ಬೇರು–ಭಾವ ಎರಡನ್ನೂ ಮೂರ್ತ–ಅಮೂರ್ತ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಮಣ್ಣು ಕಲಾಶೋಧನೆಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎನ್ನುವುದಕ್ಕೆ ಕರಾವಳಿಯ ಕಾವಿ ಕಲೆಯೇ ಜೀವಂತ ಸಾಕ್ಷಿ. ಈ ಭಾಗದಲ್ಲಿ ಹೇರಳವಾಗಿ ಲಭ್ಯವಿರುವ ಕೆಮ್ಮಣ್ಣು ಕಲಾರೂಪಕ್ಕೆ ಇಳಿಯುವ ಸೊಬಗೇ ಕಾವಿ ಕಲೆ. ಕಾವಿಯೆಂದರೆ ಮಣ್ಣು ಎಂಬ ಅರ್ಥವನ್ನೇ ಧ್ವನಿಸುತ್ತದೆ. ಇಂಥ ಚುಂಬಕ ಶಕ್ತಿ ಇರುವ ಕೆಮ್ಮಣ್ಣಿನ ಬಣ್ಣವು ಗೋಡೆಯ ಮೇಲೆ ಹೂವಾಗಿ, ಪೌರಾಣಿಕ ಪಾತ್ರಗಳಾಗಿ, ದೇವ ದೇವತೆಗಳಾಗಿ, ಮಂಡಲಗಳಾಗಿ ಪಡಿಮೂಡುವ ಸೊಗಸೇ ಬೇರೆ.
ಹದಿಮೂರನೇ ಶತಮಾನದಲ್ಲಿ ಚಾಲ್ತಿಗೆ ಬಂದ ಈ ಕಲೆಯು ಜನಪದ ಹಾಗೂ ಸಾಂಪ್ರದಾಯಿಕ ಕಲಾ ತಂತ್ರಗಾರಿಕೆಯನ್ನು ಉಳಿಸಿಕೊಂಡ, ಇವೆರಡರ ಮಿಳಿತ ರೂಪವೇ ಆಗಿದೆ. ಆಧುನೀಕರಣಕ್ಕೆ ಒಗ್ಗಿಕೊಂಡಂತೆ ಗೋಡೆಗಳನ್ನೆಲ್ಲ ಸಿಮೆಂಟು ಆಕ್ರಮಿಸಿಕೊಂಡಿತು. ಸುಣ್ಣದ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ಕಾವಿ ಕಲೆಯೂ ನಿಧಾನಕ್ಕೆ ತೆರೆಮರೆಗೆ ಸರಿಯಿತು.
ಇಂಥ ದೊಡ್ಡ ಪರಂಪರೆಯನ್ನು ಹೊಂದಿರುವ ಕಾವಿ ಕಲೆಯನ್ನು ಕಳೆದ 23 ವರ್ಷಗಳಿಂದಲೂ ಧೇನಿಸಿ, ಅದರ ಉಳಿವಿಗಾಗಿ ಅಹರ್ನಿಶಿ ದುಡಿಯುತ್ತಿರುವ ಜನಾರ್ದನ ರಾವ್ ಹಾವಂಜೆ, ಈ ಕಲೆಯನ್ನೇ ಬದುಕಾಗಿಸಿಕೊಂಡಿದ್ದಾರೆ.
ಪ್ರೌಢಶಾಲೆಯಲ್ಲಿದ್ದಾಗೊಮ್ಮೆ ಜನಾರ್ದನ ರಾವ್ ಅವರು ಕುಟುಂಬದ ಜತೆಗೆ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಹೋಗಿದ್ದೆ ನೆಪವಾಯಿತು. ಅಲ್ಲಿದ್ದ ನೂರೈವತ್ತರಿಂದ ಇನ್ನೂರು ವರ್ಷ ಹಳೆಯದಾದ ಕಾವಿ ಕಲೆಯು ಇನ್ನಿಲ್ಲದಂತೆ ಆಕರ್ಷಿಸಿತು. ಅದರ ತೀವ್ರತೆ ಎಷ್ಟಿತೆಂದರೆ ಸಿಕ್ಕ ಸಿಕ್ಕ ಗೋಡೆ, ಪುಸ್ತಕಗಳೆಲ್ಲದರ ಮೇಲೆಯೂ ಕೆಂಬಣ್ಣ ಒಂದೇ ಬಳಸಿ ಮಾಡುವ ಕಾವಿ ಕಲೆಯ ಪ್ರಯೋಗ ನಡೆಯಿತು. ಜ್ಯಾಮಿತಿ, ಹೂವು, ಬಳ್ಳಿಯ ವಿನ್ಯಾಸಗಳಲ್ಲಿ ಕೈ ಪಳಗಲು ಶುರುವಾಯಿತು. ಪಿಯುಸಿ ಮುಗಿದ ಮೇಲೆ ಮುಂದೇನು? ಎಂಬ ಪ್ರಶ್ನೆಗೆ ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯು ಕೈಬೀಸಿ ಕರೆಯಿತು. ಅದೇ ಸಂದರ್ಭದಲ್ಲಿ ಉಡುಪಿಯ ಹಸ್ತಶಿಲ್ಪ ಹೆರಿಟೇಜ್ ವಿಲೇಜ್‌ನ ಸಂಸ್ಥಾಪಕ ವಿಜಯನಾಥ ಶೆಣೈ ಅವರ ಸಂಪರ್ಕ ಸಿಕ್ಕಿತು. ಹೆರಿಟೇಜ್ ವಿಲೇಜ್‌ನಲ್ಲಿ ನಡೆಯುತ್ತಿದ್ದ ಕಾವಿ ಕೆಲಸಕ್ಕೆ ಸಹಾಯಕರಾಗಿಯೂ ಸೇರುವ ಅವಕಾಶ ಸಿಕ್ಕಿತು. ಅಲ್ಲಿಯೇ ಕಾವಿ ಕಲೆಯ ಮೂಲಪಟ್ಟುಗಳನ್ನು ಅರಿಯಲು ಸಾಧ್ಯವಾಯಿತು.
ಸಂಶೋಧನಾ ಪ್ರಬಂಧ ಮಂಡನೆ
ವಿಜಯನಾಥ ಶೆಣೈ ಅವರ ಸಂಪರ್ಕದಿಂದ ಕಾವಿ ಕಲೆಯ ಪುರಾತನ ಇತಿಹಾಸವನ್ನು ರೋಚಕವಾಗಿ ತಿಳಿಯಲು ಸಾಧ್ಯವಾಯಿತು. ಜತೆಗೆ ಮಣ್ಣಿನ ಕಲಾಕೃತಿಗಳನ್ನು ರಚಿಸುವ ಕಲಾವಿದರ ಜತೆಗೂ ಒಡನಾಡುವ ಅವಕಾಶ ಸಿಕ್ಕಿತು. ಯಕ್ಷಗಾನ ಮುಖವರ್ಣಿಕೆ ಮೇಲೆ ಪಿಎಚ್.ಡಿ. ಮಾಡಿದ್ದವಿಶ್ವನಾಥ ಎ.ಎಸ್. ಗುರುಗಳಾಗಿದ್ದರು. ಈ ಎಲ್ಲರ ಒಡನಾಟದ ಫಲದಿಂದ ಕಾವಿ ಕಲೆಯ ಸಂಶೋಧನೆಯತ್ತ ಜನಾರ್ದನ ಅವರು ಮುಖ ಮಾಡಿದರು. ಗದಗದಲ್ಲಿರುವ ವಿಜಯ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ದೇಶವನ್ನು ಸುತ್ತಲು ಆರಂಭಿಸಿದರು. ಸ್ಥಳೀಯ ಕಲಾ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದರು. ಕಾವಿ ಕಲೆಯ ಬಗ್ಗೆ ಸಂಶೋಧನೆ ಆರಂಭಿಸಿದರು. ಯಾರಿಂದಲೂ ಹಣಕಾಸಿನ ನೆರವು ಪಡೆಯದೆ ಎಂಟು ವರ್ಷಗಳ ಸತತ ಪರಿಶ್ರಮದಿಂದ ಮಣಿಪಾಲ ಯುನಿವರ್ಸಿಟಿಯಲ್ಲಿ ಕಾವಿ ಕಲೆಯ ಮೇಲೆ ಪಿಎಚ್.ಡಿ. ಪದವಿ ಪಡೆದರು.
ಸಂಶೋಧನೆ ಮಾಡುವಾಗ ಮಹಾರಾಷ್ಟ್ರದಿಂದ ಹಿಡಿದು ಕಾಸರಗೋಡಿನವರೆಗೆ ಸುಮಾರು 800 ಕಾವಿ ಕಲೆ ಇರುವ ತಾಣಗಳಿಗೆ ಭೇಟಿ ನೀಡಿದರು. ಆದರೆ, ಈಗ ಅವುಗಳಲ್ಲಿ ಸುಮಾರು 500 ತಾಣಗಳು ಅಳಿದು ಹೋಗಿವೆ. ಇನ್ನೂರು ತಾಣಗಳು ಮಾತ್ರ ಉಳಿದುಕೊಂಡಿವೆ. 1972ರಲ್ಲಿ ಕಾವಿ ಕಲೆಯ ಬಗ್ಗೆ ನಡೆದ್ದದ್ದೆ ಕೊನೆಯ ದಾಖಲೀಕರಣ. ಒಂದೊಮ್ಮೆ ಈ ಬಗ್ಗೆ ಪಿಎಚ್.ಡಿ ಮಂಡಿಸಲು ಅವಕಾಶ ಸಿಕ್ಕಿಲ್ಲವೆಂದರೂ ಸಂಶೋಧನೆಯಂತೂ ಬಿಡುತ್ತಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ ಅವರು.
ಹೊಸತನವೇನು?
ಪಾರಂಪರಿಕ ಕಟ್ಟಡಗಳಲ್ಲಿರುವ ಮೂಲ ಕಾವಿ ಕಲೆಯನ್ನು ಪುನಃಶ್ಚೇತನಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಚೆಗೆ ಆವರ್ಸಾದ ಕಾತ್ಯಾಯನಿ ಬಾಣೇಶ್ವರ ದೇವಸ್ಥಾನದಲ್ಲಿರುವ ಮೂಲ ಕಾವಿ ಕಲೆಯನ್ನು ಪುನಃಶ್ಚೇತನಗೊಳಿಸಲಾಗಿದೆ. ಗೋವಾದಲ್ಲಿ ದೇವಕಿಕೃಷ್ಣ ರವಳನಾಥ ದೇವಸ್ಥಾನದಲ್ಲಿಯೂ ಕಾವಿ ಕಲೆಯ ಪುನಃಶ್ಚೇತನ ಕೆಲಸ ನಡೆಯುತ್ತಿದೆ.
ಸಿಮೆಂಟ್‌ನಲ್ಲಿ ಕಾವಿ ಕಲೆ ಮಾಡುವುದು ಕಷ್ಟ. ಹಾಗಾಗಿ ಈ ದೇಸಿ ಕಲೆಯನ್ನು ಉಳಿಸಬೇಕು ಎನ್ನುವವರಿಗಾಗಿ ಸುಣ್ಣದ ಗಾರೆ ಬ್ಲಾಕ್ ಮೇಲೆ ಕಾವಿ ಕಲೆ ಇರುವ ಫ್ರೇಮ್‌ಗಳನ್ನು ಪರಿಚಯಿಸಲಾಗಿದೆ. ಜತೆಗೆ ಕಾವಿ ಕಲೆ ಇರುವ ಟೀ–ಕೋಸ್ಟರ್, ಫ್ರಿಜ್ ಮ್ಯಾಗ್ನೆಟ್‌ಗಳನ್ನು ನೋಡಬಹುದು. ತಮ್ಮ ಬಳಿ ತರಬೇತಿ ಪಡೆದ ಕಲಾವಿದರನ್ನು ಒಗ್ಗೂಡಿಸಿ ಕಾವಿ ಆರ್ಟ್ ಫೌಂಡೇಷನ್ ಹುಟ್ಟುಹಾಕಿದ್ದಾರೆ. ಇದರ ಮೂಲಕ ಕಾವಿ ಕಲೆಯ ಮೇಲೆ ಜಿಐ ಟ್ಯಾಗ್ ಹೊಂದುವ ಪ್ರಯತ್ನ ನಡೆಸುತ್ತಿದ್ದಾರೆ.
ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸಿಗುತ್ತಿರುವ ಪ್ರೋತ್ಸಾಹ ಅತ್ಯಲ್ಪ. ವೈಯಕ್ತಿಕ ಸಮಯ ಹಾಗೂ ಖರ್ಚಿನಲ್ಲಿಯೇ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಕಾವಿ ಕಲೆ ಕಲಿಸುವ ಕಾರ್ಯಾಗಾರ ಮಾಡುತ್ತಿದ್ದಾರೆ. ಈ ಕಲೆ ಕಲಿಯಬೇಕು ಎನ್ನುವವರಿಗಾಗಿ ಒಂದು ದಿನದ ಶಿಬಿರದಿಂದ ಒಂದೂವರೆ ವರ್ಷದ ಕೋರ್ಸ್ ಒಂದನ್ನು ರೂಪಿಸುವ ಕಾರ್ಯದಲ್ಲಿಯೂ ಜನಾರ್ದನ ರಾವ್ ನಿರತರಾಗಿದ್ದಾರೆ. ಇಷ್ಟೆ ಅಲ್ಲದೇ ಕಾವಿ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸಿಗಬೇಕು ಎಂದು ಪಣತೊಟ್ಟು ನಿಂತಿದ್ದಾರೆ.
ಏನಿದು ಕಾವಿ ಕಲೆ?
ಸುಣ್ಣದ ಗಾರೆ ಮೇಲೆ ಕೆಮ್ಮಣ್ಣನ್ನು ಹಚ್ಚಿ, ಅದು ತೇವ ಇರುವಾಗಲೇ ಗೀರಿ ಅನವಶ್ಯಕವಾದದ್ದನ್ನು ತೆಗೆಯುತ್ತ, ತಮ್ಮಿಷ್ಟದ ರಚನೆಗೆ ರೂಪ ಕೊಡುವುದೇ ಕಾವಿ ಕಲೆ. ಇದನ್ನು ಮ್ಯೂರಲ್ ಆರ್ಟ್‌ನಲ್ಲಿ ‘ಫ್ರೆಸ್ಕೊಬ್ಯುನೊ ತಂತ್ರಗಾರಿಕೆ’ ಎಂದು ಕರೆಯಲಾಗುತ್ತದೆ. ಅಜಂತಾ ಎಲ್ಲೋರಾ ಗುಹೆಗಳಲ್ಲಿರುವ ಕಲೆ ಇದೇ ತಂತ್ರಗಾರಿಕೆಯಲ್ಲಿ ರೂಪುಗೊಂಡಿದೆ. ಪೇಂಟಿಂಗ್ ಮಾಡಿದರೆ ಅದು ಕಾವಿ ಭಿತ್ತಿ ಕಲೆ ಆಗುವುದಿಲ್ಲ. ಕಾವಿ ಕಲೆಯ ಮೂಲ ಲಕ್ಷಣವೇ ಗೀರಿ ಮಾಡುವುದು. ಕೇವಲ ಮಣ್ಣು ಬಳಸಿದರೆ ಅದು ವರ್ಲಿಯೂ ಆಗಬಹುದು, ಹಸೆ ಚಿತ್ತಾರವೂ ಆಗಬಹುದು.
ಸುಣ್ಣವೆಂದರೆ ಅದು ಸಿಂಪಿ ಸುಣ್ಣ. ಕಪ್ಪೆಚಿಪ್ಪನ್ನು ಕಾಯಿಸಿ, ಅದರ ಆಕ್ಸೈಡ್ ತೆಗೆದಾಗ ಉಂಟಾಗುವ ಸುಣ್ಣವದು. ಋತುಗನುಸಾರ ಸುಣ್ಣದ ಜತೆಗೆ ಜೇನುಮೇಣ, ಮರಳು, ಹುಳಿ ಬೆಲ್ಲ, ನೆರೋಳೆ ಬೀಳು, ಬೇಲದಹಣ್ಣು, ದೂಪಕಾಯಿ, ಬಿಲ್ವಕಾಯಿ ಹೀಗೆ ಸ್ಥಳೀಯವಾಗಿ ಸಿಗುವ ಹದಿನೆಂಟು ಬಗೆಯ ವಸ್ತುಗಳನ್ನು ಬಳಸಲಾಗುತ್ತದೆ. ಹೀಗೆ ತಯಾರಾದ ಸುಣ್ಣದ ಗಾರೆಯ ಮೇಲೆ ಪುಡಿ ಮಾಡಿದ ಲ್ಯಾಟ್ರೈಟ್ ಮಣ್ಣನ್ನು ನುಣ್ಣಗೆ ಅರೆದು ಪೇಂಟ್‌ನಂತಾಗಲು ಇನ್ನಷ್ಟು ಗಿಡಮೂಲಿಕೆಗಳನ್ನು ಬಳಸಿ, ಚಿತ್ರ ಕೆತ್ತಲಾಗುತ್ತದೆ.
ಕಾವಿ ಕಲೆ ಕೇವಲ ದೇವಾಲಯಗಳು, ಮಠಗಳಿಗಷ್ಟೆ ಸೀಮಿತವಾಗಿಲ್ಲ. ಬಸದಿಗಳು, ಚರ್ಚುಗಳು, ಮಸೀದಿಗಳು ಜನಪದ ನಂಬಿಕೆಯನ್ನು ಬಿಂಬಿಸುವ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಮನೆಗಳು, ಅಶ್ವತ್ಥ ಮರದ ಕಟ್ಟೆಗಳು, ತುಳಸಿಕಟ್ಟೆಗಳು ಕೊನೆಗೆ ಸಮಾಧಿಗಳ ಮೇಲೆಯೂ ಈ ಕಲೆ ಅರಳಿ, ನಳನಳಿಸುತ್ತಿದೆ. ಈ ಬಗ್ಗೆಯೂ ಸಂಶೋಧನೆ ನಡೆಸಿ ದಾಖಲೀಕರಣ ನಡೆಸಿದ್ದಾರೆ ಜನಾರ್ದನ.
ಕಲಾವಿದ ಪುರುಷೋತ್ತಮ ಅಡ್ವೆ ಅವರ ನೇತೃತ್ವದಲ್ಲಿ ಕೊಲ್ಲೂರು ದೇವಸ್ಥಾನದಲ್ಲಿ ಕಾವಿ ಕಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ‘ಒಮ್ಮೆ ಆ ಕಲೆಯನ್ನ ನೋಡಿ ಆಕರ್ಷಣೆಗೆ ಒಳಗಾದವನಿಗೆ ಅಲ್ಲಿಯೇ ಕೆಲಸ ಮಾಡುವ ಅವಕಾಶ ಸಿಗುವುದು ದೊಡ್ಡ ವಿಷಯ. ದೇಗುಲದ ಪ್ರಾಂಗಣದ ಸುತ್ತ ಸಪ್ತಮಾತೃಕೆಯರು, ನವದುರ್ಗೆಯರು, ಶೈವಲಕ್ಷಣದಲ್ಲಿ ಶಂಕರತತ್ವದಂತೆ ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿಯನ್ನು ಚಿತ್ರಿಸಲಾಗಿದೆ. ಇಲ್ಲಿ ಮೂಲ ಕಾವಿ ಕಲೆಯನ್ನು ನೋಡಬಹುದು’ ಎನ್ನುತ್ತಾರೆ ಜನಾರ್ದನ ರಾವ್ ಹಾವಂಜೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.