ADVERTISEMENT

ಬದುಕಿಗೆ ಆಸರೆಯಾದ ಸಮಗ್ರ ಕೃಷಿ, ಇತರರಿಗೆ ಮಾದರಿಯಾದ ಅಂಚೆ ನೌಕರನ ಕೃಷಿ ಆಸಕ್ತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2019, 19:55 IST
Last Updated 24 ಮೇ 2019, 19:55 IST
ಲಿಂಗಸುಗೂರು ತಾಲ್ಲೂಕು ಹೊನ್ನಹಳ್ಳಿ ಹಡಪದ ಕುಟುಂಬಸ್ಥರು ಸಮಗ್ರ ಕೃಷಿಯ ಹೈನುಗಾರಿಕೆಯಲ್ಲಿ ಮಗ್ನರಾಗಿರುವುದು
ಲಿಂಗಸುಗೂರು ತಾಲ್ಲೂಕು ಹೊನ್ನಹಳ್ಳಿ ಹಡಪದ ಕುಟುಂಬಸ್ಥರು ಸಮಗ್ರ ಕೃಷಿಯ ಹೈನುಗಾರಿಕೆಯಲ್ಲಿ ಮಗ್ನರಾಗಿರುವುದು   

ಲಿಂಗಸುಗೂರು: ರಾಯಚೂರು ಜಿಲ್ಲೆಯಲ್ಲಿ ಅದರಲ್ಲೂ ಲಿಂಗಸುಗೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದು ಸಂಕಷ್ಟ ಎದುರಿಸುತ್ತಿರುವ ಕೃಷಿ ವಲಯದಲ್ಲಿ ಇರುವಷ್ಟೆ ನೀರನ್ನು ಸಮರ್ಥವಾಗಿ ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿ ಮೂಲಕ ಹಡಪದ ಕುಟುಂಬ ಇತರೆ ಕೃಷಿಕರಿಗೆ ಮಾದರಿಯಾಗಿದೆ.

ತಾಲ್ಲೂಕು ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿರುವ ಹೊನ್ನಹಳ್ಳಿ ಅಂಚೆ ನೌಕರ ಶಿವಲಿಂಗಪ್ಪ ಮತ್ತು ಗಂಗಮ್ಮ ಹಡಪದ ದಂಪತಿಗೆ ಐವರು ಪುತ್ರರು, ನಾಲ್ವರು ಪುತ್ರಿಯರು. ಬಡತನದ ಬೇಗೆಯಿಂದ ಮಕ್ಕಳಿಗೆ ಉತ್ತಮಮ ಶಿಕ್ಷಣ ಕೊಡಿಸಲಾಗದೇ ಹೋಗಿದ್ದರಿಂದ ಮಕ್ಕಳು ಕೃಷಿ ಚಟುವಟಿಕೆಯತ್ತ ಆಸಕ್ತಿ ವಹಿಸುತ್ತ ಬಂದಿದ್ದರು. ಕುಟುಂಬಕ್ಕೆ ಸರ್ಕಾರ ಮಂಜೂರು ಮಾಡಿದ್ದ ನಾಲ್ಕು ಎಕರೆ ಜಮೀನು ಸಮಗ್ರ ಕೃಷಿಗೆ ಬಳಸಿಕೊಂಡಿದ್ದು ವಿಶೇಷ.

‘ಸರ್ಕಾರ ಜಮೀನು ಮಂಜೂರು ಮಾಡಿದ್ದರು ಕೂಡ ಆರ್ಥಿಕ ಸಂಕಷ್ಟದಿಂದ ಗ್ರಾಮದ ಬಹುತೇಕರ ಜಮೀನು ಸಮಪಾಲಿಗೆ ಮಾಡುತ್ತ ಬರಲಾಗಿತ್ತು. ಐದು ವರ್ಷಗಳ ಹಿಂದೆ ಸ್ನೇಹಿತರು ಆರ್ಥಿಕ ಸಹಾಯ ನೀಡಿದ್ದಕ್ಕೆ ಕಲ್ಲು ಗುಡ್ಡದಂತಹ ಜಮೀನು ಕಲ್ಲು ಕಿತ್ತಿ ಸಮತಟ್ಟು ಮಾಡಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಂತ ಹಂತವಾಗಿ ನೆರವಿಗೆ ಮುಂದಾದರು’ ಎಂದು ಶಿವಶಂಕರ ಹಡಪದ ಹೇಳುತ್ತಾರೆ.

ADVERTISEMENT

ಗುಡ್ಡಗಾಡಿನ ಇಳಿಜಾರು ಪ್ರದೇಶದ ಜಮೀನಿನಲ್ಲಿ ಎರಡು ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ನಾಟಿ ಮಾಡಿದ್ದು ವರ್ಷಕ್ಕೆ ಅಂದಾಜು ಒಂಭತ್ತು ಬೆಳೆ, ಪ್ರತಿ ಸಾರಿ 2.50 ಕ್ವಿಂಟಾಲ್‌ ಗೂಡು ಬೆಳೆಯುತ್ತೇವೆ. ಉಳಿದಂತೆ 20 ಮಾವಿನ ಗಿಡ, 20 ಲಿಂಬೆ ಗಿಡ, 30 ನುಗ್ಗಿ, 3 ನೇರಳೆ ಹಣ್ಣಿನ ಗಿಡ, 8 ಅಂಜೂರು, 4 ಪ್ಯಾರಲ, 50 ಕರಿಬೇವು ಸೇರಿದಂತೆ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವುದು ಇಲ್ಲಿನ ವಿಶಿಷ್ಟವಾಗಿದೆ.

ಹೈನುಗಾರಿಕೆಗೆ ಸಹಕಾರಿ ಆಗಲಿದೆ ಎಂದುಕೊಂಡು ವಿವಿಧ ತಳಿಗಳ 8 ಆಕಳು, 5 ಎಮ್ಮೆ ಸಾಕಿ ಹೈನುಗಾರಿಕೆ ಮಾಡಿಕೊಳ್ಳಲಾಗಿದೆ. ಸಮಗ್ರ ಕೃಷಿಗೆ ಸಹಾಯಕ್ಕೆ ಎರಡು ಎತ್ತು, ವ್ಯವಹಾರಕ್ಕೆ ತಿರುಗಾಡಲು ಒಂದು ಕುದುರೆ ಸಾಕಣೆ ಮಾಡಿಕೊಂಡಿದ್ದು ಪ್ರತಿ ವಾರ ಖರ್ಚಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ. ವರ್ಷಕ್ಕೆ ಸರಾಸರಿ ₹ 5 ರಿಂದ ₹ 6 ಲಕ್ಷ ನಿವ್ವಳ ಲಾಭ ತೆಗೆಯುತ್ತೇವೆ ಎಂದು ಕುಟುಂಬಸ್ಥರು ಹೇಳುತ್ತಾರೆ.

ಅಂತರ್ಜಲಮಟ್ಟ ಕುಸಿತದಿಂದ ನೀರಿನ ಅಭಾವದ ಮಧ್ಯೆಯೂ ಸಮಗ್ರ ಕೃಷಿ ಪದ್ಧತಿಯಡಿ ನಾಟಿ ಮಾಡಿದ ಗಿಡ ಮರಗಳ ಸಂರಕ್ಷಣೆ ಕಷ್ಟಕರವಾಗಿದೆ. ವಿವಿಧ ಇಲಾಖೆಗಳ ಸಹಾಯದಿಂದ ಸ್ಪ್ರಿಂಕ್ಲಿಂಗ್‌, ಹನಿ ನೀರಾವರಿ ಪದ್ಧತಿ ಬಳಸಿಕೊಂಡು ದಿನಗಳನ್ನು ದೂಡುತ್ತಿದ್ದೇವೆ. ಕುಟುಂಬಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬೆಳೆಯುವ ಬೆಳೆಯಲ್ಲಿ ಹೆಚ್ಚಿನ ಪ್ರಮಾಣ ಲಾಭಾಂಶವಾಗಿದ್ದು ನಮಗೆ ನೆಮ್ಮದಿ ತಂದಿಕೊಟ್ಟಿದೆ ಶಿವಲಿಂಗಪ್ಪ ಹೇಳುತ್ತಾರೆ.

* ಆರ್ಥಿಕ ಸಂಕಷ್ಟದಿಂದ ಓದು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯತ್ತ ಒಲವು ತೋರಿದೆ. ಸ್ನೇಹಿತರು, ವಿವಿಧ ಇಲಾಖೆ ಅಧಿಕಾರಿಗಳ ಸಹಕಾರದಿಂದ ಸಮಗ್ರ ಕೃಷಿ ನೆಮ್ಮದಿ ತಂದುಕೊಟ್ಟಿದೆ

ಶಿವಶಂಕರಪ್ಪ ಹಡಪದ
ಕೃಷಿಕ, ಹೊನ್ನಹಳ್ಳಿ

* ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸರ್ಕಾರ ಸರ್ಕಾರಿ ಜಮೀನು ಮಂಜೂರಿ ಮಾಡಿತ್ತು. ತಮ್ಮ ಹಿರಿಯ ಮಗನ ಆಸಕ್ತಿಯಿಂದ ಸಮಗ್ರ ಕೃಷಿ ಪದ್ಧತಿ ಕುಟುಂಬಕ್ಕೆ ಆಸರೆಯಾಗಿದೆ.

ಶಿವಲಿಂಗಪ್ಪ್ಪ ಹಡಪದ
ಅಂಚೆನೌಕರ, ಹೊನ್ನಹಳ್ಳಿ

* ಸರ್ಕಾರದ ಸಹಾಯ, ಮಕ್ಕಳ ಸಮಯೋಚಿತ ನಿರ್ಧಾರ, ಕುಟುಂಬಸ್ಥರು ನೆಮ್ಮದಿ ಬದುಕು ಕಟ್ಟಿಕೊಂಡಿದ್ದೇವೆ. ಸ್ವಂತ ಜಮೀನುದಲ್ಲಿ ಕೆಲಸ ಮಾಡುತ್ತಿದ್ದು ಸುಖ ಸಂಸಾರಕ್ಕೆ ದಾರಿ ಮಾಡಿಕೊಟ್ಟಿದೆ

–ಗಂಗಮ್ಮ ಶಿವಲಿಂಗಪ ಹಡಪದ
ಕುಟುಂಬದ ಒಡತಿ, ಹೊನ್ನಹಳ್ಳಿ

*ಕಡಿಮೆ ನೀರಿನಲ್ಲಿ ರೇಷ್ಮೆ ಬೆಳೆಯ ಜೊತೆಗೆ ಸಮಗ್ರ ಕೃಷಿ ಪದ್ಧತಿ ಅನುಸರಿಸುವ ಮೂಲಕ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿರುವುದು ರೈತ ಕುಟುಂಬದ ಆಸಕ್ತಿಗೆ ಸಾಕ್ಷಿ

–ಬಸಲಿಂಗಪ್ಪಗೌಡ ನಾಡಗೌಡ್ರ
ತಾಲ್ಲೂಕು ವಿಸ್ತಾರಕ ರೇಷ್ಮೆ ಇಲಾಖೆಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.