಪ್ರಾಣಿಗಳು, ಸಸ್ಯಗಳನ್ನು ಗುರುತಿಸುತ್ತಾನೆ. ಅಲ್ಲಿಗೆ ಬರುವ ಸಂಶೋಧನಾಸಕ್ತರಿಗೆ ಅವುಗಳನ್ನು ಪರಿಚಯಿಸುತ್ತಾನೆ.

ಹೀಗೆ ಇಡೀ ಕುಟುಂಬ ಜೀವ ಜಗತ್ತು ಮತ್ತು ನೆಲದ ನಂಟನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.