ADVERTISEMENT

ಮುತ್ತುಗದ ಹೂಗಳು: ದೇವವೃಕ್ಷದಲ್ಲರಳಿವೆ ಕೇಸರಿಪುಷ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 0:19 IST
Last Updated 21 ಜನವರಿ 2024, 0:19 IST
ಮುತ್ತುಗದ ಹೂಗಳು
ಮುತ್ತುಗದ ಹೂಗಳು   

ಹುಬ್ಬಳ್ಳಿ–ಅಂಕೋಲಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಣ್ಮನ ಸೆಳೆದಿದ್ದು ಕೇಸರಿವರ್ಣದ ಹೂದುಂಬಿದ ಮರಗಳ ರಾಶಿ.

‘ಮೇ ಫ್ಲವರ್...ಮೇ ಫ್ಲವರ್’ ಅಂತ ಒಮ್ಮೆಲೆ ಉತ್ಸಾಹದಿಂದ ಮಗಳು ಕೂಗಿಕೊಂಡಳು.

‘ಸಂಕ್ರಾಂತಿಯಷ್ಟೇ ಮುಗಿದ ಈ ಹೊತ್ತಿನಲ್ಲಿ ಎಲ್ಲಿಯ ಮೇ ಫ್ಲವರ್? ಮೇಲ್ನೋಟಕ್ಕೆ ಹಾಗೆ ಕಾಣುವ ಮುತ್ತುಗದ ಹೂಗಳಿವು’ ಎಂದು ಅವಳಿಗೆ ತಿಳಿಸುತ್ತ ಮೆಲ್ಲಗೆ ಹೂಗಳ ಲೋಕದತ್ತ ಹೆಜ್ಜೆಹಾಕಿದೆವು. ಹೆದ್ದಾರಿ ಬದಿಯಲ್ಲಿ ಜುಂಜನಬೈಲ್‌ ಬಳಿ ರಸ್ತೆ ಬದಿ ಇಕ್ಕೆಲಗಳಲ್ಲಿ ಈಗ ಕೇಸರಿಬಣ್ಣದ ಹೂಗಳದ್ದೇ ರಾಶಿ. ಬಯಲು ಸೀಮೆಯ ಉರಿ ಬಿಸಿಲಲ್ಲಿ ಅರಳಿನಿಂತ ಈ ದೇವಮರಗಳ ಹೂಗಳು ಕ್ಯಾನ್ವಾಸ್‌ ಮೇಲೆ ಕೆಂಬಣ್ಣ ಚೆಲ್ಲಿದಂತೆ ಚಿತ್ತಾರ ಮೂಡಿಸುತ್ತಿವೆ.

ADVERTISEMENT

ತಂಗಾಳಿಗೆ ಬಳುಕುತ್ತ ಲಾಸ್ಯವಾಡುವ ಈ ಹೂಗಳ ಸುತ್ತ ಹಾರಾಡುತ್ತ ಮಕರಂದ ಸಂಗ್ರಹಿಸುವ ದುಂಬಿ, ಜೇನ್ನೊಣಗಳ ಝೇಂಕಾರದ ಮರ್ಮರ ಕಿವಿಗಿಂಪು. ಮಕರಂದ ಕುಡಿಯಲು ಬರುವ ಹಕ್ಕಿಗಳ ಕಲರವವೂ ಚೇತೋಹಾರಿ.

ಚಳಿಗಾಲದಲ್ಲಿ ಅರಳುವ ಈ ಕೇಸರಿ ಸುಂದರಿಯ ಹೆಸರು ಮುತ್ತುಗ. ಸಂಸ್ಕೃತದಲ್ಲಿ ಪಾಲಾಶ. ಶಿವರಾತ್ರಿಯಲ್ಲಿ ಈ ಬ್ರಹ್ಮವೃಕ್ಷ, ದೇವಮರಗಳ ಹೂಗಳನ್ನು ಶಿವನಿಗೆ ಅರ್ಪಿಸುತ್ತಾರೆ. ಮುತ್ತುಗದ ಹೂವುಗಳು ಲಕ್ಷ್ಮಿ ದೇವಿಗೆ ಬಹಳ ಪ್ರಿಯ. ಈ ಹೂವಿನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ನವಗ್ರಹಗಳಲ್ಲಿ ಈ ಮರಕ್ಕೆ ಚಂದ್ರನ ಸ್ಥಾನವನ್ನು ನೀಡಲಾಗಿದೆ. ಮುತ್ತುಗದ ಹೂಗಳು ಹೆಚ್ಚು ಹೆಚ್ಚು ಅರಳಿಕೊಂಡಲ್ಲಿ ಆ ವರ್ಷ ಮಳೆ ಹೆಚ್ಚು ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.

ಬೆಂಕಿಯರಳಿದಂತೆ ಕಾಣುವ ಈ ಹೂಗಳಿಂದಾಗಿಯೇ ಇದಕ್ಕೆ ‘ಫ್ಲೇಮ್ ಆಫ್ ಫಾರೆಸ್ಟ್’ ಎಂದು ಆಂಗ್ಲಭಾಷೆಯಲ್ಲಿ ಕರೆದರು. ಇನ್ನೊಂದು ಹೆಸರು ‘ಬುಟಿಯ ಗಮ್ ಟ್ರೀ’(Butea gum tree). ಸಸ್ಯವಿಜ್ಞಾನದ ಹೆಸರು ‘ಬುಟಿಯ ಮೊನೊಸ್ಪೆರ್ಮ’(Butea monosperma). 

ಆಯುರ್ವೇದ, ನಾಟಿ ಔಷಧವಾಗಿಯೂ ಮುತ್ತುಗದ ಗಿಡ, ತೊಗಟೆ, ಹೂ, ಬೀಜಗಳನ್ನು ಬಳಸುತ್ತಾರೆ. ಹೋಮ, ಹವನಾದಿಗಳಿಗೂ ಸಮಿಧವಾಗಿ ಬಳಕೆಯಿದೆ. ಮದುವೆ, ಮುಂಜಿ ಮತ್ತಿತರ ಶುಭ ಸಮಾರಂಭಗಳಲ್ಲಿ ಊಟಕ್ಕೆ ಇದರ ಎಲೆಯ ಬಳಕೆ ಈಗಲೂ ಗ್ರಾಮೀಣ ಭಾಗಗಳಲ್ಲಿ ಇದೆ. ವಿಶೇಷವಾಗಿ ಬಯಲು ಸೀಮೆ, ಮಲೆನಾಡು ಭಾಗಗಳಲ್ಲಿ ಹೊಲದಂಚಿನ ಬದುಗಳ ಮೇಲೆ ಹೆಚ್ಚಾಗಿ ಕಾಣುತ್ತಿದ್ದ ಮುತ್ತುಗದ ಮರಗಳು ಈಗ ಕಡಿಮೆಯಾಗುತ್ತಿವೆ.

ಮರದ ತುಂಬೆಲ್ಲ ಅರಳಿದ್ದ ಹೂಗಳೊಂದಿಗೆ ಒಂದಿಷ್ಟು ಹೊತ್ತು ಕಳೆದು, ಕಣ್ಮನ ತುಂಬಿಕೊಂಡು ಹಗುರಾಗುತ್ತ ನಮ್ಮ ಪಯಣ ಮುಂದುವರಿಯಿತು. 

ಮುತ್ತುಗದ ಹೂಗಳು
ಮುತ್ತುಗದ ಹೂಗಳು
ಭೂರಮೆಯ ತುಂಬ ಮುತ್ತುಗದ ಹೂ
ಮರದ ಕಾಂಡಕ್ಕೂ ಹೂವಿನ ಅಲಂಕಾರ
ಹೆದ್ದಾರಿ ಬದಿಯಲ್ಲಿ ಹೂವರಳಿಸಿ ನಿಂತ ದೇವವೃಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.