ADVERTISEMENT

ಚೇತರಿಸಿದ ಹುಣಸೆ ಹಣ್ಣಿನ ಬೆಲೆ

ಕೆ.ಜೆ.ಮರಿಯಪ್ಪ
Published 9 ಫೆಬ್ರುವರಿ 2023, 20:30 IST
Last Updated 9 ಫೆಬ್ರುವರಿ 2023, 20:30 IST
ಹುಣಸೆ ಹಣ್ಣು
ಹುಣಸೆ ಹಣ್ಣು   

ತುಮಕೂರು: ಕುಸಿತ ಕಂಡಿದ್ದ ಹುಣಸೆ ಹಣ್ಣಿನ ಬೆಲೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ವಾರದಿಂದ ವಾರಕ್ಕೆ ದರ ಏರುಮುಖ ಮಾಡಿದ್ದು, ಗುರುವಾರವೂ ಅದೇ ದಾರಿಯಲ್ಲಿ ಸಾಗಿದೆ.

ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್‌ಗೆ ₹13,500ರಿಂದ ₹19 ಸಾವಿರದ ವರೆಗೂ ಮಾರಾಟವಾಗಿದೆ. ಗುಣಮಟ್ಟ ಕಡಿಮೆ ಇರುವ ಹಣ್ಣು ಕ್ವಿಂಟಲ್‌ಗೆ ₹5 ಸಾವಿರದಿಂದ ₹7,300ರ ವರೆಗೂ ಹಾಗೂ ಗೋಟು ಹಣ್ಣಿಗೆ ₹1,600ರಿಂದ ₹1,850 ಸಿಕ್ಕಿದೆ.

ಹುಣಸೆ ಹಣ್ಣಿನ ಸೀಜನ್ ಈಗಷ್ಟೇ ಆರಂಭವಾಗಿದ್ದು, ಪ್ರಾರಂಭದಲ್ಲೇ ಉತ್ತಮ ಬೆಲೆ ಸಿಗುತ್ತಿದೆ. ಇನ್ನೂ ಎರಡು ತಿಂಗಳ ಕಾಲ ಇದೇ ರೀತಿಯಲ್ಲಿ ಬೆಲೆ ಸಿಗಬಹುದು ಎಂದು ವರ್ತಕರು ಅಂದಾಜಿಸಿದ್ದಾರೆ. ಮರದಿಂದ ಹಣ್ಣು ಕಿತ್ತು, ಸಿಪ್ಪೆ, ಬೀಜ, ನಾರು ತೆಗೆದು ಬಣ್ಣ ಮಾಸುವ ಮುನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ಬೆಲೆ ಇದ್ದೇ ಇರುತ್ತದೆ. ಏನಾದರೂ ಹಣ್ಣು ಕಪ್ಪು ಬಣ್ಣಕ್ಕೆ ತಿರುಗಿದರೆ ಅಥವಾ ಬಣ್ಣ ಮಬ್ಬಾದರೆ ಉತ್ತಮ ಬೆಲೆ ಸಿಗುವುದು ಕಷ್ಟಕರವಾಗಲಿದೆ.

ADVERTISEMENT

ಕೋವಿಡ್ ಹಾಗೂ ಹಿಂದಿನ ವರ್ಷಗಳ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇದ್ದ ಕಾರಣಕ್ಕೆ ಕಳೆದ ವರ್ಷ ಬೆಲೆ ಕುಸಿದಿತ್ತು. ಹಿಂದಿನ ವರ್ಷದ ಫೆಬ್ರುವರಿ ತಿಂಗಳ ಆರಂಭದಲ್ಲಿ ಉತ್ತಮ ಬೆಲೆ ಸಿಕ್ಕರೂ ನಂತರದ ದಿನಗಳಲ್ಲಿ ಬೆಲೆ ತೀವ್ರವಾಗಿ ಇಳಿಕೆಯಾಗಿತ್ತು. ಕೊನೆಗೆ ಮರದಿಂದ ಹಣ್ಣು ಕೀಳಿಸಿ, ಸಿಪ್ಪೆ, ಬೀಜ ತೆಗೆಸಿದ ಕೂಲಿಯೂ ಸಿಗದೆ ಸಾಕಷ್ಟು ದಲ್ಲಾಳಿಗಳು, ವ್ಯಾಪಾರಸ್ಥರು ಕೈಸುಟ್ಟುಕೊಂಡಿದ್ದರು.

ರಾಜ್ಯದ ದೊಡ್ಡ ಮಾರುಕಟ್ಟೆ: ಆಂಧ್ರಪ್ರದೇಶದ ಹಿಂದೂಪುರ ದೇಶದ ಹುಣಸೆ ಹಣ್ಣಿನ ದೊಡ್ಡ ಮಾರುಕಟ್ಟೆ. ತುಮಕೂರು ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ರಾಜ್ಯದ ದೊಡ್ಡ ಮಾರುಕಟ್ಟೆಯಾಗಿಯೂ ಗುರುತಿಸಿಕೊಂಡಿದೆ.

**

ಮರದಲ್ಲೇ ಉಳಿದ ಕಾಯಿ

ಸಾಮಾನ್ಯವಾಗಿ ರೈತರು ಮರದಿಂದ ಹಣ್ಣು ಕೀಳಿಸಿ, ಸಿಪ್ಪೆ ತೆಗೆಸಿ ಮಾರುಕಟ್ಟೆಗೆ ಸಾಗಿಸುವುದು ಕಡಿಮೆ. ಮರದಲ್ಲಿನ ಕಾಯಿ ಇಳುವರಿ ಗಮನಿಸಿ ಒಂದು ಮರಕ್ಕೆ ಇಂತಿಷ್ಟು ಹಣ ನಿಗದಿಪಡಿಸಿ ದಲ್ಲಾಳಿಗಳು, ವ್ಯಾಪಾರಸ್ಥರು ಮರಗಳನ್ನು ಗುತ್ತಿಗೆಗೆ ಪಡೆದುಕೊಳ್ಳುವುದೇ ಹೆಚ್ಚು. ಕಳೆದ ಬಾರಿ ಧಾರಣೆ ಕುಸಿದು ಹಾಕಿದ ಬಂಡವಾಳವೂ ದಲ್ಲಾಳಿಗಳಿಗೆ ಸಿಕ್ಕಿರಲಿಲ್ಲ.

ಈ ಬಾರಿಯೂ ಬೆಲೆ ಏರಿಕೆಯ ಸೂಚನೆಗಳು ಸಿಗದೆ ಮರಗಳನ್ನು ಗುತ್ತಿಗೆ ಪಡೆಯಲು ದಲ್ಲಾಳಿಗಳು ಹಿಂದೇಟು ಹಾಕಿದ್ದರು. ಸಾಕಷ್ಟು ಮರಗಳಲ್ಲಿ ಕಾಯಿ ಉಳಿದುಕೊಂಡಿತ್ತು. ಡಿಸೆಂಬರ್ ವೇಳೆಗೆ ಬೆಲೆ ಹೆಚ್ಚಳವಾಗುವ ಸೂಚನೆ ಸಿಕ್ಕ ನಂತರ ಮರಗಳನ್ನು ಅಲ್ಲಲ್ಲಿ ಗುತ್ತಿಗೆ ಪಡೆದುಕೊಂಡಿದ್ದಾರೆ. ದಲ್ಲಾಳಿಗಳು ತಕ್ಷಣಕ್ಕೆ ಹಣ್ಣು ಕೀಳಿಸಿ, ಮಾರುಕಟ್ಟೆಗೆ ತಂದರೆ ಒಳ್ಳೆಯ ಲಾಭವೂ ಸಿಗಲಿದೆ. ಆದರೆ ಹಿಂದಿನ ವರ್ಷದಷ್ಟು ಮರಗಳು ಮಾರಾಟವಾಗಿಲ್ಲ ಎನ್ನುತ್ತಾರೆ ತೋವಿನಕೆರೆ ಸಮೀಪದ ಹರಿದಾಸರಹಳ್ಳಿ ರೈತ ನಾಗರಾಜಪ್ಪ.

ಈ ಬಾರಿ ರೈತರೇ ಹಣ್ಣು ಕೀಳಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ತರುವುದು ಅನಿವಾರ್ಯವಾಗಿದೆ. ಪ್ರಮುಖವಾಗಿ ಕೆಲಸಗಾರರ ಕೊರತೆ ಎದುರಾಗಿದ್ದು, ಹಣ್ಣು ಕೀಳಿಸಿ ಮಾರುಕಟ್ಟೆಗೆ ತರುವುದು ಕಷ್ಟಕರವಾಗಿದೆ. ತಕ್ಷಣಕ್ಕೆ ಕೆಲಸದವರು ಸಿಕ್ಕಿದರೆ ಮರದಿಂದ ಹಣ್ಣು ಕೀಳಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ತರಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಕಾರ್ಮಿಕರು ಸಿಗದಿದ್ದರೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು. ಆ ವೇಳೆಗೆ ಈಗಿನಂತೆ ಬೆಲೆ ಇರುವುದೇ? ಎಂಬ ಆತಂಕ ರೈತರನ್ನು ಕಾಡುತ್ತಿದೆ.

**

ತೂಕ ಬರುತ್ತಿಲ್ಲ

ಅತಿಯಾದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹುಣಸೆ ಹಣ್ಣಿನ ಗುಣಮಟ್ಟ, ಗಾತ್ರ ಕಡಿಮೆಯಾಗಿದೆ. ಹಣ್ಣಿನ ತಿರುಳು ತೆಳುವಾಗಿದ್ದು, ಇಳುವರಿ ಕುಸಿದಿದೆ. ಹಿಂದಿನ ವರ್ಷದಷ್ಟು ಹಣ್ಣು ತೂಕ ಬರುತ್ತಿಲ್ಲ.

**

ಉತ್ತಮ ಬೆಲೆ

ಹಿಂದಿನ ವರ್ಷದ ಫೆಬ್ರುವರಿ ಆರಂಭದಲ್ಲೂ ಉತ್ತಮ ಬೆಲೆ ಇತ್ತು. ನಂತರ ಬೇಡಿಕೆ ಇಲ್ಲದೆ ಕುಸಿದಿತ್ತು. ಈ ಬಾರಿಯೂ ಉತ್ತಮ ಬೆಲೆ ಸಿಗುತ್ತಿದ್ದು, ಹಣ್ಣಿನ ಗುಣಮಟ್ಟ ಚೆನ್ನಾಗಿದ್ದರೆ ಒಳ್ಳೆಯ ಧಾರಣೆ ಸಿಗುತ್ತದೆ ಎಂದು ವರ್ತಕ ಎಚ್.ಪಿ.ದೇವೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.