ADVERTISEMENT

ರಾಮನಗರ: ಕುಂಚದಲ್ಲಿ ಅರಳಿದ ಮಾಗಡಿ ಸೀಮೆ

ನಾಡಿನ ಪ್ರಮುಖ ಚಿತ್ರಕಲಾವಿದ ಮುರಳಿ ರೈನಾ

ದೊಡ್ಡಬಾಣಗೆರೆ ಮಾರಣ್ಣ
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST
ಮಾಗಡಿ ಗುಡ್ಡಗಾಡು ಮಾಗಡಿ ಸೀಮೆಯ ಗ್ರಾಮೀಣ ಚಿತ್ರಣ
ಮಾಗಡಿ ಗುಡ್ಡಗಾಡು ಮಾಗಡಿ ಸೀಮೆಯ ಗ್ರಾಮೀಣ ಚಿತ್ರಣ   

ಮಾಗಡಿ: ಟಿ.ಎಸ್.ಮುರಳಿ ರೈನಾ ನಾಡಿನ ಪ್ರಮುಖ ಕಲಾವಿದರಲ್ಲಿ ಒಬ್ಬರು. ಅವರ ಕಲಾಕುಂಚದಲ್ಲಿ ಪರಿಸರ, ಗ್ರಾಮೀಣ ಸೊಗಡು, ಬೆಟ್ಟಗುಡ್ಡ, ಕಾಡುಮೇಡು, ಹಳ್ಳಕೊಳ್ಳಗಳು ಚಿತ್ರವಾಗಿ ಮೈದಾಳಿವೆ.

ಮೂಲತಃ ತಿರುಮಲೆ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಬಾಲ್ಯ ಜೀವನ ಕಳೆದಿರುವ ರೈನಾ, ಈಗ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ಡಿ‍ಪ್ಲೊಮೊ ಇನ್ ಫೈನ್ ಆರ್ಟ್ಸ್‌ನಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದಾರೆ. ಜಿ.ಡಿ, ಎಂಎಫ್ಎ ಪದವಿ ಗಳಿಸಿದ ಕೀರ್ತಿಗೂ ಭಾಜನರಾಗಿದ್ದಾರೆ.

ಪ್ರಕೃತಿ ಚಿತ್ರಗಳ ಜತೆಗೆ ದೇವಾಲಯ, ಹಳ್ಳಿಯ ಮನೆ, ಕಾಡಿನ ಪರಿಸರ, ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳು, ಹಿಮಾಲಯದ ಶಿಖರಗಳು, ಹಳ್ಳಿಯ ಜನರ ಒಡನಾಟ, ಜಲಪಾತ, ಸೂರ್ಯ ದರ್ಶನದ ವಿವಿಧ ದೃಶ್ಯ, ಕೊರೊನಾ ವೈರಸ್ ವರೆಗೂ ಅವರ ಚಿತ್ರಗಳಲ್ಲಿ ವೈವಿಧ್ಯತೆ ಕಾಣಬಹುದು.

ADVERTISEMENT

ಲಲಿತಾ ಕಲಾ ಅಕಾಡೆಮಿ, ಬೆಂಗಳೂರಿನಲ್ಲಿ 1995ರಲ್ಲಿ ನಡೆದ ರಾಷ್ಟ್ರೀಯ ಕಲಾಮೇಳ, ಮೈಸೂರು ದಸರಾವಸ್ತು ಪ್ರದರ್ಶನ, ಬೆಂಗಳೂರಿನ ಚಿತ್ರಸಂತೆ, ಮಡಿಕೇರಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಉಜ್ಜಯಿನಿಯಲ್ಲಿ 2016ರಲ್ಲಿ ನಡೆದ ಕುಂಭಮೇಳದ ರಾಷ್ಟ್ರಮಟ್ಟದ ಚಿತ್ರಪ್ರದರ್ಶನದಲ್ಲೂ ಭಾಗವಹಿಸಿದ್ದಾರೆ. ಇವರ ಕೀರ್ತಿ ಇಂಗ್ಲೆಂಡ್‌ ವರೆಗೂ ತಲುಪಿದ್ದು ವಿವಿಧ ಸಂಘ ಸಂಸ್ಥೆಗಳ ಗೌರವಕ್ಕೂ ಪಾತ್ರರಾಗಿದ್ದಾರೆ. ತಾಂಜಾವೂರು ಶೈಲಿಯ ಚಿತ್ರಕಲೆಯಲ್ಲೂ ಇವರು ಸಿದ್ಧಹಸ್ತರು.

ಡಿಎಸ್ಆರ್‌ಟಿಯೊಂದಿಗೆ ನಡೆದ ಶಿಕ್ಷಕರ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕಲೆ ಜತೆಗೆ ಫೋಟೊಗ್ರಫಿ, ಸಂಸ್ಕೃತ ಗ್ರಂಥಗಳ ಅಧ್ಯಯನದಲ್ಲೂ ನಿರತರಾಗಿದ್ದಾರೆ. ಕಲೆ ಬಗ್ಗೆ ಅಪಾರ ಒಲವು ನಿಲುವು ಹೊಂದಿರುವ ರೈನಾ, ಹುಟ್ಟೂರು ತಿರುಮಲೆ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿದ್ದಾರೆ. ಇಲ್ಲಿನ ‍ಪ್ರಕೃತಿ ಕ್ಷಣಗಳೇ ಕಲೆಗೆ ಸ್ಫೂರ್ತಿ ಎನ್ನುವ ಮಾತು ಅವರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.