
ಮಣ್ಣು
ಮಣ್ಣು ಮತ್ತು ಮಕ್ಕಳ ನಡುವಿನದ್ದು ಗಾಢ, ಅನೂಹ್ಯ ಸಂಬಂಧ. ಅದರ ಪುನರ್ ಸ್ಥಾಪನೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಒಂದೆಡೆ ತಂತ್ರಜ್ಞಾನ, ಇನ್ನೊಂದೆಡೆ ಎಲ್ಲೆಂದರಲ್ಲಿ ಆವರಿಸಿಕೊಳ್ಳುತ್ತಿರುವ ಕಾಂಕ್ರೀಟ್ ಕಾಡು, ಮುಕ್ಕರಿಸಿ ಆಕ್ರಮಣ ಮಾಡುತ್ತಿರುವ ಟಿವಿ–ಮೊಬೈಲ್ ಪರದೆಗಳು… ಇವೆಲ್ಲವೂ ಮಕ್ಕಳನ್ನು ನಿಸರ್ಗದಿಂದ ದೂರ ಮಾಡುತ್ತಿದೆ. ಅದೇ ಕ್ಷಣದಲ್ಲಿ ತತ್ಪರಿಣಾಮ ಮಕ್ಕಳ ಆರೋಗ್ಯ, ಮಾನಸಿಕ ಬೆಳವಣಿಗೆ, ಮೌಲ್ಯಗಳೂ ಕುಸಿತ್ತಿವೆ. ಇವನ್ನು ಪರಿಹರಿಸುವ ಏಕೈಕ ಶಿಕ್ಷಕ ಮತ್ತು ಕೌನ್ಸೆಲರ್ ಕೌನ್ಸೆಲರ್ ಮಣ್ಣು. ಮಣ್ಣಿನ ದಿನ(ಡಿ.5)ದ ಸಂದರ್ಭದಲ್ಲಿ ಮಣ್ಣು–ಮಕ್ಕಳ ಸಂಬಂಧದ ಅರ್ಥ, ಅದರ ಲಾಭಗಳು, ಮತ್ತು ಮನೆಯಲ್ಲೇ ನಾವು ಏನು ಮಾಡಬಹುದು ಎಂಬುದನ್ನು ಕ್ಲುಪ್ತವಾಗಿ ಇಲ್ಲಿ ಚರ್ಚಿಸಲಾಗಿದೆ.
ಎಲ್ಲಕ್ಕಿಂತ ಮೊದಲು ಮಣ್ಣು ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
ಮಣ್ಣು ಎಂದರೆ ನಾವು ಮೆಟ್ಟುವ ನಿರ್ಜೀವ ಸಂಗತಿಯಷ್ಟೇ ಅಲ್ಲ. ಅದು ಜೀವ-ಜೀವಾಣು ಕೋಟಿಗಳಿಂದ ತುಂಬಿದ ಅತ್ಯದ್ಭುತ ಲೋಕ. ಮಣ್ಣಿನಲ್ಲಿ ಅಪಾರ ಮೌಲ್ಯಯುತ ಖನಿಜ ಸಂಪತ್ತಿದೆ. ಅದರ ಹೊರತಾಗಿ ಅನೂಹ್ಯ ಜೀವ ಜಗತ್ತಿದೆ. ಕೋಟ್ಯಂತರ ಸಸ್ಯ ಪ್ರಭೇದದ ಬೇರುಗಳು ಊರಿಕೊಂಡಿವೆ, ಸಣ್ಣ ಹುಳುಗಳು, ಕೀಟಗಳು, ಫಂಗಸ್, ಬ್ಯಾಕ್ಟೀರಿಯಾ… ಹೀಗೆ ಅಸಂಖ್ಯ ಬದುಕಿದೆ. ಈ ಎಲ್ಲವೂ ಸೇರಿ ಬದುಕಿನ ಸೈಕಲ್ ನಿರಂತರ ಚಲಿಸುತ್ತಲೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಿರುವುದೇ ಮಣ್ಣಿನಲ್ಲಿ. ಅಲ್ಲೇ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ, ಗಿಡವೇ ಮರವಾಗಿ ಬೆಳೆದು ಹೂ ಬಿಟ್ಟು, ಹೀಚಾಗಿ, ಕಾಯಾಗಿ, ಹಣ್ಣು ಬಿಟ್ಟು ನಮಗೆ ಆಹಾರ ಕೊಡುವುದರ ಜತೆಗೆ ನಾವು ಉಸಿರಾಡುವ ಆಮ್ಲಜನಕವನ್ನೂ ಕೊಡುತ್ತದೆ.
ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದರೆ, ಮಕ್ಕಳ ಪಾಲಿಗೆ ಮಣ್ಣು ಎಂದರೆ ಕೇವಲ ಕೊಳೆ( ಡರ್ಟ್) ಅಥವಾ ಕಸ ಅಲ್ಲ; ಅದು ಜ್ಞಾನ, ಅದು ಆಟ, ಅದು ಜೀವಾನುಭವಗಳ ದೊಡ್ಡ ಹೊತ್ತಗೆ. ಮಣ್ಣನ್ನು ಮುಟ್ಟುವಾಗ, ಅದನ್ನು ಬಗೆ ಬಗೆದು ಇಳಿಯುವಾಗ, ಅದರ ಸುವಾಸನೆಯನ್ನು ಅನುಭವಿಸುವಾಗ, ಮಗು ನಿಸರ್ಗದೊಂದಿಗೆ ನೇರ ಸಂಪರ್ಕ ಹೊಂದುತ್ತದೆ. ಈ ಅನುಭೂತಿ ಆ ಮಗುವಿನಲ್ಲಿ ಭದ್ರತೆಯ ಭಾವವನ್ನು ದೃಢಗೊಳಿಸುತ್ತದೆ.
ದೈಹಿಕ ಬೆಳವಣಿಗೆಗೆ ಪೂರಕ
ಇದನ್ನೆಲ್ಲ ಒತ್ತೊಟ್ಟಿಗಿಡೊಣ. ಮಣ್ಣಿಗೂ ಮಕ್ಕಳ ಮೈ–ಮನಗಳಿಗೂ ನೇರ ಸಂಬಂಧವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಈ ಚರ್ಚೆಗೆ ಬೇರೆಯದೇ ಆದ ಹೊಳಹು ಸಿಕ್ಕಿಬಿಡುತ್ತದೆ. ಈಗೇನಾಗುತ್ತಿದೆ? ಮಕ್ಕಳು ಸಾಕಷ್ಟು ಸಮಯ ಮನೆಯೊಳಗೇ, ಅದರಲ್ಲೂ ಪರದೆಗಳ (ಅದು ಟೀವಿ, ಮೊಬೈಲ್, ಕಂಪ್ಯೂಟರ್... ಹೀಗೆ) ಮುಂದೇನೇ ಕಳೆಯುತ್ತಾರೆ. ಇದರಿಂದ ಏನಾಗ್ತಿದೆ ಗೋತ್ತಾ? ಮಗುವಿಗೆ ಸಹಜವಾಗಿ ಬೆಳೆಯುವ ರೋಗನಿರೋಧಕ ಶಕ್ತಿ (ಇಮ್ಯುನಿಟಿ)ಯೇ ಕುಂದಿ ಹೋಗುತ್ತಿದೆ. ಮೋದಲೆಲ್ಲ ಏನಾಗ್ತಿತ್ತು ಎಂಬುದನ್ನು ನೆನಪಿಸಿಕೊಳ್ಳಿ, ನಾವು ಮಕ್ಕಳಿದ್ದಾಗ ಮಣ್ಣಿನಲ್ಲಿ ಆಟ ಆಡುತ್ತ–ಆಡುತ್ತಲೇ ನಮಗೆ ನಿಸರ್ಗದ ಸಣ್ಣ–ಪುಟ್ಟ–ದೊಡ್ಡ ಹೀಗೆ ಒಂದು ಹಂತದ ಜೀವರಾಶಿಯ ಪರಿಚಯವೇ ಆಗಿಬಿಡುತ್ತಿತ್ತು. ಇದೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಮೊಳೆಸಿ, ಬೆಳೆಸುತ್ತಿತ್ತು. ಇದನ್ನು ನಾನು ಹೇಳುವುದಲ್ಲ, ವಿಜ್ಞಾನಿಗಳೇ ಸಾಬೀತುಪಡಿಸಿರುವ ಸಂಗತಿ. ಮಣ್ಣಿನಲ್ಲಿರುವ ಕೆಲ ಬ್ಯಾಕ್ಟೀರಿಯಾಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ತರಬೇತುಗೊಳಿಸಿ ಅದನ್ನು ಬಲಪಡಿಸುವ ಕೆಲಸ ಮಾಡುತ್ತವಂತೆ.
ಮಣ್ಣಿನಲ್ಲಿ ಓಡುವುದು, ತೋಡುವುದು, ಕುಳಿತು ಆಟವಾಡುವುದು ಇವೆಲ್ಲವೂ ದೇಹಕ್ಕೆ ವ್ಯಾಯಾಮವನ್ನು ಒದಗಿಸುತ್ತದೆ ಎಂಬುದು ಸಾಮಾನ್ಯ ಜ್ಞಾನ. ಇದರಿಂದ ಕೈ–ಕಾಲಿನ ಸ್ನಾಯುಗಳು ಬಲವಾಗುತ್ತವೆ. ಅದರ ಜೊತೆಗೆ ಮೈ–ಕೈಗೆ ಮೆತ್ತಿಕೊಳ್ಳುವ ಮಣ್ಣು, ಆಮೂಲಕ ದೇಹದ ಸಂಪರ್ಕಕ್ಕೆ ಬರುವ ಬ್ಯಾಕ್ಟೀರಿಯಾಗಳ ಜೊತೆಗೆ ನಮ್ಮ ದೇಹ ರಕ್ಷಣಾ ಪಡೆ (ಇಮ್ಯೂನ್ ಸಿಸ್ಟ್ಂ) ಗುದ್ಕಾಟಕ್ಕೆ ಇಳಿದು ಬಲಗೊಳ್ಳುತ್ತವೆ. ಮುಂದೆ ಎಂಥದ್ದೇ ಪ್ರಭಲ ದಾಳಿಗೂ ಜಗ್ಗದ ಸ್ಥಿತಿಗೆ ತಲುಪಿಬಿಡುತ್ತದೆ.
ಇನ್ನು, ಆಟವಾಡುತ್ತ ಸೂರ್ಯನ ಬೆಳಕಿಗೆ ಮಕ್ಕಳು ತೆರೆದುಕೊಳ್ಳುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್–ಡಿ ಕೂಡ ಸಿಗುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ.
ಅತಿಯಾದ ಸ್ವಚ್ಛತೆ, ಎಲ್ಲವನ್ನೂ ಸೋಪು–ಸ್ಯಾನಿಟೈಜರ್‌ಗಳಿಂದ ತೊಳೆಯುವುದು, ಮಣ್ಣಿಗೆ ಸಂಪೂರ್ಣ ನಿಷೇಧ ಹೇರಿ, ಸಂಪರ್ಕದಿಂದಲೇ ದೂರಾಗುವುದು ಕೆಲವೊಮ್ಮೆ ಮಕ್ಕಳ ದೇಹವನ್ನು ದುರ್ಬಲಗೊಳಿಸಿ ನೈಸರ್ಗಿಕವಾಗಿ ದೇಹ ವ್ಯವಸ್ಥೆ ಹೋರಾಡುವ ಸಾಮರ್ಥ್ಯದಿಂದಲೇ ವಂಚಿತವಾಗಿಬಿಡುತ್ತದೆ. ಹೀಗಾಗಿ ಮಣ್ಣಿನಲ್ಲಿನ ಆಡುವಾಗ ಮೆತ್ಳಿಕೊಳ್ಳುವ ಸಣ್ಣ ದೂಳು, ಕೆಸರನ್ರು ನಾವು ನಮ್ಮ ಶತ್ರುವೆಂದು ಭಾವಿಸುವುದೇ ತಪ್ಪು ಗ್ರಹಿಕೆ.
ಮಣ್ಣು, ಮನದ ಮಾತು
ಇದು ಭೌತಿಕ ದೇಹದ ಮಾತಾಯಿತು. ಇನ್ನು ಮಾನಸಿಕ ಆರೋಗ್ಯ ಬರುವುದಾದರೆ ‘ಮೃದು–ಮಧುರ‘ ಮಣ್ಣು ಕೈಗೆ ತಗುಲುವ ಅನುಭವ, ಅದರ ತಂಪು–ಬೆಚ್ಚಗಿನ ಸ್ಪರ್ಶ, ಮಣ್ಣನ್ನು ಹದವಾಗಿ ನಾದುವುದು, ಅದರೊಂದಿಗೆ ಕಲೆತು ಕಳೆಯುವಾಗಿನ ಅನುಭೂತಿ ಮಕ್ಕಳ ಭಾವನೆಗಳನ್ನು, ಕಲ್ಪನೆಗಳನ್ಮು, ಕ್ನಿಯಾಶೀಲತೆಯನ್ನು ಅರಳಿಸುತ್ತದೆ. ಮಣ್ಣಿನಲ್ಲಿ ಕುಳಿತು ಶಾಂತವಾಗಿ ಆಟವಾಡುತ್ತಿರುವ ಮಗು, ತನ್ನೊಳಗಿನ ಒತ್ತಡ, ಕೋಪ, ಆತಂಕವನ್ನು ನಿಧಾನವಾಗಿ ಹೊರಹಾಕಲು ಆರಂಭಿಸುತ್ತದೆ.
ಮಣ್ಣಿನಿಂದ ಮನೆ ಕಟ್ಟಲು ಆರಂಭಿಸಿದಾಗ, ಮರಳಲ್ಲಿ ಗುಬ್ಬಿ ಗೂಡು ಮಾಡಲು ಆರಂಭಿಸುವಾಗ, ತಾನು ತನ್ನ ಸುತ್ತಲಿನ ಪರಿಸರದಲ್ಲಿ ಕಂಡ ಪಾತ್ರೆಗಳು–ಹತ್ಯಾರಗಳು, ಪ್ರಾಣಿ–ಪಕ್ಷಿ, ಹೂ–ಮರ–ಬಳ್ಳಿ, ಗುಡಿ–ಗೋಪುರ... ಹೀಗೆ ಪ್ರತಿಕೃತಿಗಳನ್ಸು ರೂಪಿಸುವಾಗ, ಮಗು ಸಹಜವಾಗಯಯೇ ಸ್ವತಂತ್ರವಾಗಿ ಯೋಚಿಸುವುದಕ್ಕೂ, ಹೊಸ ಹೊಸ ಕಲ್ಪನೆಗಳನ್ನು ರೂಪಿಸುವುದಕ್ಕೂ ಅವಕಾಶ ಸಿಗುತ್ತದೆ.
ಇದು ಕೇವಲ ಆಟವಲ್ಲ, ಒಂದು ರೀತಿಯ ಥೆರಪಿ, ನೈಜ ಮಣ್ಣಿನ ಚಿಕಿತ್ಸೆ.
ಮಣ್ಣೇ ಮಹಾ ವಿದ್ಯಾಲಯ
ಮಕ್ಕಳ ಕಲಿಕೆಯ ವಿಚಾರಕ್ಕೆ ಬಂದರೆ, ಮಣ್ಣೇ ಮಹಾನ್ ವಿಶ್ವವಿದ್ಯಾಲಯ. ಕ್ಲಾಸ್‌ರೂಮ್‌ನಲ್ಲಿ ಪುಸ್ತಕ–ಪೆನ್–ಪೆನ್ಸಿಲ್ ಹಿಡಿದು ಓದಿದರೆ ಅಕ್ಷರಗಳು ಬಂದಾವು. ಆದರೆ ಮಣ್ಣಿನೊಂದಿಗೆ ಸೇರಿದಾಗ ಆ ಜ್ಞಾನವು ಅನುಭವಜ್ಞಾನವಾಗಿ ಮಗುವಿಗೆ ದಕ್ಕುತ್ತದೆ. ಅದನ್ನು ನಮ್ಮ ತಥಾಕಥಿತ ಯಾವುದೇ ಸಿಲಬಸ್ ಗಳಾಗಲೀ, ಗ್ರಂಥಗಳಾಗಲೀ ಕಲಿಸಲು ಸಾಧ್ಯವೇ ಇಲ್ಲ.
ಬೀಜವನ್ನು ಮಣ್ಣಿನಲ್ಲಿ ಇಟ್ಟು ನೀರು ಹಾಯಿಸಿ, ದಿನಕ್ಕೊಂದು ಸಣ್ಣ ಮೊಳಕೆ ಹೊರಬರುವುದು, ನಿಧಾನವಾಗಿ ಎಲೆಗಳು ಮೂಡುವುದು – ಇದನ್ನು ಮಗು ನೇರವಾಗಿ ನೋಡಿದರೆ, ವೃಕ್ಷದ ಬೆಳವಣಿಗೆ, ಸಮಯದ ಮಹತ್ವ, ಸಹನೆ ಇವನ್ನೆಲ್ಲ ಪ್ರಾಯೋಗಿಕವಾಗಿ ಕಲಿಯುತ್ತದೆ. ಮಣ್ಣು ಒಣಗಿದಾಗ ಗಿಡ ಬಾಡುವುದು, ನೀರು ಹಾಕಿದಾಗ ಮತ್ತೆ ಅರಳಿ ನಿಲ್ಲುವುದು – ನೀರಿನ ಅಗತ್ಯ, ನಿಸರ್ಗದ ಸಮತೋಲನ, ಪರಿಸರದ ಸಂರಕ್ಷಣೆ ಇವುಗಳ ಮೂಲಭೂತ ಅರ್ಥ–ಮಹತ್ವವನ್ನು ಮಕ್ಕಳಿಗೆ ನಿಸರ್ಗವೇ ಕಲಿಸುತ್ತದೆ.
ಮರಳುಮಣ್ಣಿನ ಭೌತಿಕ ಸ್ಥಿತಿ, ನುಣಪಾದ ಮಣ್ಣಿನ ಅನುಭವ, ಕೆಸರಿನ ಸ್ಥಿತ್ಯಂತರ, ಕೆಂಪು–ಕರಿಮಣ್ಣಿನ ಭಿನ್ನತೆ, ತೇವಮಣ್ಣು–ಒಣಮಣ್ಣಿನ ವ್ಯತ್ಯಾಸ – ಇವು ಎಲ್ಲವೂ ಮಗು ಸಣ್ಣ ವಯಸ್ಸಿನಲ್ಲೇ ವೈಜ್ಞಾನಿಕ ಕುತೂಹಲ ಬೆಳೆಸಲು ಸಹಕಾರಿಯಾಗುತ್ತವೆ. ಇಂಥ ಮಣ್ಣುಆಧರಿತ ಕಲಿಕೆಯು, ಕೇವಲ ವಿಜ್ಞಾನವಲ್ಲ, ಗಣಿತ, ಭಾಷೆ, ಕಲಾ, ಸಾಹಿತ್ಯ ಎಲ್ಲಕ್ಕೂ ವೇದಿಕೆಯಾಗುತ್ತದೆ.
ಮಣ್ಣು ಮತ್ತು ಮೌಲ್ಯ
ಮಣ್ಣಿನೊಂದಿಗೆ ಬೆರೆತ ಮಗು, ಬದುಕಿನ ಮೂಲ ಮೌಲ್ಯಗಳನ್ನು ಸಹಜವಾಗಿ ಅಳವಡಿಸಿಕೊಳ್ಳಲು ಆರಂಭಿಸುತ್ತದೆ. ಮಣ್ಣೇ ನಮಗೆ ಅನ್ನ ಕೊಡುತ್ತದೆ ಎಂಬ ಅರಿವು ಮೂಡಿದಾಗ, ಆಹಾರದ ಮೇಲಿನ ಗೌರವ, ವ್ಯರ್ಥ ವ್ಯಯ ಮಾಡಬಾರದು ಎಂಬ ಮನೋಭಾವ ಉಂಟಾಗುತ್ತದೆ.
ಗಿಡಗಳನ್ನು ನೆಟ್ಟು, ಮಣ್ಣನ್ನು ಜೋಪಾನ ಮಾಡುವುದನ್ನು ಕಲಿಸಿದರೆ, ಪರಿಸರದ ಮೇಲಿನ ಹೊಣೆಗಾರಿಕೆ, ಜವಾಬ್ದಾರಿ, ಕರುಣೆ ಇತ್ಯಾದಿ ಗುಣಗಳು ಬೆಳೆಯುತ್ತವೆ. ಮಣ್ಣು, ಗಿಡ, ನೀರು, ಕೀಟ, ಹಕ್ಕಿ – ಎಲ್ಲವೂ ಪರಸ್ಪರ ಅವಲಂಬಿತವೆಂಬ ಅರಿವು, ಮಾನವನ ಸ್ವಾರ್ಥವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ಸಹಜ ಸಹಬಾಳ್ವೆ ಕಲಿಸುತ್ತದೆ.
ಇವುಗಳನ್ನು ಪುಸ್ತಕದಲ್ಲಿ ಓದುವುದಕ್ಕಿಂತ, ಮಣ್ಣಿನ ಮಧ್ಯದಲ್ಲೇ ಬದುಕಿ ಅನುಭವಿಸುವುದು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳನ್ನು ಗಾಢವಾಗಿ ಪಡಿಮೂಡಿಸುತ್ತದೆ.
ಬದಲಾದ ಜೀವನಶೈಲಿ; ’ಡರ್ಟ್‘ ಆದ ಮಣ್ಣು
ಇಂದಿನ ನಗರ ಯುಗದಲ್ಲಿ ಬಹುತೇಕ ಮನೆಗಳು ಅಪಾರ್ಟ್ ಮೆಂಟ್ ಗಳ ಸ್ವರೂಪಕ್ಕೆ ಬದಲಾಗುತ್ತಿವೆ. ನಿವಾಸಗಳು ನೆಲದ ಸಂಪರ್ಕದಿಂದ ಎಷ್ಟೋ ಮೇಲೆ ಹೋಗಿ ಎತ್ತರೆತ್ತರಕ್ಕೆ ಚಾಚಿಕೊಳ್ಳುತ್ತಿವೆ. ಅಲ್ಲೆಲ್ಲ ನೆಲದಲ್ಲಿರುವುದು ಟೈಲ್ಸ್, ಕಾರ್ಪೆಟ್ಗಳೇ. ಇನ್ನೂ ಹೆಚ್ಚೆಂದರೆ ಕೃತಕ ಹಸಿರುಹಾಸು! ಇವಷ್ಟೇ ಮಕ್ಕಳ ಕಾಲಿಗೆ ತಗಲುವ “ನೆಲ”. ಇವನ್ನೇ ಆಧುನಿಕತೆ, ಶ್ರೀಮಂತಿಕೆ ಎಂದು ಭ್ರಮಿಸಿ ಹಳ್ಳಿಗಳವರೂ ನಕಲು ಮಾಡತೊಡಗಿದ್ದಾರೆ. ಹೀಗಾಗಿ ಹಳ್ಳಿಗಳ ಮನೆಯಂಗಳಕ್ಕೂ ಟೈಲ್ಸ್ ಗಳು ಬಂದು ಕೂತಿವೆ. ಹೀಗಾಗಿ ಮಕ್ಕಳಿಗೆ ಮಣ್ಣು–ಕಳೆ–ಬೆಳೆ, ಗಿಡ–ಮರಗಳೊಂದಿಗಿನ ಸಂಬಂಧ ಕಡಿದು ಹೋಗುತ್ತಿದೆ.
ಪ್ಲಾಸ್ಟಿಕ್ ಆಟಿಕೆ, ಎಲೆಕ್ಟ್ರಾನಿಕ್ ಗ್ಯಾಜೆಟ್!
ಮಣ್ಣೆಂದರೆ ಕೊಳಕು, ರೋಗ ಮೂಲ ಎಂದು ಪರಿಭಾವಿಸಿರುವ ಹೆತ್ತವರು, “ಅದರಲಿ ಆಡುವುದು ಅಪರಾಧ” ಎಂಬ ಭಾವನೆಯನ್ನು ಬಿತ್ತಿದ್ದಾರೆ. ದೊಡ್ಡವರ ಇಂಥ ಧೋರಣೆ ಮಕ್ಕಳಲ್ಲಿ ಮಣ್ಣಿನ ಬಗ್ಗೆ ಭಯ, ಅಸಹ್ಯಭಾವವನ್ನು ಹುಟ್ಟಿಸಿ, ಬಲವಾಗಿ ಅದನ್ನೇ ಬೇರೂರಿಸಿಬಿಟ್ಟಿದೆ. ಪರಿಣಾಮ, ನಿಧಾನವಾಗಿ ಮಗು ನಿಸರ್ಗದಿಂದ ದೂರವಾಗಿ, ಕೃತಕ ಜಗತ್ತಿನೊಳಗೆ ಸೆರೆಯಾಗುತ್ತಿದೆ.
ಈ ಬದಲಾವಣೆಗಳು ಮಕ್ಕಳ ದೇಹದ ಜೊತೆಗೆ ಮನಸ್ಸಿನ ಮೇಲೂ ದೀರ್ಘಕಾಲೀನ ಪರಿಣಾಮ ಬೀರುತ್ತಿದೆ. ಆದ್ದರಿಂದಲೇ,ಇವತ್ತಿನ ಸನ್ನಿವೇಶದಲ್ಲಿ ನಾವೇ ಪ್ರಜ್ಞಾಪೂರ್ವಕವಾಗಿ ಮಣ್ಣಿನತ್ತ ಮಕ್ಕಳನ್ನು ಕರೆದೊಯ್ಯುವುದು ಅತ್ಯಗತ್ಯ. ಅದಕ್ಕೊಂದಿಷ್ಟು ಟಿಪ್ಸ್ ಕೆಳಗಿದೆ
* ಮನೆಯಲ್ಲಿರಲಿ ಸಣ್ಣ ತೋಟ, ಕೊನೆಗೆ ತಾರಸಿಯಲ್ಲಾದರೂ!
–ಮನೆಯಲ್ಲಿ ಅಂಗಳ ಇದ್ದರೆ, ಸಣ್ಣ ಹೂ ತೋಟ, ತರಕಾರಿ ತೋಟ ಮಾಡಿಸಿ.
–ಮಗು ಸ್ವತಃ ಕುಳಿತು ಮಣ್ಣು ತೋಡಿ, ಗಿಡ ನೆಟ್ಟು, ನೀರು ಹಾಕುವ ಅವಕಾಶ ಕೊಡಿ.
-ಮನೆಯಲ್ರಿ ಇರಲಿ ಮಗುವಿನ ಹೆಸರಿನದ್ವೇ ಒಂದು ಗಿಡ. ಅದು ಹೂ ಬಿಡುವಾಗ, ಫಲ ಕೊಡುವಾಗ, ಮನೆಯವರೊಂದಿಗೆ ಮಗು ಸಂಭ್ರಮಿಸಿದರೆ, ಅದು ಅವನಿಗೆ/ಅವಳಿಗೆ ದೊಡ್ಡ ಸಾಧನೆಯ ಅನುಭವ.
–ಅಪಾರ್ಟ್ಮೆಂಟ್‌ಗಳಲ್ಲಿದ್ದರೂ, ಬಾಲ್ಕನಿ, ಕುಂಡಗಳಲ್ಲಿ ಗಿಡ ಬೆಳೆಸುವ ಮೂಲಕ ಮಣ್ಣಿನ ಸಂಪರ್ಕ ಕಲ್ಪಿಸಿ.
* ಮಗುವಿಗೆ ಮಣ್ಣಿನ ಆಟಗಳನ್ನು ಪ್ರೋತ್ಸಾಹ
– ಮಣ್ಣಿನಲ್ಲಿ ಮನೆ ಕಟ್ಟುವುದು, ರಸ್ತೆ ಮಾಡುವುದು, “ಅಡುಗೆ ಆಟ‘ ಆಡುವುದು – ಇವು ಎಲ್ಲವೂ ಮಕ್ಕಳಿಗೆ ಎಂದೂ ಮರೆಯಲಾಗದ ನೆನಪು.
– ಮಣ್ಣು ಹಚ್ಚಿಕೊಂಡರೆ, ಬಟ್ಟೆ ಕೊಳೆಯಾಗುತ್ತದೆ, ಕೈ–ಕಾಲು ಮಣ್ಣಾಗುತ್ತದೆ ಎಂಬ ಭಾವನೆ ಬಿತ್ತದಿರಿ. “ಸರಿ, ಆಟ ಮುಗಿದ ಮೇಲೆ ತೊಳೆದುಕೊಳ್ಳೋಣ, ಸ್ನಾನ ಮಾಡೋಣ” ಎಂಬ ಭರವಸೆಯೊಂದಿಗೆ ಸ್ವಾತಂತ್ರ್ಯ ನೀಡಿ.
–ಮೊದಲ ಮಳೆಯ ನಂತರ ಹೊಮ್ಮುವ ಮಣ್ಣಿನ ಸುವಾಸನೆಗೆ ಮಕ್ಕಳೊಂದಿಗೆ ಮುಖವೊಡ್ಡಿ ನಿಲ್ಲುವುದನ್ನು ರೂಢಿಸಿಕೊಳ್ಳಿ. ನಿಮ್ಮ ಮನವೂ ತಂಪಾದೀತು.ಮಕ್ದಳಿಗೂ ಮುದ ನೀಡುತ್ರದೆ.
–ಮಳೆ–ಮಣ್ಣು– ನಿಸರ್ಗದ ನಾನಾ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡಿ, ಅರಿವು ಮೂಡಿಸಿ. ಅದೆ ಅವರ ಸಂವೇದನೆಯಲ್ಲಿ ವಿಶೇಷ ಅನುಭವವಾಗಿ ಉಳಿಯುತ್ತದೆ.
* ವೀಕೆಂಡ್, ಹಾಲಿಡೆ ಪ್ರವಾಸ ಹಳ್ಳಿ–ಜಮೀನುಗಳ ಕಡೆ
– ಸಾಧ್ಯವಿದ್ದರೆ, ವರ್ಷದಲ್ಲಿ ಎರಡು ಬಾರಿಯಾದರೂ ಮಕ್ಕಳನ್ನು ಹಳ್ಳಿಗಳಿಗೆ, ರೈತರ ಜಮೀನುಗಳಿಗೆ ಕರೆದುಕೊಂಡು ಹೋಗೋಣ.
–ಬೇರೇ, ಬೇರೆ ಕಡೆ ಹೋಗಿ ಮಣ್ಣಿನ ಬಗೆಯನ್ನು ಕೈಯಲ್ಲಿ ಹಿಡಿದು ಮಕ್ಡಳಿಗೆ ನೋಡಲು ಬಿಡಿ.
–ಉತ್ತುವುದು, ಬಿತ್ತುವುದು, ಹಸು, ಕುರಿಗಳು ಮೇಯುವುದು ಇತ್ಯಾದಿಗಳ ದರ್ಶನ ಆಗಾಗ ಮಕ್ಕಳಿಗಾಗಲಿ. ಇವೆಲ್ಲವೂ ಮಣ್ಣಿನ ಜೀವನಚಕ್ರದ ಭಾಗ.
– ರೈತರ–ಗ್ರಾಮೀಣರ ಮಕ್ಕಳ ಜೊತೆ ಸೇರಿ ಅವರು ಹೇಗೆ ಆಟವಾಡುತ್ತಾರೆ ಎಂದು ನೋಡಲು ಮಕ್ಕಳಿಗೆ ಅವಕಾಶ ಕಲ್ಪಿಸಿ.
–ಈ ಎಲ್ಲ ಅನುಭವಗಳು, ಪುಸ್ತಕಗಳಲ್ಲಿ ಸಿಗದ ಭೂಮಿಯ ಸಂಸ್ಕೃತಿಯನ್ನು ಮಕ್ಕಳ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತವೆ.
* ಮಣ್ಣಿನ ಒಡಾನಟದಲ್ಲಿ ಕೆಲವು ಜಾಗರೂಕತೆ
–ಮಣ್ಣಿನ ಸಂಪರ್ಕ ಒಳ್ಳೆಯದೇ. ಆದರೆ ಅಲ್ಲಿರುವ ಕೆಲವು ಜೀವಿಗಳಿಂದ ಗಂಭೀರ ಸೋಂಕು ತಗುಲುವ ಸಾಧ್ಯತೆಗಳೂ ಇವೆ. ಆದ್ದರಿಂದ ಸಮತೋಲನದ ದೃಷ್ಟಿಕೋನ ಅಗತ್ಯ.
–ಮಕ್ಕಳನ್ನು ಶುದ್ಧ ಹಳ್ಳಿಯ ಮಣ್ಣು, ತೋಟದ ಮಣ್ಣಿನಲ್ಲಿ ಆಟವಾಡಲು ಬಿಡುವುದು ಉತ್ತಮ. ಕಸದ ಮೈದಾನ, ಒಳಚರಂಡಿಯ ತ್ಯಾಜ್ಯದ ಹತ್ತಿರದ ಮಣ್ಣು ತಪ್ಪಿಸಬೇಕು.
–ಆಟದ ನಂತರ ಕೈ–ಕಾಲುಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದು, ಸ್ವಚ್ಛ ಬಟ್ಟೆ ತೊಡಿಸಲು ಮರೆಯಬೇಡಿ.
–ಮಕ್ಕಳು ಮಣ್ಣನ್ನು ಬಾಯಿಗೆ ಹಾಕದಂತೆ ನೋಡಿಕೊಳ್ಳಿ, ಮಣ್ಣಿನ ಕಣಗಳು ಕಣ್ಣು–ಕಿವಿ–ಮೂಗಿಗೆ ಹೋಗದಂತೆ ಎಚ್ಚರ ವಹಿಸಲು ಮಕ್ಕಳಿಗೆ ನಿಧಾನವಾಗಿ ತಿಳಿ ಹೇಳಿ.
– ಅಲರ್ಜಿ, ಅಸ್ತಮಾ, ಚರ್ಮದ ವಿಶೇಷ ಸಮಸ್ಯೆ ಇರುವ ಮಗು ಆಗಿದ್ದರೆ, ವೈದ್ಯರ ಸಲಹೆ ಪಡೆದು, ಯಾವ ಮಟ್ಟಿಗೆ ಮಣ್ಣಿನ ಆಟ ಸುರಕ್ಷಿತ ಎಂದು ತಿಳಿದುಕೊಳ್ಳಬೇಕು.
ಇವು ಅತಿಯಾದ ಭಯದಿಂದ ಮಣ್ಣನ್ನು ಸಂಪೂರ್ಣ ನಿರಾಕರಿಸುವ ಕ್ರಮವಲ್ಲ; ಬದಲಿಗೆ, ಜಾಣ್ಮೆಯಿಂದ ಮಣ್ಣಿನ ಸಹವಾಸ ಕಲ್ಪಿಸುವ ಮಾರ್ಗಗಳು.
ಮುಗಿಸುವ ಮುನ್ನ....
ಮಣ್ಣು ಕೇವಲ ನಾವು ಮೆಟ್ಮುವ ನೆಲ ಅಲ್ಲ, ಅದು ನಮ್ಮ ಭಾವನೆ, ಬದುಕು. ನಮ್ಮ ಸಾಹಿತ್ಯ, ಸಂಸ್ಕೃತಿ, ಜನಪದ ಕಥೆಗಳಲ್ಲಿ ಮಣ್ಣಿಗೆ ವಿಶೇಷ ಸ್ಥಾನವಿದೆ. “ಮಣ್ಣುಗಾಗು ನೀನೇ ಮಣ್ಣಾಗು” ಎನ್ನುವ ತತ್ವದಲ್ಲಿ, ಮಣ್ಣಿನೊಂದಿಗೆ ನಮ್ಮ ಹುಟ್ಟಿನಿಂದ ಸಾವಿನವರೆಗೆ ಇರುವ ಸಂಬಂಧವನ್ನು ಬಿಂಬಿಸಲಾಗಿದೆ. ಮಕ್ಕಳಿಗೂ ಈ ಭಾವನೆ ತಲುಪಬೇಕು. ಅವರು ಬೆಳೆದ ಮೇಲೆ ಪರಿಸರದ ಸಂಕಟಗಳ ಬಗ್ಗೆ ಕಾಳಜಿ ಹೊತ್ತ ನಾಗರಿಕರಾಗಲಿ, ರೈತರ ಪರಿಶ್ರಮದ ಬೆಲೆಯನ್ನು ಅರ್ಥಮಾಡಿಕೊಳ್ಳಲಿ, ಭೂಮಿಯನ್ನು ಕೇವಲ ಸಂಪತ್ತು (ರಿಯಲ್ ಎಸ್ಟೇಟ್) ಅಲ್ಲ, ಜೀವನದ ನೆಲೆ ಎಂಬುದನ್ನು ಮನಗಾಣಲಿ. ನೆನಪಿಡಿ ನಮ್ಮೆಲ್ಲ ಮೂಲ ಬೇರೂ ಇರುವುದು ಈ ಮಣ್ಣಿನಲ್ಲೇ. ಇಂಥ ಮಣ್ಣಿನೊಂದಿಗೆ ನಮ್ಮ ಮಕ್ಕಳ ಸಂಬಂಧ ಬೆಳೆಸುವುದು ಒಂದು ಐಷಾರಾಮಿ ಹವ್ಯಾಸ ಅಲ್ಲ, ಅವಶ್ಯಕತೆ.
ಇಂದಿನ ಈ ಮಣ್ಣಿನ ದಿನವಾದರೂ ಮಣ್ಣನ್ನು ಮುಟ್ಟಿದ ಮಗುವಿನ ಕೈ ಆನಂದದ ಅನುಭೂತಿ ಅನುಭವಿಸಲಿ; ಮಣ್ಣನ್ನು ಅನುಭವಿಸಿದ ಹೃದಯ ಜವಾಬ್ದಾರಿಯುತವಾಗಲಿ. ಮಣ್ಣು ಮತ್ತು ಮಕ್ಕಳು ಮತ್ತೆ ಒಂದಾಗುವ ದಿನಗಳು ಹೆಚ್ಚಾಗಲಿ – ಭೂಮಿಯೂ, ಭವಿಷ್ಯವೂ ಆರೋಗ್ಯಕರವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.