ADVERTISEMENT

ಬೆಂಗಳೂರಿನ ಉತ್ಸಾಹಿಗಳ ಆನ್‌ಲೈನ್ ಯಕ್ಷಗಾನ 'ಮಾಯಾ ಶೂರ್ಪನಖಾ'

ಅವಿನಾಶ್ ಬಿ.
Published 30 ಜೂನ್ 2020, 11:39 IST
Last Updated 30 ಜೂನ್ 2020, 11:39 IST
ಮಾಯಾ ಶೂರ್ಪನಖಿಯಾಗಿ ನಾಗಶ್ರೀ, ಶ್ರೀರಾಮನಾಗಿ ಪ್ರಶಾಂತ ವರ್ಧನ, ಸೀತೆಯಾಗಿ ನಿಹಾರಿಕಾ ಭಟ್
ಮಾಯಾ ಶೂರ್ಪನಖಿಯಾಗಿ ನಾಗಶ್ರೀ, ಶ್ರೀರಾಮನಾಗಿ ಪ್ರಶಾಂತ ವರ್ಧನ, ಸೀತೆಯಾಗಿ ನಿಹಾರಿಕಾ ಭಟ್   

ಲಾಕ್‌ಡೌನ್ ದಿನಗಳಲ್ಲಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ತಿರುಗಾಟದ ಮೇಳಗಳು ನಿಂತರೂ ಕಲಾವಿದರು, ಕಲಾಭಿಮಾನಿಗಳು ಆನ್‌ಲೈನ್‌ನಲ್ಲೇ ಒಂದಿಲ್ಲೊಂದು ಪ್ರಯೋಗದಲ್ಲಿ ನಿರತರಾಗಿದ್ದಾರೆ. ಈ ಮೂಲಕ ಯಕ್ಷಗಾನವೆಂಬ ಸಮಷ್ಟಿ ಕಲೆ ನಿಂತ ನೀರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದೆಷ್ಟೋ ಲೈವ್ ಕಾರ್ಯಕ್ರಮಗಳು ಕಲಾ ರಸಿಕರ ಮನ ತಣಿಸಿದ್ದರೆ, ಬೆಂಗಳೂರಿನ ಉತ್ಸಾಹಿ ಯಕ್ಷಗಾನ ಕಲಾವಿದರ ತಂಡವೊಂದು ಇಡೀ ಪ್ರಸಂಗವನ್ನು ಪ್ರಜಾವಾಣಿ ಫೇಸ್‌ಬುಕ್ ಲೈವ್ ಮೂಲಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿತು.

ಪ್ರಜಾವಾಣಿ ಯುವ ಸಾಧಕಿ 2020 ಪುರಸ್ಕೃತೆ ನಾಗಶ್ರೀ ಗೀಜಗಾರು ಅವರ ಸಂಯೋಜನೆಯಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ವೃತ್ತಿ ಕಲಾವಿದರ ಹಿಮ್ಮೇಳದೊಂದಿಗೆ ಶನಿವಾರ ಸಂಜೆ ಉದಯ ಭಾನು ಕಲಾ ಸಂಘದ ಆವರಣದಲ್ಲಿ ಆನ್‌ಲೈನ್ ಪ್ರೇಕ್ಷಕರಿಗಾಗಿ 'ಮಾಯಾ ಶೂರ್ಪನಖಾ' ಪ್ರದರ್ಶನವು ರಂಜಿಸಿತು. ಕೋವಿಡ್ ಕಾಲದ ಲಾಕ್‌ಡೌನ್ ದಿನಗಳ ಸರ್ಕಾರಿ ಕಟ್ಟುಪಾಡಿನಂತೆ ಅಲ್ಲಿ ಪ್ರೇಕ್ಷಕರಿರಲಿಲ್ಲ, ಆದರೂ ಆನ್‌ಲೈನ್ ಪ್ರೇಕ್ಷಕರಿಗಾಗಿ ಕಲಾವಿದರು ಗೆಜ್ಜೆ ಕಟ್ಟಿ ಕುಣಿದರು, ಆಡಿದರು, ಪಾಡಿದರು; ಅದುವರೆಗೂ ಅಂಕುಶ ಹಾಕಿಟ್ಟಂತಿದ್ದ ತಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ ನಿರಾಳವಾದರು. ಪ್ರಮುಖ ಪಾತ್ರಗಳಲ್ಲಿ ಮಹಿಳೆಯರೂ ಮಿಂಚಿದರು.

ಕನ್ನಡ ಸಾಹಿತ್ಯ ಹಾಗೂ ರಂಗ ಕಲೆಗಳ ಪ್ರಪಂಚಕ್ಕೆ ಅನೂಹ್ಯ ಕೊಡುಗೆ ನೀಡಿರುವ ಯಕ್ಷಗಾನ, ಸಾಹಿತ್ಯ, ಗಾಯನ, ವಾದನ, ನಾಟ್ಯ, ಅಭಿನಯ - ಇವುಗಳೆಲ್ಲವನ್ನೂ ಮೇಳೈಸಿರುವ ಸರ್ವಾಂಗೀಣ ಕಲೆ. ಇತರ ಕಲೆಗಳಂತೆ ಇಲ್ಲಿ ರಿಹರ್ಸಲ್ ಇರುವುದಿಲ್ಲ, ಶಿಸ್ತುಬದ್ಧ ಕಲಿಕೆಯ ಬಳಿಕ ಮನೋಧರ್ಮದಿಂದ ಮೂಡುವ ಆಶು ಪ್ರತಿಭೆಯೇ ಮಾನದಂಡ.

ADVERTISEMENT

ರಾಮಾಯಣದಲ್ಲಿ, ಶ್ರೀರಾಮನು ವನವಾಸಕ್ಕೆ ತೆರಳಿದ ಸಂದರ್ಭದಲ್ಲಿ ರಾವಣನ ಸಹೋದರಿ ಶೂರ್ಪನಖಿಯು ರಾಮ-ಲಕ್ಷ್ಮಣರಲ್ಲಿ ಮೋಹಗೊಂಡು ದಂಡನೆಗೀಡಾಗುವ ಪ್ರಸಂಗವಿದು. ಈ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಪಲ್ಲವ ಗಾಣಿಗ ಹೇರಂಜಾಲು ಹಾಗೂ ವಿನಯ್ ಆರ್. ಶೆಟ್ಟಿ, ಮದ್ದಲೆಯಲ್ಲಿ ನಾರಾಯಣ ಹೆಬ್ಬಾರ್ ಹಾಗೂ ಚೆಂಡೆಯಲ್ಲಿ ಸುಜನ್ ಹಾಲಾಡಿ ಮತ್ತು ಮನೋಜ್ ಆಚಾರ್ ಸಹಕರಿಸಿದರು. ಶ್ರೀರಾಮನಾಗಿ ಪ್ರಶಾಂತ ವರ್ಧನ್, ಮಾಯಾ ಶೂರ್ಪನಖಿಯಾಗಿ ನಾಗಶ್ರೀ ಗೀಜಗಾರು, ಸೀತೆಯಾಗಿ ನಿಹಾರಿಕಾ ಭಟ್, ಶೂರ್ಪನಖಿಯಾಗಿ ಮಂಜು ಹವ್ಯಕ, ಲಕ್ಷ್ಮಣನಾಗಿ ನಾಗೇಶ್ ಗೀಜಗಾರು, ಋಷಿಮುನಿಗಳಾಗಿ ಮಾನಸಾ ಉಪಾಧ್ಯ, ವಿನಯ್ ಹೊಸ್ತೋಟ ಅವರು ರಂಗಸ್ಥಳದಲ್ಲಿ ಮಿಂಚಿದರು.

ಮಾಯಾ ಶೂರ್ಪನಖಾ ಯಕ್ಷಗಾನದ ವಿಡಿಯೊ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.