ADVERTISEMENT

ಬರಲಿದೆ ಚಂದ್ರಿಕೆಯಿಂದ ರೇಷ್ಮೆಗೂಡು ಬಿಡಿಸುವ ಯಂತ್ರ

ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಅನ್ವೇಷಣೆ

ಮನೋಹರ್ ಎಂ.
Published 10 ನವೆಂಬರ್ 2021, 21:30 IST
Last Updated 10 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಚಂದ್ರಿಕೆಯಿಂದ ಗೂಡು ಬಿಡಿಸುವ ಬ್ಯಾಟರಿ ಚಾಲಿತ ಯಂತ್ರವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ (ಜಿಕೆವಿಕೆ) ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್‌ ವಿಭಾಗ ಅಭಿವೃದ್ಧಿಪಡಿಸಿದೆ.

ರೇಷ್ಮೆ ಗೂಡನ್ನು ಚಂದ್ರಿಕೆಯಿಂದ ಬಿಡಿಸಲು ಸಾಕಷ್ಟು ಸಮಯ ಬೇಕಿತ್ತು. ಈ ಯಂತ್ರದಿಂದ ಕೆಲವೇ ನಿಮಿಷಗಳಲ್ಲಿ ಚಂದ್ರಿಕೆಯಲ್ಲಿರುವ ರೇಷ್ಮೆಗೂಡನ್ನು ಸುಲಭವಾಗಿ ಬಿಡಿಸಬಹುದು.

‘ರೇಷ್ಮೆ ಬೆಳೆಗಾರರು ಗೂಡನ್ನು ಬರಿಗೈನಲ್ಲೇ ಬಿಡಿಸುತ್ತಾರೆ.ಚಂದ್ರಿಕೆಯಲ್ಲಿರುವ ಮುಳ್ಳಿನಂತಹ ವಸ್ತುಗಳನ್ನು ಕೈಗೆ ಹಾನಿ ಮಾಡುತ್ತವೆ. ಈ ವೇಳೆ ಹಲವರು ಗಾಯಗೊಳ್ಳುತ್ತಾರೆ. ಗೂಡು ಬಿಡಿಸುವ ಪ್ರಕ್ರಿಯೆಯೂ ವಿಳಂಬವಾಗುತ್ತದೆ. ಈ ಕಾರಣಗಳಿಂದ ಗೂಡು ಬಿಡಿಸಲು ಕಾರ್ಮಿಕರ ಲಭ್ಯತೆಯೂ ಕ್ಷೀಣಿಸುತ್ತಿದೆ. ರೇಷ್ಮೆ ಬೆಳೆಗಾರರ ಈ ಎಲ್ಲ ಸಂಕಷ್ಟಗಳೇ ಈ ಯಂತ್ರವನ್ನು ಅಭಿವೃದ್ಧಿಪಡಿಸಲು ನನಗೆ ಪ್ರೇರಣೆ ನೀಡಿತು’ ಎಂದುಈ ಸಾಧನ ಅಭಿವೃದ್ಧಿಪಡಿಸಿರುವ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ದ್ರೋಣಾಚಾರಿ ಮಾನ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾಲ್ಕು ವರ್ಷಗಳ ಪರಿಶ್ರಮದಿಂದಾಗಿ ಕೊನೆಗೂ ಈ ಯಂತ್ರ ಸಿದ್ಧಗೊಂಡಿದೆ. ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ಇಂತಹ ಯಂತ್ರ ಈವರೆಗೆ ಎಲ್ಲಿಯೂ ಅಭಿವೃದ್ಧಿಗೊಂಡಿಲ್ಲ. ಈ ಯಂತ್ರಕ್ಕೆ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ, ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಲಾರೆ. ಶೀಘ್ರದಲ್ಲೇ ಈ ಯಂತ್ರ ರೇಷ್ಮೆ ಬೆಳೆಗಾರರ ಕೈಸೇರಲಿದೆ’ ಎಂದು ಸಂತಸ ಹಂಚಿಕೊಂಡರು.

‘ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣಕ್ಕೆ ವಿದ್ಯುತ್ ಚಾಲಿತ ಯಂತ್ರದ ಬದಲಿಗೆ, ಬ್ಯಾಟರಿ ಚಾಲಿತ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಚಂದ್ರಿಕೆಯಿಂದ ಗೂಡು ಬಿಡಿಸಲು ಗರಿಷ್ಠ 35 ನಿಮಿಷಗಳಷ್ಟು ಸಮಯ ಬೇಕು. ಆದರೆ, ಈ ಯಂತ್ರದಿಂದ ಕೇವಲ 7 ನಿಮಿಷಗಳಲ್ಲಿ ಗೂಡನ್ನು ಸುಲಭವಾಗಿ ಬಿಡಿಸಬಹುದು. ಇದರಿಂದ ರೇಷ್ಮೆ ಬೆಳೆಗಾರರ ಸಮಯವೂ ಉಳಿಯಲಿದೆ’ ಎಂದು ವಿವರಿಸಿದರು.

‘ಈ ಯಂತ್ರವನ್ನು ಸುಲಭವಾಗಿ ಒಬ್ಬ ವ್ಯಕ್ತಿ ಕೈಯಲ್ಲಿ ಹಿಡಿದು ನಿರ್ವಹಿಸಬಹುದು. ಹಾಗಾಗಿ, ಹೆಚ್ಚು ಭಾರವೂ ಇರುವುದಿಲ್ಲ. ಇದೇ ಸಾಧನದಿಂದ ಚಂದ್ರಿಕೆಗಳನ್ನು ಶುಚಿಗೊಳಿಸಬಹುದು. ಒಂದು ಯಂತ್ರ ಹಲವು ರೀತಿಯಲ್ಲಿ ಕೆಲಸ ಮಾಡುವಂತೆ ಸಿದ್ಧಪಡಿಸಿದ್ದೇನೆ. ಸದ್ಯ ಈ ಯಂತ್ರ ಅಂದಾಜು ₹9 ಸಾವಿರ ದರಕ್ಕೆ ರೇಷ್ಮೆ ಬೆಳೆಗಾರರಿಗೆ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.