ADVERTISEMENT

ಕುವೆಂಪು ಪದ ಸೃಷ್ಟಿ: ಮಾತಿಲಿ, ಕಾವ್ಯಕೈತವ, ವಿಪಿನರತಿ

ಜಿ.ಕೃಷ್ಣಪ್ಪ
Published 13 ಸೆಪ್ಟೆಂಬರ್ 2025, 23:46 IST
Last Updated 13 ಸೆಪ್ಟೆಂಬರ್ 2025, 23:46 IST
ಕುವೆಂಪು
ಕುವೆಂಪು   

ಮಾತಿಲಿ

ಮಾತಿಲಿ (ನಾ). ನುಡಿಯದೆ ಸುಮ್ಮನಿರುವ ವ್ಯಕ್ತಿ; ಮೌನಿ

ಬಭ್ರುವಾಹನನು ಧರ್ಮರಾಜನ ಯಜ್ಞ ಕುದುರೆಯ ಪಟ್ಟಲಿಖಿತ ಓದಿ ಉತ್ಸಾಹಗೊಂಡು ಯುದ್ಧ ಮಾಡಲು ನಿಶ್ಚಯಿಸುವನು. ತಾಯಿ ಚಿತ್ರಾಂಗದೆಯ ಬಳಿಗೆ ಬಂದು ರಾಜಕಾರ್ಯವನ್ನು ತಿಳಿಸಿ ಆರ್ಶೀರ್ವಾದವನ್ನು ಬೇಡುವನು. ಆಗಿನ ಅವಳ ಮನಸ್ಥಿತಿಯನ್ನು ಚಿತ್ರಿಸುವಾಗ ಕುವೆಂಪು ಅವರು ‘ಮಾತಿಲಿ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:

ADVERTISEMENT

‘ಹಮ್ಮೈಸಿ ಕುಳಿತಾ ಮಾತೆ

ಕಂಬನಿಯ ಕರೆದು ಮಾತಿಲಿಯಾಗಿ ರೋದಿಸಿರೆ,

ಬೆರಗು ಹೊಡೆದಂತಿರ್ದನಾ ಬಭ್ರುವಾಹನಂ.’ 

ಕಾವ್ಯಕೈತವ

ಕಾವ್ಯಕೈತವ (ನಾ). ಕಾವ್ಯವಂಚನೆ

ಈ ಪದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬರುವ poetic injustice ಎಂಬ ಪರಿಕಲ್ಪನೆಯಿಂದ ಪ್ರೇರಿತವಾದುದು. ಈ ಪದವನ್ನು ಮೊದಲು ಥಾಮಸ್ ರೈಮರ್ ಎಂಬ ವಿಮರ್ಶಕ ಬಳಸಿದ್ದ. ಕಾವ್ಯ ನಾಟಕಗಳಲ್ಲಿ ಬರುವ ದುರಂತ ಪಾತ್ರಗಳ ಕುರಿತು ಅವನು ‘poetic injustice ’ ಎನ್ನುತ್ತಾನೆ. ಇದನ್ನೆ ಕುವೆಂಪು ಅನುವಾದಿಸಿರಬಹುದು. ಏಕೆಂದರೆ ಮೇಘನಾದನಿಗೆ ರಾಮಾಯಣದಲ್ಲಿ ಮೋಸವಾಗುತ್ತದೆ, ಅನ್ಯಾಯವಾಗುತ್ತದೆ.

ಕವಿ ಹಿರಣ್ಯಕೇಶಿಯ ಮಾತು ಆದ ನಂತರ ಮೇಘನಾದನು ತನ್ನ ಅಭಿಪ್ರಾಯ ಹೇಳುವನು. ಕುವೆಂಪು ಅವರು ಅವನಾಡುವ ನುಡಿಯಲ್ಲಿ ‘ಕಾವ್ಯಕೈತವ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:

‘ಬುದ್ಧಿಯನ್

ಮಲಗಿಸಲ್ ಮೊದಲು ಜೋಗುಳವುಲಿದು, ತರ್ವಾಯ

ಭಾವಕೇನೊರೆದಡೇನಹಿತಮಪ್ಪುದೆ? ಕವಿಯ

ಕಾವ್ಯಕೈತವಮಂತುಟೆ ವಲಂ ಅಬೋಧಪೂರ್ವಂ

ಹೃದಯ ವಿಜಯಿ!’ 

ವಿಪಿನರತಿ

ವಿಪಿನರತಿ (ನಾ). ಕಾಡಿನ ರತಿ

ರಾವಣೇಶ್ವರನು ಯುದ್ಧವನ್ನು ಕುರಿತು ಕರೆದ ಸಭೆಯಲ್ಲಿ ಜನಪ್ರತಿನಿಧಿಯಾದ ಕವಿ ಹಿರಣ್ಯಕೇಶಿ ಲಂಕೆಯ ಪ್ರಾಕೃತಿಕ ಸೊಬಗನ್ನು ವರ್ಣಿಸಿ, ಅದನ್ನು ಯುದ್ಧದಿಂದ ನಾಶಪಡಿಸಬೇಡಿ ಎಂದು ಕೇಳಿಕೊಳ್ಳುವಾಗ ಅಶೋಕಪುಷ್ಪಗಳ ಬಗ್ಗೆ ಹೀಗೆ ಹೇಳುವನು:

‘ಬೆಂಕಿಯ ಗೊಂಚಲಾಗಿರುವ; ಹೂವಿನ ಓಕುಳಿಯ ಜೀರ್ಕೊವಿ (ಪಿಚಕಾರಿ)ಯಿಂದ ವಿಪಿನ ರತಿಯು ವಸಂತರಾಜ (ಮಧುನೃಪ)ನಿಗೆ ಸಂತೋಷವನ್ನುಂಟು ಮಾಡಲು ರಚಿಸಿದ ಹಾಗಿರುವ ಪುಷ್ಪಗಳನ್ನು ಕಂಡೆ.’

ಕುವೆಂಪು ಅವರ ಕುಪ್ಪಳಿಯ ಬಳಿ ಸಹಜವಾಗಿ ಬೆಳೆದಿರುವ ಅಶೋಕವನವಿದೆ. ಆ ಕಡುಕೆಂಪು ಅಶೋಕಪುಷ್ಪ ಲಕ್ಷಣ ಅವರ ಬೌದ್ಧಿಕ ಸೌಂದರ್ಯದಲ್ಲಿ ಪ್ರೇಮಕಂಪನ್ನು ಹೀಗೆ ಹರಿಸಿದೆ:

‘ಕಿಚ್ಚು

ಕುಚ್ಚಾಯ್ತೊ, ಹೂವಿನೋಕುಳಿಯ ಜೀರ್ಕೋವಿಯಿಂ

ವಿಪಿನರತಿ ಮಧುನೃಪಂಗೊಸಗೆಯಂ ರಚಿಪೊದು

ಮಾಳ್ಕೆಯಚ್ಚಾಯ್ತೊ ಎನೆ, ಕಣ್ ಸೋತು ಶರಣಾಗೆ,

ಪೂತೆಸೆದುವಸುಗೆಗಳ್’ ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.