ADVERTISEMENT

ಮಿಶ್ರ ಬೇಸಾಯದಿಂದ ನೆಮ್ಮದಿ ಕಂಡುಕೊಂಡ ರೈತ

ಹಸುಗಳಿಗಾಗಿ ಧಾನ್ಯ ಸಂಗ್ರಹಿಸಿಡುವ ಕೆ.ಆರ್.ಚಂದ್ರಶೇಖರ ಪಟೇಲ್‌

ಕೆ.ಎಸ್.ಪ್ರಣವಕುಮಾರ್
Published 18 ಜೂನ್ 2019, 19:45 IST
Last Updated 18 ಜೂನ್ 2019, 19:45 IST
ಹೊಸದುರ್ಗ ತಾಲ್ಲೂಕಿನ ಕೆರೆಹೊಸಹಳ್ಳಿಯ ಕೆ.ಆರ್‌.ಚಂದ್ರಶೇಖರ ಪಟೇಲ್‌ ಬೆಳೆದಿದ್ದ ನವಣೆ ಬೆಳೆ ನೋಡಲು ಈ ಹಿಂದೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. 
ಹೊಸದುರ್ಗ ತಾಲ್ಲೂಕಿನ ಕೆರೆಹೊಸಹಳ್ಳಿಯ ಕೆ.ಆರ್‌.ಚಂದ್ರಶೇಖರ ಪಟೇಲ್‌ ಬೆಳೆದಿದ್ದ ನವಣೆ ಬೆಳೆ ನೋಡಲು ಈ ಹಿಂದೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.    

ಚಿತ್ರದುರ್ಗ:ಕೃಷಿ ಕ್ಷೇತ್ರ ಒಂದು ಪ್ರಯೋಗಶಾಲೆ. ಭೂಮಿಯೇ ಅದಕ್ಕೆ ಉತ್ತಮ ವೇದಿಕೆ. ವ್ಯವಸಾಯ ನಿಂತ ನೀರಾಗದೇ, ಸದಾ ಹರಿಯುವ ನದಿಯಂತೆ ಆಗಬೇಕು. ಆಗ ಮಾತ್ರ ರೈತ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆರೆಹೊಸಹಳ್ಳಿಯ ಕೃಷಿಕ ಕೆ.ಆರ್‌.ಚಂದ್ರಶೇಖರ ಪಟೇಲ್‌ ಸಾಕ್ಷಿಯಾಗಿದ್ದಾರೆ.

ಕೆರೆಹೊಸಹಳ್ಳಿಯಲ್ಲಿ ಹತ್ತು ಎಕರೆ ಜಮೀನು ಹೊಂದಿರುವ ಅವರು, ಜಮೀನಿನಲ್ಲಿ ಮೆಕ್ಕೆಜೋಳ ಹಾಕಿ ಹಲವು ಬಾರಿ ಕೈಸುಟ್ಟುಕೊಂಡಿದ್ದಾರೆ. ಇದರಿಂದ ಮನನೊಂದರೂ ಕೃಷಿ ಚಟುವಟಿಕೆಯಿಂದ ದೂರ ಸರಿಯದೇ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

ಕಾಯಕವೇ ಕೈಲಾಸ ಎಂಬುದನ್ನು ನಂಬಿರುವ ಅವರು, ಕೃಷಿ ಚಟುವಟಿಕೆಯಲ್ಲಿ ಸದಾ ನಿರತರಾಗಿದ್ದು, ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇದ್ದಾರೆ. ಈ ಬಾರಿ ಜಮೀನಿನಲ್ಲಿ ಆರ್ಕ (ಹಾರಕ) ಬೆಳೆಯುವ ಚಿಂತನೆಗೂ ಮುಂದಾಗಿದ್ದಾರೆ.

ADVERTISEMENT

ಮೆಕ್ಕೆಜೋಳದಿಂದ ನಷ್ಟ ಅನುಭವಿಸಿದ ನಂತರ ಅವರ ಕೈ ಹಿಡಿದಿದ್ದು ಸಿರಿಧಾನ್ಯ. ಈ ಕಾರಣದಿಂದಾಗಿಯೇ ಹಿಂದಿನ ವರ್ಷ ಹಿಂಗಾರು ಸಮಯದಲ್ಲಿ ಮೂರು ಎಕರೆಯಲ್ಲಿ ನವಣೆ ಹಾಗೂ ಒಂದೂವರೆ ಎಕರೆಯಲ್ಲಿ ಸಾವೆ ಬಿತ್ತಿದ್ದರು. ಆಗಾಗ ಬಿದ್ದ ಅಲ್ಪ ಮಳೆಗೆ ಹಾಕಿದ್ದ ಬೆಳೆಯ ಚಿತ್ರಣವೇ ಬದಲಾಯಿತು. ಕಾಳು ಕಟ್ಟುವ ಸಮಯದಲ್ಲಿ ಹಿಂಗಾರು ಮಳೆಯೊಂದು ಸುರಿದಿದ್ದರಿಂದ ಅವರ ಅದೃಷ್ಟವೇ ಬದಲಾಯಿತು. ತೇವಾಂಶದಿಂದ ಉತ್ತಮ ಫಸಲು ಅವರ ಕೈ ಸೇರಿತ್ತು.

ಹೊಲದ ಜತೆಗೆ ತೆಂಗಿನ ತೋಟವನ್ನೂ ಹೊಂದಿದ್ದಾರೆ. ಎರಡರ ನಿರ್ವಹಣೆಗಾಗಿ ನಾಲ್ಕು ಕೊಳವೆ ಬಾವಿ ಕೊರೆಸಿದ್ದರು. ಆದರೆ, ಸದ್ಯ ಎರಡು ಕೊಳವೆ ಬಾವಿಗಳಲ್ಲಿ ನೀರಿರುವ ಕಾರಣ ಅದರಿಂದ ಬರುವ ನೀರನ್ನು ಹೊಲ, ತೋಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಮುಂಗಾರು ಅವಧಿಯಲ್ಲಿ ಮಳೆ ಉತ್ತಮವಾಗಿ ಸುರಿದರೆ ಮಾತ್ರ ಮೆಕ್ಕೆಜೋಳಕ್ಕೆ ಆದ್ಯತೆ ನೀಡುತ್ತಾರೆ. ಸರಿಯಾಗಿ ಮಳೆ ಬಾರದಿದ್ದರೆ ನವಣೆಗೆ ಒತ್ತು ಕೊಡುತ್ತಾರೆ. ಇಳುವರಿ ಕೊಂಚ ಕಡಿಮೆಯಾದರೂ, ಬೆಲೆ ಏರಿಕೆಯಾದರೆ, ನವಣೆ ಬೆಳೆದು ಮಾರಾಟ ಮಾಡುವ ರೈತರಿಗೆ ಒಂದಿಷ್ಟು ಕಾಸಂತೂ ಖಂಡಿತ ಕೈಗೆ ಸಿಗಲಿದೆ ಎಂಬ ವಿಶ್ವಾಸ ಅವರದು.

‘ಪ್ರತಿ ವರ್ಷ ಹೊಲದಲ್ಲಿ ರಾಗಿ, ನವಣೆ, ಸಾವೆ ಬೆಳೆಯುತ್ತೇವೆ. ಎರಡು ಹಸುಗಳಿರುವ ಕಾರಣ ನವಣೆ ಮಾರಾಟ ಮಾಡುವುದಿಲ್ಲ. ರಾಗಿ, ಸಾವೆ ಇಳುವರಿ ಪ್ರಮಾಣ ಹೆಚ್ಚಾದರೆ ಮಾತ್ರ ಮಾರುತ್ತೇವೆ. ಇಲ್ಲದಿದ್ದರೆ, ಅದು ಕೂಡ ಕುಟುಂಬಕ್ಕೆ ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ ಚಂದ್ರಶೇಖರ್.

ನವಣೆ ಬೆಳೆಯಲು ಅವರಿಗೆ ಕೃಷಿ ಅಧಿಕಾರಿಗಳು ಹಾಗೂ ಧಾರಾವಾಡ ವಿಶ್ವವಿದ್ಯಾಲಯ ನೀಡಿದ ಮಾರ್ಗದರ್ಶನ ಕಾರಣವಾಗಿದೆ. ನವಣೆ ಬೆಳೆಯಲು ಹೆಚ್ಚಿನ ಖರ್ಚಿನ ಅಗತ್ಯವಿಲ್ಲ ಎಂಬುದನ್ನು ಸ್ವತಃ ಜಮೀನಿನಲ್ಲೇ ಪ್ರಯೋಗದ ಮೂಲಕ ಕಂಡುಕೊಂಡಿದ್ದಾರೆ.

‘ಪ್ರಾಥಮಿಕ ಹಂತದಲ್ಲಿ ರಾಸಾಯನಿಕ ಗೊಬ್ಬರ. ನಂತರ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಹೀಗೆ ಸಾವಯವ ಗೊಬ್ಬರವನ್ನು ಬಳಸಿಕೊಂಡು ಉತ್ತಮ ಫಸಲು ಕಾಣಬಹುದು. ಆದರೆ, ಎಲ್ಲದಕ್ಕಿಂತ ಹೆಚ್ಚಿನದಾಗಿ ಸರಿಯಾದ ಸಮಯಕ್ಕೆ ಮಳೆಯಾಗಲೇಬೇಕು. ಮಳೆ ಇಲ್ಲದಿದ್ದರೆ, ರೈತರ ಬದುಕು ಹಸನಾಗಲು ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

‘ನಂಬಿ ಕೆಟ್ಟವರಿಲ್ಲವೋ ಮನುಜ ಎಂಬ ಗಾದೆ ಮಾತನ್ನೇ ನಂಬಿ ಕೃಷಿ ಕಾಯಕದಲ್ಲಿ ತೊಡಗಿದ್ದೇವೆ. ನಮ್ಮ ತೋಟದ 100 ತೆಂಗಿನ ಗಿಡಗಳಿಂದ ಸದ್ಯ ವರ್ಷಕ್ಕೆ ಸುಮಾರು 15 ಸಾವಿರ ಕಾಯಿಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾದರೆ, ಲಾಭವೂ ಸ್ವಲ್ಪ ಜಾಸ್ತಿ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.