ADVERTISEMENT

90 ಗುಂಟೆಯಲ್ಲಿ ಟೊಮೆಟೊ ಬೆಳೆದ ಗಳತಗಾದ ರೈತ: 4 ತಿಂಗಳುಗಳಲ್ಲಿ ₹ 6 ಲಕ್ಷ ಲಾಭ!

ಸುಧಾಕರ ಎಸ್.ತಳವಾರ, ಬೆಂಗಳೂರು
Published 21 ಮೇ 2019, 5:13 IST
Last Updated 21 ಮೇ 2019, 5:13 IST
ಗಳತಗಾದ ರೈತ ಶಿವಾನಂದ ಹೂವಗೌಡ ಪಾಟೀಲರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ
ಗಳತಗಾದ ರೈತ ಶಿವಾನಂದ ಹೂವಗೌಡ ಪಾಟೀಲರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ   

ಚಿಕ್ಕೋಡಿ: ಕೃಷಿ ಉತ್ಪನ್ನಗಳ ಬೆಲೆ ಏರಿಳಿತ, ಪ್ರಕೃತಿ ವಿಕೋಪ, ರೋಗ–ರುಜಿನಗಳ ಕಾಟ, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಕೃಷಿ ಕ್ಷೇತ್ರದಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಆದರೆ, ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎನ್ನುವುದನ್ನು ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದ ಯುವ ರೈತರೊಬ್ಬರು ಸಾಧಿಸಿ ತೋರಿಸಿದ್ದಾರೆ.

ಬಿ.ಕಾಂ. ಪದವೀಧರ ಶಿವಾನಂದ (ಪೋಪಟ್) ಹೂವಗೌಡ ಪಾಟೀಲ ಎಂಬುವವರೇ ಆ ಕೃಷಿ ಸಾಧಕ.

90 ಗುಂಟೆ ಜಮೀನಿನಲ್ಲಿ ಸಿಜೆಂಟಾ 6242 ತಳಿಯ ಟೊಮೆಟೊ ಬೆಳೆದು 4 ತಿಂಗಳುಗಳ ಅವಧಿಯಲ್ಲಿ ಖರ್ಚು–ವೆಚ್ಚ ಕಳೆದ ₹ 6 ಲಕ್ಷ ಆದಾಯ ಗಳಿಸಿ ಗಮನಸೆಳೆದಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.

ADVERTISEMENT

ನಾಲ್ಕೂವರೆ ಅಡಿ ಅಂತರದ ಸಾಲುಗಳಲ್ಲಿ ಜ. 10ರಂದು ಟೊಮೆಟೊ ಸಸಿಗಳ ನಾಟಿ ಮಾಡಿದ್ದ ಅವರು, ಹನಿ ನೀರಾವರಿ ಮೂಲಕ ನೀರು ಕೊಟ್ಟಿದ್ದಾರೆ. ಎರಡು ತಿಂಗಳ ಬಳಿಕ ಟೊಮೆಟೊ ಕಾಯಿಗಳಾಗಲು ಶುರುವಾದವು. ಕಟಾವು ಆರಂಭಗೊಂಡಿದ್ದು, ಮಾರ್ಚ್ 2ನೇ ವಾರದಿಂದ. ಇದುವರೆಗೆ 137 ಟನ್ ಇಳುವರಿ ಪಡೆದಿದ್ದಾರೆ. ಪ್ರತಿ ಕೆ.ಜಿ. ಟೊಮೆಟೊಗೆ ಸಗಟು ಮಾರುಕಟ್ಟೆಯಲ್ಲಿ ಸರಾಸರಿ ₹ 8ರಿಂದ ₹ 15 ದರ ಲಭಿಸಿದ್ದು, ₹ 11.80 ಲಕ್ಷ ವರಮಾನ ಪಡೆದಿದ್ದಾರೆ. ಗೋವಾ ಮತ್ತು ಬೆಂಗಳೂರು ಮಾರುಕಟ್ಟೆಗೆ ಇವರು ಟೊಮೆಟೊ ಕಳುಹಿಸಿದ್ದಾರೆ.

ಫಿನೋಲೆಕ್ಸ್‌ ಡ್ರಿಪ್‌ ಇರಿಗೇಷನ್ ವಿತರಕರೂ ಆಗಿರುವ ಶಿವಾನಂದ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಏಳು ವರ್ಷಗಳಿಂದ ಟೊಮೆಟೊ ಸೇರಿದಂತೆ ಇತರ ತರಕಾರಿ ಬೆಳೆಗಳನ್ನು ಬೆಳೆದು ಲಾಭ ಕಾಣುತ್ತಿದ್ದಾರೆ.

‘ಏಳು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದೇನೆ. ಪ್ರಸಕ್ತ ವರ್ಷವೂ ಜನವರಿಯಲ್ಲಿ ನಾಟಿ ಮಾಡಿದ್ದು, ನಾಲ್ಕು ತಿಂಗಳ ಅವಧಿಯಲ್ಲಿ ಬೆಳೆಯಿಂದ ₹ 11.80 ಲಕ್ಷ ಆದಾಯ ಬಂದಿದೆ. ₹ 5 ಲಕ್ಷ ಖರ್ಚು–ವೆಚ್ಚವಾಗಿದೆ. ಸಸಿಗಳ ನಾಟಿ ಹಾಗೂ ಗೊಬ್ಬರಕ್ಕಾಗಿ ₹ 1.30 ಲಕ್ಷ, ₹ 80ಸಾವಿರ ಖರ್ಚಿನಲ್ಲಿ ಔಷಧೋಪಚಾರ, ₹ 30ಸಾವಿರದಲ್ಲಿ ಟೊಮೆಟೊ ಗಿಡಗಳನ್ನು ತಂತಿಗೆ ಕಟ್ಟಲು ಸುತಲಿ ದಾರ ಖರೀದಿ ಹಾಗೂ ಕೂಲಿ ಕಾರ್ಮಿಕರ ಸಂಬಳ, ಇತರ ಖರ್ಚು ₹ 2.50 ಲಕ್ಷ ವೆಚ್ಚವಾಗಿದೆ. ಗೋವಾ ಮತ್ತು ಬೆಂಗಳೂರಿನ ವರ್ತಕರು ನೇರವಾಗಿ ಜಮೀನಿಗೆ ಬಂದು ಟೊಮೆಟೊ ಖರೀದಿಸಿಕೊಂಡು ಹೋಗುತ್ತಾರೆ. ನಾವು ಕಟಾವು ಮಾಡಿ ಕೊಡಬೇಕಷ್ಟೇ. ಋತುಮಾನಕ್ಕೆ ತಕ್ಕಂತೆ, ಯೋಜನಾಬದ್ಧವಾಗಿ ಕೃಷಿ ಕೈಗೊಂಡರೆ ಹೆಚ್ಚಿನ ಲಾಭ ಪಡೆಯಬಹುದು’ ಎಂದು ಅನುಭವ ಹಂಚಿಕೊಂಡರು.

ಅವರ ಸಂಪರ್ಕಕ್ಕೆ ಮೊ: 9632556555.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.