ADVERTISEMENT

ಹಣ್ಣಿನ ಗಿಡಗಳ ನಾಟಿಗೆ ಸಿದ್ಧತೆ

ಆತ್ರೇಯ
Published 6 ಮೇ 2019, 20:01 IST
Last Updated 6 ಮೇ 2019, 20:01 IST
Farmer's hand watering a young plantFarmer's hand watering a young plant.
Farmer's hand watering a young plantFarmer's hand watering a young plant.   

ತೋಟಗಾರಿಕೆ ಮತ್ತು ಹಣ್ಣಿನ ಬೆಳೆಗಳನ್ನು ಹೊಸದಾಗಿ ನಾಟಿ ಮಾಡುವವರಿಗೆ ಮುಂಗಾರು ಹಂಗಾಮು ಸೂಕ್ತವಾಗಿದೆ. ಆದರೆ, ಆ ಹಂಗಾಮಿನಲ್ಲಿ ಗಿಡಗಳನ್ನು ನಾಟಿ ಮಾಡಲು ತಿಂಗಳ ಮುನ್ನವೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮುಂಗಾರು ಆರಂಭಕ್ಕೆ ಒಂದೂ ಕಾಲು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಈಗಲೇ ಸಿದ್ಧತೆಗಳ ಬಗ್ಗೆ ಗಮನ ಹರಿಸಬೇಕು. ತೋಟಗಾರಿಕಾ ಬೆಳೆಗಳ ನಾಟಿಗಾಗಿ ಸಿದ್ಧತೆ ಮಾಡಿಕೊಳ್ಳುವವರಿಗೆ ಕಿರು ಮಾಹಿತಿ ಇಲ್ಲಿದೆ.

ಗಿಡ ನಾಟಿಗೆ ಮುನ್ನ

ಜಮೀನಿನಲ್ಲಿ ಎಲ್ಲೆಲ್ಲಿ, ಯಾವ ಯಾವ ಹಣ್ಣಿನ ಗಿಡಗಳು, ಪ್ಲಾಂಟೇಷನ್ ಗಿಡಗಳನ್ನು (ತೆಂಗು, ಅಡಿಕೆ) ನಾಟಿ ಮಾಡಬೇಕು ಎಂದು ಜಾಗಗಳನ್ನು ಗುರುತು ಮಾಡಿ.

ADVERTISEMENT

ಗುರುತು ಮಾಡಿರುವ ಜಾಗದಲ್ಲಿ ಬೆಳೆಗಳಿಗೆ ತಕ್ಕಂತೆ ಗುಂಡಿಗಳನ್ನು ತೆಗೆಸಿ. ಗುಂಡಿ ತೆಗೆಯುವಾಗ ಒಂದೂವರೆ ಅಡಿಯಷ್ಟು ಮೇಲ್ಭಾಗದ ಮಣ್ಣನ್ನು ಪ್ರತ್ಯೇಕವಾಗಿ ಸಂಗ್ರಹಿಸಿ. ಈ ಮೇಲ್ಮಣ್ಣನ್ನು ಗಿಡ ನಾಟಿ ಮಾಡುವಾಗ ಗೊಬ್ಬರದೊಂದಿಗೆ ಬೆರೆಸಲು ಬೇಕಾಗುತ್ತದೆ.

ತೆಗೆಸಿದ ಗುಂಡಿಗಳಲ್ಲಿ ಮೇಲ್ಮಣ್ಣು ಜತೆಗೆ, ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ.

ಗುಂಡಿ ಅಳತೆಯ ಆಧಾರದ ಮೇಲೆ ಗೊಬ್ಬರ ಮತ್ತು ಮಣ್ಣನ್ನು ಮಿಶ್ರಣ ಮಾಡಬಹುದು. ಉದಾಹರಣೆಗೆ ತೆಂಗು ನಾಟಿ ಮಾಡಲು 3 ಅಡಿ X 3 ಅಡಿ X 3 ಅಡಿ ಆಳತೆಯ ಗುಂಡಿ ತೆಗೆಯಬೇಕು. ಹಲಸು, ನೇರಳೆ, ಸೀಬೆ ಸಸಿ ನಾಟಿಗೆ 2 ಅಡಿ X 2ಅಡಿ X 2ಅಡಿ ಅಳತೆ ಗುಂಡಿ ಸಾಕು. ಮೂರು ಅಡಿ ಅಳತೆಗೆ ಎರಡರಿಂದ ಮೂರು ಬಾಣಲೆ, 2 ಅಡಿ ಅಳತೆಗೆ ಒಂದೂವರೆಯಿಂದ ಎರಡು ಬಾಣಲೆಯಷ್ಟು ಗೊಬ್ಬರವನ್ನು ಮೇಲ್ಮಣ್ಣಿನೊಂದಿಗೆ ಮಿಶ್ರಣ ಮಾಡಿ ಗುಂಡಿಗೆ ತುಂಬಿಸಬೇಕು. ಯಾವ ಗಿಡ, ಎಷ್ಟು ಅಳತೆಯ ಗುಂಡಿಯಲ್ಲಿ ನಾಟಿ ಮಾಡುತ್ತೀರಿ ಎಂಬುದರ ಮೇಲೆ, ಗೊಬ್ಬರದ ಪ್ರಮಾಣವೂ ವ್ಯತ್ಯಾಸವಾಗುತ್ತದೆ. ಗೊಬ್ಬರ ಮಿಶ್ರಿತ ಮಣ್ಣನ್ನು ಗುಂಡಿಯಲ್ಲಿ ತುಂಬಿದ ನಂತರ ನೀರು ಹಾಕಿ. ಅದರ ಮೇಲೆ ಒಂದು ಕೋಲನ್ನು ನೆಡಿ.

ಗುಂಡಿಗಳನ್ನು ಸಿದ್ಧಗೊಳಿಸಿದ ನಂತರ, ಅದರ ಮೇಲೆ ಹಾದುಹೋಗುವಂತೆ ಹನಿ ನೀರಾವರಿಯ ಪೈಪನ್ನು ಜೋಡಿಸಿ. ಇದರಿಂದ, ಮಳೆ ಬಾರದಿದ್ದರೂ ಗುಂಡಿಗಳಿಗೆ ನಿಯಮಿತವಾಗಿ ನೀರು ಹನಿಸಿ, ಮಣ್ಣು–ಗೊಬ್ಬರದ ಮಿಶ್ರಣವನ್ನು ಹದಗೊಳಿಸಿಟ್ಟುಕೊಳ್ಳಬಹುದು. ಇದು ಗಿಡಗಳನ್ನು ನಾಟಿ ಮಾಡಲು ನೆರವಾಗುತ್ತದೆ.

ಒಂದೂವರೆ ತಿಂಗಳ ಕಾಲ ಗುಂಡಿಯಲ್ಲಿ ಗೊಬ್ಬರ – ಮಣ್ಣಿನ ಮಿಶ್ರಣ ಚೆನ್ನಾಗಿ ಕಳಿಯುತ್ತದೆ. ನಾಟಿ ಮಾಡುವ ಗಿಡಗಳ ಬೇರಿಗೆ ಉತ್ತಮ ಆಹಾರ ಪೂರೈಸಲು ಸಿದ್ಧವಾಗುತ್ತದೆ.

ನಾಟಿಯ ಸಮಯದಲ್ಲಿ..

ಯಾವ್ಯಾವ ತಳಿಯ ಗಿಡಗಳು ಬೇಕೆಂದು ನರ್ಸರಿಯವರಲ್ಲಿ ಮುಂಗಡ ಬುಕ್ ಮಾಡಿಸಿ. ಮೊದಲ ಮಳೆಗೆ ಮುನ್ನವೇ ಸಸಿಗಳನ್ನು ನಿಗದಿತ ಜಮೀನಿಗೆ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಟ್ಟುಕೊಳ್ಳಿ.

ಗುಂಡಿ ತೆಗೆದಾಗ ಮಣ್ಣು ಗುಣಮಟ್ಟದ್ದಾಗಿಲ್ಲ ಎನಿಸಿದರೆ, ಈ ಬೆಳೆಗೆ ಹೊಂದುವಂತಹ ಮಣ್ಣನ್ನು ಹೊರಗಿನಿಂದ ತರಿಸಿಕೊಳ್ಳಿ.

ಗಿಡಗಳನ್ನು ಗೆದ್ದಲಿನಿಂದ ರಕ್ಷಿಸಿಕೊಳ್ಳಲು, ಗಿಡ ನಾಟಿಗೆ ಮುನ್ನ ಗುಂಡಿಯೊಳಕ್ಕೆ ಗೆದ್ದಲು ಬಾರದಂತೆ ತಡೆಯಲು ಫಿರಿಡಾನ್‌ನಂತಹ ಪುಡಿಯನ್ನು ಹಾಕಿ.

ನಾಟಿ ಮಾಡುವುದಕ್ಕೆ ಸಸಿಗಳ ಬದಲಿಗೆ, ಕಸಿ ಮಾಡಿದ ಗಿಡಗಳನ್ನೇ ತನ್ನಿ. ಒಂದರಿಂದ ಎರಡು ವರ್ಷದೊಳಗಿನ, ಒಂದೂವರೆಯಿಂದ ಎರಡು ಅಡಿ ಎತ್ತರವಿರುವ ಹಣ್ಣಿನ ಗಿಡಗಳನ್ನು ನರ್ಸರಿಯಿಂದ ತಂದು ನಾಟಿ ಮಾಡಿ.

ನಾಟಿ ನಂತರ...

ಗಿಡ ನಾಟಿ ಮಾಡಿದಾಗ, ಕಾಂಡದ ಭಾಗವನ್ನು ಹೆಚ್ಚು ಭೂಮಿಯೊಳಗೆ ಸೇರಿಸಬಾರದು. ನೆನಪಿಡಿ; ಕಸಿ ಮಾಡಿದ ಜಾಗ ನೆಲದಿಂದ ಮೂರ್ನಾಲ್ಕು ಇಂಚು ಮೇಲಿರಬೇಕು. ಹಾಗೆಯೇ, ಕಸಿ ಮಾಡಿದ ಜಾಗದಲ್ಲಿ ಸುತ್ತಿದ್ದ ಪ್ಲಾಸ್ಟಿಕ್ ಕವರ್‌ ಅನ್ನು ಕಡ್ಡಾಯವಾಗಿ ತೆಗೆಯಬೇಕು. ನಾಟಿ ವೇಳೆ ತೆಗೆಯಲಾಗದಿದ್ದರೆ, ಗಿಡ ನೆಟ್ಟ ಸ್ವಲ್ಪ ದಿನಗಳ ನಂತರವಾದರೂ ತೆಗೆಯಬೇಕು. ಇಲ್ಲದಿದ್ದರೆ, ಗಿಡದ ಬೆಳವಣಿಗೆಗೆ ಅದು ಉರುಳಾಗುತ್ತದೆ.

ಗಿಡಗಳನ್ನು ನಾಟಿ ಮಾಡಿದ ತಕ್ಷಣ ನೀರು ಹಾಕಬೇಕು. ಅದಕ್ಕಾಗಿಯೇ ಗುಂಡಿ ತೆಗೆಯುವಾಗಲೇ ಡ್ರಿಪ್ ಪೈಪ್ ಅಳವಡಿಸುವುದು ಉತ್ತಮ.

ಗಿಡ ನೆಟ್ಟ ಮೇಲೆ ಅದಕ್ಕೆ ಗಟ್ಟಿಯಾದ ಕೋಲನ್ನು ಆಧಾರವಾಗಿ ಕೊಡಬೇಕು. ಏಕೆಂದರೆ, ಗಿಡವನ್ನು ಜೂನ್‌ ತಿಂಗಳ ಮಧ್ಯದಲ್ಲಿ ನಾಟಿ ಮಾಡುತ್ತೇವೆ. ಅದು ದೊಡ್ಡದಾಗಿ ಬೆಳೆಯುವ ವೇಳೆಗೆ ಆಷಾಡದ ಗಾಳಿ ಶುರುವಾಗಿರುತ್ತದೆ. ಗಿಡಕ್ಕೆ ಆಸರೆಯಿಲ್ಲದಿದ್ದರೆ ಆ ಗಾಳಿಗೆ ಬಿದ್ದು ಹೋಗುತ್ತದೆ.

(ಮಾಹಿತಿ: ಡಾ.ಎಸ್.ವಿ.ಹಿತ್ತಲಮನಿ, ತೋಟಗಾರಿಕಾ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.