ADVERTISEMENT

ತಣ್ಣೀರುಕುಳಿ ತರಕಾರಿಗೆ ಬೆವರೇ ಬಂಡವಾಳ!

ಮುಂಗಾರು ಆರಂಭವಾಗುತ್ತಿದ್ದಂತೆ ಹಾಲಕ್ಕಿ ಸಮಾಜದ ರೈತರ ಕೃಷಿ ಕಾಯಕ

ಎಂ.ಜಿ.ನಾಯ್ಕ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ತಣ್ಣೀರುಕುಳಿಯಲ್ಲಿ ಸಹಜ ಕೃಷಿ ಮೂಲಕ ತರಕಾರಿ ಬೆಳೆಯುವ ಹಾಲಕ್ಕಿ ರೈತರು, ಸೆಗಣಿ ಗೊಬ್ಬರ ಗುಂಡಿ ತಯಾರಿಸಿರುವುದು.
ತಣ್ಣೀರುಕುಳಿಯಲ್ಲಿ ಸಹಜ ಕೃಷಿ ಮೂಲಕ ತರಕಾರಿ ಬೆಳೆಯುವ ಹಾಲಕ್ಕಿ ರೈತರು, ಸೆಗಣಿ ಗೊಬ್ಬರ ಗುಂಡಿ ತಯಾರಿಸಿರುವುದು.   

ಕುಮಟಾ: ಪಟ್ಟಣದ ಸುತ್ತಮುತ್ತಲ ಜನರಿಗೆ ಬೆಳ್ಳಂಬೆಳಗ್ಗೆತಾಜಾಸ್ಥಳೀಯ ತರಕಾರಿ ನೀಡುವ ಹೆಗಡೆ ಗ್ರಾಮದ ತಣ್ಣೀರುಕುಳಿ ರೈತರ ಕೃಷಿಕಾಯಕ, ಮಳೆಯ ಬೆನ್ನಲ್ಲೇ ಆರಂಭಗೊಂಡಿದೆ.

ತಣ್ಣೀರುಕುಳಿ ಗ್ರಾಮವು ಕುಮಟಾ ಪಟ್ಟಣದಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ. ಇನ್ನೊಂದು ತಿಂಗಳಲ್ಲಿ ಕೆಲವು ಗಂಟೆಗಳ ಹಿಂದೆಯಷ್ಟೇ ತೋಟದಿಂದ ಕೊಯ್ದು ತಂದ ಹೀರೆ, ಬೆಂಡೆ, ಸೌತೆ, ಮೊಗೆ, ಹಾಗಲ, ಹಾಲಗುಂಬಳ, ಪಡವಲಕಾಯಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅದಕ್ಕಾಗಿ ಈಗ ಸ್ಥಳೀಯ ಹಾಲಕ್ಕಿ ಸಮಾಜದ ರೈತರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆವರನ್ನೇ ಬಂಡವಾಳವಾಗಿಸಿ ತೋಟದಲ್ಲಿ ದುಡಿಯುತ್ತಿದ್ದಾರೆ.

ಎಲ್ಲ ತರಕಾರಿ ಗಿಡಗಳ ಬುಡದಲ್ಲಿ ಸೆಗಣಿ ಗೊಬ್ಬರ, ಮಣ್ಣು ಹಾಕುವ ಕೆಲಸದಲ್ಲಿ ಸುಮಾರು 70 ಕುಟುಂಬಗಳ ನೂರಾರು ರೈತರು ನಿರತರಾಗಿದ್ದಾರೆ. ಹೀಗೆ ತರಕಾರಿ ಬೆಳೆಯುವ ಸುಮಾರು20 ಎಕರೆಗಳಷ್ಟು ಜಾಗ ಈ ರೈತರದ್ದಲ್ಲ. ಅವುಗಳನ್ನು ಭೂ ಮಾಲೀಕರಿಂದ ಬಾಡಿಗೆ ಪಡೆಯಲಾಗಿದೆ.

ADVERTISEMENT

‘ತರಕಾರಿ ಬೆಳೆಯುವ ಒಂದು ಗುಂಟೆ ಜಾಗಕ್ಕೆ ₹250 ಬಾಡಿಗೆ ಕೊಡಬೇಕು. ಪ್ರತಿವರ್ಷ ಬಾಡಿಗೆ ಹೆಚ್ಚಿಸುತ್ತಾರೆ. ನಾನು ಸುಮಾರು20 ಗುಂಟೆ ಜಾಗದಲ್ಲಿ ಎಲ್ಲ ತರಕಾರಿ ಬೆಳೆಯುತ್ತೇನೆ. ಜಾಗದ ಬಾಡಿಗೆ, ಕೂಲಿ ಖರ್ಚು, ಗೊಬ್ಬರ ಎಲ್ಲ ಸೇರಿ ₹20 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ನಮ್ಮ ತಾಯಂದಿರು ತರಕಾರಿಯನ್ನು ಪೇಟೆಗೆ ತೆಗೆದುಕೊಂಡು ಮಾರಾಟ ಮಾಡುತ್ತಾರೆ. ಅದರಿಂದ ಸುಮಾರು ₹ 50 ಸಾವಿರ ಸಿಗಬಹುದು’ ಎಂಬುದುರೈತ ನಾಗರಾಜ ನಾಗು ಗೌಡ ಅವರ ಲೆಕ್ಕಾಚಾರವಾಗಿದೆ.

‘10ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಈ ಸಲ ಮಳೆ ತಡವಾಗಿದ್ದರಿಂದ ಬೆಳೆ ಕೂಡ ತಡವಾಗಬಹುದು. ಚೌತಿ ಹಬ್ಬದ ಸಂದರ್ಭದಲ್ಲಿ ಬೆಳೆ ಕೈಗೆ ಬಂದರೆ ಸ್ವಲ್ಪ ಹೆಚ್ಚು ಲಾಭವಾಗುತ್ತದೆ’ ಎಂದು ತಿಳಿಸಿದರು.

ಸ್ವಂತ ಗಿಡಗಳಿಂದಲೇ ಬಿತ್ತನೆ ಬೀಜ:ತೋಟಗಾರಿಕೆ ಇಲಾಖೆಯವರು ನೀಡುವ ಬೀಜ, ಗೊಬ್ಬರ, ಔಷಧಿ ಯಾವುದನ್ನೂ ಈ ರೈತರು ಬಳಸುವುದಿಲ್ಲ. ತಮ್ಮಜಮೀನಿನಲ್ಲೇ ಸಿದ್ಧಪಡಿಸಿದ ಬಿತ್ತನೆ ಬೀಜ, ಗೊಬ್ಬರ ಬಳಸುವುದು ಇನ್ನೊಂದು ವಿಶೇಷ.

‘ಸರ್ಕಾರಿಬೀಜ (ಇಲಾಖೆಯಿಂದ ವಿತರಣೆ ಮಾಡಿದವು) ಹುಟ್ಟಿದರೆ ಹುಟ್ಟಿತು, ಇಲ್ಲಾಂದ್ರೆ ಇಲ್ಲ. ಕೊನೆಯಲ್ಲಿ ಬಿಡುವ ತರಕಾರಿ ಹಾಗೇ ಗಿಡದಲ್ಲಿಯೇ ಬಿಟ್ಟು ಅದರಿಂದ ನಾವೇ ಬೀಜ ತಯಾರಿಸುತ್ತೇವೆ. ಸೆಗಣಿ ಗೊಬ್ಬರ ಗುಂಡಿಯನ್ನು ತರಕಾರಿ ಗದ್ದೆಯಲ್ಲೇ ಮಾಡಲಾಗಿದೆ. ಔಷಧಿ ಹೊಡೆಯುವ ಪದ್ಧತಿ ಇಲ್ಲ’ ಎಂದು ರೈತ ನಾಗರಾಜ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.