ADVERTISEMENT

ಕೃಷಿ ಮೇಳ: ಇಂಧನರಹಿತ ಉಳುಮೆಗೆ ‘ಸುಧಾರಿತ ಬಂಡಿ’

ಜಿಕೆವಿಕೆ ಕೃಷಿ ಮೇಳದಲ್ಲಿ ಎತ್ತಿನ ಬಂಡಿ ಪ್ರದರ್ಶನ

ಮನೋಹರ್ ಎಂ.
Published 13 ನವೆಂಬರ್ 2021, 20:20 IST
Last Updated 13 ನವೆಂಬರ್ 2021, 20:20 IST
ನಗರದ ಜಿಕೆವಿಕೆ ಯಲ್ಲಿ ನಡೆದ ಕೃಷಿಮೇಳದಲ್ಲಿ ಶನಿವಾರ ಎತ್ತಾಧಾರಿತ ಉಳುಮೆಬಂಡಿ ಮೇಲೆ ಮಗು ಕುಳಿತು ಸಂಭ್ರಮಿಸಿದ ಕ್ಷಣ – ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಜಿಕೆವಿಕೆ ಯಲ್ಲಿ ನಡೆದ ಕೃಷಿಮೇಳದಲ್ಲಿ ಶನಿವಾರ ಎತ್ತಾಧಾರಿತ ಉಳುಮೆಬಂಡಿ ಮೇಲೆ ಮಗು ಕುಳಿತು ಸಂಭ್ರಮಿಸಿದ ಕ್ಷಣ – ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಿರುವ ರೈತರಿಗೆ ಇಂಧನದ ಬಳಕೆಯಿಲ್ಲದೆ ಜಮೀನು ಉಳುಮೆ ಮಾಡಲು ಸುಧಾರಿತ ಬಂಡಿ ಸಿದ್ಧಗೊಂಡಿದೆ. ಎತ್ತುಗಳನ್ನು ಬಳಸುವ ಈ ಬಂಡಿಯನ್ನು ತಮಿಳುನಾಡು ಮೂಲದ ಅಗ್ನಿ ಕಾರ್ಟ್‌ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ.

ಈ ಸುಧಾರಿತ ಉಳುಮೆ ಬಂಡಿ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ದಲ್ಲಿ ರೈತರ ಹುಬ್ಬೇರುವಂತೆ ಮಾಡಿದೆ. ‘ಮರಳಿ ನೇಗಿಲಿನ ಕಡೆಗೆ’ ಎಂಬ ಆಶಯದೊಂದಿಗೆ ಅಭಿವೃದ್ಧಿಗೊಂಡಿರುವ ಈ ಉಳುಮೆ ಬಂಡಿಯನ್ನು ಕಂಡ ರೈತರು,‘ಟ್ರ್ಯಾಕ್ಟರ್‌ ಬದಲಿಗೆ ಈ ಬಂಡಿ ಖರೀದಿಸಿದರೆ, ಕಿಸೆಯಲ್ಲಿ ಕಾಸು ಉಳಿಸಬಹುದು’ ಎಂದು ಸಂತಸ ವ್ಯಕ್ತಪಡಿಸಿದರು.

‘ಹಿಂದೆಲ್ಲ ಎತ್ತುಗಳನ್ನು ಕಟ್ಟಿ ನೇಗಿಲಿನಿಂದ ಜಮೀನಿನ ಉಳುಮೆ ನಡೆಯುತ್ತಿತ್ತು. ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ನೇಗಿಲ ಜಾಗಕ್ಕೆ ಟ್ರ್ಯಾಕ್ಟರ್‌ ಬಂತು. ಈಗ ಬಹುತೇಕರು ಜಮೀನು ಉಳುಮೆ ಮಾಡಲು ಟ್ರ್ಯಾಕ್ಟರ್‌ ಅನ್ನೇ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್‌ ದರ ಗಗನಕ್ಕೇರಿರುವುದರಿಂದ ರೈತರಿಗೆ ಉಳುಮೆಯೂ ದುಬಾರಿಯಾಗಿದೆ. ಈ ಸಮಸ್ಯೆಗೆ ಪರ್ಯಾಯವಾಗಿ ಹಾಗೂ ಪರಿಹಾರವಾಗಿ ಈ ಇಂಧನರಹಿತ ಉಳುಮೆ ಬಂಡಿ ಅಭಿವೃದ್ಧಿಪಡಿಸಿದ್ದೇವೆ’ ಎನ್ನುತ್ತಾರೆಅಗ್ನಿ ಕಾರ್ಟ್‌ ಸಂಸ್ಥೆಯ ಸ್ಥಾಪಕ ಎ.ಪಿ.ಸಸಿಕುಮಾರ್.

ADVERTISEMENT

‘ಇದು, ಹಳೆಯ ನೇಗಿಲನ್ನೇ ಹೋಲುತ್ತದೆ. ಆದರೆ, ಮರದ ಬದಲಿಗೆ ಕಬ್ಬಿಣದಲ್ಲಿ ಇದನ್ನು ತಯಾರಿಸಲಾಗಿದೆ. ರೈತರು ಹೆಗಲ ಮೇಲೆ ನೇಗಿಲನ್ನು ಹೊತ್ತು ತೋಟಕ್ಕೆ ಹೋಗುತ್ತಿದ್ದರು. ಇದರಲ್ಲಿ ರೈತರು ಸಂಚರಿಸಲು ಅನುಕೂಲವಾಗುವಂತೆ ಎರಡು ಚಕ್ರಗಳನ್ನು ಅಳವಡಿಸಿದ್ದೇವೆ. ಇದರ ತೂಕವೂ ಕಡಿಮೆ ಇದೆ. ಎತ್ತುಗಳ ಸಹಾಯದಲ್ಲಿ ಒಂದು ಎಕರೆ ಪ್ರದೇಶವನ್ನು 1 ಗಂಟೆ 30 ನಿಮಿಷದಲ್ಲಿ ಉಳುವ ಸಾಮರ್ಥ್ಯವನ್ನು ಈ ಬಂಡಿ ಹೊಂದಿದೆ’ ಎಂದು ವಿವರಿಸಿದರು.

‘ಇದನ್ನು ಜಮೀನಿನಲ್ಲಿ ಉಳುವ ನೇಗಿಲಿನಂತೆ ಹಾಗೂ ರಸ್ತೆಯ ಮೇಲೆ ಚಲಿಸುವ ಬಂಡಿಯಂತೆ ಎರಡೂ ರೀತಿಯಲ್ಲಿ ಬಳಸಲು ಅನುವಾಗುವಂತೆ ಅಭಿವೃದ್ಧಿಪಡಿಸಿದ್ದೇವೆ. ಹಿಂದೆ ಬಂಡಿಯಲ್ಲಿ ನೇಗಿಲನ್ನು ತರಲಾಗುತ್ತಿತ್ತು. ಈಗ ಬಂಡಿಯೇ ತೋಟದಲ್ಲಿ ನೇಗಿಲಾಗಿ ಉಳುಮೆ ಮಾಡುತ್ತದೆ. ಟ್ರ್ಯಾಕ್ಟರ್‌ನಲ್ಲಿ ಬಳಸುವ ಉಳುಮೆಯ ಎಲ್ಲ ರೀತಿಯ ಸಾಧನಗಳನ್ನೂ ಈ ಬಂಡಿಗೆ ಅಳವಡಿಸಿ ಉಳುಮೆ ಮಾಡಬಹುದು. ಅದಕ್ಕಾಗಿಯೇ ಪ್ರತ್ಯೇಕ ಉಳುಮೆ ಸಾಧನಗಳೂ ನಮ್ಮಲ್ಲಿ ಲಭ್ಯ’ ಎಂದು ಮಾಹಿತಿ ನೀಡಿದರು.

ರೈತರಿಗೆ ಆಸನ: ‘ರೈತರು ಕುಳಿತುಕೊಳ್ಳಲು ಆಸನ ಅಳವಡಿಸಿರುವುದು ಸುಧಾರಿತ ಉಳುಮೆ ಬಂಡಿಯ ಮತ್ತೊಂದು ವಿಶೇಷ. ರೈತನಿಗೆ ಆಯಾಸವಾಗುವುದನ್ನು ಇದು ತಪ್ಪಿಸಲಿದೆ. ಉಳುವಾಗ ರೈತರು ಕೂರುವ ಭಾರದಿಂದಾಗಿ ನೇಗಿಲು ಭೂಮಿಯ ಆಳಕ್ಕೆ ಇಳಿಯುತ್ತದೆ. ಆಸನವು ಈ ಎರಡು ಉದ್ದೇಶಗಳನ್ನು ಈಡೇರಿಸುತ್ತದೆ’ ಎಂದು ಸಸಿಕುಮಾರ್ ವಿವರಿಸಿದರು.

‘ದರ ₹ 36 ಸಾವಿರ’

‘ಸುಧಾರಿತ ಉಳುಮೆ ಬಂಡಿಗೆ ₹36 ಸಾವಿರ ದರ ನಿಗದಿ ಮಾಡಲಾಗಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಈವರೆಗೆ 100ಕ್ಕೂ ಹೆಚ್ಚು ಬಂಡಿಗಳನ್ನು ರೈತರು ಖರೀದಿಸಿ ಬಳಸುತ್ತಿದ್ದಾರೆ. ಬೆಂಗಳೂರಿನಲ್ಲೂ ನಮ್ಮ ವಿತರಣಾ ಶಾಖೆಯಿದ್ದು, ಆಸಕ್ತರು 9900511170 ಸಂಖ್ಯೆಯನ್ನು ಸಂಪರ್ಕಿಸಬಹುದು’ ಎಂದು ಸಸಿಕುಮಾರ್‌ ತಿಳಿಸಿದರು.

ಡೀಸೆಲ್‌ ದರ ಹೆಚ್ಚಳದಿಂದ ಟ್ರ್ಯಾಕ್ಟರ್‌ ನಿರ್ವಹಣೆ ಹೊರೆಯಾಗುತ್ತಿದೆ. ಈ ಬಂಡಿ ಇಷ್ಟವಾಗಿದೆ. ಸದ್ಯದಲ್ಲೇ ಖರೀದಿಸುತ್ತೇನೆ.
- ಧನಂಜಯ, ಮಂಡ್ಯ ಜಿಲ್ಲೆಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.