ADVERTISEMENT

ಹೊಳಲ್ಕೆರೆ: ದೇಸಿ ತಳಿ ಈರುಳ್ಳಿ ಬೀಜ ಬೆಳೆದ ಶಿವಕುಮಾರ್

ಬಿ.ಎಸ್‌ಸಿ. ಪದವೀಧರ ಕೃಷಿಕನಿಂದ ನಾಟಿ ತಳಿ ಉತ್ಪಾದನೆ, ಎಕರೆಗೆ 400 ಸೇರು ಇಳುವರಿ

ಸಾಂತೇನಹಳ್ಳಿ ಸಂದೇಶ ಗೌಡ
Published 24 ಮಾರ್ಚ್ 2021, 1:46 IST
Last Updated 24 ಮಾರ್ಚ್ 2021, 1:46 IST
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ರೈತ ಶಿವಕುಮಾರ್ ಬೀಜ ಉತ್ಪಾದನೆಗಾಗಿ ಬೆಳೆದಿರುವ ಈರುಳ್ಳಿ ಬೆಳೆ ಹೂ ಬಿಟ್ಟರುವ ದೃಶ್ಯ.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ರೈತ ಶಿವಕುಮಾರ್ ಬೀಜ ಉತ್ಪಾದನೆಗಾಗಿ ಬೆಳೆದಿರುವ ಈರುಳ್ಳಿ ಬೆಳೆ ಹೂ ಬಿಟ್ಟರುವ ದೃಶ್ಯ.   

ಹೊಳಲ್ಕೆರೆ: ತಾಲ್ಲೂಕಿನ ಬಿ.ಎಸ್‌ಸಿ. ಪದವೀಧರ ಕೃಷಿಕ ಶಿವಕುಮಾರ್ ತಮ್ಮ 1 ಎಕರೆ ಹೊಲದಲ್ಲಿ ದೇಸಿ ತಳಿಯ ಈರುಳ್ಳಿ ಬೀಜ ಉತ್ಪಾದನೆ ಮಾಡುತ್ತಿದ್ದಾರೆ.

ಇವರು ನಾಡಾವಳಿ ತಳಿಯ ಬೀಜಗಳನ್ನು ಬೆಳೆಯುತ್ತಿದ್ದು, ಸುತ್ತಲಿನ ಗ್ರಾಮಗಳಲ್ಲದೇ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಚನ್ನಗಿರಿ ತಾಲ್ಲೂಕಿನ ಹಳ್ಳಿಗಳ ರೈತರಿಗೆ ಬೀಜ ನೀಡಿದ್ದಾರೆ.

‘ಆಯ್ದ ರೈತರಿಂದ 30ರಿಂದ 40 ಎಂಎಂ ಗಾತ್ರದ ಗೆಡ್ಡೆಗಳನ್ನು ಖರೀದಿಸಿ ನಾಟಿ ಮಾಡುತ್ತೇವೆ. ಯಾವುದೇ ರೋಗ ಇಲ್ಲದ ಗೆಡ್ಡೆಗಳನ್ನು
ಮಾತ್ರ ಆಯ್ಕೆ ಮಾಡುತ್ತೇವೆ. ಈ ವರ್ಷ ದರ ಹೆಚ್ಚಿರುವುದರಿಂದ 60 ಕೆ.ಜಿಯ ಒಂದು ಚೀಲ ಗೆಡ್ಡೆಗೆ ₹ 2,000ದಂತೆ 23 ಚೀಲ ಗೆಡ್ಡೆ ಖರೀದಿಸಿ ನಾಟಿ ಮಾಡಿದ್ದೇನೆ. ಡಿಸೆಂಬರ್ ತಿಂಗಳಲ್ಲಿ ಗೆಡ್ಡೆ ನಾಟಿ ಮಾಡಿದ್ದು, ಈಗ ಹೂಬಿಟ್ಟಿದೆ. ಏಪ್ರಿಲ್‌ನಲ್ಲಿ ಬೀಜ ಬರಲಿದ್ದು, ರೈತರು ಮೇ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡಲಿದ್ದಾರೆ. ನಮ್ಮ 1 ಎಕರೆ ಹೊಲದಲ್ಲಿ ಸುಮಾರು 400 ಸೇರು ಈರುಳ್ಳಿ ಬೀಜ ಬರಬಹುದು’ ಎನ್ನುತ್ತಾರೆ ಶಿವಕುಮಾರ್.

ADVERTISEMENT

‘ಈರುಳ್ಳಿ ಬೀಜಗಳನ್ನು ಪರೀಕ್ಷೆಗೆ ಒಳಪಡಿಸಿದ ನಂತರವೇ ಮಾರಾಟ ಮಾಡುತ್ತೇವೆ. ಒಂದಿಷ್ಟು ಬೀಜಗಳನ್ನು ಬಿತ್ತನೆ ಮಾಡಿ ಅದರಲ್ಲಿ ಶೇ ಎಷ್ಟು ಬೀಜ ಹುಟ್ಟುತ್ತವೆ ಎಂಬುದರ ಮೇಲೆ ಗುಣಮಟ್ಟ ಪರೀಕ್ಷಿಸಬಹುದು. ರೈತರೂ ಪರೀಕ್ಷೆ ಮಾಡಿಕೊಂಡ ನಂತರ ಬಿತ್ತನೆ ಮಾಡಬೇಕು. ಇದು ಉತ್ತಮ ತಳಿ ಆಗಿದ್ದು, ಡಬಲ್ ಹೊದಿಕೆ, ಉತ್ತಮ ಗಾತ್ರ, ಬಣ್ಣ ಹಾಗೂ ಹೆಚ್ಚು ಕಾಲ ಸಂಗ್ರಹಿಸಿ ಇಡಬಹುದಾದ ಗುಣಮಟ್ಟದಿಂದ ಕೂಡಿದೆ. ಬಬ್ಬೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಓಂಕಾರಪ್ಪ ಆಗಾಗ ಹೊಲಕ್ಕೆ ಭೇಟಿ ನೀಡಿ ಸಲಹೆ ನೀಡುತ್ತಾರೆ’ ಎನ್ನುತ್ತಾರೆ ಅವರು.

ಶಿವಕುಮಾರ್ ಅವರನ್ನು ಮೊ: 9945803056 ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.