ADVERTISEMENT

ಸಮಗ್ರ ಕೃಷಿಯ ಯಶಸ್ವಿ ಹೆಜ್ಜೆಗಳು..

ಜೆ.ಆರ್.ಗಿರೀಶ್
Published 3 ಡಿಸೆಂಬರ್ 2018, 19:30 IST
Last Updated 3 ಡಿಸೆಂಬರ್ 2018, 19:30 IST
ಅ
   

ಮಾ ವಿನ ತೋಪಿನ ತುಂಬಾ ಅವರೆ ಸೊಗಡಿನ ಘಮಲು. ಕಾಣು ಹಾಯಿಸಿದಷ್ಟು ದೂರ ನಳ ನಳಿಸುವ ಹಸಿರು. ತೆನೆಯ ಭಾರಕ್ಕೆ ಬಾಗಿದ ರಾಗಿ. ಜಮೀನಿನ ತುಂಬಾ ದುಂಬಿಯ ಝೇಂಕಾರ. ತೊಟ್ಟಿಯ ನೀರಲ್ಲಿ ಮತ್ಸ್ಯ ದರ್ಶನ..

ಕೋಲಾರ ತಾಲ್ಲೂಕಿನ ಮದನಹಳ್ಳಿಯ ರೈತ ಎಂ.ಎನ್‌.ರವಿಶಂಕರ್‌ರ ಜಮೀನು ಹೊಕ್ಕರೆ ಇಂಥ ಮನ ತಣಿಯುವ ದೃಶ್ಯಗಳು ಕಾಣುತ್ತವೆ. ರವಿಶಂಕರ್ ಅವರದ್ದು ಒಟ್ಟು 26 ಎಕರೆ ಜಮೀನು. ಅದರಲ್ಲಿ 16 ಎಕರೆಯಲ್ಲಿ ಮಾವು, 4 ಎಕರೆ ಹುಣಸೆ ತೋಪು, ಉಳಿದ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದಿದ್ದಾರೆ.

ಕೋಲಾರದಲ್ಲಿ ಎಲ್ಲ ಕಡೆ ಇದ್ದಂತೆ ಇವರ ಗ್ರಾಮದಲ್ಲೂ ನೀರಿಗೆ ಬರ. 1500 ಅಡಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ದಶಕದ ಹಿಂದೆ ಕೊರೆಸಿದ್ದ ಎಂಟುಕೊಳವೆ ಬಾವಿಗಳಲ್ಲಿ ನಾಲ್ಕು ಮಾತ್ರ ಚಾಲನೆಯಲ್ಲಿವೆ. ಅದರಲ್ಲೇ ಜಮೀನು ಉಳಿಸಿಕೊಳ್ಳುವ ಹರಸಾಹಸ ಮಾಡಿದ್ದಾರೆ. ಇರುವ ನೀರಿನಲ್ಲೇ ರವಿಶಂಕರ್ ಅವರ ಸಮಗ್ರ ಕೃಷಿ ಸಾಗಿದೆ.

ADVERTISEMENT

ತುಂತುರು ಹನಿ ನೀರಾವರಿ

ಜಮೀನಿನಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಲು ಮತ್ತು ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ನಾಲ್ಕು ಕೊಳವೆ ಬಾವಿಗಳಿಂದ ಪೈಪ್‌ ಮೂಲಕ ನೇರವಾಗಿ ಜಮೀನಿಗೆ ನೀರು ಹಾಯಿಸಿದರೆ ಕನಿಷ್ಠ 2 ಎಕರೆ ಬೆಳೆ ನಿರ್ವಹಣೆಯೂ ಕಷ್ಟ. ‘ನೀರಿನ ಮಿತಿ ಮೀರಿದ ಬಳಕೆಯಿಂದ ಈಗಾಗಲೇ ಸಾಕಷ್ಟು ಪಾಠ ಕಲಿತಿದ್ದು, ನೀರನ್ನು ತುಪ್ಪದಂತೆ ಬಳಸುತ್ತಿದ್ದೇನೆ’ ಎನ್ನುತ್ತಾರೆ ಎಂದು ರವಿಶಂಕರ್‌ ಹೇಳುತ್ತಾರೆ.

ನೀರನ್ನು ಮಿತವಾಗಿ ಬಳಸುವುದಷ್ಟೇ ಅಲ್ಲ. ಪೂರೈಕೆ ಮಾಡಿರುವ ನೀರು ಆವಿಯಾಗದಂತೆ ತಡೆಯಲು ಬೆಳೆಗಳಿಗೆ ಪ್ಲಾಸ್ಟಿಕ್‌ ಹೊದಿಕೆ (ಮಲ್ಚಿಂಗ್‌) ಹೊದಿಸಿದ್ದಾರೆ. ಇದರಿಂದ ನೀರು ಆವಿಯಾಗುವುದು ತಪ್ಪಿದೆ. ಕಳೆಯೂ ನಿಯಂತ್ರಣವಾಗಿದೆ.

ಮಾವಿನ ನಡುವೆ ಅಂತರ ಬೆಳೆ

ಮಾವಿನ ಮರಗಳ ನಡುವೆ ಅಂತರ ಬೆಳೆಯಾಗಿ ರಾಗಿ, ತೊಗರಿ, ಅವರೆ, ಮುಸುಕಿನ ಜೋಳ ಬೆಳೆಯುತ್ತಾರೆ. ಇನ್ನೊಂದು ಕಡೆಯಲ್ಲಿ ಟೊಮೆಟೊ, ಕೋಸು, ಕಲ್ಲಂಗಡಿ, ಆಲೂಗಡ್ಡೆ, ಕೊತ್ತಂಬರಿ, ಬೂದಗುಂಬಳ, ಮೂಲಂಗಿ, ಕ್ಯಾರೆಟ್, ಬೀನ್ಸ್‌ನಂತಹ ತರಕಾರಿ ಹಾಕುತ್ತಾರೆ. ಕೀಟಬಾಧೆ ತಡೆಗಾಗಿ ಬೆಳೆ ಅಂಚಿನಲ್ಲಿ ಚೆಂಡು ಹೂವಿನ ಗಿಡಗಳನ್ನು ಹಾಕಿದ್ದಾರೆ.

ಡ್ರಿಪ್‌ ನೀರಿನ ಪೈಪ್‌ಗೆ ವೆಂಚುರಿ ಉಪಕರಣ ಅಳವಡಿಸಿದ್ದಾರೆ. ಇದನ್ನು ಬಳಸಿಕೊಂಡು ನೀರಿನ ಜತೆ ಜತೆಯಲ್ಲೇ ಗಿಡಗಳಿಗೆ ನಿಯಮಿತವಾಗಿ ಗೊಬ್ಬರ ಪೂರೈಕೆ ಮಾಡುತ್ತಾರೆ. ಇದರಿಂದ ಸಕಾಲಕ್ಕೆ ಸಮಾನವಾಗಿ ಬೆಳೆಗೆ ಪೋಷಕಾಂಶಗಳು ಪೂರೈಕೆಯಾಗುತ್ತವೆ. ‘ಇದರಿಂದ ಇಳುವರಿ ಹೆಚ್ಳಳಕ್ಕೆ ಪೂರಕವಾಗುತ್ತದೆ. ಹಾಗೆಯೇ, ಗೊಬ್ಬರ, ನೀರು ಪ್ರತ್ಯೇಕವಾಗಿ ಕೊಡುವುದು ತಪ್ಪುತ್ತದೆ. ಕಾರ್ಮಿಕರ ಬಳಕೆಗೆ ಕಡಿವಾಣ ಹಾಕಿದಂತಾಗಿದೆ’ ಎನ್ನುತ್ತಾರೆ ರವಿಶಂಕರ್.

ಎಕರೆಗೆ 40 ಗಿಡ ಮಾವು. ಮಲ್ಲಿಕಾ ತೋತಾಪುರಿ, ಬೆನಿಷಾ, ನೀಲಂ ತಳಿಗಳಿವೆ. ಏಳು ಎಕರೆಯಲ್ಲಿ ಟೊಮೆಟೊ ಬೆಳೆಯುತ್ತಾರೆ. ಎರಡು ಎಕರೆಯಂತೆ ವರ್ಷ ಪೂರ್ತಿ ಟೊಮೆಟೊ ನಿರಂತರವಾಗಿರುತ್ತದೆ. ಒಂದೊಂದು ಬೀಡಿಗೆ 5000 ಬಾಕ್ಸ್ (ಒಂದು ಬಾಕ್ಸ್‌ಗೆ 15 ಕೆಜಿ)ಗಳನ್ನು ಸ್ಥಳೀಯ ಕೋಲಾರ ಮಾರ್ಕೆಟ್‌ಗೆ ಮಾರುತ್ತಾರೆ. ಬೂದುಗುಂಬಳ, ಸ್ವೀಟ್ ಕಾರನ್, ಕಲ್ಲಂಗಡಿಯನ್ನು ಜಮೀನಿಗೆ ಬಂದು ಕೊಂಡೊಯ್ಯುತ್ತಾರೆ. ಮಾವನ್ನು ತಾವೇ ಕೊಯ್ದು ಶ್ರೀನಿವಾಸಪುರ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ‘ಈ ವರ್ಷ ತೋಟಗಾರಿಕಾ ಇಲಾಖೆಯವರು ಹಣ್ಣು ಸಂರಕ್ಷಣಾ ಘಟಕ ಮಾಡಿದ್ದಾರೆ. ಇನ್ನು ಮುಂದೆ ಆ ಘಟಕದಲ್ಲಿ ನಾವೇ ಮಾವನ್ನು ಹಣ್ಣು ಮಾಡಿ ಬೆಂಗಳೂರಿನ ಹಾಪ್‌ಕಾಮ್ಸ್‌ ಮತ್ತು ಬೇರೆ ಬೇರೆ ಮಾಲ್‌ಗಳಿಗೆ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ರವಿಶಂಕರ್.

ಮಾವಿನಂತಹ ವಾಣಿಜ್ಯ ಬೆಳೆಗಳ ಜತೆಗೆ, ಮನೆಗೆ ಬೇಕಾದ ಹಣ್ಣು, ತರಕಾರಿ, ಸೊಪ್ಪುಗಳನ್ನೆಲ್ಲ ಜಮೀನಿನಲ್ಲೇ ಬೆಳೆದುಕೊಳ್ಳುತ್ತಾರೆ. ಹೀಗಾಗಿ ಹಣ ಕೊಟ್ಟು ಹಣ್ಣು ಮತ್ತು ತರಕಾರಿ ಕೊಳ್ಳುವ ಪ್ರಮೇಯವಿಲ್ಲ. ವರ್ಷವಿಡೀ ಇವರ ಜಮೀನಿನಲ್ಲಿ ಪಪ್ಪಾಯ, ನಿಂಬೆ, ಸಪೋಟಾ, ಚಕೋತಾ, ನೆಲ್ಲಿಕಾಯಿ, ನುಗ್ಗೆಕಾಯಿ, ಗೋಡಂಬಿ, ಬಾಳೆ, ನೇರಳೆ, ದಾಳಿಂಬೆ, ಕಿತ್ತಳೆ ಹಣ್ಣಿನ ಸುಗ್ಗಿಯೋ ಸುಗ್ಗಿ.

ಉಪ ಆದಾಯದ ಹೈನುಗಾರಿಕೆ

ಕೃಷಿಯ ಜತೆ ಜತೆಯಲ್ಲೇ ಉಪ ಆದಾಯವಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ. ನಾಲ್ಕು ಎಮ್ಮೆ, 25 ಕುರಿ, ಐದು ಮೇಕೆ, 40 ಗಿರಿರಾಜ ಮತ್ತು 20 ನಾಟಿ ಕೋಳಿಗಳನ್ನು ಸಾಕಿದ್ದಾರೆ. ಎಮ್ಮೆಗಳು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಸುಮಾರು 25 ಲೀಟರ್‌ ಹಾಲು ಕೊಡುತ್ತಿದ್ದು, ಮನೆಗೆ ಬಳಸಿ ಉಳಿದ ಹಾಲನ್ನು ಡೇರಿಗೆ ಹಾಕುತ್ತಾರೆ. ಕುರಿ, ಕೋಳಿಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ಮಾಡಿಸಿದ್ದಾರೆ. ಅದೇ ತೊಟ್ಟಿಯಲ್ಲಿ ಅಜೋಲಾ ಬೆಳೆದಿದ್ದಾರೆ. ಪೌಷ್ಟಿಕ ಆಹಾರವಾಗಿರುವ ಅಜೋಲಾವನ್ನು ಎಮ್ಮೆಗಳಿಗೆ ಮೇವಿನ ಜತೆ ಕೊಡುತ್ತಾರೆ. ಜೇನು ಸಾಕಣೆ ತರಬೇತಿ ಪಡೆದಿರುವ ರವಿಶಂಕರ್‌ ಮಾವಿನ ತೋಪಿನ ಶೆಡ್‌ನಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಜೇನು ನೊಣಗಳಿಗೆ ಅಗತ್ಯವಿರುವ ಮಕರಂದಕ್ಕಾಗಿ ಮಾವಿನ ತೋಪಿನಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.

ಬದುಗಳಲ್ಲಿ ಮರಗಳು

ಜಮೀನಿನ ಬದುಗಳಲ್ಲಿ ಹೊಂಗೆ, ಸಿಲ್ವರ್‌ ಓಕ್‌, ಬೇವು, ತೇಗದ ಮರ ಬೆಳೆದಿದ್ದಾರೆ. ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿಯೇ ಬೆಳೆಯುಳಿಕೆ, ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಎರೆಹುಳು ಗೊಬ್ಬರ ಉತ್ಪಾದಿಸುತ್ತಿದ್ದಾರೆ. ‌ ಪ್ರತಿ ವರ್ಷ ಮಣ್ಣು ಪರೀಕ್ಷೆ ಮಾಡಿಸುತ್ತಾರೆ. ಸಕಾಲದಲ್ಲಿ ಕೊಟ್ಟಿಗೆ ಗೊಬ್ಬರ, ಕುರಿ ಮತ್ತು ಕೋಳಿ ಗೊಬ್ಬರ, ಬೇವಿನ ಹಿಂಡಿ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಬಳಸುತ್ತಾ ಮಣ್ಣಿನ ಫಲವತ್ತತೆ ವೃದ್ಧಿಸುತ್ತಾರೆ.

20 ಅಡಿ ತೊಟ್ಟಿಯಿಂದ ನೀರು ಪೂರೈಕೆ

ನಾಲ್ಕು ಕೊಳವೆಬಾವಿಗಳಲ್ಲಿ ಸರಾಸರಿ ಎರಡರಿಂದ ಮೂರು ಇಂಚು ನೀರು ಬರುತ್ತದೆ. ಅದು ಗ್ಯಾಪ್ ಕೊಡುತ್ತದೆ. ಹೀಗಾಗಿ ನೀರು ಸಂಗ್ರಹಕ್ಕಾಗಿ 20 ಅಡಿ ಅಗಲ, 20 ಅಡಿ ಉದ್ದ, 15 ಅಡಿ ಆಳದ ಅಳತೆಯ ಬೃಹತ್ ತೊಟ್ಟಿ ಮಾಡಿಸಿ, ಅದರ ಮೇಲ್ಭಾಗವನ್ನು ಮುಚ್ಚಿದ್ದಾರೆ. ತೊಟ್ಟಿಗೆ ಕೊಳವೆಬಾವಿ ನೀರು ಸಂಗ್ರಹ ಮಾಡುತ್ತಾರೆ. ತೊಟ್ಟಿಯಿಂದ ಡ್ರಿಪ್‌ ಪೈಪುಗಳ ಮೂಲಕ ಜಮೀನಿಗೆ ನೀರು ಪೂರೈಸುತ್ತಾರೆ. ‘ತೊಟ್ಟಿಗೆ ಮುಚ್ಚಿಗೆ ಮಾಡಿರುವುದರಿಂದ ನೀರು ಆವಿಯಾಗುವುದಿಲ್ಲ. ಕಸ ಬಿದ್ದು ಹಾಳಾಗುವುದಿಲ್ಲ. ಡ್ರಿಪ್‌ನಲ್ಲಿ ನೀರು ಕೊಡುವುದರಿಂದ ಬೆಳೆಗೆ ಬೇಕಾದಷ್ಟೇ ನೀರನ್ನು ಪೂರೈಸಬಹುದು’ ಎನ್ನುತ್ತಾರೆ ರವಿಶಂಕರ್.

ಪ್ರಶಸ್ತಿ ಹಿರಿಮೆ

ಕೃಷಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ರವಿಶಂಕರ್ ಅಲ್ಲಿ ಕಲಿತ ಸುಧಾರಿತ ಕೃಷಿ ತಂತ್ರಜ್ಞಾನವನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಇವರು ಕೈಗೊಂಡಿರುವ ಸಮಗ್ರ ಕೃಷಿಯ ಸಾಧನೆಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2014ರಲ್ಲಿ ಜಿಲ್ಲಾ ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ, 2015ರಲ್ಲಿ ಭಾರತೀಯ ಕೃಷಿ ಅನುಸಂದಾನ ಪರಿಷತ್‌ ‘ಇನೋವೇಟಿವ್‌ ಫಾರ್ಮರ್‌’ ಪ್ರಶಸ್ತಿ ನೀಡಿ ಗೌರವಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್‌ ಬ್ಯಾಂಕ್‌ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗುವ ಕನಸು ಕಂಡಿದ್ದ ರವಿಶಂಕರ್‌ಗೆ ಒಲಿದಿದ್ದು ಕೃಷಿ ಕ್ಷೇತ್ರ. ದ್ವಿತೀಯ ಪಿಯುಸಿ ಓದಿ ಕೃಷಿ ಮಾಡುತ್ತಿರುವ ಅವರ ವರ್ಷದ ಆದಾಯ ಯಾವ ಎಂಜಿನಿಯರ್‌ಗಿಂತಲೂ ಕಡಿಮೆಯಿಲ್ಲ. ರವಿಂಶಂಕರ್ ಅವರ ಸಂಪರ್ಕ ಸಂಖ್ಯೆ: 9900403354

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.