ADVERTISEMENT

ಬಹುಭಾಷಿಕರ ಬೆಳಗಾವಿ ಬುಕ್‌ ಕ್ಲಬ್‌

ಇಮಾಮ್‌ಹುಸೇನ್‌ ಗೂಡುನವರ
Published 20 ಜುಲೈ 2025, 2:11 IST
Last Updated 20 ಜುಲೈ 2025, 2:11 IST
ಓದಿಗಾಗಿ ಒಂದೆಡೆ ಸೇರಿದ ಬೆಳಗಾವಿ ಬುಕ್‌ ಕ್ಲಬ್‌ ಸದಸ್ಯರು
ಓದಿಗಾಗಿ ಒಂದೆಡೆ ಸೇರಿದ ಬೆಳಗಾವಿ ಬುಕ್‌ ಕ್ಲಬ್‌ ಸದಸ್ಯರು   

ಬದಲಾದ ಕಾಲಘಟ್ಟದಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮಕ್ಕಳು, ಯುವಜನರು ಮೊಬೈಲ್‌ನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯೋಮಾನದವರೂ ಇದರಿಂದ ಹೊರತಾಗಿಲ್ಲ ಎನ್ನುವ ಆರೋಪ ಮಾಮೂಲು. ಆದರೆ, ‘ಬೆಳಗಾವಿ ಬುಕ್‌ ಕ್ಲಬ್‌’ ಇದನ್ನು ತಕ್ಕ ಮಟ್ಟಿಗೆ ಸುಳ್ಳಾಗಿಸಿದೆ. ಪ್ರತಿ ಭಾನುವಾರ ಬುಕ್‌ ಕ್ಲಬ್‌ ಸದಸ್ಯರು ಒಂದೆಡೆ ಸೇರುತ್ತಾರೆ. ಇಲ್ಲಿ ಬೇರೆ ಬೇರೆ ಭಾಷಿಕರು ಸದಸ್ಯರಾಗಿದ್ದಾರೆ. ಹಿರೀಕರು, ಯುವಕರು ಮತ್ತು ಮಹಿಳೆಯರೂ ಇದ್ದಾರೆ. ಇವರೆಲ್ಲರನ್ನೂ ಒಂದಾಗಿಸಿದ್ದು, ಬಂಧ ಗಟ್ಟಿಗೊಳಿಸಿದ್ದು ಓದು ಮತ್ತು ಸಾಹಿತ್ಯ.

ವೈದ್ಯರು, ಎಂಜಿನಿಯರ್‌ಗಳು, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪಿಗಳು, ಉದ್ಯಮಿಗಳು, ಬೇರೆ ಬೇರೆ ಉದ್ಯೋಗದಲ್ಲಿ ಇರುವವರು, ಪಿಯುಸಿಯಿಂದ ಸ್ನಾತಕೋತ್ತರ ಕೋರ್ಸ್‌ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಸೇವಾನಿವೃತ್ತಿ ಹೊಂದಿದವರು ಈ ಕ್ಲಬ್‌ನ ಸದಸ್ಯರು. ಇವರೆಲ್ಲರ ಮಧ್ಯೆ ಓದಿನ ನಂಟಿದೆ. ಭಾಷಾತೀತ ಸಾಹಿತ್ಯದ ಬೆಸುಗೆಯೂ ಇದೆ.

ವಾರಕ್ಕೊಮ್ಮೆ ಸೇರುವ ಇವರು, ಒಂದು ವಾರದ ಅವಧಿಯಲ್ಲಿ ಓದಿದ ಪುಸ್ತಕಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ತಮ್ಮ ತಮ್ಮ ಬಳಿ ಇರುವ ಉತ್ತಮ ಪುಸ್ತಕಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಯಾರಾದರೂ ಕತೆ, ಕವನ, ಚುಟುಕು ರಚಿಸಿದ್ದರೆ ಇಲ್ಲಿ ಪ್ರಸ್ತುತಪಡಿಸುತ್ತಾರೆ. ಮಾರುಕಟ್ಟೆಗೆ ಬರುವ ಹೊಸ ಕೃತಿಗಳ ಕುರಿತಾಗಿ ವಿಮರ್ಶಿಸುತ್ತಾರೆ.

ADVERTISEMENT

ಮೊಬೈಲ್‌ ದೂರ ಇರಿಸುವ ಷರತ್ತು:

‘ಓದುವ ಸಂಸ್ಕೃತಿ ಬೆಳೆಸುವ ಆಶಯದಿಂದ ಸಣ್ಣ ಪ್ರಯತ್ನವಾಗಿ 2022ರಲ್ಲಿ ‘ಬೆಳಗಾವಿ ಬುಕ್‌ ಕ್ಲಬ್‌’ ಸ್ಥಾಪಿಸಿದೆವು. ಇನ್ಫೋಸಿಸ್ ಪ್ರತಿಷ್ಠಾ ಅಧ್ಯಕ್ಷೆ ಸುಧಾಮೂರ್ತಿ ಇದನ್ನು ಉದ್ಘಾಟಿಸಿ, ನಮ್ಮಲ್ಲಿ ಪ್ರೇರಣೆ ತುಂಬಿದ್ದರು. ಅಂದಿನಿಂದ ಪ್ರತಿವಾರ ಬುಕ್‌ಹೌಸ್‌, ಉದ್ಯಾನ ಅಥವಾ ಯಾವುದಾದರೂ ಕೆಫೆಯಲ್ಲಿ ಸೇರಿ ಪುಸ್ತಕ ಓದುತ್ತೇವೆ. ಓದು, ಚರ್ಚೆ ಅರ್ಥಪೂರ್ಣವಾಗಬೇಕು. ಹಾಗಾಗಿ ಈ ವೇಳೆ ಮೊಬೈಲ್‌ ದೂರವಿಡಬೇಕು ಎಂಬುದೇ ನಮ್ಮ ಮೊದಲ ಷರತ್ತು’ ಎಂದು ಮಾತು ಆರಂಭಿಸಿದರು ಕ್ಲಬ್‌ನ ಕ್ಯೂರೇಟರ್‌ ಅಭಿಷೇಕ ಬೆಂಢಿಗೇರಿ.

‘ನಮ್ಮದು ಭಾಷಾತೀತ ತತ್ವದಡಿ ಸ್ಥಾಪಿತ ಕ್ಲಬ್‌. ಇದೇ ಭಾಷೆ ಮತ್ತು ಇದೇ ಸಾಹಿತ್ಯ ಪ್ರಕಾರದ ಪುಸ್ತಕ ಓದಬೇಕೆಂಬ ನಿಯಮವಿಲ್ಲ. ಇಲ್ಲಿಗೆ ಬರುವವರು ಕನ್ನಡ, ಇಂಗ್ಲಿಷ್‌, ಮರಾಠಿ, ಕೊಂಕಣಿ, ಉರ್ದು, ಹಿಂದಿ ಮತ್ತಿತರ ಭಾಷೆಗಳ ಹಲವು ಪ್ರಕಾರಗಳ ಪುಸ್ತಕಗಳನ್ನು ಓದುತ್ತಾರೆ. ಪುಸ್ತಕದಲ್ಲಿನ ಸ್ವಾರಸ್ಯಕರ ಸಂಗತಿ ಕುರಿತಾಗಿ ಚರ್ಚಿಸುತ್ತಾರೆ. ಹೊಸದಾಗಿ ಸಾಹಿತ್ಯ ಕೃಷಿ ಮಾಡುವವರು ಸಲಹೆ ಪಡೆಯುತ್ತಾರೆ. ನಮ್ಮ ಭೇಟಿಯಿಂದಲೇ ಪ್ರೇರಣೆ ಪಡೆದು, ಈಗಾಗಲೇ ಮೂರ್ನಾಲ್ಕು ಜನರು ಉತ್ತಮ ಕೃತಿ ಹೊರತಂದಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಆರಂಭದಲ್ಲಿ ಕೆಲವರು ಇಲ್ಲಿ ಮಾತನಾಡುವುದನ್ನು ಕೇಳಲಷ್ಟೇ ಬರುತ್ತಿದ್ದರು. ಅಂಥವರೂ ಈಗ ಪುಸ್ತಕ ಓದಲು ಆರಂಭಿಸಿದ್ದಾರೆ. ಪಠ್ಯಪುಸ್ತಕಗಳ ಓದಿಗೆ ಸೀಮಿತರಾಗಿದ್ದ ವಿದ್ಯಾರ್ಥಿಗಳು ವಿವಿಧ ಪ್ರಕಾರಗಳ ಸಾಹಿತ್ಯ ಓದುತ್ತಿದ್ದಾರೆ. ಕನ್ನಡ ಪುಸ್ತಕಗಳನ್ನಷ್ಟೇ ಓದುತ್ತಿದ್ದವರು ಇತರರೊಂದಿಗೆ ಬೆರೆತು, ಬೇರೆ ಭಾಷೆ ಸಾಹಿತ್ಯದತ್ತಲೂ ಆಕರ್ಷಿತರಾಗಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪುಸ್ತಕ ಇಷ್ಟ. ಅವರ ಯಾವುದನ್ನಾದರೂ ಓದಲಿ. ಒಟ್ಟು ಓದುವ ರುಚಿ ಅವರಿಗೆ ಹತ್ತಲಿ ಎಂಬುದಷ್ಟೇ ನಮ್ಮ ಕಳಕಳಿ ಎನ್ನುತ್ತಾರೆ ಸಹಾಯಕಿ ಪ್ರಾಧ್ಯಾಪಕಿಯೂ ಆಗಿರುವ ಕ್ಲಬ್‌ನ ಸದಸ್ಯೆ ಶ್ರದ್ಧಾ ಹಿರೇಮಠ.

‘ಬೆಳಗಾವಿ ಬುಕ್‌ ಕ್ಲಬ್‌’ ತನ್ನ ಇನ್‌ಸ್ಟಾಗ್ರಾಂ ಪುಟ ತೆರೆದಿದ್ದು, ಒಂದು ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಕಾಲೇಜ್‌ ಆಫ್‌ ಬಿಜಿನೆಸ್‌ ಅಡ್ಮಿನಿಸ್ಟ್ರೇಷನ್‌ ಲಿಂಗರಾಜ ಕಾಲೇಜ್‌ (ಸಿಬಾಲ್ಕ್‌) ಹಾಗೂ ಗೋಗಟೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಜಿಐಟಿ) ಜತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡು, ವಿದ್ಯಾರ್ಥಿಗಳಲ್ಲೂ ಓದುವ ಹವ್ಯಾಸ ಬೆಳೆಸುತ್ತಿದೆ. 

ಓದಿಗಾಗಿ ಒಂದೆಡೆ ಸೇರಿದ ಬೆಳಗಾವಿ ಬುಕ್‌ ಕ್ಲಬ್‌ ಸದಸ್ಯರು

ಸಾಂಸ್ಕೃತಿಕ ಜೀವಂತಿಕೆ:

‘ಉತ್ತಮ ರಸ್ತೆ, ಪಾರ್ಕ್‌ ಅಥವಾ ಮಾಲ್‌ಗಳಿಂದ ಯಾವುದೇ ಊರು ಖ್ಯಾತಿ ಪಡೆಯಬಹುದು. ಆದರೆ, ಸಾಂಸ್ಕೃತಿಕ ಜೀವಂತಿಕೆ ಪಡೆಯುವುದು ಸಂಗೀತ, ಸಿನಿಮಾ, ನಾಟಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಿಂದ. ಬೆಳಗಾವಿ ಬುಕ್‌ ಕ್ಲಬ್‌ ತನ್ನೂರಲ್ಲಿ ಇಂಥ ಸಾಂಸ್ಕೃತಿಕ ಜೀವಂತಿಕೆ ಕಾಪಾಡುತ್ತಿದೆ. ಈ ಗುಂಪಿನಲ್ಲಿ ತರುಣ–ತರುಣಿಯರಿದ್ದಾರೆ. ಅದರಲ್ಲೂ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದವರು ಹೆಚ್ಚಿದ್ದಾರೆ. ನನ್ನ ‘ಕುಲುಮೆ’ ಪುಸ್ತಕ ಪ್ರಕಟವಾದಾಗ ಈ ಗುಂಪು ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ನನ್ನ ಓದುಗರನ್ನು ಭೇಟಿಯಾಗಿ ಸಂತಸಪಟ್ಟಿದ್ದೆ. ಈ ಕ್ಲಬ್‌ನ ಸದಸ್ಯರು ಖರೇ ಖರೇ ಓದುಗರು’ ಎಂದು ಸಾಹಿತಿ ರಹಮತ್‌ ತರೀಕೆರೆ ಹೇಳುತ್ತಾರೆ.

‘ಆರಂಭದಲ್ಲಿ ಐದಾರು ಸ್ನೇಹಿತರಷ್ಟೇ ಸೇರಿ, ಒಂದೆರಡು ತಾಸು ಚರ್ಚಿಸುತ್ತಿದ್ದೆವು. ಈಗ 20ಕ್ಕೂ ಅಧಿಕ ಜನರು  ಪ್ರತಿವಾರ ಸೇರುತ್ತೇವೆ.  ಈಗ ಶಿಸ್ತುಬದ್ಧವಾಗಿ ಓದುತ್ತಿದ್ದೇವೆ. ಗುಂಪಿನ ಸದಸ್ಯರ ಸಂಖ್ಯೆ ಕಡಿಮೆಯೇ ಇರಬಹುದು. ಆದರೆ, ಓದುವ ಸಂಸ್ಕೃತಿ ಉಳಿಸಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ  ನಿಹಾರಿಕಾ ಮಿಶ್ರಾ.

ಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಾಂಸ್ಕೃತಿಕ ಜೀವಂತಿಕೆಯ ಸಂಕೇತ. ಇವುಗಳಲ್ಲಿ ಒಂದು ಪುಟ್ಟ ತೊರೆಯಂತೆ ಬೆಳಗಾವಿ ಬುಕ್‌ ಕ್ಲಬ್‌ ಹರಿಯುತ್ತಿದೆ. ಮುಂದೆ ದೊಡ್ಡ ನದಿಯಾಗಲಿ.

ಸುಧಾಮೂರ್ತಿ ಅವರೊಂದಿಗೆ ಬೆಳಗಾವಿ ಬುಕ್‌ ಕ್ಲಬ್‌ ಸದಸ್ಯರು
ಹೊಸ ತಲೆಮಾರಿಗೆ ಪುಸ್ತಕ ಓದುವ ರುಚಿ ಹಚ್ಚುವ ಮತ್ತು ಭಾಷೆಗಳ ಗಡಿಯನ್ನು ಮೀರಿ ಓದಿನ ವ್ಯಾಪ್ತಿ ಮತ್ತು ಸಾಹಿತ್ಯಿಕ ಶ್ರೀಮಂತಿಕೆ ಬೇರೆ ಬೇರೆ ಭಾಷಿಕರಿಗೆ ತಿಳಿಪಡಿಸುವ ಪ್ರಯತ್ನ ಇದಾಗಿದೆ. ನಾನು ಹಲವು ಸಲ ಭಾಗವಹಿಸಿ ನಾನು ಓದಿದ ಪುಸ್ತಕಗಳ ವಿಷಯ ಹಂಚಿಕೊಳ್ಳುತ್ತೇನೆ. ಕನ್ನಡದ ಕವಿಗಳು ಬರಹಗಾರರ ಬಗ್ಗೆ ಮಾತನಾಡುತ್ತೇನೆ
ನದೀಮ್‌ ಸನದಿ ಕವಿ
ವಿವಿಧ ಸ್ಪರ್ಧೆಗಳು
ಆರಂಭದಲ್ಲಿ ಕೆಲ ಸದಸ್ಯರಿಗೆ ಓದಿನ ಅಭಿರುಚಿಯೇ ಇರಲಿಲ್ಲ. ಈಗ ಅವರೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಎಂಬುದೇ ಖುಷಿಯ ವಿಷಯ. ಸತತ ಮಳೆ ಪರೀಕ್ಷೆಗಳು ಸಾಲು–ಸಾಲು ರಜೆಗಳಿದ್ದಾಗ ಹೊರತುಪಡಿಸಿ ಉಳಿದೆಲ್ಲ ಭಾನುವಾರ ಸೇರುತ್ತಾರೆ. ಓದು ಮಾತುಕತೆಗಷ್ಟೇ ಕ್ಲಬ್‌ನ ಚಟುವಟಿಕೆ ಸೀಮಿತವಾಗಿಲ್ಲ. ಪ್ರತಿವರ್ಷ ಚಿತ್ರಕಲಾ ಉತ್ಸವ ಕನ್ನಡ ಕಾವ್ಯೋತ್ಸವ ಸ್ಪರ್ಧೆ ಆಯೋಜಿಸುತ್ತದೆ. ಬೆಳಗಾವಿಗೆ ಭೇಟಿ ನೀಡುವ ವಿಮರ್ಶಕರು ಸಾಹಿತಿಗಳು ಮತ್ತು ಲೇಖಕರೊಂದಿಗೆ ಸಂವಾದ ಏರ್ಪಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.