ADVERTISEMENT

ಬಹು ಬೆಳೆಯಿಂದ ವಾರ್ಷಿಕ 8 ಲಕ್ಷ : ರಾಜಕೀಯ ಬಿಟ್ಟು ರೈತನಾದ ಸುರೇಶ ಅಲ್ಲೂರೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:22 IST
Last Updated 22 ಫೆಬ್ರುವರಿ 2020, 11:22 IST
ಭಾಲ್ಕಿ ತಾಲ್ಲೂಕಿನ ಪ್ರಗತಿಪರ ರೈತ ಸುರೇಶ ಅಲ್ಲೂರೆ ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ತೋರಿಸುತ್ತಿರುವುದು
ಭಾಲ್ಕಿ ತಾಲ್ಲೂಕಿನ ಪ್ರಗತಿಪರ ರೈತ ಸುರೇಶ ಅಲ್ಲೂರೆ ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ತೋರಿಸುತ್ತಿರುವುದು   

ಭಾಲ್ಕಿ: 20 ವರ್ಷ ರಾಜಕೀಯ ನಾಯಕರಿಗಾಗಿ ಮನೆ ಕೆಲಸ ಬಿಟ್ಟು ದುಡಿದೆ. ಆದರೆ, ರಾಜಕೀಯ ನಾಯಕರು ನಮ್ಮಂಥ ಕಾರ್ಯಕರ್ತರನ್ನು ಅಲಕ್ಷಿಸುತ್ತಿದ್ದರು. ಇದರಿಂದ ರಾಜಕೀಯ ಬೇಸತ್ತು, ಆರ್ಥಿಕ ಸದೃಢತೆ ಸಾಧಿಸಲು ಕೃಷಿ ಕಾಯಕದತ್ತ ಮುಖ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ.ಬಹುಬೆಳೆ ಪದ್ಧತಿಯಿಂದ ವಾರ್ಷಿಕ ₹8ರಿಂದ ₹10 ಲಕ್ಷ ಆದಾಯ ಗಳಿಸುತ್ತೇನೆ. ಇವು ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಸುರೇಶ ನಾಗಪ್ಪ ಅಲ್ಲೂರೆ ಮಾತುಗಳು.

ಮಾಡುವ ಕಾರ್ಯದಲ್ಲಿ ಮನಸ್ಸಿದ್ದಲ್ಲಿ ಖಂಡಿತ ಯಶಸ್ಸು ಸಾಧಿಸಬಹುದು ಎನ್ನಲು ನನ್ನ ಕೃಷಿ ಕೆಲಸವೇ ಸಾಕ್ಷಿ. ಹತ್ತು ಎಕರೆ ಹೊಲದಲ್ಲಿ ಉದ್ದು, ಹೆಸರು, ಸೋಯಾ, ಕಡಲೆ, ಜೋಳ, ಕಬ್ಬು, ವಿವಿಧ ತರಕಾರಿ ಬೆಳೆ ಬೆಳೆಯುತ್ತೇನೆ. ಸದ್ಯ 4 ಎಕರೆಯಲ್ಲಿ ಕಲ್ಲಂಗಡಿ, 4 ಎಕರೆಯಲ್ಲಿ ಕಬ್ಬು, 2 ಎಕರೆಯಲ್ಲಿ ಪಪ್ಪಾಯಿ ಬೆಳೆಯುತ್ತಿದ್ದೇನೆ. ಬಾವಿಯಲ್ಲಿ ಬೆಳೆಗಳಿಗೆ ಸಾಕಾಗುಷ್ಟು ನೀರಿನ ಲಭ್ಯತೆ ಇದೆ. ನೀರಿನ ಸಂಪೂರ್ಣ ಸದ್ಬಳಕೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಸುರೇಶ ಅಲ್ಲೂರೆ.

ನಾಲ್ಕು ಎಕರೆಯಲ್ಲಿ ಸಮೃದ್ಧ ಕಲ್ಲಂಗಡಿ ಕಾಯಿ ಬೆಳೆದಿವೆ. ಒಂದು ಹಣ್ಣು 2 ಕೆಜಿಯಿಂದ 10 ಕೆಜಿವರೆಗೆ ಇದೆ. ಕಲ್ಲಂಗಡಿ ಬೆಳೆ ಚೆನ್ನಾಗಿ ಬರಬೇಕಾದರೆ ಕರ್ಪಾ, ದಾವಣಿ, ಮರ್‌ ಸೇರಿದಂತೆ ಅನೇಕ ರೋಗಗಳಿಂದ ಅವುಗಳನ್ನು ರಕ್ಷಿಸಬೇಕಾಗುತ್ತದೆ. ಬೆಳೆಗೆ ಕರ್ಪಾ ರೋಗ ಬಂದರೆ ಎಂ45 ಕಾರ್ಬೋಡೈಸಂ, ಬ್ಲೂಕಾಪರ್‌, ಸ್ಕೋರ್‌ ಕವಚ್‌, ಫನೋಫಾಸ್‌, ಮರ್‌ ರೋಗಕ್ಕೆ ಬ್ಲೂಕಾಪರ್‌ ಒಂದು ಗಿಡಕ್ಕೆ 100 ಗ್ರಾಂ ಸಿಂಪಡಿಸಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ. ‌

ADVERTISEMENT

ಭಾಲ್ಕಿ-ಹುಮನಾಬಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು ಹೊಲ ಇರುವುದರಿಂದ ಬೈಕ್‌ ಸವಾರರು,
ಪ್ರಯಾಣಿಕರು ಹೊಲಕ್ಕೆ ಬಂದು ತಾಜಾ ಹಣ್ಣನ್ನು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳೂ ಸಹ ಖುದ್ದಾಗಿ ಹೊಲಕ್ಕೆ ಬಂದು ಖರೀದಿಸಲು ಮುಂದಾಗುತ್ತಿದ್ದಾರೆ. ಹಣ್ಣುಗಳನ್ನು ಹೈದಾರಾಬಾದ್‌, ಉದಗೀರ್‌, ಲಾತೂರ್‌ ಮಾರುಕಟ್ಟೆಯ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ. ‌

ಬೆಳೆ ಬೆಳೆಯಲು 80 ದಿನಗಳಲ್ಲಿ ಒಟ್ಟು ₹ 1.7 ಲಕ್ಷ ವ್ಯಯಿಸಿದ್ದೇನೆ. ಅಂದಾಜು 75 ಟನ್‌ ಕಲ್ಲಂಗಡಿ ಬೆಳೆಯುವ ನಿರೀಕ್ಷೆ ಇದೆ. ಏನಿಲ್ಲವೆಂದರೂ ಅಂದಾಜು ₹ 3.5 ಲಕ್ಷ ನಿವ್ವಳ ಲಾಭ ಗಳಿಸುತ್ತೇನೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ.

ರೈತನೆಂದು ಹೇಳಿಕೊಂಡು ಅರಳಿಕಟ್ಟೆ, ಹೋಟೆಲ್‍ಗಳಲ್ಲಿ ಕುಳಿತು ಹರಟೆ ಹೊಡದರೆ ಉಪಯೋಗವಿಲ್ಲ. ಬದಲಾಗಿ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿಗಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಬರಕ್ಕೆ, ಸಮಸ್ಯೆಗಳಿಗೆ ಎದೆಗುಂದದೆ ಶ್ರದ್ಧೆ, ಆತ್ಮವಿಶ್ವಾಸದಿಂದ ದುಡಿದರೆ ಕೃಷಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸುರೇಶ ಅಲ್ಲೂರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.