ADVERTISEMENT

PV Web Exclusive: ಬಯಲು ಸೀಮೆಯಲ್ಲೂ ಗೋಡಂಬಿ ಘಮಲು!

ವೆಂಕಟೇಶ ಜಿ.ಎಚ್.
Published 17 ಸೆಪ್ಟೆಂಬರ್ 2020, 5:11 IST
Last Updated 17 ಸೆಪ್ಟೆಂಬರ್ 2020, 5:11 IST
ಹುನಗುಂದ ತಾಲ್ಲೂಕಿನ ಚಿತ್ತವಾಡಗಿಯಲ್ಲಿ ಡಾ.ಮಲ್ಲನಗೌಡ ನಾಡಗೌಡ ಅವರ ಹೊಲದಲ್ಲಿ ಬೆಳೆದ ಗೋಡಂಬಿ (ಗೇರು) ಬೆಳೆಚಿತ್ರ: ಸಂಗಮೇಶ ಹೂಗಾರ
ಹುನಗುಂದ ತಾಲ್ಲೂಕಿನ ಚಿತ್ತವಾಡಗಿಯಲ್ಲಿ ಡಾ.ಮಲ್ಲನಗೌಡ ನಾಡಗೌಡ ಅವರ ಹೊಲದಲ್ಲಿ ಬೆಳೆದ ಗೋಡಂಬಿ (ಗೇರು) ಬೆಳೆಚಿತ್ರ: ಸಂಗಮೇಶ ಹೂಗಾರ   

ಬಾಗಲಕೋಟೆ: ಕರಾವಳಿ, ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಗೋಡಂಬಿ ಕೃಷಿಯ ಘಮಲು ಈಗ ಬಯಲು ಸೀಮೆಗೂ ಹರಡಿದೆ. ತೊಗರಿ, ಉಳ್ಳಾಗಡ್ಡಿ, ಸಜ್ಜೆ ಬೆಳೆಯುತ್ತಿದ್ದ ಹೊಲಗಳಿಗೆ ಸಮೃದ್ಧ ಗೋಡಂಬಿ (ಗೇರು) ಫಸಲುಈಗ ತೋಟದ ಸ್ಥಾನಮಾನ ತಂದುಕೊಟ್ಟಿದೆ.

ಉಷ್ಣವಲಯ ಬೆಳೆಯಾದ ಗೇರು, ಮಾವಿನ ಗಿಡದ ರೀತಿಯೇ ಅನಾಕಾರ್ಡಿಯಂ ಒಸ್ಸಿಡೆಂಟಾಲೆ (Anacardium occidentale) ಸಸ್ಯ ಪ್ರಬೇಧಕ್ಕೆ ಸೇರಿದೆ. ಸಾಮಾನ್ಯವಾಗಿ ಮಾವು ಬೆಳೆಯುವ ಎಲ್ಲ ಪ್ರದೇಶಗಳಲ್ಲೂ ಗೇರು ಬೆಳೆಯುತ್ತದೆ. ಇದನ್ನು ಗಮನಿಸಿಯೇರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‌ಎಚ್‌ಎಂ) ದೇಶದ ಒಳನಾಡಿನಲ್ಲೂ ವಾಣಿಜ್ಯ ಬೆಳೆಯಾಗಿಗೇರು ಬೆಳೆ ಪ್ರದೇಶ ವಿಸ್ತರಣೆಗೆ ಮುಂದಾಗಿದೆ. ಇದಕ್ಕೆ ಬಾಗಲಕೋಟೆ ಜಿಲ್ಲೆಯ ರೈತರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

’ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಗೋಡಂಬಿಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಅಷ್ಟು ಪ್ರಮಾಣದ ಉತ್ಪಾದನೆ ನಮ್ಮಲ್ಲಿ ಇಲ್ಲ. ಹೀಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಅದನ್ನು ತಪ್ಪಿಸಲು, ರಾಜ್ಯದ 30 ಜಿಲ್ಲೆಗಳಲ್ಲೂ ಗೇರು ಬೆಳೆಯಲು ಉತ್ತೇಜನ ನೀಡುವ ಕಾರ್ಯ ಮೂರು ವರ್ಷಗಳ ಹಿಂದೆ ಆರಂಭಿಸಿದ್ದೇವೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಎಸ್.ಪ್ರಭುರಾಜ ಹೇಳುತ್ತಾರೆ.

ADVERTISEMENT

ಕೆಂಪು ಮಣ್ಣು ಹಾಗೂ ಕೆಂಪು ಮಣ್ಣು ಮಿಶ್ರಿತ ಮರಳು ಭೂಮಿಯಲ್ಲಿ ಗೇರು ಚೆನ್ನಾಗಿ ಬೆಳೆಯುತ್ತದೆ. ಆದರೆ ನೀರು ಬಸಿದು ಹೋಗುವಂತಿರಬೇಕು. ವೆಂಗ್ರೂಲಾ 3, 4, 7, 8 ಹಾಗೂ ಉಳ್ಳಾಲ 1, 2, 3, 4 ತಳಿಯ ಗೇರು ಬಯಲು ಸೀಮೆಯಲ್ಲಿ ಚೆನ್ನಾಗಿ ಬೆಳೆಯುತ್ತಿವೆ. 7x7 ವಿಸ್ತೀರ್ಣದಲ್ಲಿ ಪ್ರತಿ ಹೆಕ್ಟೇರ್‌ಗೆ 204 ಗಿಡಗಳ ನಾಟಿ ಮಾಡಲಾಗುತ್ತಿದೆ. ಐದು ವರ್ಷಗಳಲ್ಲಿ ಫಲ ನೀಡಲು ಆರಂಭಿಸುತ್ತವೆ.

ಬೆಳೆಗಾರರು ವೈಯಕ್ತಿಕವಾಗಿ ಗೇರು ಸಂಸ್ಕರಣಾ ಘಟಕ ಆರಂಭಿಸಲು ಮುಂದೆ ಬಂದರೆ ಎನ್‌ಎಚ್‌ಎಂ ಅವರಿಗೆ ಹಣಕಾಸಿನ ನೆರವು ನೀಡಲಿದೆ. ಕಟ್ಟಡ ನಿರ್ಮಾಣ, ಯಂತ್ರೋಪಕರಣ ಖರೀದಿಗೆ ಸಾಲ ಹಾಗೂ ಸಹಾಯಧನ ಎರಡೂ ಸಿಗಲಿದೆ ದೊಡ್ಡ ಪ್ರಮಾಣದಲ್ಲಿ (ಕನಿಷ್ಠ 20ರಿಂದ 25 ಎಕರೆ) ಗೇರು ಬೆಳೆಯುವವರು ಸಂಸ್ಕರಣಾ ಘಟಕ ಆರಂಭಿಸಿದಲ್ಲಿ ಅವರಿಗೆ ಅನುಕೂಲವಾಗಲಿದೆ. ಸಂಸ್ಕರಣೆಗೆ ಸಂಬಂಧಿಸಿದಂತೆ ಇಲಾಖೆಯಿಂದಲೇ ತರಬೇತಿ ಕೊಡಿಸಲಾಗುವುದು ಎಂದು ಪ್ರಭುರಾಜ ಹೇಳುತ್ತಾರೆ..

ಕಳೆದ ಎರಡು ವರ್ಷಗಳಲ್ಲಿ 37 ಮಂದಿ ರೈತರು ಗೇರು ಬೆಳೆಯಲು ಮುಂದಾಗಿದ್ದಾರೆ. 112 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಅರ್ಧ ಎಕರೆಯಿಂದ 10 ಎಕರೆವರೆಗೆ ಗೇರು ಬೆಳೆಯುವವರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಗೇರು ಬೆಳೆಯಲು ಪ್ರತಿ ಎಕರೆಗೆ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಹಾಯಧನ (₹33,492), ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ 90ರಷ್ಟು ಸಹಾಯಧನ (₹66,286) ನೀಡಲಾಗುವುದು. ಸಸಿ ಕೊಳ್ಳಲು, ಪಾತಿ ಮಾಡಲು, ಹನಿ ನೀರಾವರಿ ವ್ಯವಸ್ಥೆ, ನಾಟಿ ಮಾಡಿದ ಎರಡು ವರ್ಷಗಳ ಅವಧಿಯವರೆಗೆ ಗಿಡಗಳ ಆರೈಕೆಗೆ ಉದ್ಯೋಗ ಖಾತರಿ ಯೋಜನೆಯಡಿ ನೆರವು ನೀಡಲಾಗುತ್ತಿದೆ.

ತೋಟಗಾರಿಕೆ ವಿ.ವಿ ನೆರವು:

ತಾಂತ್ರಿಕ ನೆರವು ನೀಡುವ ಮೂಲಕ ಗೇರು ಬೆಳೆ ಉತ್ತೇಜನಕ್ಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೂಡ ಕೈ ಜೋಡಿಸಿದೆ. ಈಗಾಗಲೇ ನಾಟಿ ಮಾಡಿ ಚೆನ್ನಾಗಿ ಬೆಳೆ ಬಂದಿರುವ ಹೊಲಗಳಿಗೆ ಹೊಸ ರೈತರನ್ನು ಕರೆದೊಯ್ದು ಪ್ರಾತ್ಯಕ್ಷಿಕೆ ನೀಡುವ ಜೊತೆಗೆ ಗೇರು ಕೃಷಿಗೆ ಸಂಬಂಧಿಸಿದ ತರಬೇತಿ, ತಜ್ಞರೊಂದಿಗೆ ಸಂವಾದ ಆಯೋಜಿಸಲಾಗುತ್ತಿದೆ. ಗೇರು ಬೆಳೆಯಲು ಇಚ್ಛಿಸುವ ರೈತರು ಸ್ಥಳೀಯ ತೋಟಗಾರಿಕೆ ಇಲಾಖೆ ಕಚೇರಿಗೆ ತೆರಳಿ ಮಾಹಿತಿ ಪಡೆಯಬಹುದು.

ಹುನಗುಂದ ತಾಲ್ಲೂಕಿನ ಚಿತ್ತವಾಡಗಿಯಲ್ಲಿ ಜಮೀನು ಹೊಂದಿರುವ ಹಿರಿಯ ರಾಜಕಾರಣಿ ಡಾ. ಮಲ್ಲನಗೌಡ ನಾಡಗೌಡ 16 ಎಕರೆಯಲ್ಲಿ ಗೇರು ಬೆಳೆದು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ವೆಂಗ್ರೂಲಾ ತಳಿಯ ಗೇರು ನಾಟಿ ಮಾಡಿದ್ದು, 15 ತಿಂಗಳ ಗಿಡಗಳು ಚೆನ್ನಾಗಿ ಬೆಳೆದಿವೆ.

’ರಾಜ್ಯದಲ್ಲಿ ದಕ್ಷಿಣ ಒಳನಾಡಿಗೆ ಮಲೆನಾಡಿನಿಂದ ವಾಣಿಜ್ಯ ಬೆಳೆ ಅಡಿಕೆ ವಲಸೆ ಹೋಗಿ ರೈತರ ಜೇಬು ತುಂಬಿಸಿದೆ. ಅದೇ ರೀತಿ ಉತ್ತರ ಭಾಗಕ್ಕೆ ಗೇರು ಸಮೃದ್ಧಿ ತರಲಿ. ಆ ನಿಟ್ಟಿನಲ್ಲಿ ಸರ್ಕಾರ ಕೂಡ ಗಮನ ನೀಡಿ ಕಡಿಮೆ ಬಡ್ಡಿಗೆ ಸುಲಭವಾಗಿ ಸಾಲ ಕೊಟ್ಟು ಬೆಳೆಗಾರರನ್ನು ಉತ್ತೇಜಿಸಲಿ‘ ಎಂದು ನಾಡಗೌಡ ಮನವಿ ಮಾಡುತ್ತಾರೆ.

ರ್‍ಯಾಂಕಿಂಗ್ ಹೆಚ್ಚಳಕ್ಕೆ ಪ್ರಯತ್ನ:

ಪ್ರಪಂಚದ ಗೇರು ಬೆಳೆಯಲ್ಲಿ ಶೇ 60ರಷ್ಟು ಪಾಲು (9.23 ಲಕ್ಷ ಹೆಕ್ಟೇರ್) ಭಾರತ ಹೊಂದಿದೆ. ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಆರನೇ ಸ್ಥಾನ ಹೊಂದಿದೆ. ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಗೋಡಂಬಿ ಉತ್ಪಾದನೆಯಲ್ಲಿ ಮೊದಲ ಮೂರು ಸ್ಥಾನ ಹೊಂದಿವೆ.ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ರ್ಯಾಂಕಿಗ್ ಹೆಚ್ಚಿಸಿಕೊಳ್ಳುವ ಜೊತೆಗೆ ಈಗ ಪ್ರತಿ ಹೆಕ್ಟೇರ್‌ಗೆ ಇರುವ ಸರಾಸರಿ 461 ಕೆ.ಜಿ ಇಳುವರಿ ಪ್ರಮಾಣದ ಹೆಚ್ಚಳಕ್ಕೆ ಎನ್‌ಎಚ್‌ಎಂ ಮುಂದಾಗಿದೆ. ಅದರ ಫಲವಾಗಿ ಕೊಡಗು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಗೋಡಂಬಿ ತೋಟಗಳು ಇತ್ತೀಚೆಗೆ ಗಣನೀಯವಾಗಿ ಹೆಚ್ಚಳವಾಗಿವೆ. ಅದಕ್ಕೆ ಪೂರಕವಾಗಿ ಪುತ್ತೂರು, ಉಳ್ಳಾಲದ ನಂತರ ಕೋಲಾರ ಜಿಲ್ಲೆ ಚಿಂತಾಮಣಿಯಲ್ಲೂ ಗೋಡಂಬಿ ಸಂಶೋಧನಾ ಕೇಂದ್ರ ತಲೆ ಎತ್ತಿದೆ ಎಂದು ಡಾ.ಎಚ್.ಎಸ್.ಪ್ರಭುರಾಜ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.