ADVERTISEMENT

Mother Mary comes to me: ಭಾರತೀಯ ಸಂಸ್ಕೃತಿಯಲ್ಲಿ ಅರುಂಧತಿ ರಾಯ್ ಕಂಡ 'ತಾಯಿ'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:52 IST
Last Updated 13 ಡಿಸೆಂಬರ್ 2025, 6:52 IST
<div class="paragraphs"><p>Mother Mary comes to me book</p></div>

Mother Mary comes to me book

   

ಮದರ್ ಮೇರಿ ಕಮ್ಸ್ ಟು ಮಿ[Mother Mary comes to me] ಎಂಬ ನೆನಪುಗಳ ಸಂಗ್ರಹವನ್ನು ಇತ್ತೀಚಿಗೆ ಓದಿದೆ. ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ ಇತ್ತೀಚಿನ ಪುಸ್ತಕ ಇದು.

ತನ್ನ ತಾಯಿಯ ವ್ಯಕ್ತಿತ್ವದ ಅನೇಕ ಆಯಾಮಗಳನ್ನು ಪರಿಚಯಿಸಲು ಆಕೆ ಕಹಿ - ಸಿಹಿನೆನಪುಗಳನ್ನು ಇಲ್ಲಿ ಪೋಣಿಸಿದ್ದಾರೆ. ಇಂಥ ಪುಸ್ತಕಗಳು ಎಷ್ಟೋ ಇವೆ. ಆದ್ರೆ ಇದ್ದದ್ದನ್ನು ಇದ್ದಹಾಗೆ ಹೇಳುತ್ತಾ ಓದುಗರ ಮೆದುಳಿಗೆ ಕೈ ಹಾಕುವ ಅಪರೂಪದ ಪುಸ್ತಕ ಇದು .

ADVERTISEMENT

ತಾಯಿ ಎಂದರೆ ಕರುಣಾಮಯಿ. ತಾಯಿ ಎಂದರೆ ವಾತ್ಸಲ್ಯ- ಪ್ರೀತಿ -ತ್ಯಾಗಕ್ಕೆ ಇನ್ನೊಂದು ಹೆಸರು, ಬಾಲ್ಯವೆಂದರೆ ಸ್ವರ್ಗಸುಖ ಎಂದೆಲ್ಲಾ ನಂಬಿರುವ ಸಮಾಜ ನಮ್ಮದು. ಆದರೆ ಹೀಗಿರದ ತಾಯಿ ಮತ್ತು ಬಾಲ್ಯದ ಬಗ್ಗೆ, ಇರುವುದನ್ನು ಇದ್ದ ಹಾಗೆ ಬರೆದ ಅರುಂಧತಿಯ ಗಟ್ಟಿತನದ ಬಗ್ಗೆ ಖುಷಿಯಾಗುತ್ತದೆ. ಬಾಲ್ಯದ ಕಹಿ ನೆನಪುಗಳು ಇರುವ ಲಕ್ಷಾಂತರ ಜನ ನಮ್ಮ ಮಧ್ಯೆ ಇದ್ದಾರೆ. ಅಂತಹವರ ದನಿಯಾಗಿ ಈ ಪುಸ್ತಕ ನಿಲ್ಲುತ್ತದೆ.

ಆಕೆಯ ತಾಯಿ ಮೇರಿ ರಾಯ್ ಖ್ಯಾತ ಶಿಕ್ಷಣತಜ್ಞೆ. ಕೇರಳದ ಕೊಟ್ಟಾಯಂನಲ್ಲಿ ಯಶಸ್ವಿ ಶಾಲೆಯನ್ನು ಕಟ್ಟಿ ನಡೆಸಿದವಳು. ಸಾವಿರಾರು ಅನಾಥ ಮಕ್ಕಳಿಗೆ ಆಸರೆಯಾದವಳು. ಲಕ್ಷಾಂತರ ಜನರಿಗೆ ಮಾದರಿಯಾದವಳು.ಸಿರಿಯನ್ ಕ್ರಿಶ್ಚಿಯನ್ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಪಾಲು ಸಿಗುವಂತೆ ಮಾಡಿದ ಐತಿಹಾಸಿಕ ಕೋರ್ಟ್ ತೀರ್ಪಿಗೆ ಕಾರಣಳಾದವಳು ಈ ಮೇರಿ.

ಮೇರಿಗೆ ಅನೇಕ ಆರೋಗ್ಯದ ಸಮಸ್ಯೆಗಳು. ಗಂಡ ಬಿಟ್ಟವಳು ಅನ್ನೋ ಸಾಮಾಜಿಕ ಅಪಮಾನ, ತವರಿನವರಿಂದ ತಾತ್ಸಾರ ಎಲ್ಲವೂ ಇತ್ತು. ಅದರ ಪ್ರತಿಬಿಂಬವೆನ್ನುವಂತೆ ಮೇರಿ ತನ್ನ ಸ್ವಂತ ಮಕ್ಕಳ ಮೇಲೆ ತೋರಿಸಿದ ಕಾಠಿಣ್ಯತೆ, ದರ್ಪ, ದುರಹಂಕಾರ ಮತ್ತು ಕೊಟ್ಟ ದೈಹಿಕ- ಮಾನಸಿಕ ಹಿಂಸೆಯ ಚಿತ್ರಣ ಇಲ್ಲಿದೆ. ಜೊತೆಗೆ ಆಕೆಯ ಸಾಧನೆಗಳ ಬಗ್ಗೆ ಮುಕ್ತಕಂಠದ ಹೊಗಳಿಕೆಯೂ ಇದೆ.

ಪ್ರೇಮದಿಂದಲೋ ಅಥವಾ ಕಾಮದಿಂದಲೋ ಒಂದಾಗುವ ವಯಸ್ಕ ಗಂಡು- ಹೆಣ್ಣು, ಮಕ್ಕಳು ಹುಟ್ಟಿದಾಕ್ಷಣ ತಂದೆ- ತಾಯಿಯ ಪಟ್ಟಕ್ಕೆ ಏರುತ್ತಾರೆ. ತಂದೆ -ತಾಯಿ ಎಂದರೆ ದೇವರು ಎನ್ನುತ್ತದೆ ನಮ್ಮ ಸಂಸ್ಕೃತಿ. ಆದರೆ ಹುಲುಮಾನವರೇ ಆದ ಅವರು, ದೇವರ ದರ್ಜೆಗೆ ಏರಲು, ಸ್ವತ: ಪ್ರಯತ್ನ ಮಾಡದ ಹೊರತು ಸಾಧ್ಯವಿಲ್ಲ. ಆದ್ದರಿಂದಲೇ ಮಕ್ಕಳ ಬಗ್ಗೆ ಅನಾದರ, ಕ್ರೂರತನ ತೋರಿಸುವ ಅನೇಕ ತಂದೆ- ತಾಯಿಗಳನ್ನು ನಾವು ಕಾಣುತ್ತೇವೆ.

ಇಂತಹ ತಂದೆ- ತಾಯಿಗಳ ಮಗಳಾದ ಅರುಂಧತಿ ಮತ್ತು ಆಕೆಯ ಅಣ್ಣ ಅನುಭವಿಸುವ ಕಡು ಕಷ್ಟದ ಬಾಲ್ಯ ಮತ್ತು ಯೌವ್ವನದ ನೆನಪುಗಳನ್ನು ವಿವರವಾಗಿ ಪುಸ್ತಕ ಕಟ್ಟಿಕೊಡುತ್ತದೆ. ಇವನ್ನೆಲ್ಲ ಮೀರಿ ಆಕೆ ತನ್ನ ಸ್ವಂತ ಪ್ರಯತ್ನದಿಂದ ಬದುಕು ಕಟ್ಟಿಕೊಂಡು, ಬುಕರ್ ಪ್ರಶಸ್ತಿ ಪಡೆಯುವವರೆಗೂ ಬೆಳೆದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನರ್ಮದಾ ಬಚಾವೋ ಆಂದೋಲನ , ಕಾಶ್ಮೀರ ಸಮಸ್ಯೆ, ಸಂಸತ್ತಿನ ಮೇಲಿನ ದಾಳಿ , ದಂತೆವಾಡದ ನಕ್ಸಲರ ಹೋರಾಟ ಇತ್ಯಾದಿ ಸಾಮಾಜಿಕ ವಿಚಾರಗಳಲ್ಲಿ ಅರುಂಧತಿಯ ನೇರ ದಿಟ್ಟ ಅಭಿಪ್ರಾಯಗಳು ಗಮನ ಸೆಳೆಯುತ್ತವೆ.

ಬಾಲ್ಯದಲ್ಲಿ ಪ್ರೀತಿ, ವಿಶ್ವಾಸಗಳನ್ನು ಅನುಭವಿಸದ ಮಕ್ಕಳು ಮುಂದೆ ಬೇರೆಯವರಿಗೆ ಅದನ್ನು ತೋರಿಸಲಾರರು ಎನ್ನುತ್ತದೆ ಮನೋವಿಜ್ಞಾನ. ಈ ಮಾತಿಗೆ ಒಳ್ಳೆಯ ಉದಾಹರಣೆ ಅರುಂಧತಿ. ಮುಂದೆ ಅವಳ ಜೀವನದಲ್ಲಿ ಎರಡು ಸಾರಿ ಮದುವೆಯಾಗುವ, ಸುಖಸಂಸಾರ ಹೂಡುವ ಅವಕಾಶ ಸಿಕ್ಕಿದರೂ, ಆಕೆಗೆ ಆ ವ್ಯವಸ್ಥೆಗೆ ಹೊಂದಿಕೊಳ್ಳಲು ಆಗುವುದೇ ಇಲ್ಲ. ಸಂಸಾರದ commitment ಮತ್ತು safety ಅವಳಿಗೆ ಉಸಿರುಗಟ್ಟಿಸುತ್ತದೆ. ತನ್ನ ಈ ಗುಣವನ್ನು ನಿರ್ಭೀತಿಯಿಂದ, ನಿಸ್ಸಂಕೋಚವಾಗಿ, ಇನ್ನೊಬ್ಬರನ್ನು ದೂಷಿಸದೆ ಅರುಂಧತಿ ವಿವರಿಸುವಾಗ ಬೆರಗಾಗುತ್ತದೆ.

ಅರುಂಧತಿಯ ಬಗ್ಗೆ ಸಾಹಿತ್ಯ- ಸಾಮಾಜಿಕ ವಲಯದಲ್ಲಿ ಒಳ್ಳೆಯ ಮಾತಿಲ್ಲ. ಅವಳ ಎಡಚಿಂತನೆ, ಕಮ್ಯುನಿಸ್ಟ್ ಸಹವಾಸ ,ಸರ್ಕಾರದ ನಡೆಯ ಬಗ್ಗೆ ಆಕೆಯ ಟೀಕೆಗಳು ಅವಳನ್ನು ದೇಶವಿರೋಧಿ ಎಂಬಂತೆ ಬಿಂಬಿಸಿವೆ. ಅರುಂಧತಿಯಂಥವರನ್ನು ದಾರಿ ತಪ್ಪಿದವರು, ಎಡಚರು, ಸಮಾಜಕ್ಕೆ ಕಂಟಕರು, ಸಂಸ್ಕೃತಿಯ ಶತ್ರುಗಳು ಎಂದೆಲ್ಲ ಸುಲಭವಾಗಿ ಟೀಕೆ ಮಾಡಬಲ್ಲೆವು. ಆದರೆ ತಮ್ಮ ಜೀವನದ ಕಹಿಸತ್ಯಗಳನ್ನು ಹೇಳಲು ಅವರುಗಳು ತೋರುವ ಧೈರ್ಯವನ್ನು ನಮ್ಮಲ್ಲಿ ಎಷ್ಟು ಜನ ತೋರಬಲ್ಲೆವು? ಎಂಬ ಪ್ರಶ್ನೆ ನನ್ನನ್ನು ಕಾಡಿತು.
ತಂದೆ- ತಾಯಿಯರ ಕರಾಳ ನೆನಪುಗಳ ಬಗ್ಗೆ Trevor Noah ಬರೆದ ಕೃತಿ Born a crime ಮತ್ತು ತಮಿಳು ಲೇಖಕ ಬಿ. ಜಯಮೋಹನ್ ರ Of Men, Women and Witches: Stories from My Life ಎಂಬ ಪುಸ್ತಕಗಳು ನನಗೆ ಇಲ್ಲಿ ನೆನಪಾದವು.

ಸರಳವಾದ ಇಂಗ್ಲೀಷ್ ಭಾಷೆ ಈ ಪುಸ್ತಕದ ಹೈಲೈಟ್. ಆದರೆ ಓದುವಾಗ ತೀವ್ರಭಾವನೆಗಳ ಮಹಾಪೂರವೇ ಹರಿಯುವುದರಿಂದ ಪುಸ್ತಕದ ಕೆಲವು ಅಧ್ಯಾಯಗಳನ್ನು ಒಂದೆರಡು ಪುಟಗಳಿಗಿಂತ ಜಾಸ್ತಿ ಒಮ್ಮೆಗೆ ಓದಲಾಗಲಿಲ್ಲ. ದಿನಕ್ಕೆ ಕೆಲವೇ ಪುಟಗಳಂತೆ ಓದಿ, ಒಂದು ತಿಂಗಳಲ್ಲಿ ಮುಗಿಸಿದೆ. ಓದಿದ ಮೇಲೆ ಇನ್ನೂ ಕೆಲವು ದಿನ ಪುಸ್ತಕದ ಘಟನೆಗಳು ಮತ್ತೆ ಮತ್ತೆ ಕಾಡಿದವು.
ಅರುಂಧತಿಯ ಎಲ್ಲ ವಿಚಾರಗಳ ಬಗ್ಗೆ ನನ್ನ ಸಮ್ಮತಿ ಇಲ್ಲದೆ ಹೋದರೂ, ಒಂದು ಮನ ತಟ್ಟುವ ಪುಸ್ತಕ ಬರೆದ ಅವಳಿಗೆ ಹೃದಯಪೂರ್ವಕ ಮೆಚ್ಚುಗೆಗಳು.
   

-ವೇದಾ ಆಠವಳೆ, ಬೆಂಗಳೂರು