ADVERTISEMENT

ಗ್ರಾಮೀಣ ಸಮೃದ್ಧಿಗಾಗಿ ತೋಟಗಾರಿಕೆ

ಹೆಸರಘಟ್ಟದಲ್ಲಿ 23 ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳ

ಗಾಣಧಾಳು ಶ್ರೀಕಂಠ
Published 21 ಜನವರಿ 2019, 19:30 IST
Last Updated 21 ಜನವರಿ 2019, 19:30 IST
IIHR
IIHR   

ಬೆಂಗಳೂರಿಗೆ ಸಮೀಪದಲ್ಲಿರುವ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೇ ಜನವರಿ 23 ರಿಂದ 25ರವರೆಗೆ ‘ರಾಷ್ಟ್ರೀಯ ತೋಟಗಾರಿಕಾ ಮೇಳ’ ವನ್ನು ಆಯೋಜಿಸುತ್ತಿದೆ. ‘ಗ್ರಾಮೀಣ ಸಮೃದ್ಧಿಗಾಗಿ ತೋಟಗಾರಿಕೆ’ ಎಂಬ ಘೋಷವಾಖ್ಯದಡಿ ಈ ಮೇಳ ಆಯೋಜಿಸಲಾಗುತ್ತಿದೆ.

ಇದು ಮೂರನೇ ವರ್ಷದ ರಾಷ್ಟ್ರೀಯ ಮೇಳ. ಮೂರು ದಿನಗಳ ಮೇಳದಲ್ಲಿ ಹೊಸ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಹೊಸ ತರಕಾರಿ, ಹಣ್ಣು, ಹೂವಿನ ಬೆಳೆಗಳ ಪರಿಚಯ, ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರೈತರಿಗೆ ತೋಟಗಾರಿಕಾ ಬೆಳೆ ಬೆಳೆಯುವುದರಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಉತ್ತರ ನೀಡುವ ಸಲುವಾಗಿಯೇ ರೈತರು – ವಿಜ್ಞಾನಿಗಳೊಂದಿಗೆ ಚರ್ಚೆ ಏರ್ಪಡಿಸಲಾಗಿದೆ.

‘ಯುವಕರು ಹಳ್ಳಿ ತೊರೆದು ಪಟ್ಟಣ ಸೇರುತ್ತಿದ್ದಾರೆ. ಅಂಥ ಯುವಕರಿಗೆ ಅವರ ಹಳ್ಳಿಗಳಲ್ಲೇ ಉದ್ಯೋಗ ದೊರೆತು, ತಮ್ಮ ಜಮೀನುಗಳಲ್ಲಿ ಆದಾಯವನ್ನು ಹೇಗೆ ದ್ವಿಗುಣ ಮಾಡಿಕೊಳ್ಳಲು ಸಾಧ್ಯವಿದೆ’ ಎಂಬುದರ ಕುರಿತು ಮೇಳದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಇದರ ಜತೆಗೆ, ಪ್ರಗತಿಪರ ಕೃಷಿಕರಿಗೆ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆ ಮಾಡಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ.

ADVERTISEMENT

ತರಕಾರಿಗಳ ಪ್ರಾತ್ಯಕ್ಷಿಕೆ

60ಕ್ಕೂ ಹೆಚ್ಚು ತರಕಾರಿ ತಳಿಗಳು, 21ಕ್ಕೂ ಹೆಚ್ಚು ಹೈಬ್ರಿಡ್ ತರಕಾರಿ ತಾಕುಗಳ ಪ್ರದರ್ಶನವಿದೆ. ಏಳರಿಂದ 10 ತಳಿಗಳನ್ನು ತಾಕುಗಳಲ್ಲಿ ಬೆಳೆಸಲಾಗಿದೆ. ರೈತರು ಈ ತಾಕುಗಳನ್ನು ಭೇಟಿ ಮಾಡಿ, ತಳಿಗಳನ್ನು ಬೆಳೆಸುವ ಕುರಿತು ಮಾಹಿತಿ ಪಡೆಬಹುದು.

ಭಾರತೀಯ ತೋಟಗಾರಿಕಾ ಸಂಸ್ಥೆ ಮಾವಿನಲ್ಲಿ ಅರ್ಕಾ ಉದಯ, ಪಪ್ಪಾಯದಲ್ಲಿ ಅರ್ಕಾ ಪ್ರಭಾತ್, ಟೊಮೆಟೊದಲ್ಲಿ ಅರ್ಕಾ ರಕ್ಷಕ ಎಂಬ ರೋಗ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಿದೆ. ಇವು ಮೂರು ರೋಗಗಳನ್ನು ವಿರೋಧಿಸುವಂತಹ ಶಕ್ತಿ ಹೊಂದಿವೆ. ಅರ್ಕಾ ರಕ್ಷಕ್ ಎಂಬ ಟೊಮೆಟೊ ತಳಿಯ ಒಂದು ಗಿಡದಲ್ಲಿ 19 ಕೆಜಿವರೆಗೂ ಹಣ್ಣು ಬಿಡುತ್ತದೆ. ಈ ಮೇಳದಲ್ಲಿ ಅರ್ಕಾ ಅಬೇದ್ ಎಂಬ ಟೊಮೆಟೊ ತಳಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಇದು ನಾಲ್ಕು ರೋಗವನ್ನು ತಡೆಯುವ ಶಕ್ತಿ ಹೊಂದಿದೆ ಎನ್ನುತ್ತಾರೆ ತೋಟಗಾರಿಕಾ ಅಧಿಕಾರಿ ಕೆ.ಎನ್.ಜಗದೀಶ್.

ಸಮಗ್ರ ಕೃಷಿ ಪದ್ಧತಿ ತಾಕು

ಒಬ್ಬ ರೈತ ಒಂದು ಎಕರೆಯಲ್ಲಿ ಎಷ್ಟೆಲ್ಲ ಬೆಳೆಯನ್ನು ಬೆಳೆಯಬಹುದು. ಹಣ್ಣಿನ ಗಿಡಗಳ ಜತೆಗೆ, ಮೇವಿನ ಬೆಳೆ, ತರಕಾರಿ, ಹೂವಿನ ಗಿಡಗಳನ್ನು ಬೆಳೆಯಬಹುದು. ನೀರಿನ ಕೊರತೆ ಇರುವ ರೈತರು, ಕೃಷಿ ಹೊಂಡದ ನೆರವಿನಿಂದ ಹೇಗೆ ತರಕಾರಿ ಬೆಳೆಯಬಹುದು ಎಂದು ತೋರಿಸುವುದಕ್ಕಾಗಿ ಒಂದು ಎಕರೆಯಲ್ಲಿ ‘ಸಮಗ್ರ ಕೃಷಿ ಪದ್ಧತಿ’ ಅಳವಡಿಸಿರುವ ತಾಕನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೈನುಗಾರಿಕೆ, ಕೋಳಿ,ಕುರಿ ಸಾಕಾಣೆ, ಹಣ್ಣಿನ ಗಿಡಗಳು, ತರಕಾರಿ ಬೆಳೆ, ಮೇವಿನ ಬೆಳೆ ಬೆಳೆಯುವ ಜತೆಗೆ, ಕೃಷಿ ಹೊಂಡವನ್ನು ಮಾಡಿ ತೋರಿಸಲಾಗಿದೆ. ಮೇಳದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳಿವೆ. ಇದರಲ್ಲಿ ಬೀಜ, ಗೊಬ್ಬರ, ಹಣ್ಣಿನ ಗಿಡಗಳು ಸೇರಿದಂತೆ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳು ಲಭ್ಯವಿರುತ್ತವೆ.

ಕೊಯ್ಲೋತ್ತರ ತಂತ್ರಜ್ಞಾನ

ಬಾಳೆ, ಮಾವಿನಹಣ್ಣು ಬೆಳೆಗಾರರು ಹೂಜಿ ನೊಣದಿಂದಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ ಹೂಜಿ ನೊಣ ನಿಯಂತ್ರಿಸಿ, ಕೀಟ ರಹಿತ ಹಣ್ಣಿನ ಉತ್ಪಾದನೆ ಬಗ್ಗೆ, ಮೋಹಕ ಬಲೆಗಳನ್ನು ಬಳಸುವ ಕುರಿತ ಪ್ರಾತ್ಯಕ್ಷಿಕೆಗಳಿರುತ್ತವೆ. ಕಡಿಮೆ ಖರ್ಚಿನಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.

ಮೇಳದ ಕುರಿತ ಹೆಚ್ಚಿನ ಮಾಹಿತಿಗಾಗಿ ಡಾ. ವೆಂಕಟಕುಮಾರ್ (7760835475), ಕೆ.ಎನ್.ಜಗದೀಶ್ (9844481108), 080-23086100 ಸಂಪರ್ಕಿಸಬಹುದು.

**

ಸೀಡ್ ವಿಲೇಜ್ ಪರಿಕಲ್ಪನೆ :

ತರಕಾರಿ ಬೆಳೆಯುತ್ತಿರುವ ರೈತರಿಗೆ, ತರಕಾರಿ ಬೀಜಗಳನ್ನು ಉತ್ಪಾದಿಸಿ, ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಮಾರಾಟ ಮಾಡುವಂತಹ ‘ಸೀಡ್ ವಿಲೇಜ್’ ಪರಿಕಲ್ಪನೆ ಕುರಿತು ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವುದಕ್ಕಾಗಿ ಸಂಸ್ಥೆ ಸಿದ್ಧಪಡಿಸಿರುವ ಯೋಜನೆಯಾಗಿದೆ.

ಮನೆಯಲ್ಲೇ ಅಣಬೆ ಬೆಳೆದುಕೊಳ್ಳುವ ವಿಧಾನದ ಪ್ರಾತ್ಯಕ್ಷಿಕೆ ಇರುತ್ತದೆ. ಅಣಬೆ ಪುಡಿ ಮಾಡಿ, ಅದರಿಂದ ಬೇರೆ ಬೇರೆ ಖಾದ್ಯಗಳನ್ನು ತಯಾರಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಣಬೆಯಲ್ಲಿ ಬರುವ ಫ್ಲೋರೋಟಸ್ ರಾಸಾಯನಿಕ ಬಳಸಿ, ಹಸಿರೆಲೆ/ ತ್ಯಾಜ್ಯವನ್ನು ಬಹುಬೇಗ ಕರಗಿಸಿ ಸಾವಯವ ಗೊಬ್ಬರವಾಗಿಸುವ ವಿಧಾನದ ಬಗ್ಗೆಯೂ ಪ್ರಾತ್ಯಕ್ಷಿಕೆ ಇರುತ್ತದೆ.

**

‘ನಗರಕ್ಕೆ ವಲಸೆ ಬರುವ ಗ್ರಾಮೀಣ ಯುವಕರಿಗೆ ಹಳ್ಳಿಗಳಲ್ಲೇ ದುಡಿಮೆ ಲಭ್ಯವಾಗುವಂತೆ ಮಾಡಲು ಈ ತೋಟಗಾರಿಕಾ ಮೇಳ ಪೂರಕವಾಗಲಿದೆ’
–ಡಾ.ಎಂ.ಆರ್. ದಿನೇಶ್, ನಿರ್ದೇಶಕರು, ಐಐಎಚ್ ಆರ್, ಹೆಸರಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.