ADVERTISEMENT

ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿ ಕೆರೆ

ಬಿ.ಆರ್.ಸವಿತಾ
Published 28 ಆಗಸ್ಟ್ 2018, 19:30 IST
Last Updated 28 ಆಗಸ್ಟ್ 2018, 19:30 IST
ಕಾವಾ
ಕಾವಾ   

ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಭಾನುವಾರ ಬೆಳ್ಳಂಬೆಳಿಗ್ಗೆ ವಿದ್ಯಾರ್ಥಿಗಳ ದಂಡು ಪೆನ್ಸಿಲ್‌, ಬ್ರಷ್, ವಿವಿಧ ಬಣ್ಣಗಳು, ಬಿಳಿಯ ಹಾಳೆಗಳನ್ನು ಹಿಡಿದು ಬಂದಿತ್ತು. ಕೆರೆಯ ಒಂದೊಂದು ಪಾರ್ಶ್ವದಲ್ಲಿ ಕುಳಿತು ಚಿತ್ರ ಬಿಡಿಸಲು ಅಣಿಯಾದರು. ಇವರನ್ನು ನೋಡಲು ಎಳೆ ಬಿಸಿಲು ಹಾಗೂ ಮೋಡಗಳೂ ಪರಸ್ಪರ ಸ್ಪರ್ಧೆಗಿಳಿದಂತೆ ಕಾಣುತ್ತಿತ್ತು. ವಾಯುವಿಹಾರಿಗಳಿಗೆ ಕುತೂಹಲವೋ ಕುತೂಹಲ. ಅರೆ, ಬೆಳಗಿನ ಚುಮುಚುಮು ಚಳಿಯಲ್ಲಿ ವಾಕ್ ಮಾಡುವುದನ್ನು ಬಿಟ್ಟು, ಇದೇನು ಬರೆಯುತ್ತಿದ್ದಾರೆ ಎಂದು ನೋಡಿದ್ದೇ ನೋಡಿದ್ದು. ನೋಡಿದಾಗ ಹಾಳೆಯಲ್ಲಿ ಮೂಡುತ್ತಿದ್ದ ಚಿತ್ತಾರ ಕಂಡು ಒಂದರೆ ಕ್ಷಣ ಅವರು ಸ್ತಂಭೀಭೂತರಾದರು.

ಹೌದು, ನಿಜಕ್ಕೂ ಅವರೆಲ್ಲ ಚಕಿತಗೊಳ್ಳುವಂತೆ ಮಾಡಿದ್ದು ಕಾವಾ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಚಿತ್ರಕಲಾವಿದರು. ಕಲಾವಿದರು ತಮ್ಮ ಎದುರಿಗೆ ಕಾಣುತ್ತಿದ್ದ ವಿಶಾಲ ಕೆರೆಯ ಚಿತ್ರಣವನ್ನು ಬಗೆಬಗೆಯಾಗಿ ಬಿಡಿಸುತ್ತಿದ್ದರು.

ಹವ್ಯಾಸಿ ಚಿತ್ರಕಲಾವಿದೆ ರಂಜಿತಾ ತಮ್ಮ ಎದುರು ಕಾಣುತ್ತಿದ್ದ ಕೆರೆಯಲ್ಲಿನ ಗೋಪುರ, ನೀರಿನ ಅಲೆಗಳು, ದಡದಲ್ಲಿ ಬೀಡು ಬಿಟ್ಟಿದ್ದ ಹಾಯಿದೋಣಿ, ದಡದಲ್ಲಿ ಬೆಳೆದ ಹಸಿರನ್ನು ಬಿಡಿಸುತ್ತಿದ್ದರು.‌ ಕಾವಾ ವಿದ್ಯಾರ್ಥಿ ವಿಷ್ಣು, ಗೋಪುರ ಹಾಗೂ ನೀರನ್ನು ತಮ್ಮ ಹಾಳೆಯಲ್ಲಿ ಚಿತ್ರಿಸುತ್ತಿದ್ದರು. ಭುವನೇಶ್ವರಿ ಅವರ ಕೈಯಲ್ಲಿ ಇಡೀ ಆವರಣದ ಹಸಿರೇ ಪಡಿಮೂಡಿತ್ತು.

ADVERTISEMENT

‘ಕಾವಾದಿಂದ ಮಾಡಿದ ಮೊದಲ ಪ್ರಯತ್ನ ಇದು. ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆ ಬೇರೆ ಬೇರೆ ಕಡೆ ಈ ತರಹದ ಪ್ರಯೋಗ ಮಾಡುವ ಹಂಬಲ ಇದೆ’ ಎಂದರು ಕಾವಾ ಕಾಲೇಜಿನ ಶಿಕ್ಷಕಿ ರಮ್ಯಾ.

ಪೂಜಾ ಎಂಬ ವಿದ್ಯಾರ್ಥಿನಿ ಚಿತ್ರ ಬಿಡಿಸಲು ಸ್ಟ್ಯಾಂಡ್ ಹಾಗೂ ದೊಡ್ಡ ಹಾಳೆಯ ಮೊರೆ ಹೋಗದೆ ಕೈಯಲ್ಲಿದ್ದ ಚಿಕ್ಕ ಪುಸ್ತಕದಲ್ಲಿ ಪುಟ್ಟ ಹಸಿರೆಲೆಗಳನ್ನು ಬಿಡಿಸಿ ಗಮನ ಸೆಳೆದರು. ಹವ್ಯಾಸಿ ಚಿತ್ರಕಾರ ಪ್ರವೀಣ್ ಅಸಂಗತ ಚಿತ್ರಗಳನ್ನು ಬಿಡಿಸಿದ್ದು ಮತ್ತೂ ಸೆಳೆಯಿತು. ಕೇವಲ ಚಿತ್ರಗಳಷ್ಟೇ ಅಲ್ಲದೇ, ಆ್ಯನಿ ಮರ್ಸಿಲಿನಿ ಹಾಗೂ ಲಿಂಗರಾಜು ಅವರು ಛಾಯಾಚಿತ್ರ ತೆಗೆಯುತ್ತಿದ್ದರು. ಜತೆಗೆ, ನಿರಂಜನ್‌ ಕಲಾಕೃತಿಗಳನ್ನು ಸ್ಥಳದಲ್ಲೇ ವಿನ್ಯಾಸಕ್ಕಿಳಿಸಿದ್ದು ವಿಶೇಷ ಎನಿಸಿತ್ತು.

ಇದೇ ಮೊದಲ ಬಾರಿಗೆ ಕಾವಾ ಹಾಗೂ ವೈಲ್ಡ್ ಮೈಸೂರು ಸಂಘಟನೆ ವತಿಯಿಂದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ 40ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

‘ಸ್ಥಳದಲ್ಲೇ ಚಿತ್ರ ಬರೆಯುವುದು ನಿಜಕ್ಕೂ ಅನನ್ಯ ಅನುಭವ ನೀಡಿತು. ಇಂತಹ ಒಂದು ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದು ಖುಷಿಯಾಯಿತು’ ಎಂದರು
ಆ್ಯನಿ ಮರ್ಸಿಲಿನ್.

‘ಇಲ್ಲಿಗೆ ಎಷ್ಟೋ ಬಾರಿ ಬಂದಿದ್ದೆವು. ನಿಜಕ್ಕೂ ಚಿತ್ರ ಬಿಡಿಸಲು ಇಷ್ಟೊಂದು ವಸ್ತುಗಳಿವೆಯಾ ಎಂದೆನಿಸಿತು’ ಎಂದವರು–ಕಾವಾ ವಿದ್ಯಾರ್ಥಿನಿ ನೇಹಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.