ADVERTISEMENT

Technology: ಸಖಿಯರ ಕನಸಿಗೆ ರೆಕ್ಕೆ ಕಟ್ಟಿದ ಡ್ರೋನ್‌

ಪ್ರಮೋದ ಕುಲಕರ್ಣಿ
Published 26 ಏಪ್ರಿಲ್ 2025, 23:30 IST
Last Updated 26 ಏಪ್ರಿಲ್ 2025, 23:30 IST
ಡ್ರೋನ್‌ ಹಾರಿಸಲು ಸಿದ್ಧತೆ ಮಾಡಿಕೊಂಡ ಮಹಾದೇವಿ
ಡ್ರೋನ್‌ ಹಾರಿಸಲು ಸಿದ್ಧತೆ ಮಾಡಿಕೊಂಡ ಮಹಾದೇವಿ   
ಹಬ್ಬ, ಜಾತ್ರೆ, ಸಮಾರಂಭಗಳಲ್ಲಿ ಡ್ರೋನ್‌ ಹಾರಾಟವನ್ನು ಬೆರಗಿನಿಂದ ನೋಡುತ್ತಿದ್ದ ಮಹಿಳೆಯರೇ ಈಗ ಅವುಗಳನ್ನು ಹಾರಿಸುತ್ತಾ, ಹೊಲಗದ್ದೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಾ ಬದುಕಿಗೆ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೊಲದ ಬದುವಿನಲ್ಲಿ ನಿಂತು ಮಹಾದೇವಿ ಚಂದ್ರಶೇಖರ್‌ ಕಣ್ಣೆದುರು ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್‌ ಅನ್ನು ನಿಯಂತ್ರಿಸುತ್ತಿದ್ದರೆ, ಸುತ್ತಲಿನ ಜನರಲ್ಲಿ ಅದೇನೋ ಕುತೂಹಲ. ಹೊಲದ ದಾರಿಗುಂಟ ಹೋಗುವವರು, ಚಕ್ಕಡಿಬಂಡಿಯಲ್ಲಿ ಸಾಗುವವರು ಕೆಲ ಹೊತ್ತು ನಿಂತು ಡ್ರೋನ್‌ ಹಾರಾಟದ ಕ್ಷಣಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಮಹಾದೇವಿಗೆ ಕೃಷಿ ಕಾಯಕ ಹೊಸದೇನಲ್ಲ. ಆದರೆ ಮೊದಲ ಬಾರಿಗೆ ಅವರಿಂದ ನಿಯಂತ್ರಿಸಲ್ಪಡುತ್ತಿದ್ದ ಡ್ರೋನ್‌ ಸದ್ದು ಅವರಲ್ಲಿ ಕೌತುಕ ಮೂಡಿಸುತ್ತಿದೆ.

ಕಣ್ಣು ಹಾಯಿಸಿದಷ್ಟೂ ದೂರ ಭತ್ತದ ಸಸಿಗಳೇ ಕಾಣುವ ಗಂಗಾವತಿ ಹಾಗೂ ಸುತ್ತಮುತ್ತಲಿನ ಹಸಿರು ಪರಿಸರದಲ್ಲಿ ಈಗ ಡ್ರೋನ್‌ಗ‌ಳು ಸದ್ದು ಮಾಡುತ್ತಿವೆ. ಗಂಗಾವತಿಯ ಚಿಕ್ಕಜಂತಕಲ್‌ನ ಮಹಾದೇವಿ ಅವರು ಪುಟ್ಟ ರೈಸ್‌ಮಿಲ್‌ ಹೊಂದಿದ್ದಾರೆ. ಸಾವಯವ ಕೃಷಿ ಬಿತ್ತನೆ ಬೀಜಗಳ ಬ್ಯಾಂಕ್‌ ಮಾಡಿದ್ದಾರೆ. ಭತ್ತ ಕೃಷಿಯಲ್ಲಿ ಪರಿಣತಿ ಹೊಂದಿದ್ದು ಭತ್ತದ 80 ತಳಿಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಹತ್ತು ತಳಿಗಳನ್ನು ತಾವೇ ಬೆಳೆದಿದ್ದಾರೆ.

ಕೃಷಿಯಲ್ಲಿನ ತಂತ್ರಜ್ಞಾನ ಬಳಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾದೇವಿ, ಕೇಂದ್ರ ಸರ್ಕಾರದ ‘ನಮೋ ಡ್ರೋನ್‌ ದೀದಿ’ ಯೋಜನೆಯ ಸೌಲಭ್ಯ ಪಡೆದು ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಡ್ರೋನ್‌ ಮೂಲಕ ಬೆಳೆಗಳಿಗೆ ದ್ರವರೂಪದ ರಾಸಾಯನಿಕ ಸಿಂಪಡಣೆ ಮಾಡುವ ಕೌಶಲ ಕಲಿತಿದ್ದಾರೆ. ಎಸ್ಸೆಸ್ಸೆಲ್ಸಿ ಓದಿರುವ ಮಹಾದೇವಿ ಮೊದಲು ಭತ್ತದ ಬೀಜ ಬ್ಯಾಂಕ್‌, ಮನೆ ಹಾಗೂ ಹೊಲದ ಕೆಲಸಕ್ಕೆ ಮಾತ್ರ ತಮ್ಮ ಬದುಕು ಸೀಮಿತಗೊಳಿಸಿಕೊಂಡಿದ್ದರು. ಈಗ ಸ್ವಾವಲಂಬಿ ಬದುಕಿಗೆ ಹೊಸ ಹಾದಿ ಸಿಕ್ಕಿದೆ.

ADVERTISEMENT

ವರ್ಷಗಳು ಉರುಳಿದಂತೆ ಕೃಷಿ ಕಾಯಕ ಮಾಡುವ ಕಾರ್ಮಿಕರ ಕೊರತೆ ವ್ಯಾಪಕವಾಗತೊಡಗಿತು. ಅದರಲ್ಲಿಯೂ ಅಪಾಯ ಹೆಚ್ಚು ಎನ್ನುವ ಕಾರಣಕ್ಕೆ ಭತ್ತಕ್ಕೆ ರಾಸಾಯನಿಕ ಸಿಂಪಡಣೆ ಮಾಡುವ ಕೆಲಸಕ್ಕೆ ಕಾರ್ಮಿಕರಿಗಾಗಿ ಸಾಕಷ್ಟು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಈ ಎಲ್ಲ ಸಮಸ್ಯೆ ಅರಿತ ಮಹಾದೇವಿ ಡ್ರೋನ್‌ ಹಾರಿಸುವ ತರಬೇತಿ ಪಡೆದರು.

‘ಡ್ರೋನ್ ದೀದಿ’ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಂಡ ಮಹಾದೇವಿ ಈಗ ಸ್ವಾಭಿಮಾನದ ಬದುಕು ಹಾಗೂ ಆರ್ಥಿಕ ಸ್ವಾವಲಂಬನೆ ಗಳಿಸಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಸುಲಭವಾಗಿ ಡ್ರೋನ್ ಬಳಕೆ ಕುರಿತು ಬೇರೆಯವರಿಗೂ ಅರಿವು ಮೂಡಿಸುತ್ತಿದ್ದಾರೆ. ರಾಸಾಯನಿಕ ಸಿಂಪಡಣೆ ಮಾಡಿದರೆ ಪ್ರತಿ ಎಕರೆಗೆ ₹350ರಿಂದ ₹400 ಸಿಗುತ್ತಿದೆ.

ಡ್ರೋನ್‌ ಹಾರಿಸಿದ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದ ತುಳಸಿ ನೆಕ್ಕಂಟಿ

ಹನ್ನೆರಡು ಸಖಿಯರ ಹಂಬಲ

ಗಂಗಾವತಿ ತಾಲ್ಲೂಕಿನ ಮುಷ್ಟೂರು ಗ್ರಾಮದ ಶಾಂತಾ ಅವರದೂ ಇದೇ ರೀತಿಯ ಸ್ವಾವಲಂಬಿ ಬದುಕಿನ ಕಥನವಿದೆ. ಓದಿದ್ದು ಪಿಯುಸಿ. ಕೃಷಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಎರಡು ಎಕರೆ ಹೊಲ ನಿರ್ವಹಣೆ ಮಾಡುತ್ತಾರೆ. ಕಾಲೇಜು ಶಿಕ್ಷಣ ಬಿಟ್ಟು ಎರಡು ದಶಕಗಳೇ ಕಳೆದಿರುವ ಶಾಂತಾ ಅವರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಕಲಿತುಕೊಳ್ಳುವ ತುಡಿತವಿದೆ.

ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಸಖಿಯಾಗಿ ಕೆಲಸ ಮಾಡುವ ಜೊತೆಗೆ ಡ್ರೋನ್‌ ನಿರ್ವಹಣೆಯ ತಂತ್ರಜ್ಞಾನದ ತರಬೇತಿ ಪಡೆದಿದ್ದಾರೆ. ಗಂಗಾವತಿ ಸಮೀಪದ ಮರಳಿ ಗ್ರಾಮದ ನಾಗರತ್ನ ಎ., ತುಳಸಿ ನೆಕ್ಕಂಟಿ, ಕುಕನೂರು ತಾಲ್ಲೂಕಿನ ಮಹಿಳೆಯರು ಹೀಗೆ ಕೊಪ್ಪಳ ಜಿಲ್ಲೆಯ ಹನ್ನೆರಡು ಸಖಿಯರು ಡ್ರೋನ್‌ ಹಾರಿಸುವ ಕೌಶಲಗಳ ತರಬೇತಿ ಪಡೆದಿದ್ದಾರೆ. ಅವರಿಗೆ ಪರವಾನಗಿಯೂ ಲಭಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಗಷ್ಟೇ ಸೀಮಿತ ಎನ್ನುವ ಸ್ಥಿತಿಯಲ್ಲಿದ್ದ ಈ ಮಹಿಳೆಯರು ಈಗ ಬೇರೆಯವರಿಗೂ ಡ್ರೋನ್‌ ನಿರ್ವಹಣೆ ಪಾಠ ಹೇಳಿಕೊಡುತ್ತಿದ್ದಾರೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಗಂಗಾವತಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳು ನೀರಾವರಿ ಪ್ರದೇಶವಾದ ಕಾರಣ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಹೆಚ್ಚು ಕೀಟನಾಶಕ ಮತ್ತು ರಸಗೊಬ್ಬರ ಬಳಕೆಯಿಂದ ವಾತಾವರಣದಲ್ಲಿನ ಗಾಳಿ ಮತ್ತು ನೀರು ಕಲುಷಿತಗೊಂಡು ಮಣ್ಣಿನ ಫಲವತ್ತತೆಯೂ ಕಡಿಮೆಯಾಗಿ ಭೂಮಿ ಸವಕಳಾಗುತ್ತಿದೆ. ಈ ಸಮಸ್ಯೆಗೂ ಡ್ರೋನ್‌ ಮೂಲಕ ರಾಸಾಯನಿಕ ಸಿಂಪಡಣೆ ಪರಿಹಾರ ಒದಗಿಸುತ್ತಿದೆ ಎನ್ನುತ್ತಾರೆ ಡ್ರೋನ್‌ ಸಖಿಯರು.

ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆಯಿಂದ ಔಷಧೀಯ ಚಿಕ್ಕ ಕಣಗಳು ನೇರವಾಗಿ ಎಲೆಗಳ ಮೇಲಷ್ಟೇ ಬೀಳುತ್ತವೆ. ಸಸಿಗಳ ಸಂಪೂರ್ಣ ಭಾಗಗಳಿಗೆ ಮೇಲಿನಿಂದ ರಾಸಾಯನಿಕ ಬೀಳುವುದರಿಂದ ಫಸಲೂ ಚೆನ್ನಾಗಿ ಬರುತ್ತದೆ. ಔಷಧ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದರಿಂದ ಕೀಟಗಳ ನಿರ್ವಹಣೆಗೆ ಅನುಕೂಲವಾಗುತ್ತದೆ. ಡ್ರೋನ್‌ ಬಳಕೆ ಮಾಡದೇ ಕೈ ಪಂಪ್‌ನಿಂದ ಸಿಂಪಡಣೆ ಮಾಡಲಾಗುತ್ತಿದ್ದ ರಾಸಾಯನಿಕ ಬೆಳೆಗಳ ಜೊತೆಗೆ ಭೂಮಿಗೂ ಬೀಳುತ್ತಿದ್ದರಿಂದ ಭೂಮಿಯ ಫಲವತ್ತತೆ ಸಾಕಷ್ಟು ಹಾಳಾಗುತ್ತಿತ್ತು. ಈ ಸಮಸ್ಯೆಗೆ ಡ್ರೋನ್‌ ಮೂಲಕ ರಾಸಾಯನಿಕ ಸಿಂಪಡಣೆ ಪರಿಹಾರವಾಗುತ್ತಿದೆ.

ಸಮಯ ಉಳಿತಾಯ

ಬೆಳೆಗಳಿಗೆ ರಾಸಾಯನಿಕ ಸಿಂಪಡಣೆಗೆ ಕಾರ್ಮಿಕರ ಕೊರತೆ ಒಂದೆಡೆಯಾದರೆ, ಒಂದು ಎಕರೆ ಹೊಲಕ್ಕೆ ಔಷಧ ಸಿಂಪಡಣೆ ಮಾಡಲು ಕನಿಷ್ಠ ನಾಲ್ಕೈದು ತಾಸು ಬೇಕಾಗುತ್ತಿತ್ತು. ಆದರೆ ಡ್ರೋನ್‌ ನೆರವಿನಿಂದ ಗರಿಷ್ಠ ಹತ್ತು ನಿಮಿಷಗಳಲ್ಲಿ ಈ ಕೆಲಸ ಮುಗಿಯುತ್ತದೆ. ವರ್ಷದಲ್ಲಿ ಎರಡು ಭತ್ತದ ಬೆಳೆ ಬೆಳೆಯುವ ಋತುವಿನಲ್ಲಿ ಈ ಡ್ರೋನ್‌ ಸಖಿಯರಿಗೆ ಕೈ ತುಂಬಾ ಕೆಲಸ.

ಕೊಪ್ಪಳ ಜಿಲ್ಲೆಯ ಡ್ರೋನ್‌ ಸಖಿಯರು ಚೆನ್ನೈ ಮತ್ತು ಹೈದರಾಬಾದ್ ಏರೋನಾಟಿಕ್ಸ್ ಕೇಂದ್ರದಲ್ಲಿ ವರ್ಷದ ಹಿಂದೆ ತರಬೇತಿ ಪಡೆದಿದ್ದು ಈಗ ಪ್ರಾಯೋಗಿಕ ಪರೀಕ್ಷೆ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಇನ್ನೂ ಕೆಲವರು ಮೈಸೂರಿನಲ್ಲಿ ತರಬೇತಿ ಪಡೆದಿದ್ದಾರೆ. ಕೀಟನಾಶಕ ಮತ್ತು ದ್ರವರೂಪದ ರಾಸಾಯನಿಕ ಗೊಬ್ಬರ ಭತ್ತ, ಮೆಕ್ಕೆಜೋಳ, ತೊಗರಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಣೆ ಮಾಡಿ ಪ್ರಯೋಗ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಾಗೂ ಹೊಲದ ಕೆಲಸವೇ ತಮ್ಮ ಬದುಕು ಎಂದುಕೊಂಡಿದ್ದ ಮಹಿಳೆಯರಲ್ಲಿ ಈಗ ಡ್ರೋನ್‌ ಹಾರಿಸುವಾಗ ಬರುವ ಗಾಳಿ ಬದುಕಿಗೂ ತಂಗಾಳಿಯಂತೆ ಭಾಸವಾಗಿದೆ.

‘ಮನೆ ಜವಾಬ್ದಾರಿ ನಿರ್ವಹಣೆಗೆ ಸಹಕಾರಿ’

‘ಜಾತ್ರೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಡ್ರೋನ್‌ ಮೂಲಕ ಚಿತ್ರೀಕರಣ ಮಾಡುವುದನ್ನು ನೋಡಿ ಡ್ರೋನ್‌ ಹಾರಿಸುವುದನ್ನು ಕಲಿಯಬೇಕು ಎನ್ನುವ ಆಸೆ ಮೂಡುತ್ತಿತ್ತು. ಹಿಂದೆ ದೂರದಲ್ಲಿ ಡ್ರೋನ್‌ ಹಾರುತ್ತಿದ್ದರೆ ನನ್ನ ಮನಸ್ಸಿನಲ್ಲಿಯೂ ಇದೇ ಆಸೆ ಚಿಗುರೊಡೆಯುತ್ತಿತ್ತು. ಈ ಕಾರಣದಿಂದಾಗಿ ದೂರದ ಊರುಗಳಿಗೆ ಹೋಗಿ ತರಬೇತಿ ಪಡೆದಿದ್ದೇನೆ. ನನ್ನ ಆಸೆ ಈಗ ಆದಾಯ ಗಳಿಕೆಗೂ ಅನುಕೂಲವಾಗಿದೆ. ಹೆಣ್ಣುಮಕ್ಕಳು ಆರ್ಥಿಕ ಸ್ವಾವಲಂಬಿಗಳಾಗಿ ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲು ಡ್ರೋನ್‌ ನಿರ್ವಹಣೆಯಿಂದ ಬರುವ ಆದಾಯ ಸಹಕಾರಿಯಾಗಿದೆ. ಋತುವಿನಲ್ಲಿ ನಿತ್ಯವೂ ಕೆಲಸವಿರುತ್ತದೆ’ ಎನ್ನುತ್ತಾರೆ ಮಹಾದೇವಿ.  

ಡ್ರೋಣ್‌ ಹಾರಿಸಿದ ನಾಗರತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.