ADVERTISEMENT

ಔಷಧಿ ಸಿಂಪಡಣೆಗೆ ರೈತಸ್ನೇಹಿ ಡ್ರೋನ್

ಕೃಷಿಕರ ಅನುಕೂಲಕ್ಕೆ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಸೇವೆ

ಮಹಮ್ಮದ್ ಶರೀಫ್ ಕಾಡುಮಠ
Published 21 ಸೆಪ್ಟೆಂಬರ್ 2022, 5:41 IST
Last Updated 21 ಸೆಪ್ಟೆಂಬರ್ 2022, 5:41 IST
ಡ್ರೋನ್‌ ವೀಕ್ಷಿಸಲು ಮಳಿಗೆಯ ಮುಂದೆ ಸೇರಿದ ಕುತೂಹಲಿಗರು
ಡ್ರೋನ್‌ ವೀಕ್ಷಿಸಲು ಮಳಿಗೆಯ ಮುಂದೆ ಸೇರಿದ ಕುತೂಹಲಿಗರು   

ಧಾರವಾಡ: ಕ್ಯಾಮೆರಾ ಹೊತ್ತುಕೊಂಡು ಆಕಾಶದಲ್ಲಿ ಹಾರುತ್ತ ವಿಡಿಯೊ ಚಿತ್ರೀಕರಿಸುವ ಡ್ರೋನ್, ಔಷಧಿ ಹೊತ್ತುಕೊಂಡು ಹೊಲದ ಮೇಲೆ ಹಾರಲು ಹೊರಟಿರುವುದು ಹೊಸತಲ್ಲ. ₹7 ಲಕ್ಷ ಬೆಲೆಯ ಡ್ರೋನ್ ಯಂತ್ರ ಕೊಳ್ಳುವ ಸಾಮರ್ಥ್ಯ ಇಲ್ಲದ ರೈತರಿಗೆ ಬೆಂಗಳೂರಿನ ‘ಎಂ-ಡ್ರೋನ್’ ಹೆಸರಿನ ಸಂಸ್ಥೆಯೊಂದು ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಕಡಿಮೆ ವೆಚ್ಚದಲ್ಲಿ ಡ್ರೋನ್ ಸೇವೆ ಒದಗಿಸಲು ಮುಂದಾಗಿದೆ.

ಧಾರವಾಡದ ಕೃಷಿ ಮೇಳದ ಮಳಿಗೆಯೊಂದರಲ್ಲಿ ಎಲ್ಇಡಿ ಬೆಳಕು ಚೆಲ್ಲುತ್ತ ನಿಂತಿದ್ದ ಡ್ರೋನ್ ಯಂತ್ರ ಯುವ ರೈತರನ್ನು ಆಕರ್ಷಿಸಿತು.

ರಿಮೋಟ್‌ ನಿಯಂತ್ರಣದಲ್ಲಿ ಒಂದು ಸಲಕ್ಕೆ 15 ನಿಮಿಷ ಹಾರಬಲ್ಲ ಡ್ರೋನ್‌ನ ಟ್ಯಾಂಕ್‌ನಲ್ಲಿ 10 ಲೀಟರ್ ಔಷಧಿ ತುಂಬಿಸಬಹುದು. ಎಂಟು ನಿಮಿಷಗಳಲ್ಲಿ ಎಕರೆಯಷ್ಟು ಪ್ರದೇಶಕ್ಕೆ ಔಷಧಿ ಸಿಂಪಡಿಸಬಹುದು. ಒಂದು ಎಕರೆಗೆ ಬೇಕಾಗುವ ಔಷಧಿಯ ಶೇ 70ರಷ್ಟನ್ನು ತುಂಬಿಸಿಕೊಂಡು ಸಿಂಪಡಿಸಲಾಗುತ್ತದೆ. ಅಂದಾಜು 5 ಕಿ.ಮೀ ದೂರ ಹಾಗೂ 100ಅಡಿ ಎತ್ತರದಲ್ಲಿ ಹಾರುತ್ತದೆ ಎಂದು ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಮನೀಷ್ ಹೇಳುತ್ತಾರೆ.

ADVERTISEMENT

ಔಷಧಿ ಸಿಂಪಡಣೆಗೆ ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರ ಕೊರತೆ ನಿವಾರಿಸಲು ಡ್ರೋನ್ ಸಹಕಾರಿಯಾಗಿದ್ದು, ರೈತರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಸೇವೆ ಒದಗಿಸುತ್ತಿದ್ದೇವೆ ಎನ್ನುತ್ತಾರೆ ಅವರು.

ಎತ್ತರದ ಬೆಳೆಗಳಾದ ಅಡಿಕೆ, ತೆಂಗುಗಳಿಗೆ ರೈತರು ಕೆಳಗೆ ನಿಂತು ಔಷಧಿ ಸಿಂಪಡಣೆ ಮಾಡಲಾಗದು. ಅಂತಹ ಸಂದರ್ಭಗಳಲ್ಲಿ ಡ್ರೋನ್ ಸಹಕಾರಿ. ಬೆಳೆಗಳನ್ನು ಆಧರಿಸಿ ದರವೂ ನಿಗದಿ ಆಗುತ್ತದೆ. ಇತರ ಬೆಳೆಗಳಿಗೂ ರೈತರು ಔಷಧಿ ಸಿಂಪಡಣೆ ಮಾಡಿದರೆ ಬೆಳೆಗಳು ಕಾಲಿನಡಿಗೆ ಸಿಲುಕಿ ಹಾಳಾಗುತ್ತವೆ. ಡ್ರೋನ್ ಮೂಲಕ ಸಿಂಪಡಿಸುವುದರಿಂದ ಈ ಹಾನಿ ತಪ್ಪುತ್ತದೆ. ದ್ರಾಕ್ಷಿ ಹೊರತುಪಡಿಸಿ ಎಲ್ಲ ಬೆಳೆಗಳಿಗೂ ಡ್ರೋನ್‌ನಲ್ಲಿ ಔಷಧಿ ಸಿಂಪಡಿಸಬಹುದು ಎಂದು ಮನೀಷ್‌ ವಿವರಿಸಿದರು.

ಡ್ರೋನ್ ಬಳಕೆಯಿಂದ ಲಾಭದಾಯಕ ಕೃಷಿ ನಡೆಸಲು ಸಾಧ್ಯ. ಕಡಿಮೆ ನೀರಿನ ಬಳಕೆ‌ ಹಾಗೂ ಅಧಿಕ ಔಷಧಿ ಇದರ ವಿಶೇಷತೆ. ದಿನದ ಬಳಕೆಗಾಗಿ ಅರ್ಧ ತಾಸು ಬ್ಯಾಟರಿ ಚಾರ್ಜ್ ಮಾಡಬೇಕು. ದಿನಕ್ಕೆ 40 ಎಕರೆ ಬೆಳೆಗೆ ಔಷಧಿ ಸಿಂಪಡಿಸಬಹುದು. ಅಧಿಕ ಖರ್ಚಾಗುವುದನ್ನು ತಪ್ಪಿಸಲು ಡ್ರೋನ್ ಬಳಸಬಹುದು ಎನ್ನುತ್ತಾರೆ ಅವರು.

ಹುಬ್ಬಳ್ಳಿಯಲ್ಲಿಯೂ ಎಂ-ಡ್ರೋನ್ ಸಂಸ್ಥೆಯ ಶಾಖೆ ಇದೆ. ಮಾಹಿತಿಗೆ: 99455 47601.

ಸದ್ಯ ನಾವು ಮೋಟಾರಿಗೂ, ಔಷಧಿ ಸಿಂಪಡಿಸುವವರಿಗೂ ಹಣ ನೀಡಬೇಕಾಗುತ್ತದೆ. ಡ್ರೋನ್ ಸೇವೆ ರೈತರಿಗೆ ಕೈಗೆಟಕುವ ದರದಲ್ಲಿ ಸಿಗುವುದಾದರೆ ಅನುಕೂಲ

- ಶರಣ ಬಸಪ್ಪ, ರೈತ, ಕುಕನೂರು, ಕೊಪ್ಪಳ ಜಿಲ್ಲೆ.

ಎಕರೆಗೆ ₹600ರಂತೆ ಸಿಂಪಡಣೆ ದರ ನಿಗದಿಗೊಳಿಸಿದ್ದೇವೆ. ಕನಿಷ್ಠ ಹತ್ತು ಎಕರೆ ಇದ್ದಲ್ಲಿ ರಾಜ್ಯದ ಯಾವುದೇ ಜಿಲ್ಲೆಗಾದರೂ ಹೋಗಿ ಸೇವೆ ಒದಗಿಸುತ್ತೇವೆ.

– ಮನೀಷ್‌, ಮಾರುಕಟ್ಟೆ ವ್ಯವಸ್ಥಾಪಕ, ಎಂ–ಡ್ರೋನ್‌ ಸಂಸ್ಥೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.