
‘ಕಾರ್ಟೂನ್‌ನೆಸ್ಟ್’ನ ಗೋಡೆಗಳ ತುಂಬ ಓರೆಕೋರೆ ಗೆರೆಗಳ ಚಿತ್ರಗಳು. ಗೆರೆಗಳಲ್ಲಿ ತಿಳಿಹಾಸ್ಯವಿದ್ದರೂ ಒಳಗೆ ಚಿಂತನೆಗೆ ಹಚ್ಚುವ ತಿರುಳು ಇದೆ. ವಿಡಂಬನಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುವ ಈ ‘ಗೂಡು’ ಈಗ ಕಲಾಪ್ರಿಯರು ಭೇಟಿ ನೀಡುವ ತಾಣವೂ ಆಗಿದೆ.
ತಿಳಿಹಾಸ್ಯವಿದೆ, ವಿಡಂಬನೆ ಇದೆ, ಸಮಾಜದ ಮೇಲಿನ ಕಾಳಜಿಯೂ ಇದೆ, ನಾಡಿನ ಅಸ್ಮಿತೆಯನ್ನು ಬಿಂಬಿಸುವ ಪ್ರಜ್ಞಾವಂತಿಕೆಯೂ ಇದೆ. ಇದೆಲ್ಲವೂ ಕಾಣಿಸಿಗುವುದು ಕಲಾವಿದ ಪ್ರಕಾಶ್ ಶೆಟ್ಟಿ ಅವರ ಮನೆ ಎಂಬ ಕಾರ್ಟೂನ್‌ಗಳ ಗೂಡಿನಲ್ಲಿ.
ಮಂಗಳೂರಿನ ಶಕ್ತಿನಗರದಲ್ಲಿರುವ ‘ಕಾರ್ಟೂನ್‌ನೆಸ್ಟ್’ ಹೆಸರಿನ ಮನೆಯ ಒಳಗೂ ಹೊರಗೂ ಓರೆಕೋರೆ ಗೆರೆಗಳ ಲೋಕ. ಜಗಲಿಯಲ್ಲಿ ಕುಳಿತುಕೊಳ್ಳುವ ಟೈಲ್ಸ್‌ನ ಆಸನಗಳಿಂದ ಹಿಡಿದು ಹಾಲ್, ಬೆಡ್‌ರೂಂ, ಅಡುಗೆ ಮನೆ ಮತ್ತು ಡೈನಿಂಗ್ ಹಾಲ್‌ನಲ್ಲಿ ಅಲ್ಲಲ್ಲಿಗೆ ಸೂಕ್ತವೆನಿಸುವ ಆಶಯಗಳನ್ನು ಬಿಂಬಿಸುವ ಚಿತ್ರಗಳು; ಎಲ್ಲದಕ್ಕೂ ತಿಳಿಹಾಸ್ಯದ ಲೇಪನ.
ಬೆಡ್‌ರೂಂನಲ್ಲಿ ಮ್ಯಾಜಿಕಲ್ ಕಾರ್ಪೆಟ್‌ನಲ್ಲಿ ಕುಳಿತು ಕನಸಿನ ಲೋಕದಲ್ಲಿ ವಿಹರಿಸುವವರು ಇದ್ದಾರೆ. ಅಡುಗೆ ಮನೆಯಲ್ಲಿ ಮೀನು ಕಳ್ಳ ಬೆಕ್ಕು ಇದೆ. ಬಾತ್‌ರೂಂನ ಬಾಗಿಲಲ್ಲಿ ಟವೆಲ್ ಕೇಳುವವರಿದ್ದಾರೆ. ಸ್ವಿಚ್ ಬೋರ್ಡಿನ ಸಣ್ಣ ಗ್ಯಾಪ್‌ನಲ್ಲಿ ಬಾಲ ಸಿಲುಕಿ ಒದ್ದಾಡುವ ಬೆಕ್ಕು ಇದೆ. ಕಿಟಕಿಯ ಕರ್ಟನ್ ರಂಗಮಂಟಪದ ಪರದೆಯಾಗುತ್ತದೆ. ಡೈನಿಂಗ್ ಹಾಲ್‌ನ ವಾಷ್ ಬೇಸಿನ್‌ನಲ್ಲಿ ಕೈತೊಳೆಯುವವರಿಗೆ ಮೇಲಿನ ಕನ್ನಡಿ ಎಂಬ ಪಲ್ಲಕ್ಕಿಯೊಳಗಿನಿಂದ ಅವರೇ ಇಣುಕಿ ನೋಡುತ್ತಿರುವಂತೆ ಭಾಸವಾಗಿಸುತ್ತದೆ. ಬಾಗಿಲ ಬಳಿ ಸ್ವಾಗತಿಸಲು ದೇವಕನ್ಯೆಯರು ಹೂ ಹಿಡಿದುಕೊಂಡು ನಿಂತಿದ್ದಾರೆ.
ಇದುವೇ ಕಾರ್ಟೂನ್ ಗೂಡು
ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಅವರು ಸ್ಪಾಟ್ ಕ್ಯಾರಿಕೇಚರ್ ಎಂಬ ಪರಿಕಲ್ಪನೆಯ ಮೂಲಕ ಹೆಸರು ಮಾಡಿದವರು. ‘ಬೆಂಗಳೂರಿನಿಂದ ಬಂದು ಮಂಗಳೂರಿನಲ್ಲಿ ಮನೆ ಮಾಡುವ ಸಂದರ್ಭದಲ್ಲಿ ಮನೆ ವಿಭಿನ್ನ ಆಗಿರಬೇಕು ಎಂದುಕೊಂಡಿದ್ದೆ. ಪಾರಂಪರಿಕ ಶೈಲಿಯ, ಹೆಂಚು ಹಾಸಿದ ಸಣ್ಣ ಮನೆಯನ್ನು ನಿರ್ಮಿಸಿದ ನಂತರ ಹೊರ–ಒಳಗಿನ ವಸ್ತುಗಳನ್ನೇ ಬಳಸಿಕೊಂಡು ಕಾರ್ಟೂನ್‌ಗಳ ಸ್ಪರ್ಶ ನೀಡಿದೆ. ಎಲ್ಲ ಕೊಠಡಿಯಲ್ಲಿ ವ್ಯಂಗ್ಯ–ಚಿತ್ತಾರ ಬಿಡಿಸಲು ಎರಡೂವರೆ ತಿಂಗಳು ಬೇಕಾಯಿತು' ಎಂದರು ಪ್ರಕಾಶ್ ಶೆಟ್ಟಿ.
ಬಿವೇರ್ ಆಫ್ ಕಾರ್ಟೂನಿಸ್ಟ್!
‘ಕಾರ್ಟೂನ್‌ನೆಸ್ಟ್’ನ ಜಗಲಿಯ ಎರಡು ಪಿಲ್ಲರ್‌ಗಳಿಗೆ ಹೊಂದಿಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಒಂದು ಭಾಗದಲ್ಲಿ ಕುಳಿತುಕೊಂಡರೆ ಅಜ್ಜನ ಪಕ್ಕದಲ್ಲಿ ಕುಳಿತುಕೊಂಡಂತೆ ತೋರುವ ರೀತಿಯಲ್ಲಿ ಚಿತ್ರವಿದೆ. ಮತ್ತೊಂದು ಭಾಗದಲ್ಲಿ ಮಗುವಿನ ಜೊತೆ ವಾತ್ಸಲ್ಯಮಯಿ ಅಜ್ಜಿ. ಮಧ್ಯದಲ್ಲಿ ತುಳುನಾಡಿನ ಅಸ್ಮಿತೆ ಕಂಬಳದ ದೃಶ್ಯಾವಳಿ. ಬಾಗಿಲ ಬಳಿ ನಾಯಿಯೊಂದು ಇದೆ, ಜೊತೆಯಲ್ಲಿ ಎಚ್ಚರಿಕೆಯ ಬರಹ–‘ಬಿವೇರ್ ಆಫ್ ಕಾರ್ಟೂನಿಸ್ಟ್’ (ವ್ಯಂಗ್ಯಚಿತ್ರಕಾರ ಇದ್ದಾನೆ, ಎಚ್ಚರಿಕೆ)!
ಒಳಗೆ ಕಾಲಿಟ್ಟು ಹಿಂದಿರುಗಿ ನೋಡಿದರೆ ಬಾಗಿಲ ಮೇಲೆ ಇಂದ್ರಲೋಕ. ಅಲ್ಲಿಂದ ಹೂಮಳೆಗರೆಯುತ್ತಿರುವ ರಂಭೆ ಮತ್ತು ಊರ್ವಶಿ. ಬಲಭಾಗದ ಗೋಡೆಯಲ್ಲಿ ಕಲಾವಿದನ ಸಣ್ಣ ಪರಿಚಯ. 15ನೇ ವರ್ಷದಲ್ಲಿ ಚಿತ್ರಗಳಿಂದ ರಂಜಿಸಲಾರಂಭಿಸಿದ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದಿದ ಪ್ರಕಾಶ್ ಶೆಟ್ಟಿ ‘ಮಯೂರ’ಕ್ಕಾಗಿ ಬರೆದ ಮೊದಲ ಕಾರ್ಟೂನ್, ಬೆಂಗಳೂರಿನ ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರಾ, ಮುಂಗಾರು, ಎರ್ನಾಕುಳಂನಲ್ಲಿ ದಿ ವೀಕ್ ಮುಂತಾದ ಕಡೆ ಕೆಲಸ ಮಾಡಿದ್ದು, ಮದುವೆ, ತಂದೆ ದಿವಂಗತ ಮಹಾಬಲ ಶೆಟ್ಟಿ, ತಾಯಿ ಶಾರದಾ ಶೆಟ್ಟಿ, ಕಲಾವಿದರಾದ ಸಹೋದರರ ಜೊತೆ ಕಳೆದ ದಿನಗಳ ನೆನಪು...
ಬ್ರೇಕ್‌ನ ನಂತರ...
ಸಣ್ಣ ಬ್ರೇಕ್ ನಂತರ ಮತ್ತೆ ಕಾರ್ಟೂನ್ ಲೋಕ. ಹಾಲ್‌ನಲ್ಲಿ ಮುಖ, ಅಡುಗೆಮನೆಯ ವರೆಗೆ ಬಾಲಚಾಚಿರುವ ಡೈನಾಸರ್. ಅದರ ಕೈಯಲ್ಲಿ ಡ್ರಾಯಿಂಗ್ ಪ್ಯಾಡ್ ಹಿಡಿದುಕೊಂಡಿರುವ ಪ್ರಕಾಶ್ ಶೆಟ್ಟಿ. ಕಲಾವಿದ ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ ಕಥಾನಕ ಬಿಂಬಿಸುವ ಸಾಂಕೇತಿಕ ಗೆರೆಗಳು.
ಕಲಾವಿದ ಪ್ರಕಾಶ್ ಶೆಟ್ಟಿ
ಗೋಡೆಯಲ್ಲಿ ಗಾಳ ಹಾಕುವವನೊಬ್ಬನಿಗೆ ಮೀನಿನ ಬದಲು ಸಿಕ್ಕಿದ್ದು ಯಾರದೋ ಶೂ. ಆದರೂ ನಿರಾಸೆಪಡುವಂತಿಲ್ಲ. ಶೂವಿನ ಒಳಗೆ ತುಂಬ ಮೀನು...ಅಲ್ಲೊಬ್ಬ ಸನ್ಯಾಸಿ ಇದ್ದಾನೆ. ಧ್ಯಾನ ಮಾಡುವಾಗ ಸುಮ್ಮನೇ ಸಮಯ ಪೋಲಾಗುವುದು ಬೇಡ ಎಂದು ಕೈಯಲ್ಲಿ ಗಾಳ ಹಿಡಿದುಕೊಂಡಿದ್ದಾನೆ.
ಲಂಡನ್‌ನ ಪ್ರಸಿದ್ಧ ಗಡಿಯಾರಕ್ಕೆ ಕಾರ್ಟೂನ್‌ನೆಸ್ಟ್‌ನಲ್ಲಿ ಒಂದು ಕಂಬದ ಆಸರೆ ಇದೆ. ಆ ಕಂಬದಲ್ಲಿ ಬೆಲ್‌ಬಾಟಮ್ ಪ್ಯಾಂಟ್ ಧರಿಸಿದ ಕಿಲಾಡಿಯೊಬ್ಬ ಹುಡುಗಿಯೊಬ್ಬಳಲ್ಲಿ ಪ್ರೇಮಯಾಚನೆ ಮಾಡುತ್ತಿದ್ದಾನೆ.
ಪ್ರಕಾಶ್ ಶೆಟ್ಟಿ ತಮ್ಮ ದೇವರು ಎಂದುಕೊಂಡಿರುವ ಚಾರ್ಲಿಚಾಪ್ಲಿನ್ ಮತ್ತು ಗಾಂಧೀಜಿ ಕೂಡ ಹಾಲ್‌ನಲ್ಲಿದ್ದಾರೆ. ಹಾಲ್‌ನ ಸ್ವಿಚ್ ಬೋರ್ಡ್‌ನಲ್ಲಿ ಬೆಕ್ಕು ಶಾಕ್ ಆಗಿ ಕಿರುಚುತ್ತಿದೆ. ಅಪಾರ್ಟ್‌ಮೆಂಟ್‌ನಿಂದ ಕುಡುಕ ಗಂಡನನ್ನು ‘ರಕ್ಕಸಿ ಪತ್ನಿ’ ಎತ್ತಿ ಹೊರಗೆ ಬಿಸಾಕುವಾಗ ಆತನ ಕೈಯಲ್ಲಿರುವ ‘ಕ್ಯಾಸ್ಟ್ರೊ ಮುಖರ್ಜಿ’ ವಿಸ್ಕಿಯಾದರೂ ತನಗೆ ಸಿಗಲಿ ಎಂದು ಕೆಳಗೊಬ್ಬ ಬಲೆ ಹಿಡಿದುಕೊಂಡು ನಿಂತಿದ್ದಾನೆ. ಇಂಥ ಸಂದರ್ಭದಲ್ಲಿ ರೀಲ್‌ಗಾಗಿ ಫೋಟೊ ತೆಗೆಯದವರು ಇರುತ್ತಾರೆಯೇ..? ಇಲ್ಲೂ ಇದ್ದಾನೆ ಅಂಥ ಒಬ್ಬ ಹುಡಗ.
ಟಿವಿಯನ್ನು ಮಸಲ್‌ಮ್ಯಾನ್ ಗ್ಲೋಬ್ ಎತ್ತಿ ಹಿಡಿದಂತೆ ತೋರುವ ಕಲ್ಪನೆ ಇದೆ. ಟಿವಿ ಎಂದರೆ ಈಗ ಜಗತ್ತಲ್ಲವೇ? ಆದ್ದರಿಂದ ಜಗತ್ತನ್ನೇ ಎತ್ತಿಹಿಡಿದ ಧನ್ಯತೆ ಆತನಿಗೆ. ಆದರೆ ಆ ಜಗತ್ತನ್ನು ಕಂಡು ಬೇಸರಗೊಂಡಿರುವ ಒಬ್ಬ ಟಿವಿಯ ಹಿಂದಿನಿಂದ ಸುತ್ತಿಗೆಯನೆತ್ತಿ ಹೊಡೆಯಲು ಹೊಂಚು ಹಾಕುತ್ತಿದ್ದಾನೆ. ಮನೆಯ ವಿದ್ಯುತ್ ಸಂಪರ್ಕದ ಮೀಟರ್ ಬೋರ್ಡ್ ಆಟೊದಲ್ಲಿ ಸಾಗಿಸಲಾಗುತ್ತಿದೆ, ಗೋಡೆಯಲ್ಲಿರುವ ಬಲ್ಬ್ ಕದಿಯಲು ಕಳ್ಳನೊಬ್ಬ ಹೊಂಚು ಹಾಕುತ್ತಿದ್ದಾನೆ. ಇಲ್ಲಿ ಮಲಗಿದವರು ಕನಸಿನಲ್ಲಿ ಚಂದ್ರಲೋಕದತ್ತ ವಿಹಾರ ಕೈಗೊಂಡರೆ, ಸೊಂಟಕ್ಕೆ ನಾಗನನ್ನು ಕಟ್ಟಿಕೊಂಡಿರುವ ಗಣಪ ಮುಂದೆ ಬರಬೇಕೇ..?
ಕೈ ತೊಳೆಯುವ ಜಾಗದ ಕನ್ನಡಿ ಪಲ್ಲಕ್ಕಿಯಾಗುವ ಬಗೆ
ಕಾರ್ಟೂನ್‌ನೆಸ್ಟ್‌ನ ಮಲಗುವ ಕೋಣೆಯಲ್ಲಿ ಅಲಾರ್ಮ್ ಬೇಕೆಂದಿಲ್ಲ. ಅಲ್ಲೊಂದು ಕೋಳಿ ಇದೆ. ಆದರೆ, ಈ ಜಂಭದ ಕೋಳಿಯ ಕೊಬ್ಬು ನೋಡಿ, ಅದು ಕೂಗುವುದಿಲ್ಲ. ಗಡಿಯಾರ ಕೈಯಲ್ಲಿ ಹಿಡಿದುಕೊಂಡು ನಿಂತಿದೆ. ತೆಂಗಿನಕಾಯಿ ಕೊಯ್ಯಲು ಮಾರುತಿ ಕಾರಿನಲ್ಲಿ ಬರುವವನೂ ಇದ್ದಾನೆ.
ಡೈನಿಂಗ್ ಹಾಲ್‌ನ ಒಂದು ಭಾಗದಲ್ಲಿ ನಾಟಕದ ಪಾತ್ರಗಳು, ಮತ್ತೊಂದು ಕಡೆ ಮಲಗಿದ್ದವರನ್ನು ಅಟ್ಟಹಾಸ ಹಾಕಿ ಎಬ್ಬಿಸುವ ಯಕ್ಷಗಾನದ ಪಾತ್ರ. ಇಲ್ಲಿರುವ ಬೆಕ್ಕಿಗೆ ಸಿಕ್ಕಿರುವುದು ಮೀನಿನ ಬರೀ ಮುಳ್ಳುಮಾತ್ರ. ಇಲ್ಲೊಂದು ಪೆಟ್ರೊಮ್ಯಾಕ್ಸ್ ಇದೆ. ಟ್ಯೂಬ್‌ಲೈಟಿಗೆ ಕಲ್ಲೆಸೆಯುವ ಪುಡಾರಿಯೂ ಇದ್ದಾನೆ. ಆಹಾರ ಸೇವಿಸುತ್ತಿದ್ದಾರೆ ಎಂದಮೇಲೆ ಕಿಟಕಿಯಿಂದ ನಾಯಿಗಳು ಇಣುಕಿ ನೋಡದೇ ಇರುತ್ತವೆಯೇ..?
ಅಡುಗೆಮನೆಯಲ್ಲಿ ಅಕ್ಕಿಮುಡಿ ಹೊತ್ತುಕೊಂಡು ಹೋಗುವವನೂ ಸ್ಟೇಟ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಮೀನು ಖರೀದಿಸುವವರೂ ಅಡುಗೆ ಮಾಡುವವರೂ, ಇರುವೆಗಳೂ ಇವೆ, ಅರೆವ ಕಲ್ಲೂ ಇದೆ.
‘ಕಾರ್ಟೂನ್‌ನೆಸ್ಟ್’ನಲ್ಲಿ ಸುತ್ತಾಡಿ ಹೊರ ಬಂದಾಗ ಹತ್ತಾರು ಭಾವಗಳು ಮನಸ್ಸಿನಲ್ಲಿ ಹಾಯ್ಡು ಹೋದವು.
‘ಸಾಧಾರಣ ಮನೆಯ ಅಸಾಧಾರಣ ಮಾಡಿದೆ’
ಇದೊಂದು ಆರ್ಟ್ ಗ್ಯಾಲರಿ ಇದ್ದಂತೆ. ವರ್ಷಗಳ ಕಾಲ ಹೀಗೆಯೇ ಉಳಿಯುತ್ತದೆ. ಗೋಡೆಗೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಿದ್ದರಿಂದ ಚಿತ್ರ ಬಿಡಿಸಲು ಅನುಕೂಲ ಆಗಿದೆ. ಕೆಲವು ಹೋಟೆಲ್‌ಗಳಲ್ಲಿ ಈ ರೀತಿ ಚಿತ್ರಗಳನ್ನು ಬಿಡಿಸಿದ್ದೇನೆ. ನನ್ನ ಸಾಧಾರಣ ಮನೆಯನ್ನು ಅಸಾಧಾರಣ ಮಾಡಬೇಕು ಎಂಬ ಅಭಿಲಾಷೆಯಿಂದ ಈ ರೀತಿ ಮಾಡಿದ್ದೇನೆ. ಎಐಯಂಥ ತಂತ್ರಜ್ಞಾನ ಬಂದಿದೆ. ಇನ್ನು ಸ್ವಲ್ಪ ವರ್ಷ ಕಳೆದರೆ ಇದನ್ನೆಲ್ಲ ಕೈಯಲ್ಲಿ ಬರೆದಿದ್ದಾ ಎಂದು ಕೇಳುವವರನ್ನು ಕಂಡರೆ ಅಚ್ಚರಿಪಡಬೇಕಾದದ್ದಿಲ್ಲ.–ಪ್ರಕಾಶ್ ಶೆಟ್ಟಿ ಕಲಾವಿದ
ಮನೆಯ ಕಿಟಕಿಯ ಬಳಿ ನಾಟಕದ ಗ್ರೀನ್ ರೂಮ್. ನಿರ್ದೇಶಕ ಪರದೆ ಸರಿಸಿ ಪ್ರೇಕ್ಷಕರತ್ತ ಇಣುಕುತ್ತಿದ್ದಾನೆ. ಕಿಟಿಕಿ ಪರದೆಯನ್ನೂ ಸೇರಿಸಿಕೊಂಡು ಬರೆದಿರುವ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.