ADVERTISEMENT

ಸಮಗ್ರ ಕೃಷಿಯಲ್ಲಿ ಬೆಳೆ ವೈವಿಧ್ಯ

ಕೆ.ಎಸ್.ಸುನಿಲ್
Published 10 ಡಿಸೆಂಬರ್ 2018, 19:30 IST
Last Updated 10 ಡಿಸೆಂಬರ್ 2018, 19:30 IST
ಹೇಮಾ 
ಹೇಮಾ    

ಅದು ಇಪ್ಪತ್ತೇಳು ಎಕರೆ ವಿಶಾಲವಾದ ಜಮೀನು. ಪ್ರವೇಶದ್ವಾರವನ್ನು ಸರಿಸಿ ಒಳ ಪ್ರವೇಶಿಸುತ್ತಿದ್ದಂತೆ ಇಕ್ಕೆಲಗಳಲ್ಲಿ ತೇಗ, ಹೆಬ್ಬೇವು, ಸ್ವಿಲ್ವರ್‌ ಓಕ್‌ ಕೈ ಬೀಸಿ ಸ್ವಾಗತಿಸುತ್ತವೆ. ದೂರದಲ್ಲಿ ನಾಟಿ ಕೋಳಿಗಳು, ಟರ್ಕಿ ಕೋಳಿಗಳು ಕೂಗುವ ಧ್ವನಿ ಕೇಳಿಸುತ್ತವೆ.

ಜಮೀನಿನ ಒಂದು ಕಡೆ ಹಸಿರು ಹಾಸಿನಂತೆ ಕಾಣುವ ಮೇವಿನ ಬೆಳೆ, ಬದಿಯಲ್ಲೇ ಮೇವುಣ್ಣುವ ರಾಸುಗಳು. ಮತ್ತೊಂದು ಬದಿಯಲ್ಲಿ ಬಾಳೆ, ಸಪೋಟ, ಹೆರಳೆಕಾಯಿ, ಕಿತ್ತಳೆಯಂತಹ ಹಣ್ಣಿನ ಗಿಡಗಳು ಕಣ್ಣು ತಂಪಾಗಿಸುತ್ತವೆ. ಬೆಳೆ ನೋಡುತ್ತಾ ನೊಡುತ್ತಾ ಜಮೀನು ಸುತ್ತು ಹಾಕುತ್ತಿದ್ದರೆ, ಕೃಷಿ ವೈವಿಧ್ಯವೇ ಕಣ್ಣೆದುರು ತೆರೆದುಕೊಳ್ಳುತ್ತದೆ. ಇದೇ ಗೌರಿಪುರದ ಹೇಮಾ ಅವರ ಕೃಷಿ ಭೂಮಿ. ಹಾಸನದಿಂದ ದುದ್ದಕ್ಕೆ ಹೋಗುವ ದಾರಿಯಲ್ಲಿ ಹೊಸೂರು ಗೇಟ್‌ ಬಳಿ ಈ ಜಮೀನಿದೆ.

ಜಮೀನಿನಲ್ಲಿ ಅಂದಾಜು ಒಂದು ಸಾವಿರ ತೆಂಗಿನ ಮರಗಳಿವೆ. ಅಷ್ಟೇ ಪ್ರಮಾಣದ ಅಡಿಕೆ ಇದೆ. ಕಿತ್ತಳೆ, ಸಪೋಟ, ಕಾಫಿ, ಬಾಳೆ, ಮಾವು, ನಿಂಬೆ, ಹಲಸು ಇದೆ. ಆಲೂಗಡ್ಡೆ, ಶುಂಠಿ, ಅರಿಸಿನದಂತಹ ಗೆಡ್ಡೆ ಬೆಳೆ ಬೆಳೆಯುತ್ತಾರೆ. ಮುಸುಕಿನ ಜೋಳ, ಭತ್ತ, ರಾಗಿಯಂತಹ ಧಾನ್ಯಗಳನ್ನು ಕೃಷಿ ಮಾಡುತ್ತಾರೆ. ಒಂದು ಕಡೆ ಗುಲಾಬಿ ಬೆಳೆದರೆ, ಮತ್ತೊಂದು ಕಡೆ ಶೇಡ್‌ನೆಟ್‌ನಲ್ಲಿ ತರಕಾರಿ ಬೆಳೆಸಿದ್ದಾರೆ. ಇಂಥ ವೈವಿಧ್ಯಮಯ ಕೃಷಿಗೆ ಪೂರಕವಾಗಿ ಹಸುಗಳನ್ನು ಸಾಕಿದ್ದಾರೆ. ಜತೆಗೆ ಮೇಕೆ, ಕುರಿ, ಟರ್ಕಿ ಕೋಳಿ, ನಾಟಿ ಕೋಳಿಯನ್ನೂ ಸಾಕಿದ್ದಾರೆ. ಒಟ್ಟಾರೆ ಇಡೀ ಜಮೀನು ಒಂದು ರೀತಿಯ ‘ಕೃಷಿ ಸಂಸಾರ’ದಂತಿದೆ. ಹೇಮಾ ಅವರ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಆದಾಯದ ಮೂಲ ಎಂದರೆ ಹೈನುಗಾರಿಕೆ ಮತ್ತು ತರಕಾರಿ ಕೃಷಿ.

ADVERTISEMENT

ತರಹೇವಾರಿ ತರಕಾರಿ

ಜಮೀನಿನಲ್ಲಿ ಅರ್ಧ ಎಕರೆ ಜಾಗದಲ್ಲಿ ಶೇಡ್‌ನೆಟ್‌ ಹಾಕಿ, ಎಲ್ಲಾ ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಾರೆ. ಬೀನ್ಸ್, ಬೆಳ್ಳುಳ್ಳಿ, ಈರುಳ್ಳಿ, ಬದನೆಕಾಯಿ, ಬೀಟ್‌ರೂಟ್‌, ಮೆಣಸು, ಹೀರೆಕಾಯಿ, ಎಲೆಕೋಸು, ಟೊಮೆಟೊ ಪ್ರಮುಖ ತರಕಾರಿಗಳು. ಒಂದು ಸಾಲಿನಲ್ಲಿ ಕೊತ್ತಂಬರಿ, ಮೆಂತ್ಯ, ದಂಟು, ಪಾಲಾಕ್‌ ಸೊಪ್ಪು, ಔಷಧೀಯ ಸಸ್ಯಗಳ ನಾಟಿ ಮಾಡಿದ್ದಾರೆ. ಒಂದು ತರಕಾರಿ ಕೊಯ್ಲಿಗೆ ಬಂದ ನಂತರ ಮತ್ತೊಂದು ತರಕಾರಿ ಫಸಲು ಬಿಡಲಾರಂಭಿಸುತ್ತದೆ.

ಕೊಯ್ಲು ಮಾಡಿದ ತರಕಾರಿಗಳನ್ನು ತೋಟದ ಮುಂಭಾಗದಲ್ಲಿ ಇಟ್ಟು ಮಾರಾಟ ಮಾಡುತ್ತಾರೆ. ಕೆ.ಜಿಗೆ ಇಂತಿಷ್ಟು ಬೆಲೆ ಎಂದು ಬೋರ್ಡ್‌ ನೇತು ಹಾಕುತ್ತಾರೆ. ಈ ತರಕಾರಿ, ಸೊಪ್ಪು ಹಾಗೂ ಹಾಲನ್ನು ಆಯ್ದ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮನೆಯ ಕಾಂಪೌಂಡ್‌ನಲ್ಲಿ ಅರ್ಧ, ಮುಕ್ಕಾಲು, ಕೆ.ಜಿ. ಲೆಕ್ಕದಲ್ಲಿ ತರಕಾರಿ ತೂಕ ಮಾಡಿ ಇಟ್ಟಿರುತ್ತಾರೆ.

ಸಮಗ್ರ ಕೃಷಿಯ ಭಾಗವಾಗಿ 25 ಹಸುಗಳನ್ನು ಸಾಕಿದ್ದಾರೆ. ಪ್ರತಿ ನಿತ್ಯ 70 ಲೀಟರ್‌ ಹಾಲು ಸಿಗುತ್ತದೆ. ಅರ್ಧ, ಒಂದು ಲೀಟರ್‌ ಹಾಲನ್ನು ಬಾಟಲ್‌ನಲ್ಲಿ ತುಂಬಿಸಿ, ತೋಟದ ಗೇಟ್‌ ಬಳಿ ಇಡುತ್ತಾರೆ. ಪಕ್ಕದಲ್ಲಿ ಬಾಕ್ಸ್‌ ಇಟ್ಟಿರುತ್ತಾರೆ. ಗ್ರಾಹಕರು ಬಾಕ್ಸ್‌ನಲ್ಲಿ ಹಣ ಹಾಕಿ, ತರಕಾರಿ, ಹಾಲು ತೆಗೆದುಕೊಂಡು ಹೋಗುತ್ತಾರೆ. ತೋಟದ ಉತ್ಪನ್ನಗಳ ಬಗ್ಗೆ ಮಾಹಿತಿಗೆ ಹಂಚಿಕೊಳ್ಳಲು ಗ್ರಾಹಕರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ. ‘ಹಾಲು, ತರಕಾರಿಯಿಂದ ತಿಂಗಳಿಗೆ ₹1.50 ಲಕ್ಷ ಆದಾಯವಿದೆ. ಮೇಳಗಳು, ವಿಶೇಷ ಕಾರ್ಯಕ್ರಮಗಳಲ್ಲಿ ನಾನೇ ಮಳಿಗೆ ಹಾಕಿಕೊಂಡು ತರಕಾರಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಹೇಮಾ.

ಹಸುಗಳ ಜತೆಗೆ, 20 ನಾಟಿ ಕುರಿಗಳು, ಐದು ಮೇಕೆಗಳು, 200 ನಾಟಿ ಕೋಳಿಗಳಿವೆ. ಜಾನುವಾರುಗಳ ಸಗಣಿ, ಕೃಷಿ ತ್ಯಾಜ್ಯದಿಂದ ಕಾಂಪೋಸ್ಟ್‌ ಮಾಡುತ್ತಾರೆ. ಎರೆಗೊಬ್ಬರ ತಯಾರಿಸುತ್ತಾರೆ. ಸಗಣಿಯನ್ನು ಗೋಬರ್‌ಗ್ಯಾಸ್‌ಗೆ ಬಳಸುತ್ತಾರೆ.

ನೀರಾಸರೆಗಾಗಿ ಕೊಳವೆಬಾವಿ ಕೊರೆಸಿದ್ದಾರೆ. ಜತೆಗೆ ತೋಟದಲ್ಲಿ ಜೈವಿಕ ಬದುಗಳು, ಸಮಪಾತಳಿ ಬದುಗಳನ್ನು ಹಾಕಿಸಿದ್ದಾರೆ. ಇವು ಜಮೀನಿನ ಮೇಲೆ ಸುರಿಯುವ ಮಳೆ ನೀರನ್ನು ಹೊರ ಹರಿಯದಂತೆ ತಡೆಯುತ್ತವೆ. ಹೆಚ್ಚುವರಿ ಮಳೆ ನೀರನ್ನು ಸಂಗ್ರಹಿಸಲು ಕೃಷಿ ಹೊಂಡ ನಿರ್ಮಿಸಿದ್ದಾರೆ. ಹನಿ ನೀರಾವರಿ ಮೂಲಕ ಬೆಳೆಗಳಿಗೆ ನೀರು ಪೂರೈಸುತ್ತಾರೆ.

ಕೈಹಿಡಿದ ಗುಲಾಬಿ ಕೃಷಿ

ಹೇಮಾ ಅವರ ಹುಟ್ಟೂರು ಊಟಿ. ಓದಿದ್ದು ಪಿಯುಸಿ. ವೈದ್ಯೆಯಾಗುವ ಕನಸು ಕಂಡಿದ್ದರು. 1980ರ ದಶಕದಲ್ಲಿ ಹಾಸನದ ಎಂಜಿನಿಯರ್‌ರೊಂದಿಗೆ ವಿವಾಹವಾದರು. ವಿವಾಹದ ನಂತರ ತಂದೆ ಕೃಷಿ ಭೂಮಿ ಕೊಡಿಸಿದರು. ‘ಭೂಮಿಯೇ ಪಾಠ ಕಲಿಸುತ್ತದೆ. ಗುದ್ದಲಿ ಹಿಡಿದು ಬಂದವರಿಗೆ ಕೆಲಸ ಕೊಡು. ಖರ್ಚು, ವೆಚ್ಚವನ್ನು ನೀನೆ ಭರಿಸು’ ಎಂದು ಕಿವಿ ಮಾತು ಹೇಳಿದ್ದರಂತೆ. ಹೀಗಾಗಿ ಸ್ಟೆಥಸ್ಕೋಪ್ ಹಿಡಿಯಬೇಕಿದ್ದ ಹೇಮಾ ನೇಗಿಲು ಹಿಡಿದರು. ಆರಂಭದಲ್ಲಿ ‘ಇಲ್ಲೇನು ಬೆಳೆಯುತ್ತದೆ’ ಎಂದು ಹೇಳಿದವರೆ ಹೆಚ್ಚು. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ, ಪರಿಸರಪ್ರಿಯ ಕೃಷಿ ವಿಧಾನಗಳನ್ನು ಅನುಸರಿಸುತ್ತಾ ಗುಲಾಬಿ ತೋಟವಾಗಿ ಪರಿವರ್ತಿಸಿದರು. ರಾಗಿ, ಆಲೂಗೆಡ್ಡೆ ಜತೆಗೆ ಗುಲಾಬಿ ಬೆಳೆದರು. ಗುಲಾಬಿ ಕೃಷಿ ಕೈ ಹಿಡಿಯಿತು. ‘ಗುಲಾಬಿಯಿಂದ ದಿನಕ್ಕೆ ₹10 ಸಾವಿರ ಬರುತ್ತಿತ್ತು. ಈ ಕೃಷಿ ಆದಾಯದಲ್ಲೇ ಮನೆ ಕಟ್ಟಿಸಿದೆ. ಅದಕ್ಕೆ ‘ರೆಡ್‌ ರೋಸ್‌’ ಎಂದು ಹೆಸರಿಟ್ಟಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾರೆ ಹೇಮಾ.

‘ನಾನು ಒಂದೇ ಬೆಳೆ ನಂಬಿ ಕೃಷಿ ಮಾಡುವುದಿಲ್ಲ. ನನ್ನ ಜಮೀನಿನಲ್ಲಿ ಹತ್ತು ಹಲವು ಬೆಳೆಯಿದೆ. ಒಂದು ಕೈ ಕೊಟ್ಟರೂ ಇನ್ನುಳಿದವು ಕೈ ಹಿಡಿಯುತ್ತವೆ. ಎಲ್ಲದಕ್ಕಿಂತ ಬೆಳೆದ ಬೆಳೆಗೆ ಮಾರುಕಟ್ಟೆ ಕಂಡಕೊಂಡಿದ್ದೇನೆ’ ಎಂದು ಹೇಳುವಾಗ ಅವರ ಮೊಗದಲ್ಲಿ ಸಮಗ್ರ ಕೃಷಿ ಪದ್ಧತಿಯ ಯಶಸ್ಸಿನ ಗೆಲುವಿತ್ತು.

ಹೇಮಾ ಅವರ ಕೃಷಿ ಕ್ಷೇತ್ರದ ಸಾಧನೆ ಗುರುತಿಸಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ, ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯಿಂದ ಇನ್ನೋವೇಟಿವ್ ಫಾರ್ಮರ್‌ ಪ್ರಶಸ್ತಿ, ಶ್ರೇಷ್ಠ ತೋಟಗಾರಿಕೆ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಿಕೆವಿಕೆಯಿಂದ ಡಾ.ಎಂ.ಎಚ್‌.ಮರಿಗೌಡ ದತ್ತಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಪ್ರಸಕ್ತ ಸಾಲಿನ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯೂ ಇವರ ಮುಡಿಗೇರಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತ ಮಾಹಿತಿಗಾಗಿ ಹೇಮಾ ಅನಂತ್‌ ಅವರನ್ನು ಸಂಪರ್ಕಿಸುವ ಸಂಖ್ಯೆ 9482444406.

ಚಿತ್ರಗಳು: ಅತಿಖ್‌ ಉರ್‌ ರೆಹಮಾನ್‌

ವರ್ಜಿನ್‌ ಕೋಕೋನಟ್‌ ಆಯಿಲ್‌

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಹೇಮಾ ಅವರಿಗೆ ವಿಶೇಷ ಆಸಕ್ತಿ. ಇತ್ತೀಚೆಗೆ ಅವರು ವಿದೇಶಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಕಂಡ ತೆಂಗಿನ ಕಾಯಿಯಿಂದ ‘ವರ್ಜಿನ್‌ ಕೋಕೋನಟ್‌ ಆಯಿಲ್‌ ತಯಾರಿಕೆ ಗಮನಸೆಳೆಯಿತು. ತೋಟದಲ್ಲಿ ಹೇರಳವಾಗಿ ತೆಂಗು ಸಿಗುವುದರಿಂದ ತಾವೇ ಆಯಿಲ್ ತಯಾರಿಸಲು ನಿರ್ಧರಿಸಿದರು. ಈ ಬಗ್ಗೆ ಒಂದಷ್ಟು ಅಧ್ಯಯನ ನಡೆಸಿ, ತೋಟದ ಮನೆಯಲ್ಲೇ ಆಯಿಲ್‌ ಘಟಕ ಸ್ಥಾಪಿಸಿದರು.

ಉತ್ತಮ ಗಾತ್ರದ 15 ರಿಂದ 16 ತೆಂಗಿನ ಕಾಯಿಯಿಂದ 1 ಕೆ.ಜಿ. ‘ವರ್ಜಿನ್‌ ಕೋಕೋನಟ್‌ ಆಯಿಲ್’ ಸಿಗುತ್ತದೆ. ಒಂದು ಕೆ.ಜಿ. ಎಣ್ಣೆಯ ದರ ₹500. ಮೈಗೆ ಹಚ್ಚಿಕೊಳ್ಳುವ ಈ ಎಣ್ಣೆಗೆ ಶುಂಠಿ, ರೋಸ್‌, ವೆನಿಲ್ಲಾ, ಲೇಮನ್‌ ಫ್ಲೇವರ್ ಸೇರಿಸುತ್ತಾರೆ. ಪ್ರತಿ ದಿನ 20 ಲೀಟರ್‌ ಎಣ್ಣೆ ಮಾರಾಟ ಮಾಡುತ್ತಾರೆ. ‘ವರ್ಜಿನ್ ಕೋಕೊನಟ್ ಆಯಿಲ್’ ಕೊಬ್ಬರಿ ಎಣ್ಣೆಗಿಂತ ರುಚಿ. ಆರೋಗ್ಯಕ್ಕೆ ಪೂರಕವಾದದ್ದು. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರಿನಲ್ಲಿ ಗ್ರಾಹಕರಿದ್ದಾರೆ’ ಎನ್ನುತ್ತಾರೆ ಹೇಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.