ADVERTISEMENT

ಸಮುದಾಯಕ್ಕೆ ರಂಗ ಶಿಕ್ಷಕಿ

ರಂಗ ಸಮುದಾಯ, ಸುಧಾ

ಕಿಶನರಾವ್‌ ಕುಲಕರ್ಣಿ
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
ಅಂಗಳವೇ ರಂಗಮಂದಿರ, ಓಣಿಯ ಜನರೇ ಕಲಾವಿದರು
ಅಂಗಳವೇ ರಂಗಮಂದಿರ, ಓಣಿಯ ಜನರೇ ಕಲಾವಿದರು   

ಆ ಓಣಿಗೆ ಹೆಜ್ಜೆ ಇಟ್ಟರೆ ಗೆಜ್ಜೆಯನಾದ, ಕೋಲಾಟದ ಲಯಬದ್ಧ ಲಟ ಪಟ ಸದ್ದು. ಏರುಧಾಟಿಯಲ್ಲಿ ಕೇಳಿಸುವ ಜಾನಪದ ಹಾಡುಗಳು...ಸ್ವಲ್ಪ ಹತ್ತಿರ ಹೋದಂತೆ ಓಣಿಯ ರಸ್ತೆ ಅಂಚಿನಲ್ಲೋ, ದೇವಾಲಯದ ಆವರಣದಲ್ಲೋ ಹೆಂಗಳೆಯರು ವೃತ್ತಾಕಾರದಲ್ಲಿ ನಿಂತು ಹಾಡು ಹೇಳುತ್ತಾ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುತ್ತಾರೆ.. ನಡುವೆ ನಿಂತ ಯುವತಿಯೊಬ್ಬರು ಆ ನೃತ್ಯ, ಗಾಯನಕ್ಕೆ ನಿರ್ದೇಶನ ನೀಡುತ್ತಿರುತ್ತಾರೆ!

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಓಣಿಗಳಲ್ಲಿ ಕಂಡು ಬರುವ ದೃಶ್ಯವಿದು. ರಂಗಕಲಾವಿದೆ ಸುಧಾ ಮುತ್ತಾಳ, ತಾನು ಹುಟ್ಟಿ ಬೆಳೆದ ಊರಿನಲ್ಲಿರುವ ಸಮುದಾಯದ ಎಲ್ಲ ವಯೋಮಾನದ ಮಹಿಳೆಯರಿಗೆ ರಂಗಕಲೆಯ ತರಬೇತಿ ನೀಡುತ್ತಿದ್ದಾರೆ. ಗ್ರಾಮದ ಮಹಿಳೆಯರ ಕಂಠದಲ್ಲೇ ಕಮರುತ್ತಿದ್ದ ಜನಪದ ಗಾಯನಕ್ಕೆ ಜೀವ ತುಂಬುತ್ತಿದ್ದಾರೆ. ತತ್ಪರಿಣಾಮ ಬನ್ನಿಕೊಪ್ಪದ ಗ್ರಾಮದ ಕಮಲವ್ವ ಕಡೇಮನಿ, ಸಾರೆವ್ವ ಕಡೇಮನಿ, ದೇವಕ್ಕ ಮುತ್ತಾಳ, ರೇಣವ್ವ ಅವರಂತಹ 20ಕ್ಕೂ ಹೆಚ್ಚು ಮಹಿಳೆಯರು ವೇದಿಕೆ ಏರಿ ಹಾಡುವಂತಾಗಿದ್ದಾರೆ. ನಾಮಕರಣ, ಆರತಿ, ಮದುವೆ, ದೇವರಪೂಜೆಗಳಿಗಷ್ಟೇ ಸೀಮಿತವಾಗಿದ್ದ ಈ ಅನಕ್ಷರಸ್ಥ ಮಹಿಳೆಯರ ಜನಪದ ಗಾಯನ ರಾಜ್ಯದ ವಿವಿಧ ಭಾಗಗಳ ವೇದಿಕೆಗಳಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ‘ಸುಧಾ ಅವರಿಂದ ನಮ್ಮ ಕಲೆಗೆ ಬೆಳಕು‌ ಬಂದಂತಾಗಿದೆ. ಊರು ದಾಟದ ನಾವು ಇಂದು ರಾಜ್ಯದ ಮೂಲೆ‌ಮೂಲೆಗಳಲ್ಲೂ ಕಾರ್ಯಕ್ರಮ ನೀಡಿದ್ದೇವೆ’ ಎಂದು ಮಹಿಳೆಯರು ಪ್ರೀತಿಯಿಂದ ಸ್ಮರಿಸುತ್ತಾರೆ.

ಒಂದು ಕಾಲದಲ್ಲಿ ಸಮಾಜದಿಂದ ತಿರಸ್ಕಾರಕ್ಕೊಳಗಾಗಿ ನೋವು, ಕಷ್ಟ ಅನುಭವಿಸಿದ್ದ ಸುಧಾ, ಅವೆಲ್ಲವನ್ನೂ ಮೆಟ್ಟಿನಿಂತು ರಂಗಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಾನು ಕಲಿತ ವಿದ್ಯೆಯನ್ನು, ತನ್ನ ಸಮುದಾಯದ ಮಹಿಳೆಯರಿಗೂ ಹೇಳಿಕೊಡುತ್ತಾ, ಅವರನ್ನೂ ಕಲಾವಿದರನ್ನಾಗಿಸುವ ಹಾದಿಯಲ್ಲಿದ್ದಾರೆ. ಇಂಥ ಸಾಧನೆಗಳಿ‌ಗಾಗಿ ಸುಧಾ ಅವರ ಹೆಸರು 2019ರಲ್ಲಿ ಚೆನ್ನೈನ ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌‌ನಲ್ಲಿ ಸೇರಿದೆ. ಆ ಮೂಲಕ ಅವರು ವಿಶ್ವ ರಂಗಭೂಮಿ ಕಲಾವಿದೆ ಎಂದು ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

ADVERTISEMENT

ಬಡತನ ಕಲಿಸಿದ ಬದುಕಿನ ಪಾಠ

ಬಡತನದಲ್ಲೇ ಹುಟ್ಟಿ ಬೆಳೆದ ಸುಧಾ, 6ನೇ ತರಗತಿಗೇ ಶಾಲೆ ಬಿಟ್ಟರು. ತಂದೆ ರಾಮಣ್ಣ ತಾಯಿ ದೇವಕ್ಕರಿಗೆ ಐವರು ಮಕ್ಕಳ ದೊಡ್ಡ ಸಂಸಾರ. ಕುಟುಂಬ ತೀರಾ ಆರ್ಥಿಕ ತೊಂದರೆ ಎದುರಿಸುತ್ತಿತ್ತು. ಹೀಗಾಗಿ ಎಳವೆಯಲ್ಲೇ ಅಮ್ಮನ ಹಿಂದೆ ಕೂಲಿಗೆ ಹೋಗುತ್ತಿದ್ದರು. ‘ಈ ಎಲ್ಲ ಸಂಕಷ್ಟಗಳಿಂದ ಈಚೆ ಬಂದು ಏನಾದರೂ ಸಾಧನೆ ಮಾಡಬೇಕು’ ಎಂಬುದು ಅವರ ಕನಸಾಗಿತ್ತು. ಆದರೆ ಹಣ, ಶಿಕ್ಷಣ, ಮಾರ್ಗದರ್ಶನದ ಕೊರತೆಯಿಂದಾಗಿ ಅವರ ಕನಸು ಕಮರಿತ್ತು. ಇದೇ ವೇಳೆ ಹೊಸಪೇಟೆಯಲ್ಲಿದ್ದ ಸಖಿ ಸೇವಾ ಸಂಸ್ಥೆ ಸುಧಾ ನೆರವಿಗೆ ಬಂತು. ಕಸ್ತೂರಬಾ ಶಾಲೆಯಲ್ಲಿ ಓದಿಸಲು ಅವಕಾಶ ಕಲ್ಪಿಸಿತು. ಅರ್ಧಕ್ಕೆ ನಿಂತಿದ್ದ ಓದನ್ನು ಅವರು ಮುಂದುವರಿಸಿದರು. ನಂತರ ಅದೇ ಸಂಸ್ಥೆಯ ನೆರವಿನಿಂದ ರಂಗಭೂಮಿ ಪ್ರವೇಶಿಸಿದರು. 2010ರಲ್ಲಿ ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದರು. ಸದ್ಯ ಸುಮಾರು 500 ರಂಗ ಪ್ರಯೋಗಗಳಲ್ಲಿ ಸುಧಾ ಅಭಿನಯಿಸಿದ್ದಾರೆ. ನಂತರ ಬಿಡುವಿನ ವೇಳೆಯಲ್ಲಿ ತನ್ನ ಸಮುದಾಯದ ಜನರಿಗೆ, ಶಾಲಾ ಮಕ್ಕಳಿಗೆ ರಂಗ ತರಬೇತಿ ನೀಡುತ್ತಿದ್ದಾರೆ.

ರಂಗುಗೊಳಿಸಿದ ರಂಗಶಿಕ್ಷಣ

ಪ್ರೌಢಶಾಲೆಯಲ್ಲಿದ್ದಾಗಲೇ ಸುಧಾ ಅವರಿಗೆ ಸಾಹಿತ್ಯದ ಅಭಿರುಚಿ ಇತ್ತು. ಸಾಹಿತ್ಯ, ಜನಪದ, ರಂಗಭೂಮಿಯ ಆಕರ್ಷಣೆಗೊಳಗಾಗಿದ್ದ ಅವರು ನಂತರದ ದಿನಗಳಲ್ಲಿ ಕವನಗಳನ್ನು ರಚಿಸುತ್ತಿದ್ದರು. ಈಚೆಗೆ ‘ಮೌನ ಗೊಂಬೆಯ ಮಾತು’ ಎಂಬ ಕವನ ಸಂಕಲನ ಹೊರತಂದಿದ್ದಾರೆ. ‘ಹತ್ತು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದೇನೆ. ರಂಗಭೂಮಿ ನನ್ನ ಬದುಕನ್ನೇ ಬದಲಿಸಿದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು ನೆರವಾಗಿದೆ’ ಎನ್ನುವ ಅವರು ‘ಈ ಊರಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅಂಥವರನ್ನು ಆಯ್ಕೆ ಮಾಡಿ ಔಪಚಾರಿಕ ಶಿಕ್ಷಣ ನೀಡಿ ಪ್ರದರ್ಶನ ಕಲೆಗಳ ಮೂಲಕ ಬೆಳಕಿಗೆ ತರಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಸುಧಾ.

ರಂಗಭೂಮಿ, ಜನಪದ ಕಲೆ ಉಳಿವಿಗಾಗಿ ಒಂದು ವರ್ಷದಿಂದ ‘ಅಕ್ಷರದವ್ವ ಸಾವಿತ್ರಿ ಬಾಯಿಪುಲೆ ಕಲಾರಂಗ ಸಂಸ್ಥೆ’ ಆರಂಭಿಸಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ರಂಗಭೂಮಿ, ನೃತ್ಯ, ಸಂಗೀತ ತರಬೇತಿ ನೀಡುತ್ತಿದ್ದಾರೆ. ಸುಗ್ಗಿ ಪದ, ಕುಟ್ಟೋ ಪದ, ತತ್ವಪದ, ಲಾವಣಿ, ಕೋಲಾಟ, ಭಜನೆಪದ, ಸಾಂಪ್ರದಾಯಿಕ ಪದಗಳು, ಹಂತಿಪದಗಳು ಅವರ ಕಂಠದಲ್ಲಿ ನೂರ್ಮಡಿಯಾಗಿ ಉಲಿಯತ್ತಿವೆ.

ಮಕ್ಕಳಿಗೆ ರಂಗ ಶಿಕ್ಷಣ

ರಂಗಭೂಮಿಯಲ್ಲಿ ಕಲಿತ ಸಮನ್ವಯತೆ, ದೇಹದ ಚಲನೆ, ವ್ಯಾಯಾಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಸಮುದಾಯದ ಜನರಿಗೆ, ಮಕ್ಕಳಿಗೆ ಕಲಿಸುತ್ತಿದ್ದಾರೆ. ಜೊತೆಗೆ ಲಿಂಗ ಅಸಮಾನತೆಯನ್ನು ಪ್ರಜ್ಞಾಪೂರ್ವಕವಾಗಿ ಹೊರಗಿಡುತ್ತಿದ್ದಾರೆ. ‘ನಿತ್ಯ ಕೆಲಸದಲ್ಲಿ ಎಷ್ಟೇ ದಣಿದಿದ್ದರೂ ಇಲ್ಲಿಗೆ ಬಂದು ಅಭ್ಯಾಸ ಮಾಡುತ್ತಲೇ, ತಮ್ಮ ದಣಿವು ಮರೆಯುತ್ತಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ಸುಧಾ. ಇಲ್ಲಿಯವರೆಗೆ ಕೇವಲ ಹಳ್ಳಿಗಷ್ಟೇ ಮೀಸಲಾಗಿದ್ದ ಬನ್ನಿಕೊಪ್ಪ ಗ್ರಾಮದ ಮಹಿಳೆಯರ ಕಲಾ ಪ್ರದರ್ಶನ, ಈಗೀಗ ರಾಜ್ಯದ ವಿವಿಧ ಭಾಗಗಳಿಗೂ ವಿಸ್ತರಿಸಿದೆ.

ಸಮುದಾಯಕ್ಕೆ ರಂಗ ಕಲೆ ಕಲಿಸುತ್ತಾ, ನಾಟಕ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿರುವ ಸುಧಾ ಅವರು, ರಂಗಕರ್ಮಿ ಸಿ.ಬಸವಲಿಂಗಯ್ಯ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ಮಂಜಮ್ಮ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆರಂಭದಲ್ಲಿ ಸೋಲು, ಅವಮಾನ, ಕಷ್ಟಗಳಿತ್ತು. ಪರಿಶ್ರಮ, ಪ್ರಾಮಾಣಿಕ ಕೆಲಸಗಳಿಂದಾಗಿ ಅವೆಲ್ಲ ಮರೆಯಾಗಿವೆ. ರಂಗಭೂಮಿ ಸೇವೆಯಲ್ಲಿ ತಕ್ಕಮಟ್ಟಿಗೆ ಸುಖ, ಸಂತೋಷ, ಯಶಸ್ಸು, ಬದುಕಿಗೊಂದು ಹೊಸ ಚೈತನ್ಯ ಸಿಕ್ಕಿದೆ. ಕೆಲಸ ಮಾಡುವ ಹುಮ್ಮಸ್ಸು ದೊರಕಿದೆ’ ಎಂದು ಸುಧಾ ಹೆಮ್ಮೆಯಿಂದ ಹೇಳುತ್ತಾರೆ. ಮುಂದೆ ಜಿಲ್ಲೆಯಲ್ಲಿ ರಂಗಮಂದಿರ ನಿರ್ಮಿಸಿ, ಪರಿಪೂರ್ಣ ರಂಗಕಲೆ ಶಿಕ್ಷಣ ನೀಡಬೇಕು ಎಂಬ ಗುರಿ ಅವರದ್ದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.