ಕುವೆಂಪು
ಬಾನ್ಬರೆಪ
ಬಾನ್ಬೆರಪ (ನಾ). (ಆಲಂ). ವಿಧಿಲಿಖಿತ; ದೈವಸಂಕಲ್ಪದ ಲಿಖಿತ.
ದೊರೆ ದಶರಥನು ಗಗನದಲ್ಲಿ ಧೂಮಕೇತುವಿನ ಭಯಂಕರ ಶಕುನವನ್ನು ನೋಡಿದನು. ಅದು ತನ್ನ ಕೊನೆಯ ದೈವಸಂಕಲ್ಪದ ಲಿಖಿತ ಎಂದು ತಿಳಿದನು. ಅದನ್ನು ಕುವೆಂಪು ‘ಬಾನ್ಬರೆಪ’ ನುಡಿಯಿಂದ ಹೀಗೆ ರೇಖಿಸಿದ್ದಾರೆ:
‘ಆ ಭಯಂಕರ ಗಗನಶಕುನಮಂ ನೋಡಿ, ದೊರೆ
ದಶರಥಂ ತನ್ನ ಕೊನೆಗದೆ ಬಾನ್‍ಬರೆಪಮೆಂದು
ಬಗೆದ’
ಪಕ್ಕಿದೇರು
ಪಕ್ಕಿದೇರು (ನಾ). ಹಕ್ಕಿ ಆಕಾರದ ತೇರು
ರಾಮ ಲಕ್ಷ್ಮಣ ಸೀತೆಯರನ್ನು ಹೊತ್ತ ಪುಷ್ಪಕ ವಿಮಾನ ಅಯೋಧ್ಯೆಯ ಧರೆಗೆ ಇಳಿಯಿತು. ಅವರನ್ನು ಕಂಡು ಜನರು ಜಯಘೋಷ ಹಾಕಿ ಸಂಭ್ರಮಿಸಿದರು. ಆ ಸಂದರ್ಭದಲ್ಲಿ ಕುವೆಂಪು ಅಚ್ಚರಿಯ ವಿಮಾನವನ್ನು ‘ಪಕ್ಕಿದೇರು’ ಎಂಬ ಪದದಿಂದ ಕರೆದು, ಹೀಗೆ ಜನರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
‘ಲೆಕ್ಕಿಪರದಾರ್
ಬೆಕ್ಕಸದ ಪಕ್ಕಿದೇರಂ?’
ನಿಲ್ಪಡು
ನಿಲ್ಪಡು (ಕ್ರಿ). ಸ್ತಂಭಿತನಾಗು
ಕುವೆಂಪು ಅವರು ಲಂಕೆಯನ್ನು ಪ್ರವೇಶಿಸಿದ ವಾಯುಪುತ್ರನು ಲಂಕಾಲಕ್ಷ್ಮಿಯ ಬಂಗಾರದ ಶಾಂತಿಯ ನಯ, ಸೌಂದರ್ಯ ಸಂಸ್ಕೃತಿ, ಕಲ್ಪನಾ ಕುಶಲತೆಯ ಶಿಲ್ಪವನ್ನು ಮೆಚ್ಚಿ ಸ್ತಂಭಿತನಾದನು ಎಂಬುದನ್ನು ವ್ಯಕ್ತಪಡಿಸುವಾಗ ‘ನಿಲ್ಪಟ್ಟು’ ಪದ ರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ.
‘ಕಲ್ಪನಾಕುಶಲತೆಯ ಶಿಲ್ಪಕೆ ಮನಂ ಮೆಚ್ಚಿ
ನಿಲ್ಪಟ್ಟು ತಲೆತೊನೆದನು.’
ಜೇನ್ಸೊಗ
ಜೇನ್ಸೊಗ (ನಾ). ಜೇನಿನಂತೆ ಮಧುರವಾದ ಸುಖ
ಸೀತೆಯು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲು ತೀರ್ಥವನ್ನು ಬೊಗಸೆಯಿಂದ ತೆಗೆದುಕೊಳ್ಳುವಳು. ಆಗ ಅವಳಿಗೆ ಒಂದು ಮರದ ಮೇಲೆ ಕುಳಿತು ಹೇಳಿದ
ಆಂಜನೇಯನ ಮಾತುಗಳು ಕರ್ಣಾನಂದವನ್ನುಂಟು ಮಾಡುವವು. ಅವಳಿಗೆ ಉಂಟಾದ ಸುಖದಾನಂದವನ್ನು ಕುವೆಂಪು ‘ಜೇನ್ಸೊಗ’ ನುಡಿಯಿಂದ ಹೀಗೆ
ವರ್ಣಿಸಿದ್ದಾರೆ:
‘ಜನಕಜೆಗೆ
ನಾಳನಾಳದಿ ದುಮುಕುತಿರೆ ಜೇನ್ಸೊಗಂ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.