ADVERTISEMENT

ಸಂಭ್ರಮದ ‘ಹಕ್ಕಿನ ಹಬ್ಬ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 19:30 IST
Last Updated 24 ಜನವರಿ 2020, 19:30 IST
ಸಿ.ಎಸ್‌. ದ್ವಾರಕಾನಾಥ್‌
ಸಿ.ಎಸ್‌. ದ್ವಾರಕಾನಾಥ್‌   

ಸಂವಿಧಾನದಲ್ಲಿ ಪರಿಹಾರ ಇದೆ

ಎಲ್ಲ ಸ್ವತಂತ್ರ ದೇಶಗಳು ಗಣರಾಜ್ಯಗಳಲ್ಲ. ಆದರೆ, ಎಲ್ಲ ಗಣರಾಜ್ಯಗಳು ಸ್ವತಂತ್ರ ರಾಷ್ಟ್ರಗಳು. ಲಿಖಿತ ಸಂವಿಧಾನ ಹೊಂದಿರುವ ಭಾರತ ಒಂದು ಸ್ವತಂತ್ರ ರಾಷ್ಟ್ರ ಮತ್ತು ಗಣರಾಜ್ಯವಾಗಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ. ಸಂವಿಧಾನ ಜಾರಿಯಾದ ನಂತರ ನಾವು ಒಂದಿಷ್ಟು ಸಾಧನೆ ಮಾಡಿದ್ದೇವೆ. ಇದರ ಹೊರತಾಗಿಯೂ ಆರೋಗ್ಯ, ಶಿಕ್ಷಣ, ನಿರುದ್ಯೋಗ, ಬಡತನದಂತಹ ಸಮಸ್ಯೆಗಳು ಉಳಿದುಕೊಂಡಿವೆ. ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರದಂತಹ ಸವಾಲುಗಳು ದೇಶವನ್ನು ಕಾಡುತ್ತಿವೆ. 70 ವರ್ಷದಲ್ಲಿ ನಾವು ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಓದಲಿಲ್ಲ. ಅದರ ಆಶಯಗಳನ್ನು ಗ್ರಹಿಸಲಿಲ್ಲ. ಅದರ ಮಹತ್ವ ಮತ್ತು ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲದಕ್ಕೂ ಹೆಚ್ಚಾಗಿ ಸಂವಿಧಾನದ ಆಶಯದಂತೆ ನಡೆದುಕೊಳ್ಳಲಿಲ್ಲ. ಎಲ್ಲರೂ ಸಂವಿಧಾನದಂತೆ ನಡೆದುಕೊಂಡರೆ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದು.

- ನಾಗಮೋಹನ ದಾಸ್, ನಿವೃತ್ತ ನ್ಯಾಯಮೂರ್ತಿ

ADVERTISEMENT

***

ಸಂವಿಧಾನ ಅಪಾಯದಲ್ಲಿದೆ

ಸಂವಿಧಾನ ಅಪಾಯದಲ್ಲಿರುವ ಕಾಲಘಟ್ಟದಲ್ಲಿ ಬಂದಿರುವ ಈ ಗಣರಾಜ್ಯೋತ್ಸವಕ್ಕೆ ಹೆಚ್ಚು ಮಹತ್ವವಿದೆ. ಇದು ಕೇವಲ ಗಣರಾಜ್ಯೋತ್ಸವ ದಿನವಲ್ಲ, ಸಂವಿಧಾನದ ದಿನವಾಗಬೇಕು. ಜನರ ಹಕ್ಕುಗಳ ಹಬ್ಬವಾಗಬೇಕು. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಕೆಲಸಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಸಂವಿಧಾನದತ್ತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನಾಗರಿಕರಿಗೆ ಕನಿಷ್ಠ ತಿಳಿವಳಿಕೆ ನೀಡುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು, ತಾರತಮ್ಯದಿಂದ ಕೂಡಿದೆ. ಅದನ್ನು ವಿರೋಧಿಸಿ ಬೀದಿಗಿಳಿದ ಎಲ್ಲ ಜನರ ಕೈಯಲ್ಲಿ ಸಂವಿಧಾನದ ಪ್ರತಿ, ರಾಷ್ಟ್ರಧ್ವಜ ಮತ್ತು ಅಂಬೇಡ್ಕರ್‌ ಫೋಟೊ ಇದ್ದವು. ಇದೊಂದು ಒಳ್ಳೆಯ ಬೆಳವಣಿಗೆ. ಅಷ್ಟರ ಮಟ್ಟಿಗೆ ಜನರಿಗೆ ಜಾಗೃತಿ ಮೂಡಿದೆ.

– ಸಿ.ಎಸ್‌. ದ್ವಾರಕಾನಾಥ್, ವಕೀಲರು ಮತ್ತು ಸಾಮಾಜಿಕ ಹೋರಾಟಗಾರರು

***

ಹಕ್ಕು, ಸ್ವಾತಂತ್ರ್ಯದ ಮಹತ್ವ ಅರಿವಾಗುತ್ತಿದೆ

ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಸ್ವಾತಂತ್ರ್ಯ ಸುಲಭವಾಗಿ ಸಿಗುತ್ತಿದ್ದ ಕಾರಣ ಜನಸಾಮಾನ್ಯರಿಗೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ಮಹತ್ವ ಅರಿವಾಗಿರಲಿಲ್ಲ. ರಾಷ್ಟ್ರೀಯ ಮಹತ್ವದ ದಿನಗಳು ಕೇವಲ ದಿನಾಚರಣೆಗಳಿಗೆ ಮಾತ್ರ ಸೀಮಿತವಾಗಿದ್ದವು. ಹಾಗಾಗಿ ಸಂವಿಧಾನದತ್ತ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮಹತ್ವ ಜನಸಾಮಾನ್ಯರಿಗೆ ತಿಳಿಯಲಿಲ್ಲ. ನಮ್ಮ ಗಣರಾಜ್ಯ ಮತ್ತು ಸಂವಿಧಾನದ ಬಗ್ಗೆ ಜನಸಾಮಾನ್ಯರು ಕನಿಷ್ಠ ತಿಳಿವಳಿಕೆ ಮತ್ತು ಪ್ರಜ್ಞೆ ಬೆಳೆಸಿಕೊಳ್ಳಲು ಇದು ಸಕಾಲ.

– ಪ್ರೊ. ಬಾಬು ಮಾಥ್ಯೂ, ನ್ಯಾಷನಲ್‌ ಲಾ ಸ್ಕೂಲ್‌

***

ಆತ್ಮಸಾಕ್ಷಿಯಂತೆ ಕೆಲಸ ಮಾಡಲಿ

ಸಂವಿಧಾನ ಜಾರಿಯಾಗಿ 70 ವರ್ಷ ಸಂದ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಹಿಂದೆಂದಿಗಿಂತಲೂ ಮಹತ್ವ ಪಡೆದಿದೆ. ಸಂವಿಧಾನದ ಶಿಶುಗಳಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲವಿದು. ಸಾಂವಿಧಾನಿಕ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದೇವೆಯೇ ಎಂದು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪ್ರಜಾತಂತ್ರವನ್ನು ರಕ್ಷಿಸುವ ಹೊಣೆ ಹೊತ್ತಿರುವ ಚುನಾವಣಾ ಆಯೋಗ, ಆರ್‌ಬಿಐ, ಸಿಬಿಐ, ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆಗಳು ಯಾರ ಕೈಗೊಂಬೆಗಳಂತೆ ವರ್ತಿಸದೆ ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕಾಗಿದೆ.

– ರವಿವರ್ಮ ಕುಮಾರ, ಹಿರಿಯ ವಕೀಲರು

ನಿರೂಪಣೆ: ಗವಿ ಬ್ಯಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.