ADVERTISEMENT

ಹಲಸು ಕತ್ತರಿಸಲು ‘ನಾದಂ ಕಟ್ಟರ್’

ಗಾಣಧಾಳು ಶ್ರೀಕಂಠ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
ನಾದಂ ಕಟ್ಟರ್
ನಾದಂ ಕಟ್ಟರ್   

ಇತ್ತೀಚೆಗೆ ಪುತ್ತೂರಿನಲ್ಲಿ ಹಲಸಿನ ಮೇಳ ಏರ್ಪಾಡಾಗಿತ್ತು. ಬೃಹತ್‌ ಹಲಸಿನ ಹಣ್ಣನ್ನು ಕೊಯ್ಯುವ ಮೂಲಕ ವಿನೂತನವಾಗಿ ಮೇಳಕ್ಕೆ ಚಾಲನೆ ನೀಡಬೇಕೆಂಬುದು ಆಯೋಜಕರ ಅಪೇಕ್ಷೆ. ಅದರಂತೆ, ಬೃಹತ್ ಹಲಸಿನ ಹಣ್ಣನ್ನು ವೇದಿಕೆಗೆ ತಂದರು. ಜತೆಗೆ, ಮೆಟ್ಟುಗತ್ತಿಯಂತಹ ಸಾಧನವನ್ನು ತಂದರು. ವೇದಿಕೆಯಲ್ಲಿದ್ದ ಗಣ್ಯರು, ಹಲಗೆ ಮೇಲೆ ಹಣ್ಣಿಟ್ಟು, ಉದ್ದನೆಯ ಕತ್ತಿಯಿಂದ ಕತ್ತರಿಸಿದರು. ಹಣ್ಣು ಇಬ್ಬಾಗವಾಯಿತು, ಸಮಾರಂಭ ಉದ್ಘಾಟನೆಯಾಯಿತು !

ಅಂಥ ದಢೂತಿ ಗಾತ್ರದ ಹಲಸನ್ನು ಸುಲಭವಾಗಿ ಕತ್ತರಿಸಿದ್ದು, ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲ ನಾರಾಯಣಭಟ್ ದಂಬೆಮೂಲೆ ತಯಾರಿಸಿದ ಹಲಸು ಕತ್ತರಿಸುವ ಸಾಧನದಿಂದ. ಆ ಸಾಧನ ಅಂದಿನ ಹಲಸಿನ ಮೇಳದ ಉಪಕರಣಗಳ ಪ್ರಮುಖ ಆಕರ್ಷಣೆ. ಮೊದಲು ಮನೆಯ ಬಳಕೆಗಾಗಿ ಸಿದ್ಧಪಡಿಸಿದ್ದ ಈ ಉಪಕರಣಕ್ಕೆ ಬೇಡಿಕೆ ಹೆಚ್ಚಾಯಿತು. ನಂತರ ನಾಡಿನ ಅನೇಕ ಬೆಳೆಗಾರರ ಮನೆ ಸೇರಿತು. ಭಟ್ಟರು ಏಳೆಂಟು ವರ್ಷಗಳಲ್ಲಿ ಸುಮಾರು 400 ಸಾಧನಗಳನ್ನು ರೈತರಿಗೆ ತಲುಪಿಸಿದ್ದಾರೆ. ಇದನ್ನು ಬಳಸಿರುವ ಕರ್ನಾಟಕ ಮತ್ತು ಕೇರಳದ ಹಲಸು ಬೆಳೆಗಾರರು, ‘ಇದೊಂದು ಉತ್ತಮ ಹಾಗೂ ಸುಲಭ ಸಾಧನ’ ಎಂದು ಅಂಗೀಕರಿಸಿದ್ದಾರೆ. ‘ನಾದಂ ಕಟ್ಟರ್’ – ಈ ಉಪಕರಣಕ್ಕೆ ಭಟ್ಟರು ಇಟ್ಟಿರುವ ಹೆಸರು.

ಉಪಕರಣ ಹೀಗಿದೆ: ಮೂವತ್ತು ಇಂಚು ಉದ್ದ, 10 ಇಂಚು ಅಗಲದ ಮರದ ಹಲಗೆ. ಎರಡು ಅಡಿ ಉದ್ದ, ಒಂದೂಕಾಲು ಅಡಿ ಅಗಲ, ಕಾಲು ಇಂಚು ದಪ್ಪದ ಕತ್ತಿ. ಹಲಗೆಯ ತುದಿಗೆ ನಟ್ಟು, ಬೋಲ್ಟ್‌ ಹಾಕಿ ಕತ್ತಿ ಜೋಡಿಸಿದ್ದಾರೆ. ಕತ್ತಿಗೆ ಹಿಡಿ (ಹ್ಯಾಂಡಲ್) ಅಳವಡಿಸಿದ್ದಾರೆ. ಎಷ್ಟೇ ದಪ್ಪದ ಹಲಸಿದ್ದರೂ, ಕ್ಷಣಾರ್ಧದಲ್ಲಿ ತುಂಡು ತುಂಡು ಮಾಡಿಬಿಡಬಹುದು. ಆದರೆ, ಇದರಿಂದ ಸೊಳೆ ಬಿಡಿಸಲು ಸಾಧ್ಯವಿಲ್ಲ, ಅಷ್ಟೇ.

ADVERTISEMENT

‘ಈ ಉಪಕರಣವನ್ನು ಯಾರು ಬೇಕಾದರೂ ಸುಲಭವಾಗಿ ತಯಾರಿಸಿಕೊಳ್ಳಬಹುದು. ಎಂಟು ವರ್ಷಗಳ ಹಿಂದೆ, ಹಲಸು ಕೊಯ್ಯಲು ಕಾರ್ಮಿಕರ ಸಮಸ್ಯೆ ಎದುರಾದಾಗ, ಅನಿವಾರ್ಯವಾಗಿ ನಾನೇ ಈ ಸಾಧನ ತಯಾರಿಸಿಕೊಂಡೆ’ ಎನ್ನುತ್ತಾ ಉಪಕರಣ ಸಿದ್ಧಗೊಂಡ ಬಗೆಯನ್ನು ಭಟ್ಟರು ವಿವರಿಸುತ್ತಾರೆ. ಈ ಸಾಧನವನ್ನು ಬಳಸುತ್ತಾ, ಹಲವು ಮೇಳಗಳಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಆ ವೇಳೆ ಕೆಲವರು ಇದನ್ನು ಪರಿಷ್ಕೃರಿಸಲು ಸಲಹೆ ನೀಡಿದ್ದಾರೆ. ಹೀಗಾಗಿ ರೈತರ ಬಳಕೆಗೆ ತಕ್ಕಂತೆ ಹಂತ ಹಂತವಾಗಿ ಸಾಧನವನ್ನು ಭಟ್ಟರು ಪರಿಷ್ಕರಿಸಿದ್ದಾರೆ. ಸದ್ಯ ಉಪಕರಣದಲ್ಲಿ ಕತ್ತಿ ತಯಾರಿಕೆಗೆ ವಾಹನಗಳ ಸ್ಪ್ರಿಂಗ್ ಪ್ಲೇಟ್ ಬಳಸಲಾಗುತ್ತಿದೆ. ವಾಣಿಜ್ಯ ಉದ್ದೇಶದಿಂದ ಹಲಸು ಕತ್ತರಿಸಲು ಬಳಸುವಂತಹವರು ಸ್ಟೇನ್‌ಲೆಸ್ ಸ್ಟೀಲ್ ಕತ್ತಿ ಬಳಸುವುದು ಉತ್ತಮ ಎನ್ನುವುದು ಹಲಸಿನ ಬಗ್ಗೆ ಅಧ್ಯಯನ ನಡೆಸಿರುವ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಸಲಹೆಯಾಗಿದೆ.

ಅಂದ ಹಾಗೆ, ಈ ಕತ್ತಿಯಲ್ಲಿ ಹಲಸಷ್ಟೇ ಅಲ್ಲ, ಸುವರ್ಣ ಗೆಡ್ಡೆ, ಕುಂಬಳಕಾಯಿ, ಚೀನಿಕಾಯಿಯಂತಹ ದೊಡ್ಡ ದೊಡ್ಡ ತರಕಾರಿ, ಹಣ್ಣುಗಳನ್ನು ಸ್ಲೈಸ್ ಮಾಡಬಹುದು. ಮದುವೆ ಮನೆ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ, ಇಂಥ ತರಕಾರಿಗಳನ್ನು ಹೆಚ್ಚಲು, ಕತ್ತಿ ಸಹಕಾರಿ.


‘ಇದೊಂದು ಬಹುಪಯೋಗಿ ಸಾಧನ’ ಎಂದು ಉಲ್ಲೇಖಿಸುತ್ತಾರೆ ನಾರಾಯಣ ಭಟ್.

ಈ ಸಾಧನವನ್ನು ಯಾವ ವಯಸ್ಸಿನವರು ಬೇಕಾದರೂ ಸುಲಭವಾಗಿ ಬಳಸಬಹುದು. ಇದರ ಬೆಲೆ ₹1100. ‘ನಾನು ಕೃಷಿಕ. ವ್ಯಾಪಾರ ನನ್ನ ಉದ್ದೇಶವಲ್ಲ. ರೈತರಿಗೆ ಅನುಕೂಲವಾಗುವ ಸಾಧನ ದೊರೆತರರೆ ಸಾಕು’ ಎನ್ನುವ ಭಟ್ಟರು, ಈ ಸಾಧನ ತಯಾರಿಸಿಕೊಳ್ಳುವ ಆಸಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ.

ಮಾಹಿತಿಗೆ: 8547505590, \04998225590

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.