ಗೆರೆಗಳಲ್ಲಿ ಕಂಡ ಗಾಂಧೀಜಿ
ಮಹಾತ್ಮ ಗಾಂಧಿ ಅವರನ್ನು ಗೆರೆಗಳಲ್ಲಿ ನೋಡಿದ್ದೀರಾ? ಶಾಂತಿ, ಸೌಹಾರ್ದ, ಸಹಿಷ್ಣುತೆಯ ಸಂದೇಶ ಸಾರಿದ ಬಾಪು ವ್ಯಂಗ್ಯಚಿತ್ರಕಾರರ ಕಂಗಳಲ್ಲಿ ಹೇಗೆ ಕಂಡಿರಬಹುದು? ಭಾರತದವರು ಮಾತ್ರವಲ್ಲದೆ ವಿವಿಧ ದೇಶಗಳ ಕಲಾವಿದರು ಗಾಂಧೀಜಿಯನ್ನು ನೋಡಿದ ಪರಿ ಹೇಗಿರಬಹುದು? ಬೆಂಗಳೂರಿನಲ್ಲಿ ಆರಂಭವಾಗಿರುವ ಗಾಂಧೀಜಿ ವ್ಯಂಗ್ಯಚಿತ್ರಗಳ ಅಂತರರಾಷ್ಟ್ರೀಯ ಪ್ರದರ್ಶನ ಇದಕ್ಕೆಲ್ಲ ಉತ್ತರದಂತಿದೆ.
ನೋಡಲು ಅವು ಸಾಮಾನ್ಯ ಗೆರೆಗಳು. ಆದರೆ, ಆ ಗೆರೆಗಳು ಸಾಮಾನ್ಯ ವ್ಯಕ್ತಿಯನ್ನು ಚಿತ್ರಿಸಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸೆ, ಶಾಂತಿಯ ಸಂದೇಶ, ಸರಳತೆಯ ಪ್ರಭಾವ ಬೀರಿ ಜಾಗತಿಕ ನಾಯಕರೆನಿಸಿದ ಗಾಂಧಿಯನ್ನು ಕಟ್ಟಿಕೊಡುವ ವ್ಯಂಗ್ಯಚಿತ್ರಗಳಿವು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಈಜಿಪ್ಟ್ ಕಾರ್ಟೂನ್ ಪ್ಲ್ಯಾಟ್‌ಫಾರ್ಮ್‌ನ ಸಹಯೋಗದೊಂದಿಗೆ ಟ್ರಿನಿಟಿ ಮೆಟ್ರೊ ನಿಲ್ದಾಣದ ಹಿಂಭಾಗದಲ್ಲಿರುವ ಮಿಡ್‌ಫೋರ್ಡ್ ಹೌಸ್‌ನಲ್ಲಿ ಪ್ರದರ್ಶನ ಹಮ್ಮಿಕೊಂಡಿದೆ.
ಅಲ್ಲಿ ಗಾಂಧೀಜಿಯನ್ನು ಶಾಂತಿದೂತ, ಪರಿಸರಪ್ರಿಯ, ಸ್ವಾತಂತ್ರ್ಯ ಹೋರಾಟಗಾರ ಸೇರಿದಂತೆ ಹತ್ತಾರು ರೂಪಗಳಲ್ಲಿ ನೋಡಬಹುದು.
ಭಾರತ, ಈಜಿಪ್ಟ್, ಇರಾನ್, ಇರಾಕ್, ಸೌದಿ ಅರೇಬಿಯಾ, ಬ್ರೆಜಿಲ್, ಯುಎಇ, ಕ್ಯೂಬಾ, ಯುಎಸ್ಎ, ಇಂಡೊನೇಷ್ಯಾ, ರೊಮೇನಿಯಾ, ಕೊಲಂಬಿಯಾ, ಸಿರಿಯಾ, ಇಟಲಿ, ಮೊರಾಕ್ಕೊ, ಪೋರ್ಚುಗಲ್, ಸೈಪ್ರಸ್, ಪೋಲೆಂಡ್, ಸ್ಪೇನ್, ಪೆರು, ನಿಕರಾಗುವಾ ದೇಶಗಳ ವ್ಯಂಗ್ಯಚಿತ್ರಕಾರರು ಗಾಂಧೀಜಿಯನ್ನು ಗೆರೆಗಳಲ್ಲಿ ಕಂಡಿದ್ದಾರೆ. ಎರಡು ದಶಕದ ಅವಧಿಯಲ್ಲಿ ರೂಪಿಸಿದ್ದ ವ್ಯಂಗ್ಯಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ಪ್ರದರ್ಶಿಸಲಾಗಿದೆ. ಇಂಡೊನೇಷ್ಯಾ ಕಲಾವಿದ ಜಿತೆತ್ ಕುಸ್ತಾನ ಅವರು ಹಸಿರು ಸಂದೇಶದೊಂದಿಗೆ ಗಾಂಧಿ ನಮಸ್ಕಾರ ಮಾಡುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಈಜಿಪ್ಟ್‌ನ ಖಾಲಿದ್ ಸಲಾಹ್ ಅವರು ಶಾಂತಿ, ಸ್ವಾತಂತ್ರ್ಯದ ಪ್ರತಿರೂಪವಾಗಿ ಕಾಣುವಂತೆ ಗೆರೆಗಳಲ್ಲಿ ಸೆರೆಹಿಡಿದಿದ್ದಾರೆ. ವಿಕ್ಟರಿ ಚಿಹ್ನೆಯೊಂದಿಗೆ ನಗುವ ಗಾಂಧೀಜಿ ಕಂಡಿರುವುದು ಪೋಲೆಂಡ್‌ನ ಕ್ರೋಟೋಸ್ ಟಡೇಯಸ್ ಅವರ ಗೆರೆಗಳಲ್ಲಿ. ಶಾಂತಿಯ ದೀವಿಗೆಯನ್ನು ಹಿಡಿದು ರಕ್ತದ ನಡುವೆ ನಡೆದು ಹೋಗುತ್ತಿರುವ ಗಾಂಧಿಗೆ ರೂಪ ನೀಡಿದ್ದಾರೆ ಮೊರಾಕ್ಕೊದ ಕಲಾವಿದ ಹಸನ್ ಜಾಫಿ.
ಸರ್ವಧರ್ಮ ಸಹಿಷ್ಣುತೆಯ ಸಂದೇಶ ಸಾರುತ್ತಿರುವ ಬಾಪುವನ್ನು ಯುಎಇಯ ಅಮ್ನಾ ಹಲ್ ಹಮ್ಮದಿ ಗೆರೆಗಳಲ್ಲಿ ಮೂಡಿಸಿದ್ದಾರೆ. ಪೆರುವಿನ ಒಮರ್ ಝೆವಲ್ಲೋಸ್ ಅವರು ಚರಕವೆಂಬ ಪುಟ್ಟ ಯಂತ್ರದ ಮಹತ್ವವನ್ನು ಗಾಂಧಿ ರೂಪಕವಾಗಿ ಚಿತ್ರಿಸಿದ್ದಾರೆ. ಕರ್ನಾಟಕದ ಕಲಾವಿದ ವಿ.ಜಿ.ನರೇಂದ್ರ ಅವರು, ಹಾರಿಬರುತ್ತಿರುವ ಗಾಂಧಿಯೊಂದಿಗೆ ಹಸಿರು, ಶಾಂತಿಯ ಸಂದೇಶವನ್ನು ಸಾರಿದ್ದಾರೆ. ಶೋಷಣೆಮುಕ್ತ ಭಾರತದ ಚಿತ್ರಕ್ಕೆ ಜೀವ ತುಂಬಿದ್ದಾರೆ ಬಿ.ಜಿ.ಗುಜ್ಜಾರಪ್ಪ. ಜೇಮ್ಸ್ ವಾಜ್, ಎನ್.ಎಸ್.ನಾಗನಾಥ್, ಜಯರಾಮ ಉಡುಪ, ಸುಭಾಶ್ಚಂದ್ರ ಗೌಡ, ಜೀವನ್ ಶೆಟ್ಟಿ ಅವರ ವ್ಯಂಗ್ಯಚಿತ್ರಗಳೂ ವಿಭಿನ್ನವಾಗಿವೆ.
ಇದೇ 31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ.
ಗೆರೆಗಳಲ್ಲಿ ಕಂಡ ಗಾಂಧೀಜಿ
ದಿಗ್ಗಜರ ನೋಟ
ಸರ್ ಡೇವಿಡ್ ಲೋ, ಶಂಕರ್, ಆರ್.ಕೆ.ಲಕ್ಷ್ಮಣ್, ಪಿಸಿಯಲ್, ಅಹಮದ್, ಅಬು, ಪಿಕೆಎಸ್ ಕುಟ್ಟಿ, ರಂಗಾ, ಸೈಲಾ ಚಕ್ರವರ್ತಿ ಅವರಂತಹ ದಿಗ್ಗಜ ವ್ಯಂಗ್ಯಚಿತ್ರಕಾರರು ತಮ್ಮದೇ ರೀತಿಯಲ್ಲಿ ಗಾಂಧಿಯನ್ನು ಚಿತ್ರಿಸಿದ್ದಾರೆ. ಒಂದೊಂದು ಚಿತ್ರವೂ ವಿಭಿನ್ನ ಕಥೆ, ಘಟನಾವಳಿಗಳ ಮಹತ್ವ ಹೇಳುತ್ತದೆ.
ಗೆರೆಗಳಲ್ಲಿ ಕಂಡ ಗಾಂಧೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.