ADVERTISEMENT

ಸಾವಯವ ಕೃಷಿ ಜತೆ ಹೈನುಗಾರಿಕೆ

ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಿದ ಪ್ರಗತಿಪರ ಕೃಷಿಕ ಸಂಜೀವ ಭೈರಶೆಟ್ಟಿ

ಎ.ಸಿ.ಪಾಟೀಲ
Published 24 ಡಿಸೆಂಬರ್ 2018, 19:30 IST
Last Updated 24 ಡಿಸೆಂಬರ್ 2018, 19:30 IST
ಹಣ್ಣಿನ ತೋಟದಲ್ಲಿ ಸಂಜೀವ ಭೈರಶೆಟ್ಟಿ
ಹಣ್ಣಿನ ತೋಟದಲ್ಲಿ ಸಂಜೀವ ಭೈರಶೆಟ್ಟಿ   

ಇಂಡಿ:ಐದು ಎಕರೆ ಭೂಮಿಯಿದು. ಒಂದು ಎಕರೆಯಲ್ಲಿ ಹಣ್ಣಿನ ತೋಟ. ಇನ್ನುಳಿದ ನಾಲ್ಕು ಎಕರೆಯಲ್ಲೂ ಪ್ರತಿ ವರ್ಷ ಬೇರೆ ಬೇರೆ ಬೆಳೆ ಬೆಳೆಯುವ ಜತೆಯಲ್ಲೇ; ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳುವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ ಪಟ್ಟಣದ ಸಂಜೀವ ಭೈರಶೆಟ್ಟಿ.

ಸುಭಾಸ ಪಾಳೇಕರ ನನ್ನ ಕೃಷಿಗೆ ಪ್ರೇರಣೆ. ಎಂಟು ವರ್ಷದ ಹಿಂದೆ ಬಾಳೆ ತೋಟ ನೋಡಲು ಪಾಳೇಕರ ಬಂದಿದ್ದಾಗ ಹಲ ಸಲಹೆ ನೀಡಿದ್ದರು. ಅಂದಿನಿಂದಲೂ ಸಂಪೂರ್ಣ ಸಾವಯವ ಕೃಷಿ ನನ್ನದಾಗಿದೆ. ಜತೆಗೆ ಹೈನುಗಾರಿಕೆಯೂ ಇದೆ. ನಷ್ಟದ ಮಾತಿಲ್ಲ. ಲಾಭವೇ ನನ್ನ ಹಾದಿ ಎನ್ನುತ್ತಾರೆ ಸಂಜೀವ.

ಪ್ರಸ್ತುತ ಒಂದು ಎಕರೆಯಲ್ಲಿ ನುಗ್ಗೆ, ಚಿಕ್ಕು, ಕರಿ ಬೇವು, ಪೇರು, ತೆಂಗು, ಮಾವು ಮುಂತಾದ ಹಣ್ಣಿನ ಬೆಳೆಯಿದೆ. ಎರಡು ಎಕರೆಯಲ್ಲಿ ಕಬ್ಬಿದೆ. ಸಾಲಿನಿಂದ ಸಾಲಿಗೆ ಐದು ಅಡಿ ಅಂತರದಲ್ಲಿ ನಾಟಿ ಮಾಡಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಎಕರೆಗೆ 80 ಟನ್‌ ಫಸಲು ತೆಗೆಯುವುದು ಇವರ ವಿಶೇಷ. ಎರಡು ಎಕರೆಯಲ್ಲಿ ಕಡಲೆ ಕೃಷಿಯಿದೆ. ಇದೀಗ ಹೂವಿನ ಹಂತ. ಕಾಯಿ ಕಟ್ಟಿದರೆ 10ರಿಂದ 12 ಕ್ವಿಂಟಲ್‌ ಇಳುವರಿಯ ನಿರೀಕ್ಷೆ ಇವರದ್ದಾಗಿದೆ.

ADVERTISEMENT

ಐದು ಎಕರೆ ಸಾವಯವ ಜಮೀನಿಗಾಗಿ ಆರು ಎಮ್ಮೆ, ಎರಡು ಆಕಳು ಸಾಕಿದ್ದಾರೆ. ಪತ್ನಿ ಮಾನಂದಾ ಜತೆ ಜಮೀನಿನಲ್ಲಿ ನಿತ್ಯ ದುಡಿಯುತ್ತಾರೆ. ಅಗತ್ಯಕ್ಕಾಗಿ ಒಬ್ಬ ಕೃಷಿ ಕೂಲಿ ಕಾರ್ಮಿಕನನ್ನು ನಿಯೋಜಿಸಿಕೊಂಡಿದ್ದಾರೆ.

ಪ್ರಯೋಗಶೀಲ

ಕಸ ಕೀಳಲು ಗರಗಸದ ತುಂಡನ್ನು ಕಾವಿಗೆ (ಕಟ್ಟಿಗೆಯ ತುಂಡು) ಭದ್ರಪಡಿಸಿ, ಬೆಳೆಗಳ ಮಧ್ಯದಲ್ಲಿ ಎಳೆದುಕೊಂಡು ಸಾಗಿದರೆ ಸಾಕು ಕಸ ಬುಡಮೇಲಾಗುತ್ತದೆ. ಇದೊಂದು ಹೊಸ ಪ್ರಯೋಗ. ನಾಲ್ವರು ಕೂಲಿ ಕಾರ್ಮಿಕ ಮಹಿಳೆಯರು ಕಸ ಕೀಳುವ ಕೆಲಸ ನಿರ್ವಹಿಸುವುದನ್ನು ಒಬ್ಬರೇ ಈ ಉಪಕರಣದ ಮೂಲಕ ಮಾಡಬಹುದಾಗಿದೆ.

ಸೈಕಲ್ ಬಳಸಿಯೂ ಕಸ ಕೀಳುವುದರಲ್ಲಿ ಭೈರಶೆಟ್ಟಿ ನಿಸ್ಸೀಮ. ಇಂಥ ಪ್ರಯೋಗಕ್ಕೆ 2014-2015ನೇ ಸಾಲಿನಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಲಭಿಸಿದರೆ, ಮಾನಂದಾ ಜಿಲ್ಲೆ ಮತ್ತು ತಾಲ್ಲೂಕು ಮಹಿಳಾ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾವಯವ ಕೃಷಿಗಾಗಿ ಜಾನುವಾರು

ಸಾವಯವ ಕೃಷಿ ಮಾಡಬೇಕು ಎಂಬುವವರು ಮೊದಲು ಕನಿಷ್ಠ ಒಂದು ದನವನ್ನಾದರೂ ಸಾಕಬೇಕು. ದನ ಇಲ್ಲದವರು ಕೃಷಿಯನ್ನೇ ಮಾಡಬಾರದು. ದನಗಳ ಸೆಗಣಿ–ಗಂಜಲವೇ ಈ ಕೃಷಿಯ ಜೀವಾಳ. ಎರಡು ಎಮ್ಮೆ ಸಾಕಿದರೆ ನಿತ್ಯ ₹ 500 ಗಳಿಕೆಯಾಗಲಿದೆ. ಇದರ ಜತೆಗೆ ಎರಡು ಎಕರೆಗೆ ಸಾಕಾಗುವಷ್ಟು ಗೊಬ್ಬರ, ಜೀವಾಮೃತ ಸಿಗಲಿದೆ ಎನ್ನುತ್ತಾರೆ ಭೈರಶೆಟ್ಟಿ.

ಕನ್ಹೇರಿ ಮಠದಲ್ಲಿ ಹೈನುಗಾರಿಕೆ ತರಬೇತಿ ಪಡೆದಿದ್ದಾರೆ. ಆರಂಭದಲ್ಲಿ ಎರಡು ದನ ಕಟ್ಟಿಕೊಂಡು ಎರಡು ಎಕರೆ ಭೂಮಿಯನ್ನು ಸಾವಯವ ಕೃಷಿಗೆ ಒಳಪಡಿಸಬೇಕು. ಇದರಲ್ಲಿ ನಿಂಬೆ, ನುಗ್ಗೆ, ಬಾಳೆ, ಪೇರು, ಬಾರಿ, ನೆಲ್ಲಿಕಾಯಿ, ಚೆಕ್ಕು, ಕರಿ ಬೇವು, ಜೋಳ, ಕಡಲೆ, ತಾಳೆ ಮುಂತಾದ ಬೆಳೆ ಬೆಳೆದರೆ ಖಂಡಿತವಾಗಿಯೂ ಲಾಭವಾಗುತ್ತದೆ. ಸಾವಯವದಿಂದ ಬೆಳೆದ ಹಣ್ಣಿನ ರುಚಿಯೇ ಬೇರೆ. ಹೆಚ್ಚು ಕಾಲ ಕೆಡುವುದಿಲ್ಲ. ಇಂತಹ ಪ್ರಯೋಗ ಮಾಡಿದ್ದಾದರೆ, ನೀವು ಬದುಕಿ ನಿಮ್ಮ ಮಕ್ಕಳಿಗೆ ಒಳ್ಳೆಯ ಫಲವತ್ತಾದ ಜಮೀನು ಬಿಟ್ಟು ಹೋಗುತ್ತೀರಿ ಎನ್ನುವ ಸಲಹೆ ಸಂಜೀವರದ್ದು.

ಗೊಬ್ಬರವನ್ನು ತಗ್ಗು ಗುಂಡಿಯಲ್ಲಿ ಹಾಕಿ ನೀರುಣಿಸಿ ಕೊಳೆಸುವುದು ಬೇಡ. ಇದರಿಂದ ನಮಗೆ ಲಾಭವಾಗುವುದಿಲ್ಲ. ಗೊಬ್ಬರ ಕೊಳೆಯಬಾರದು ಕಳೆಯಬೇಕು (ಮಾಗಬೇಕು). ಮಾಗಿದರೆ ಅದು ಬಲು ಉಪಯುಕ್ತವಾಗುತ್ತದೆ. ಇದರ ಜತೆಗೆ ಈಚೆಗೆ ಸಾವಯವಕ್ಕೂ ತನ್ನದೇಯಾದ ಗೊಬ್ಬರ, ಔಷಧಗಳು ಬಂದಿವೆ. ಅವುಗಳನ್ನು ಉಪಯೋಗಿಸಬಹುದು ಎಂದು ಹೇಳಿದರು.

ಬರಗಾಲ ಎದುರಿಸಲಿಕ್ಕೆ ಸಾವಯವ ಕೃಷಿ ಅತ್ಯಗತ್ಯ ಎನ್ನುವ ಭೈರಶೆಟ್ಟಿ, ತಮ್ಮ ಒಂದು ಬಾವಿ ಮತ್ತು ಒಂದು ಕೊಳವೆಬಾವಿಯ ನೀರನ್ನು ಮಾತ್ರ ಉಪಯೋಗಿಸುತ್ತಾರೆ. ಬೇಸಿಗೆಯಲ್ಲಿ ನೀರು ಸ್ವಲ್ಪ ಕಡಿಮೆಯಾದರೂ; ಹನಿ ನೀರಾವರಿ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.