ADVERTISEMENT

ಗುಜರಾತ್‌ ಸರ್ಕಾರದಿಂದ 'ಕಮಲಂ' ಆದ ಡ್ರ್ಯಾಗನ್‌ ಫ್ರೂಟ್‌!

ಏಜೆನ್ಸೀಸ್
Published 20 ಜನವರಿ 2021, 13:44 IST
Last Updated 20 ಜನವರಿ 2021, 13:44 IST
ಡ್ರ್ಯಾಗನ್‌ ಫ್ರೂಟ್
ಡ್ರ್ಯಾಗನ್‌ ಫ್ರೂಟ್   

ಗಾಂಧಿನಗರ: ಗುಜರಾತ್‌ ಸರ್ಕಾರವು ಡ್ರ್ಯಾಗನ್‌ ಫ್ರೂಟ್‌‌ಗೆ 'ಕಮಲಂ' ಎಂಬ ಹೆಸರು ನೀಡಿದೆ. ಹಣ್ಣಿನ ಹೊರಭಾಗವು ಕಮಲದ ಆಕಾರಕ್ಕೆ ಹೋಲಿಕೆಯಾಗುವುದರಿಂದ ರಾಜ್ಯ ಸರ್ಕಾರವು ಹೆಸರು ಬದಲಿಸಲು ನಿರ್ಧರಿಸಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್ ರುಪಾಣಿ ಹೇಳಿದ್ದಾರೆ.

'ಡ್ರ್ಯಾಗನ್‌ ಫ್ರೂಟ್‌‌' ಹೆಸರು ಚೀನಾದೊಂದಿಗೆ ಬೆಸೆದುಕೊಂಡಿರುವುದರಿಂದ ಹೆಸರು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಕ್ಷಿಣ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಸಂಸ್ಕೃತದಲ್ಲಿ 'ಕಮಲಂ' ಎಂದರೆ ತಾವರೆ (ಕಮಲ) ಎಂಬ ಅರ್ಥವಿದೆ. ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಡ್ರ್ಯಾಗನ್‌ ಫ್ರೂಟ್‌‌, ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದಿದೆ. ಅದರ ಭಿನ್ನ ಆಕಾರ ಮತ್ತು ರುಚಿ ಜನರ ಗಮನ ಸೆಳೆದಿದೆ.

ADVERTISEMENT
ಕಮಲದಂತೆ ಕಾಣುವ ಡ್ರ್ಯಾಗನ್‌ ಕಾಯಿ

'ಡ್ರ್ಯಾಗನ್‌ ಫ್ರೂಟ್‌‌ನ ಹೆಸರು ಬದಲಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹಣ್ಣಿನ ಹೊರ ಪದರವು ಕಮಲವನ್ನು ಹೋಲುತ್ತದೆ, ಹಾಗಾಗಿ ಆ ಹಣ್ಣಿಗೆ ಕಮಲಂ ಎಂದು ಕರೆಯಲಾಗುತ್ತದೆ' ಎಂದು ಸಿಎಂ ವಿಜಯ್ ರುಪಾಣಿ ಹೇಳಿರುವುದಾಗಿ ವರದಿಯಾಗಿದೆ.

ಆಮದು ಮಾಡಿಕೊಳ್ಳಲಾಗುವ ಡ್ರ್ಯಾಗನ್‌ ಫ್ರೂಟ್‌‌ನ್ನು ಗುಜರಾತ್‌ನ ಕಚ್‌ ವಲಯದಲ್ಲಿ ಬೆಳೆಯಲಾಗುತ್ತಿದೆ. ಆ ಬಗ್ಗೆ 2020ರ ಜುಲೈ 26ರಂದು ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೆಂದ್ರ ಮೋದಿ ಪ್ರಸ್ತಾಪಿಸಿ, ರೈತರನ್ನು ಅಭಿನಂದಿಸಿದ್ದರು.

ವಿಟಮಿನ್‌ ಸಿ ಸೇರಿದಂತೆ ಹಲವು ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ಡ್ರ್ಯಾಗನ್‌ ಹಣ್ಣನ್ನು ಭುಜ್‌, ಗಾಂಧಿಧಾಮ ಹಾಗೂ ಮಾಡವಿ ಪ್ರದೇಶಗಳಲ್ಲಿ ಯತೇಚ್ಛವಾಗಿ ಬೆಳೆಯಲಾಗುತ್ತಿದೆ. ರೋಗ ನಿರೋಧ ಶಕ್ತಿ ವೃದ್ಧಿಸಿಕೊಳ್ಳುವಲ್ಲಿಯೂ ಈ ಹಣ್ಣು ಸಹಕಾರಿ ಎನ್ನಲಾಗಿದೆ.

ದೇಶದಲ್ಲಿ ಗುಜರಾತ್‌, ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಅಂಡಮಾನ್ ಮತ್ತು ನಿಕೊಬಾರ್‌ ದ್ವೀಪಗಳಲ್ಲಿ ಡ್ರ್ಯಾಗನ್ ಫ್ರೂಟ್‌‌ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.