ADVERTISEMENT

ಬೆನಕನ ಅಂದ ಬೆಳಕಿನಲಿ...

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 19:30 IST
Last Updated 9 ಸೆಪ್ಟೆಂಬರ್ 2018, 19:30 IST
ಚೌಕಟ್ಟು
ಚೌಕಟ್ಟು   

ಶಿವಮೊಗ್ಗದ ಆಯನೂರು ಶಿವಕುಮಾರ್, ಭಾಗ್ಯ ದಂಪತಿ ಕುಂಬಳಗೋಡಿನಲ್ಲಿ ಜಾಗ ಹಿಡಿದು, ದೂರದಿಂದ ಜೇಡಿಮಣ್ಣನ್ನು ಲಾರಿಯಲ್ಲಿ ತರಿಸಿ, ಅಲ್ಲೇ ಮಣ್ಣಿನ ಗಣೇಶನ ಸಾವಿರಾರು ಮೂರ್ತಿಗಳನ್ನು ಮಾಡಿದ್ದಾರೆ. ಹಬ್ಬಕ್ಕೆ ತಿಂಗಳ ಮುಂಚಿತವಾಗಿ ಹನುಮಂತನಗರದ ಸಂಕೇನಹಳ್ಳಿ ಅಶ್ವಥ ಕಟ್ಟೆ ಬಳಿ, ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದಾರೆ.

ಮಡದಿ ಮೂರ್ತಿಯ ಆಭರಣಗಳಿಗೆ ಬಣ್ಣ ಹಚ್ಚುತ್ತಾರೆ ( 9886604264). ಗಂಡ ತಯಾರಿಸಿಟ್ಟ ಮೂರ್ತಿಗೆ ಭಾಗ್ಯ, ಬಣ್ಣದ ಪುಟವಿಡುತ್ತಿರುವ ದೃಶ್ಯವನ್ನು ಸೆರೆಹಿಡಿದವರು ವಿದ್ಯಾರಣಪುರದ ಹೆಚ್.ಎಂ.ಟಿ. ಬಡಾವಣೆಯ ವಾಸಿ ರಾಮ್. ವಿ. ಗರಣಿ. ಸೌಂಡ್ ಎಂಜಿನಿಯರ್ ಆಗಿರುವ ಅವರು ಕಳೆದ ಮೂರು ವರ್ಷಗಳಿಂದ ಛಾಯಾಗ್ರಹಣದಲ್ಲಿ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರು ಬಳಸಿದ ಕ್ಯಾಮೆರಾ, ನಿಕಾನ್ ಡಿ. 5500, ಜೊತೆಗೆ 18 – 300 ಎಂ.ಎಂ. ಜೂಂ ಲೆನ್ಸ್, ಎಕಪೋಶರ್ ವಿವರ ಇಂತಿವೆ : ಸ್ಪಾಟ್ ಮೀಟರಿಂಗ್ ಮೋಡ್ ನಲ್ಲಿ 18 ಎಂ.ಎಂ. ಫೋಕಲ್ ಲೆಂಗ್ತ್ ಅಳವಡಿಸಿ , ಅಪರ್ಚರ್ ಎಫ್ 8, ಶಟರ್ ವೇಗ 1/ 125 ಸೆಕೆಂಡ್, ಐ.ಎಸ್.ಒ. 100. ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದ ವಿಶ್ಲೇಷಣೆ ಇಂತಿವೆ

ADVERTISEMENT

*ಮಳಿಗೆಯ ಮುಂಭಾಗದಲ್ಲಿ ಮುಖ್ಯ ವಸ್ತು- ಮಹಿಳೆ ಮತ್ತು ಮೂರ್ತಿಗಳ ಮೇಲಿನ ಇಳಿ ಮದ್ಯಾನ್ಹದ ಬಿಸಿಲಿನ ಝಳ ಮತ್ತು ನಿಧಾನ ಗತಿಯ ಕೈ ಚಲನೆಗೆ ಅನುಗುಣವಾಗಿ ಎಕ್ಸ್ ಪೋಶರ್ ನ ಎಲ್ಲಾ ಅಂಶಗಳೂ ಸಮರ್ಪಕವಾಗಿವೆ. ನೆರಳಿನ ಹಿನ್ನೆಲೆಯಲ್ಲಿ ಜೋಡಿಸಿಟ್ಟಿರುವ ಮೂರ್ತಿಗಳೂ ಚನ್ನಾಗಿ ಕಾಣಿಸಲೆಂದು ಹೆಚ್ಚು ಐ.ಎಸ್.ಒ. (100 ಕ್ಕಿಂತ ಮಿಗಿಲಾಗಿ) ಇಟ್ಟಿದ್ದರೆ, ಮುಖ್ಯ ಭಾಗವು ಬಿಳಿಚಿ ಚಿತ್ರ ಕೆಡುತ್ತಿತ್ತು.

* ವಿಸ್ತಾರ ಗ್ರಹಣ ಮಸೂರವನ್ನು (ವೈಡ್ ಯ್ಯಾಂಗಲ್) ಹಿಗ್ಗಿಸಿರುವುದರಿಂದ ಕಲಾವಿದೆ ಮತ್ತು ಮೂರ್ತಿ, ಎರಡೂ ಚೌಕಟ್ಟಿನ ಮುಖ್ಯವಾದ ಭಾಗದಲ್ಲಿದ್ದು, ಇತರೆ ಮೂರ್ತಿಗಳ ಜೋಡಣೆ ಮತ್ತು ಮಳಿಗೆಯ ಅಗಾದತೆಯ ದೃಶ್ಯವನ್ನು ನೋಡುಗನ ಕಣ್ಣಿಗೆ ಕಟ್ಟುವಲ್ಲಿ 18 ಎಂ.ಎಂ. ಫೋಕಲ್ ಲೆಂಗ್ತ್ ಸಹಕಾರಿಯಾಗಿದೆ.

* ಚೌಕಟ್ಟಿನ ಒಂದು ಮೂರಾಂಶದ ಬಿಂದುವಿಗೆ ಹತ್ತಿರವಾಗಿ ಮಹಿಳೆಯ ಕುಂಚವು ಗಣೇಶನ ಸೊಂಡಲಿಗೆ ನಾಟಿರುವುದು ಮತ್ತು ಇನ್ನುಳಿದ ಎಡಭಾಗದಲ್ಲಿ ಹತ್ತಾರು ಮೂರ್ತಿಗಳನ್ನು ಕಾಣಿಸುತ್ತಿರುವುದು ಹಾಗೂ ಸ್ಟ್ರೀಟ್ ಫೋಟೋಗ್ರಫಿಯ ದೃಷ್ಟಿಯಿಂದ ರಸ್ತೆಯ ಸ್ವಲ್ಪ ಭಾಗವೂ ಕಾಣುತ್ತಿರುವುದು ಉತ್ತಮವಾದ ಚಿತ್ರ ಸಂಯೋಜನೆ.

*ಕಲಾತ್ಮಕವಾಗಿ ಹೆಚ್ಚೇನೂ ಮುಖ್ಯವಲ್ಲದಿದ್ದರೂ ಓರೆಯಾಗಿ ಬೀಳುವ ಪ್ರಖರವಾದ ಸೂರ್ಯನ ಬೆಳಕಿನ ಸಂದರ್ಭವನ್ನು, ಎದುರು ಬೆಳಕಿನ (ಆಪೋಸಿಟ್ ಲೈಟ್ ) ಟೆಕ್ನಿಕ್ ನಲ್ಲಿ ಮಹಿಳೆಯ ಆಚೆ ಬದಿಯಿಂದ ಕ್ಯಾಮೆರಾದ ಕೋನವನ್ನು (ಶೂಟಿಂಗ್ ಯ್ಯಾಂಗಲ್) ಅಳವಡಿಸ ಬಹುದಿತ್ತು. ಆಗ, ಚೌಕಟ್ಟಿನಲ್ಲಿ ಮಹಿಳೆಯ ಮತ್ತು ಮೂರ್ತಿಯ ಅಂಚುಗಳು ಸ್ಪುಟವಾಗಿ ಮಿಂಚುವಂತಾಗಿ, ಹಿನ್ನೆಲೆಯ ಇತರ ಮೂರ್ತಿಗಳೂ ಮಂದವಾಗಿ ಈಗಿನಕ್ಕಿಂತ ಕಡಿಮೆ ಕಾಂತಿ ಭೇದ ವೈರುತ್ಯ ( ಕಾಂಟ್ರಾಸ್ಟ್ ) ಹೊಂದಿ, ಚಿತ್ರದ ಸೊಬಗನ್ನು ಭಾವನಾತ್ಮಕವಾಗಿ ಮುದಗೊಳಿಸ ಬಹುದಿತ್ತು.

ಕೆ.ಎಸ್. ರಾಜಾರಾಮ್

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸ ಬಹುದು. ಗುಣಮಟ್ಟದ ಚಿತ್ರವೊಂದನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್: metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.