ADVERTISEMENT

ಸಾವಯವ ಕೃಷಿಯಲ್ಲಿ ದಾಳಿಂಬೆ..! ನಿವೃತ್ತ ಉಪನ್ಯಾಸಕನ ಕೃಷಿ ಯಶೋಗಾಥೆ

ಎ.ಸಿ.ಪಾಟೀಲ
Published 1 ಏಪ್ರಿಲ್ 2019, 19:45 IST
Last Updated 1 ಏಪ್ರಿಲ್ 2019, 19:45 IST
ಸಾವಯವ ಕೃಷಿಯಲ್ಲಿ ಬೆಳೆದಿರುವ ದಾಳಿಂಬೆಯೊಂದಿಗೆ ಸಿದ್ಧಲಿಂಗ ಹಂಜಗಿ
ಸಾವಯವ ಕೃಷಿಯಲ್ಲಿ ಬೆಳೆದಿರುವ ದಾಳಿಂಬೆಯೊಂದಿಗೆ ಸಿದ್ಧಲಿಂಗ ಹಂಜಗಿ   

ಇಂಡಿ:‘ಸಾವಯವ ಕೃಷಿ ಶ್ರೇಷ್ಠವಾದದ್ದು. ಜಮೀನಿನ ಫಲವತ್ತತೆ ಕಾಪಾಡಿಕೊಂಡು, ಸಮೃದ್ಧಿಯ ಫಸಲು ನೀಡುತ್ತದೆ. ಇದರ ಸಾಕಾರಕ್ಕೆ ಜಾನುವಾರು ಮುಖ್ಯ. ಪಶುಗಳಿಲ್ಲದವರು ಈ ಕೃಷಿಯ ಸಹವಾಸಕ್ಕೆ ಹೋಗಬಾರದು...’

ಇಂಡಿಯ ನಿವೃತ್ತ ಉಪನ್ಯಾಸಕ ಸಿದ್ಧಲಿಂಗ ಹಂಜಗಿ ಅವರ ಖಡಕ್‌ ನುಡಿಗಳಿವು. ಆರು ವರ್ಷದಿಂದ ಸಾವಯವ ಕೃಷಿ ಅಳವಡಿಸಿಕೊಂಡು 1.10 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ ಇವರು.

ನಾಟಿ ಮಾಡಿದ 18 ತಿಂಗಳಲ್ಲಿ ಕಟಾವಿಗೆ ಬಂದ ಕೇಸರ್ ಜಾತಿಯ ದಾಳಿಂಬೆ, ಮೊದಲ ವರ್ಷ ₹ 1.5 ಲಕ್ಷ, 2ನೇ ವರ್ಷ ₹ 2 ಲಕ್ಷ, 3ನೇ ವರ್ಷ ₹ 3 ಲಕ್ಷ, 4ನೇ ವರ್ಷ ₹ 6 ಲಕ್ಷ ಆದಾಯ ನೀಡಿದ್ದು, ಇದೀಗ ₹ 10 ಲಕ್ಷ ಲಾಭದ ನಿರೀಕ್ಷೆ ಹುಟ್ಟಿಸಿದೆ. ಈ ವರ್ಷ ಬೆಳೆಗಾಗಿ ₹ 1.5 ಲಕ್ಷ ಖರ್ಚು ಮಾಡಿದ್ದಾರಷ್ಟೇ.

ADVERTISEMENT

ಹಿಂದಿನ ವರ್ಷದವರೆಗೂ ಆಸ್ಟ್ರೇಲಿಯಾಗೆ ರಫ್ತಾಗಿತ್ತು. ಒಂದು ಕೆ.ಜಿ.ಗೆ ₹ 120 ಧಾರಣೆ ಸಿಕ್ಕಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ರಫ್ತಾಗಿಲ್ಲ. ಬೆಂಗಳೂರು, ಚೆನ್ನೈ, ಹೈದರಾಬಾದ್‌ ಮಾರುಕಟ್ಟೆಗೆ ಕೆ.ಜಿ.ಯೊಂದಕ್ಕೆ ₹ 50, ₹ 60ರಂತೆ ಮಾರಿದ್ದಾರೆ. ವ್ಯಾಪಾರಿಗಳು ಹೊಲದಿಂದಲೇ ಕೊಂಡೊಯ್ಯುತ್ತಿದ್ದಾರೆ.

‘ದನಗಳ ಗಂಜಲ, ತಿಪ್ಪೇ ಗೊಬ್ಬರ ಈ ಬೆಳೆಗೆ ಅತ್ಯವಶ್ಯ. ದನಗಳ ಮೂತ್ರವನ್ನು ಒಂದು ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಅದರಲ್ಲಿಯೇ ವಿವಿಧ ಕಸವನ್ನು ಸಂಗ್ರಹಿಸಿ, ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡಬೇಕು. ಅದು ಕೊಳೆತು ಇನ್ನೊಂದು ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಇದನ್ನು ಪೈಪ್ ಮೂಲಕ ಬೆಳೆಗಳಿಗೆ ನೀರುಣಿಸುವ ಪೈಪ್‌ಗೆ ಜೋಡಿಸಿದರೆ ಸಾಕು, ನೀರಿನ ಜತೆ ಬೆಳೆಗಳಿಗೆ ಹೋಗುತ್ತದೆ. ಇದರಲ್ಲಿ 24 ವಿವಿಧ ಜೀವಾಣುಗಳಿರುತ್ತವೆ. ಇವು ಬೆಳೆಗಳಿಗೆ ಶಕ್ತಿ ನೀಡಿ, ರೋಗ ಬರದಂತೆ ಕಾಪಾಡುತ್ತವೆ’ ಎಂದು ಹಂಜಗಿ ತಮ್ಮ ಕೃಷಿ ಪದ್ಧತಿ ಬಗ್ಗೆ ತಿಳಿಸಿದರು.

ಜೀವಾಮೃತ:

10 ಕೆ.ಜಿ. ಬೆಲ್ಲ, 10 ಲೀಟರ್ ಆಕಳ ಮೂತ್ರ, 10 ಕೆ.ಜಿ. ಹೆಂಡಿ, 5 ಕೆ.ಜಿ. ದ್ವಿದಳ ಧಾನ್ಯಗಳನ್ನು ಸೇರಿಸಿ, 100 ರಿಂದ 120 ಲೀಟರ್ ನೀರಿನಲ್ಲಿ 7 ದಿವಸ ನೆನೆಸಬೇಕು. ನಿತ್ಯ ಮುಂಜಾನೆ–ಮುಸ್ಸಂಜೆ ಅದನ್ನು ಕಲಕಬೇಕು. 7 ದಿನದ ಬಳಿಕ ಇದು ಜೀವಾಮೃತವಾಗಲಿದೆ. ಇದನ್ನು ಬೆಳೆಗೆ ಸ್ಪ್ರೇ ಮಾಡಬಹುದು. ನೀರಿನ ಜತೆಗೂ ಕೊಡಬಹುದು.

ಒಂದು ಗಿಡಕ್ಕೆ 5 ಕೆ.ಜಿ. ತಿಪ್ಪೇ ಗೊಬ್ಬರ, 5 ಕೆ.ಜಿ. ಕುರಿ ಗೊಬ್ಬರ, 5 ಕೆ.ಜಿ. ಸಕ್ಕರೆ ಕಾರ್ಖಾನೆಯಲ್ಲಿ ಸಿಗುವ ಗೊಬ್ಬರ ಸೇರಿಸಿ ಹಾಕಿದರೆ, ಒಂದು ವರ್ಷ ಇನ್ಯಾವ ಗೊಬ್ಬರವೂ ಬೇಕಿರಲ್ಲ. ನೀರುಣಿಸಿದರೆ ಸಾಕು. ಸಾವಯವ ದಾಳಿಂಬೆಗೆ ರೋಗದ ಕಾಟ ಹೆಚ್ಚಿರಲ್ಲ. 15 ದಿನಕ್ಕೊಮ್ಮೆ ಜೈವಿಕ ಔಷಧಿ ಸಿಂಪಡಿಸಿದರೆ ಸಾಕು ಎಂದು ಹಂಜಗಿ ತಿಳಿಸಿದರು.

ದಾಳಿಂಬೆ ಜತೆ 800 ನಿಂಬೆ ಗಿಡಗಳನ್ನು ಬೆಳೆದಿದ್ದಾರೆ. ವರ್ಷವಿಡಿ ಫಸಲು ಸಿಗುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನೀರಿನ ಅಭಾವ ನೀಗಿಸಿಕೊಳ್ಳಲು ₹ 5 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಇವರ ಸಾವಯವ ಕೃಷಿಗೆ ಪೂರಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.