ADVERTISEMENT

ದಿ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ: ಚಲಿಸುವ ಆಗಸದಡಿ ಇಷ್ಟೆಲ್ಲ..

ಚಲಿಸುವ ಆಗಸದಡಿ

ರೂಪಾ .ಕೆ.ಎಂ.
Published 25 ಜನವರಿ 2026, 0:48 IST
Last Updated 25 ಜನವರಿ 2026, 0:48 IST
<div class="paragraphs"><p>ಎಲ್ಲ ಕಂಡವನು</p></div>

ಎಲ್ಲ ಕಂಡವನು

   

ಮನುಷ್ಯ ಲೋಕವನ್ನು ಸದಾ ಕಾಡುವ ಭಯ, ಅಭದ್ರತೆ, ಎಂದೂ ಬಗೆಹರಿಯದ ಸಂಕಟ, ಪಾಪಪ್ರಜ್ಞೆ, ಅಸಹಾಯಕತೆ ಇದಕ್ಕಿದ್ದ ಹಾಗೆ ಜೀವ ಪಡೆದು, ಎಂದಾದರೊಮ್ಮೆ ಅವು ತಮ್ಮೊಡಲೊಳಗೆ ಇರಿಸಿಕೊಂಡ ಅಗಾಧತೆಯನ್ನು ಮಾತಿನ ಮೂಲಕ ಸಶಕ್ತವಾಗಿ ಅರುಹಲು ಸಾಧ್ಯವಾದರೆ, ಬಹುಶಃ ಕಲಾತ್ಮಕತೆಗೆ ತಾವು ಉಳಿಯುವುದಿಲ್ಲವೇನೋ!. ಆದರೆ, ಬಣ್ಣದ ಜಗತ್ತು ಈ ಎಲ್ಲಾ ಸ್ಥಾಯೀಭಾವಗಳನ್ನು ತನ್ನದೇ ರೀತಿಯಲ್ಲಿ ಅಪ್ಪಿಕೊಳ್ಳುತ್ತದೆ. ನೋಡುಗರ ಎದೆಯಲ್ಲಿ ಆರ್ದ್ರಭಾವ ಉಕ್ಕುವಂತೆ ಮಾಡುವ ಮೂಲಕ ಕಲಾಲೋಕವನ್ನೇ ಸೃಷ್ಟಿಸಿಬಿಡುತ್ತದೆ.

ಇಂಥದ್ದೊಂದು ಅನೂಹ್ಯ ಎನಿಸುವ ಕಲಾಲೋಕವೊಂದು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ದಿ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿಯಲ್ಲಿ ಅನಾವರಣಗೊಂಡಿದೆ.

ADVERTISEMENT

ಅನಿಶ್ಚಿತತೆಯಿಂದ ಕೂಡಿರುವ ಬದುಕಿನ ಗತಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಲ್ಲ. ಎಲ್ಲಾ ಜಂಜಾಟಗಳ ನಡುವೆಯೂ ಈ ವಿಶ್ವದಲ್ಲಿ ಇರಬಹುದಾದ ಅಗೋಚರ ಶಕ್ತಿಯೊಂದನ್ನು ಅರಸುವ, ಅದರ ಆಶ್ರಯ ಪಡೆಯುವ ತವಕದಲ್ಲಿಯೇ ಉಳಿದು ಬಿಡುತ್ತೇವೆ. ಹಾಗೆ ಅಗೋಚರ ಶಕ್ತಿಯ ಅಸ್ತಿತ್ವವನ್ನು ಅರ್ಥೈಸಿಕೊಳ್ಳುವಾಗ ಬೆಳಕು, ಸಂಕೇತ, ಜ್ಯಾಮಿತಿಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಎಸ್‌. ಎಚ್‌. ರಾಝಾ ಅವರ ಕ್ಯಾನ್ವಾಸ್ಸಿನ ಮೇಲೆ ಅಕ್ರಿಲಿಕ್‌ ಬಳಸಿ ಮಾಡಿದ ‘ವಿಶ್ವ’ ಕಲಾಕೃತಿಯು ವಿವರಿಸುತ್ತದೆ.

ನಿರಂತರವಾಗಿ ತಿರುಗುವ ಭೂಮಿ ಮತ್ತು ಕಣ್ಣು ಹಾಯಿಸಿದಷ್ಟು ಕಾಣುವ ಆಗಸದಡಿಯಲ್ಲಿ ಬೆಳಕು ಮತ್ತು ನೆರಳಿನ ಉಪಸ್ಥಿತಿಯಲ್ಲಿ ಪ್ರತಿ ಜೀವದ ಜೀವನವು ತೆರೆದುಕೊಳ್ಳುತ್ತದೆ. ಕಾಲ ಕಳೆದಂತೆ ಪ್ರತಿ ಜೀವವೂ ಕಥೆಯಾಯಿತು. ಕಥೆಯೊಳಗೆ ನಿಸರ್ಗದ ಹಲವು ಅಂಶಗಳು ರೂಪ ಪಡೆಯಿತು. ಈ ಕಥೆ ಜನಜೀವನದ ಭಾಗವೇ ಆಯಿತು. ನಕ್ಷತ್ರಪುಂಜಗಳು, ಇಂದಿಗೂ ಜನರ ವ್ಯಕ್ತಿತ್ವವನ್ನು ನಿರ್ಧರಿಸುವ ಸೂಚಕಗಳಾಗಿವೆಯಲ್ಲ ಹಾಗೆ!.

ನಕ್ಷತ್ರಪುಂಜಗಳನ್ನು ಪ್ರತಿನಿಧಿಸುವ ರಾಶಿಗಳನ್ನು ಅರ್ಪಿತಾ ಸಿಂಗ್‌ ಅವರು ಜಲವರ್ಣ ಹಾಗೂ ಅಕ್ರಿಲಿಕ್‌ ಕಲಾಕೃತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಕರ ರಾಶಿಯನ್ನು ಪ್ರತಿನಿಧಿಸುವವರು ಸತತಯತ್ನಕ್ಕೆ ಪ್ರಸಿದ್ಧಿ ಪಡೆದಿದ್ದರೆ, ಕುಂಭ ಹಾಗೂ ಮೀನ ರಾಶಿಗಳು ಕ್ರಿಯಾಶೀಲತೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿವೆ. ನಿ‌ರ್ದಿಷ್ಟ ನಕ್ಷತ್ರ ಹಾಗೂ ರಾಶಿಯಲ್ಲಿ ಜನಿಸಿದವರ ಮನೋಧರ್ಮವನ್ನು ಅಳೆಯಲು ಇವೆಲ್ಲವೂ ದಿಕ್ಸೂಚಿಯಷ್ಟೆ. ಪ್ರಾಕೃತಿಕ ವರ್ಣಗಳನ್ನು ಬಳಸಿ ಮಾಡಿದ ಬಲಗೈ ಹಸ್ತ ಸಾಮುದ್ರಿಕ ಕಲಾಕೃತಿಯು ಇಂಥದ್ದೇ ಹಲವು ಹೊಳಹುಗಳನ್ನು ತೆರೆದಿಡುತ್ತದೆ.

ಪ್ರಖರ ಬಿಸಿಲಿನಲ್ಲಿ ಹೊಳೆಯುವ ಜೀವವೃಕ್ಷವೊಂದರ ಭಂಗಿಯು ನಟರಾಜನ ತಾಂಡವ ನೃತ್ಯದಂತೆ ಕಾಣುವುದು ಕಲಾವಿದನಿಗಷ್ಟೆ ಸಾಧ್ಯವೇನೋ. ಸೃಷ್ಟಿ ಮತ್ತು ಲಯಗಳೆರಡೂ ವಿರುದ್ಧ ದಿಕ್ಕಿನಲ್ಲಿರುವ ಸಮತೋಲನದ ಶಕ್ತಿಯಾಗಿರುತ್ತದೆ. ಇದರ ದ್ಯೋತಕವೇ ನಟರಾಜನ ಭಂಗಿಯೇನೋ. 19ನೇ ಶತಮಾನದಲ್ಲಿ ಹತ್ತಿ ಬಟ್ಟೆಯ ಮೇಲೆ ವರ್ಣದ್ರವ್ಯ ಬಳಸಿ ಮಾಡಲಾದ ಈ ಕಲಂಕಾರಿ ಮಾದರಿಯ ಕಲಾಕೃತಿಯು ವೃಕ್ಷದೊಳಗೆ ಮೂಡಿದ ನಟರಾಜನನ್ನು ಬಿಂಬಿಸುತ್ತದೆ.

ನಾವು ಬ್ರಹ್ಮಾಂಡದೊಳಗೆ ಇದ್ದು, ಅದನ್ನು ನಿರಂತರವಾಗಿ ಶೋಧಿಸುತ್ತಿದ್ದೇವೆಯೋ ಅಥವಾ ಬ್ರಹ್ಮಾಂಡದ ಭಾಗವಾಗುತ್ತಲೇ ಅದನ್ನು ಅರಿತುಕೊಳ್ಳುವ ಮೂಲಕ ನಮ್ಮದೇ ಲೋಕವೊಂದನ್ನು ಸೃಷ್ಟಿಸುತ್ತಿದ್ದೇವೆಯೋ ಎಂಬಂತೆ ಬ್ರಹ್ಮಾಂಡಕ್ಕೆ ಸಂಬಂಧಿಸಿದ ಹಲವು ಕಲಾಕೃತಿಗಳನ್ನು ಕಂಡಾಗ ಅನಿಸದೇ ಇರದು.

19ನೇ ಶತಮಾನದ ಮಧ್ಯಬಾಗದಲ್ಲಿ ಕಿನ್ನಾಳದಲ್ಲಿ ಕೆತ್ತನೆಗೊಂಡಿರುವ ರತಿ ಮತ್ತು ಮನ್ಮಥರ ಕಲಾಕೃತಿಗಳು ಚಿತ್ತಾಕರ್ಷಕವಾಗಿವೆ. ಮುದ್ದಾಗಿ ಕಾಣುವ ರತಿ–ಮನ್ಮಥ ಕಲಾಕೃತಿಗಳನ್ನು ಮರದಿಂದ ಮಾಡಲಾಗಿದೆ. ಪ್ರೀತಿ ಎಂಬುದು ಸಂತಸಕ್ಕೂ, ನೋವಿಗೂ ಕಾರಣವಾಗಬಲ್ಲದು. ಚಲನಶೀಲತೆ ಬದುಕಿನ ಗುಣ. ಇದಕ್ಕೆ ಪ್ರೀತಿಯೂ ಹೊರತಲ್ಲ ಎಂಬುದನ್ನು ಸಾರುತ್ತದೆ ಹೆಸರೇ ಇರದ ಮತ್ತೊಂದು ಕಲಾಕೃತಿ.

ಬದುಕಿನಲ್ಲಿ ನೋವು–ನಲಿವನ್ನು ಸಮಚಿತ್ತದಿಂದ ಕಂಡವನ ಮುಖಮುದ್ರೆಯನ್ನು ಕಂಚಿನಲ್ಲಿ ಕೆತ್ತಲಾಗಿದೆ. ಸಂತೋಷಕ್ಕೆ ಹಿಗ್ಗದೆ, ದುಃಖಕ್ಕೆ ಕುಗ್ಗದೇ ಬದುಕಿನ ಪ್ರತಿ ಕ್ಷಣವನ್ನು ತೀವ್ರವಾಗಿ ಅನುಭವಿಸಿದಂತೆ ಕಾಣುತ್ತದೆ ಈ ಪ್ರತಿಮೆಯ ಮುಖಮುದ್ರೆ.

ನಮ್ಮ ಇಂದ್ರಿಯಗಳ ಅರಿವಿಗೆ ನಿಲುಕದ್ದನ್ನು ಕಥೆಗಳ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ವಿಜ್ಞಾನದಿಂದಲೂ ಉತ್ತರ ಪಡೆಯಲಾಗದ ಪ್ರಾಕೃತಿಕ ಕೌತುಕಗಳನ್ನು, ಬ್ರಹ್ಮಾಂಡದ ವೈಶಾಲ್ಯವನ್ನು ಅರ್ಥೈಸಿಕೊಳ್ಳಲು ಹೆಣಗಾಡುವಾಗೆಲ್ಲ ಆಸರೆಯಾಗಿ ಒದಗಿ ಬರುವುದು ಕಲ್ಪನೆಗಳೇ. ಈ ಕಲ್ಪನೆಗಳನ್ನು ಕುತೂಹಲದ ಪ್ರಜ್ಞೆಯು ಕೈಹಿಡಿದು ಮುನ್ನಡೆಸುತ್ತದೆ. ಪುರಾತನ ಕಥೆಗಳಿಂದ ಆಧುನಿಕ ವಿಜ್ಞಾನದವರೆಗೂ ಬ್ರಹ್ಮಾಂಡವನ್ನು ಎಣಿಕೆಗೆ ಸಿಗದಷ್ಟು ರೀತಿಯಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಒಂದೇ ದೇಹದಲ್ಲಿ ಸಮಸ್ತ ಜೀವಸಂಕುಲ ಇರುವಂತೆ ವರ್ಣಿಸಲಾಗಿದೆ. ಬ್ರಹ್ಮಾಂಡ ಕುರಿತ ಇಂಥ ಹಲವು ಕಲಾಕೃತಿಗಳು ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ.

2ನೇ ಶತಮಾನದಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿ ಕೆಂಪು ಮರಳುಗಲ್ಲಿನಲ್ಲಿ ರೂಪುಗೊಂಡಿರುವ ಬುದ್ಧನ ಕಲಾಕೃತಿ, ವಾರಾಣಸಿ ಶವಸಂಸ್ಕಾರದ ಘಾಟ್‌ಗಳ ಫೋಟೋಗಳು, ಹತ್ತಿ ಬಟ್ಟೆಯ ಮೇಲೆ 1940ರಲ್ಲಿ ರಚನೆಯಾದ ಬೆಟ್ಟಗುಡ್ಟದ ಚಿತ್ರ, 20ನೇ ಶತಮಾನದ ಆರಂಭದಲ್ಲಿ ಉತ್ತರ ಪ್ರದೇಶದದಲ್ಲಿ ಹತ್ತಿ ಬಟ್ಟೆ ಮೇಲೆ ರಚನೆಗೊಂಡ ಕಂದುರಿ ದೇಗುಲದ ಚಿತ್ರವು ಈ ಪ್ರದರ್ಶನಕ್ಕೆ ಕಳೆ ತಂದಿವೆ.

ಈ ಪ್ರದರ್ಶನವು ‘ಚಲಿಸುವ ಆಗಸದಡಿ’ ಎನ್ನುವ ಶೀರ್ಷಿಕೆಯಲ್ಲಿ ಮಾರ್ಚ್‌ ಅಂತ್ಯದವರೆಗೆ ಪ್ರದರ್ಶನಗೊಳ್ಳಲಿದೆ. ವರ್ಣ ಚಿತ್ರಗಳು, ಛಾಯಾಚಿತ್ರಗಳು, ಜವಳಿ, ಶಿಲ್ಪಗಳು ಮತ್ತು ಮುದ್ರಣಗಳ ರೂಪದಲ್ಲಿರುವ ಕಲಾಕೃತಿಗಳು ಪ್ರದರ್ಶನದಲ್ಲಿ ನೋಡಲು ಲಭ್ಯವಿದೆ.v

ವಿಷ್ಣುವಿನ ರೂಪ
ವಿ.ಎಸ್‌.ಗಾಯ್ತೊಂಡೆ ಅವರ ಅಮೂರ್ತ ಕಲಾಕೃತಿ
ಬ್ರಹ್ಮಾಂಡದ ಕಲ್ಪನೆ
ಅರ್ಪಿತಾ ಸಿಂಗ್ ಅವರ ಮಕರ ರಾಶಿ ಕಲಾಕೃತಿ
ರತಿ ಮನ್ಮಥರ ಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.