ADVERTISEMENT

ಕಡಬಾಳದ ಮಗೆಕಾಯಿಗೆ ಬಹು ಬೇಡಿಕೆ

ಸಾಂಪ್ರದಾಯಿಕ ಬೆಳೆಯಿಂದ ರೈತರಿಗೆ ಉಪ ಆದಾಯ

ಸಂಧ್ಯಾ ಹೆಗಡೆ
Published 29 ಏಪ್ರಿಲ್ 2019, 19:30 IST
Last Updated 29 ಏಪ್ರಿಲ್ 2019, 19:30 IST
ಶಿರಸಿ ತಾಲ್ಲೂಕಿನ ಕಡಬಾಳದಲ್ಲಿ ರೈತರು ಬೆಳೆದಿರುವ ಮಗೆ ಬಳ್ಳಿ
ಶಿರಸಿ ತಾಲ್ಲೂಕಿನ ಕಡಬಾಳದಲ್ಲಿ ರೈತರು ಬೆಳೆದಿರುವ ಮಗೆ ಬಳ್ಳಿ   

ಶಿರಸಿ: ಈ ಊರಿಗೆ ಬೆಳಗಿನ ಹೊತ್ತು ಹೋದರೆ ಹೊಳೆಯಂಚಿನ ಗದ್ದೆಗಳಲ್ಲಿ ಕೃಷಿಕರು ಗುದ್ದಲಿ ಹಿಡಿದು ಕೆಲಸ ಮಾಡುತ್ತಿರುವ ದೃಶ್ಯ ಕಾಣುತ್ತದೆ. ಈ ಬಿರು ಬೇಸಿಗೆಯಲ್ಲಿ ಇದ್ಯಾವ ಕೃಷಿ ಎಂದು ಅಚ್ಚರಿಯೇ ?

ಹೌದು, ತಾಲ್ಲೂಕಿನ ಕಡಬಾಳದ ಕೃಷಿಕರು ಬೇಸಿಗೆಯಲ್ಲಿ ಮಗೆಕಾಯಿ ಬೆಳೆ ಬೆಳೆಯುತ್ತಾರೆ. ಕಡಬಾಳದ ಗದ್ದೆಗಳಲ್ಲಿ ಬೆಳೆಯುವ ಮಗೆಕಾಯಿಗೆ ಎಲ್ಲಿಲ್ಲದ ಬೇಡಿಕೆ. ಇದು ಈ ಊರಿನಲ್ಲಿ ತಲೆಮಾರುಗಳಿಂದ ಬೆಳೆಯುತ್ತ ಬಂದಿರುವ ಸಾಂಪ್ರದಾಯಿಕ ಬೆಳೆ.

ಹೊಳೆ ನೀರನ್ನು ಆಶ್ರಯಿಸಿ, ಸುಮಾರು ಎರಡು ಎಕರೆ ಗದ್ದೆಯಲ್ಲಿ 10ಕ್ಕೂ ಹೆಚ್ಚು ರೈತರು ಪ್ರತಿ ವರ್ಷ ಮಗೆ ಬಳ್ಳಿ ನಾಟಿ ಮಾಡುತ್ತಾರೆ. ಸೊಂಪಾಗಿ ಬೆಳೆದಿರುವ ಬಳ್ಳಿಗಳು ಹಸಿರು ಕಾರ್ಪೆಂಟ್‌ನಂತೆ ಕಂಗೊಳಿಸುತ್ತವೆ. ‘ಮಗೆ ಎರಡು ತಿಂಗಳ ಬೆಳೆ. ಗದ್ದೆ ಹದಗೊಳಿಸಿ, ಓಳಿ ತೆಗೆದು, ಅದರಲ್ಲಿ ಅಡಿಕೆ ಸಿಪ್ಪೆ ಹಾಕಬೇಕು. ಅಡಿಕೆ ಸಿಪ್ಪೆಯನ್ನು ಸುಟ್ಟು, ಅದೇ ಬೂದಿಯಲ್ಲಿ ಸಸಿಗಳನ್ನು ನಾಟಿ ಮಾಡಿ, ಒಂದು ವಾರ ಸತತ ನೀರು ಹಾಯಿಸಿ, ಆರೈಕೆ ಮಾಡಿದರೆ, ಸಸಿಗಳು ಬಳ್ಳಿಗಳಾಗಿ ಕವಲೊಡೆಯುತ್ತವೆ. ನಂತರದ ದಿನಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಹಾಯಿಸುವುದಷ್ಟೇ ಕೆಲಸ. ಎರಡು ಬಾರಿ ಗೊಬ್ಬರ ಕೊಟ್ಟರೆ, ಫಸಲು ಚೆನ್ನಾಗಿ ಬರುತ್ತದೆ’ ಎನ್ನುತ್ತಾರೆ ಬೆಳಗಾರ ಶ್ರೀಪತಿ ರಾಮಚಂದ್ರ ಹೆಗಡೆ.

ADVERTISEMENT

‘ಮಗೆ ಬೆಳೆ ಸುಲಭ, ಆದರೆ ಅಷ್ಟೆ ಸೂಕ್ಷ್ಮ. ಅಕಾಲಿಕವಾಗಿ ಆಲಿಕಲ್ಲು ಮಳೆಯಾದರೆ ಬೆಳೆ ಸಂಪೂರ್ಣ ನೆಲಕಚ್ಚುತ್ತದೆ. ಕಾಯಿ ಕೊಯ್ಲಿಗೂ ನುರಿತವರು ಬೇಕು. ಸಣ್ಣ ಗಾಯವಾದರೂ 15 ದಿನಗಳಲ್ಲಿ ಕಾಯಿ ಕೊಳೆತು ಹೋಗುತ್ತದೆ’ ಎಂದು ಅವರು ತಿಳಿಸಿದರು.

‘ಒಂದು ಎಕರೆಯಲ್ಲಿ ಮಗೆಕಾಯಿ ಬೆಳೆಯಲು ₹ 40ಸಾವಿರ ವೆಚ್ಚವಾಗುತ್ತದೆ. ಸರಿಯಾಗಿ ಬೆಳೆ ಬಂದರೆ 20ಸಾವಿರ ಮಗೆಕಾಯಿಗಳನ್ನು ಕೊಯ್ಯಬಹುದು. ಒಂದು ಕಾಯಿಗೆ ಸರಾಸರಿ ₹ 20 ದರ ಸಿಗುತ್ತದೆ. ಕಾಯಿಯ ಗಾತ್ರ, ಗುಣಮಟ್ಟದ ಮೇಲೆ ದರ ನಿಗದಿಯಾಗುತ್ತದೆ. ₹ 1ಲಕ್ಷ ಆದಾಯ ಪಡೆಯಬಹುದು’ ಎಂಬುದು ಅಶೋಕ ಹೆಗಡೆ, ಗಣಪತಿ ನಾಯ್ಕ ಅವರ ಅನುಭವ.

‘ಹವ್ಯಕರ ಮನೆಗಳಲ್ಲಿ ನಿತ್ಯ ಬೆಳಗಿನ ತಿಂಡಿ ಹೆಚ್ಚಾಗಿ ತೆಳ್ಳೇವು (ತೆಳ್ಳಗಿನ ದೋಸೆ). ತೆಳ್ಳೇವಿನ ಹಿಟ್ಟು ತಯಾರಿಸಲು ಮಗೆಕಾಯಿ ಬೇಕು. ಕೂಡುಕುಟುಂಬ ಇರುವಲ್ಲಿ ಮನೆಗಳಲ್ಲಿ ವರ್ಷಕ್ಕೆ ಕನಿಷ್ಠವೆಂದರೂ 400ರಷ್ಟು ಮಗೆಕಾಯಿ ಬೇಕಾಗುತ್ತದೆ. ಹೀಗಾಗಿ, ಅನೇಕ ಗ್ರಾಹಕರು ಗದ್ದೆಗೆ ಬಂದು 400–500 ಮಗೆಕಾಯಿಗಳನ್ನು ಒಮ್ಮೆಲೇ ಖರೀದಿಸುತ್ತಾರೆ. ಗದ್ದೆಯಲ್ಲಿ ಕೊಯ್ಲು ಮಾಡಿದ ಬೆಳೆ ನೇರವಾಗಿ ಬಳಕೆದಾರನ ಮನೆ ಸೇರುತ್ತದೆ’ ಎನ್ನುತ್ತಾರೆ ಅಶೋಕ ಹೆಗಡೆ. ಸಂಪರ್ಕ ಸಂಖ್ಯೆ: ಅಶೋಕ ಹೆಗಡೆ–9481049430, ಗಣಪತಿ ನಾಯ್ಕ– 9481118608.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.