ADVERTISEMENT

ಡಾ. ಎಚ್‌. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ: ಜೂ. 1ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 31 ಮೇ 2022, 6:34 IST
Last Updated 31 ಮೇ 2022, 6:34 IST
ಪದ್ಮಭೂಷಣ ಡಾ. ಎಚ್‌. ನರಸಿಂಹಯ್ಯ
ಪದ್ಮಭೂಷಣ ಡಾ. ಎಚ್‌. ನರಸಿಂಹಯ್ಯ   

ಬೆಂಗಳೂರು: ಪದ್ಮಭೂಷಣ ಡಾ. ಎಚ್‌. ನರಸಿಂಹಯ್ಯ ಅವರ ಜನ್ಮದಿನದ ಅಂಗವಾಗಿಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಸಾಂಸ್ಕೃತಿಕ ವಿಭಾಗ 'ಬೆಂಗಳೂರು ಲಲಿತ ಕಲಾ ಪರಿಷತ್‌' ಜೂನ್‌ 1ರಿಂದ ಆರು ದಿನಗಳನೆನಪಿನ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದೆ.

ಜೂನ್‌ 1 ರಿಂದ ಜೂನ್‌ 6ರ ವರೆಗೆ ಬೆಂಗಳೂರಿನ ಜಯನಗರದಲ್ಲಿರುವ ಡಾ. ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ನ್ಯಾಕ್‌ ನಿರ್ದೇಶಕ ಡಾ. ಎಸ್‌.ಪಿ. ಶರ್ಮ ಅವರು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವದ ಕೊನೆಯ ದಿನ ನಟ ಮುಖ್ಯಮಂತ್ರಿ ಚಂದ್ರು ಅಭಿನಯದ 'ಮುಖ್ಯಮಂತ್ರಿ' ನಾಟಕ ಪ್ರದರ್ಶನವಿದೆ. ನಿರ್ದೇಶಕ ಟಿ.ಎನ್‌. ಸೀತಾರಾಮ್‌ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಲಲಿತ ಕಲಾ ಪರಿಷತ್‌ ಮೊದಲಿನಿಂದಲೂ ಪ್ರತಿತಿಂಗಳು ಎರಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಕರ್ನಾಟಕ ಶಾಸ್ತ್ರೀಯ, ಹಿಂದುಸ್ಥಾನಿ ಶಾಸ್ತ್ರೀಯ, ಸುಗಮ ಸಂಗೀತ, ನೃತ್ಯ ನಡೆಯುತ್ತಾದರೂ ಪರಿಷತ್‌ನ ಶ್ರೋತೃಗಳಿಗೆ ನಾಟಕವೇ ಮೊದಲ ಆದ್ಯತೆ. ಈ ಎಲ್ಲಾ ಕಾರ್ಯಕ್ರಮಗಳೂ ಜಯನಗರದ ನ್ಯಾಷನಲ್‌ ಕಾಲೇಜಿನ ಆವರಣದಲ್ಲಿರುವ ಡಾ.ಎಚ್‌.ನರಸಿಂಹಯ್ಯ ಸಭಾಂಗಣದಲ್ಲೇ ನಡೆಯುವುದು ಹೆಮ್ಮೆಯ ವಿಷಯ ಎಂದು ಎರಡನೇ ಅಧ್ಯಕ್ಷ ಹಾಗೂ ರಾಮಸುಧಾ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಎ.ಎಚ್‌.ರಾಮರಾವ್‌ ಹೇಳಿದ್ದಾರೆ.

ADVERTISEMENT

1990ರಲ್ಲಿ ಸ್ಥಾಪನೆಯಾದ ಬೆಂಗಳೂರು ಲಲಿತ ಕಲಾ ಪರಿಷತ್‌ನ ಮೊದಲ ಅಧ್ಯಕ್ಷ ಡಾ. ಎಚ್‌. ನರಸಿಂಹಯ್ಯ ಅವರು ರಾಜ್ಯದ ಶೈಕ್ಷಣಿಕ ಕ್ಷೇತ್ರದ ಹಿರಿಯ ಮುತ್ಸದ್ಧಿ. ವಿಶೇಷವಾಗಿ ದೇಶೀ ವಿದ್ಯಾಶಾಲೆ ಮೂಲಕ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದುದು. ಅವರ ವರ್ಧಂತಿ ಸಮಯದಲ್ಲಿ ಪ್ರತಿವರ್ಷ ಸಾಂಸ್ಕೃತಿಕ ಉತ್ಸವ ನಡೆಸುತ್ತಿರುವುದು ಅಭಿನಂದನಾರ್ಹ ಎಂದು ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಕಾರ್ಯಕ್ರಮ ವಿವರ

01 ಜೂನ್‌ 2022, ಬುಧವಾರ
- ಡಾ. ವಿದ್ಯಾಭೂಷಣ ಅವರಿಂದ ಗಾಯನ. ಪ್ರಾದೇಶಾಚಾರ್‌ ಅವರ ಪಿಟೀಲು, ಎಚ್‌.ಎಸ್‌. ಸುಧೀಂದ್ರ ಅವರ ಮೃದಂಗ ಹಾಗೂ ರಘುನಂದನ್‌ ಅವರ ಘಟ ಇದೆ.

02 ಜೂನ್‌ 2022, ಗುರುವಾರ
- ಪುತ್ತೂರು ನರಸಿಂಹನಾಯಕ್‌ ಮತ್ತು ವೃಂದದಿಂದ ಲಲಿತ ಸಂಗೀತ

03 ಜೂನ್‌ 2022, ಶುಕ್ರವಾರ
- ಆರ್‌. ಕೆ. ಪದ್ಮನಾಭ ಅವರಿಂದ ಗಾಯನ. ಸಿ.ಎಸ್‌ ಚಂದ್ರಶೇಖರ್‌ ಅವರ ಪಿಟೀಲು, ಸಿ.ಚೆಲುವರಾಜ್‌ ಅವರ ಮೃದಂಗ ಹಾಗೂ ರಾಘವೇಂದ್ರ ಪ್ರಕಾಶ್‌ ಅವರ ಘಟ ಇದೆ.

04 ಜೂನ್‌ 2022, ಶನಿವಾರ
- ಎಂ.ಎಸ್‌. ಶೀಲ ಅವರಿಂದ ಗಾಯನ. ಚಾರುಲತಾ ರಾಮಾನುಜನ್‌ ಅವರ ಪಿಟೀಲು, ಯು.ಕೆ. ಜಯಚಂದ್ರರಾವ್‌ ಅವರ ಮೃದಂಗ ಹಾಗೂ ಎಸ್‌.ಎನ್‌. ನಾರಾಯಣಮೂರ್ತಿ ಅವರ ಘಟ ಇದೆ.

05 ಜೂನ್‌ 2022, ಭಾನುವಾರ
- ಸತ್ಯನಾರಾಯಣ ರಾಜು ಮತ್ತು ಶಿಷ್ಯವೃಂದದಿಂದ 'ಭಾವಯಾಮಿ ರಘರಾಮಂ' ಭರತನಾಟ್ಯ ಪ್ರದರ್ಶನವಿದೆ.

06 ಜೂನ್‌ 2022, ಸೋಮವಾರ
- ನಿರ್ದೇಶಕ ಟಿ.ಎನ್‌. ಸೀತಾರಾಮ್‌ ಅವರಿಂದ ಸಮಾರೋಪ ಭಾಷಣ
- ಕಲಾಗಂಗೋತ್ರಿ ಅಭಿನಯಿಸುವ ರಾಜಕೀಯ ನಾಟಕ 'ಮುಖ್ಯಮಂತ್ರಿ' ಪ್ರದರ್ಶನ. ಮುಖ್ಯಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಕಾಣಿಸಿಕೊಳ್ಳಲಿದ್ದಾರೆ. ಡಾ. ಬಿ.ವಿ. ರಾಜರಾಂ ಅವರ ನಿರ್ದೇಶನವಿದೆ. ನಾಟಕಕ್ಕೆ ಟಿ.ಎಸ್‌.ಲೋಹಿತಾಶ್ವ ಕನ್ನಡರೂಪ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.