ADVERTISEMENT

ಕಾಗದ ಕಲಾಕೃತಿಗಳ ಕಾವ್ಯಾತ್ಮಕ ತಂತು‌

ರೂಪಾ .ಕೆ.ಎಂ.
Published 30 ಮಾರ್ಚ್ 2025, 0:52 IST
Last Updated 30 ಮಾರ್ಚ್ 2025, 0:52 IST
ಬೆಂಗಳೂರಿನ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ ಗ್ಯಾಲರಿಯಲ್ಲಿ ಕಲಾವಿದ ರವಿಕುಮಾರ್ ಕಾಶಿ ಅವರ ಪೇಪರ್‌ ಪಲ್ಪ್‌ ಇನ್‌ಸ್ಟಾಲೇಷನ್‌ ಪ್ರದರ್ಶನ.  ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ ಗ್ಯಾಲರಿಯಲ್ಲಿ ಕಲಾವಿದ ರವಿಕುಮಾರ್ ಕಾಶಿ ಅವರ ಪೇಪರ್‌ ಪಲ್ಪ್‌ ಇನ್‌ಸ್ಟಾಲೇಷನ್‌ ಪ್ರದರ್ಶನ.  ಚಿತ್ರ: ಪ್ರಶಾಂತ್ ಎಚ್.ಜಿ.   

ಈ ನಾಜೂಕಿನ ಕಾಗದದ ಕಲಾಕೃತಿ ಏನು ಹೇಳುತ್ತಿರಬಹುದು ಎಂದು ಕುತೂಹಲದಿಂದ ನೋಡುತ್ತಿರುವಾಗಲೇ ಕಾಗದದಿಂದ ಹೊಮ್ಮಿ, ಗೋಡೆಯ ಮೇಲೆ ಚದುರಿದ ಅದರ ನೆರಳು ಇನ್ನು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತದೆ. ಅರೆ! ಇದು ಅದೇನಾ ಅಥವಾ ಇದಿರಬಹುದಾ? ಎಂದುಕೊಂಡು ಗೊಂದಲಕ್ಕೆ ಬಿದ್ದಾಗಲೇ, ಕಲಾಕೃತಿಯ ಮೇಲೆ ಬಿದ್ದ ಇಷ್ಟಿಷ್ಟೆ ಬೆಳಕು ಮತ್ತೊಂದು ಹೊಸ ಕಲ್ಪನೆಯನ್ನು ಅರಳಿಸುತ್ತದೆ.

ಕಾಗದ, ನೆರಳು, ಬೆಳಕು–ಹೀಗೆ ಮೂರು ವಿಭಿನ್ನ ಧಾತುಗಳು ಸೇರಿ ಮನೋಭಿತ್ತಿಯೊಳಗೆ ಅರಳಿಸುವ ಕಲಾಕೃತಿಗಳಿಗೆ ಎಣೆಯೇ ಇಲ್ಲ!. ಚೌಕಟ್ಟೇ ಇರದ ಈ ಕಲಾಕೃತಿಗಳು, ನೋಡುಗರ ಎದೆಯೊಳಗೆ ಇಳಿಯುತ್ತಲೇ ತಾನು ತಾನಾಗಿಯೇ ಹಲವು ಅನೂಹ್ಯ ಸಂಗತಿಗಳನ್ನು ಪಿಸುಗುಟ್ಟಿದಂತೆ ಭಾಸವಾಗುತ್ತವೆ. ಈ ಕಲಾಲೋಕದೊಳಗೆ ಹೊಕ್ಕು, ಇವನ್ನೆಲ್ಲ ಗ್ರಹಿಸಲು ಸೂಕ್ಷ್ಮತೆಯ ಚುಂಗನ್ನು ಹಿಡಿದಿರಬೇಕಷ್ಟೆ. 

ಕಾಗದದ ಮೇಲೆ ಅಕ್ಷರಗಳನ್ನು ಮೂಡಿಸುವುದು, ಕಾಗದವನ್ನೇ ಬೇರೆ ಬೇರೆ ಆಕಾರಗಳಿಗೆ ತಂದು ಕಲಾಕೃತಿಗಳನ್ನು ರೂಪಿಸುವುದು ಸಾಮಾನ್ಯ. ಆದರೆ ಕುಶಲತೆಯಿಂದ ಕಾಗದವನ್ನು ತಯಾರಿಸಿ, ಅದರ ತಿರುಳಿನಿಂದಲೇ ಅಕ್ಷರಗಳನ್ನು ಮೂಡಿಸುವುದು, ಹಲವು ಅರ್ಥಗಳನ್ನು ಹೊಳೆಯಿಸುವ ಕಲಾಕೃತಿಗಳನ್ನು ರೂಪಿಸುವುದು ವಿಶೇಷವೇ ಸರಿ. 

ADVERTISEMENT

ಸಾಮಾನ್ಯವಾಗಿ ಕಾಗದವನ್ನು ನಾರಿನಂಶ ಇರುವ ಸಸ್ಯಗಳಿಂದ, ಹತ್ತಿ ಬಟ್ಟೆ, ಪಂಚೆ ಬಟ್ಟೆ ಹಾಗೂ ಮರುಬಳಕೆ ಮಾಡಬಹುದಾದ ಕಾಗದದಿಂದಲೇ ತಯಾರಿಸಲಾಗುತ್ತದೆ. ಇದರ ಜತೆಗೆ ಬಾಳೆದಿಂಡು, ಬಗೆಬಗೆಯ ಹುಲ್ಲುಗಳು, ಅಡಕೆ ಪಟ್ಟೆ, ಭತ್ತ, ಜೋಳದ ಸಿಪ್ಪೆ, ಹಿಪ್ಪನೇರಳೆ, ಹುಲ್ಲು, ಈರುಳ್ಳಿ ಸಿಪ್ಪೆ ಸೇರಿದಂತೆ ನಾರಿನ ಎಳೆಗಳನ್ನು ಹೊಂದಿರುವ ಸಸ್ಯಗಳಿಂದಲೂ ಕಾಗದ ತಯಾರಿಸಲಾಗುತ್ತದೆ. 

ಟಿಬೆಟ್‌ನಲ್ಲಿ ಬೆಳೆದ ಡ್ಯಾಪ್ನೆ ಗಿಡದಿಂದ ತಯಾರಾದ ಕಾಗದದಲ್ಲಿ ಕನ್ನಡದ ಅಕ್ಷರಗಳು ರೂಪ ತಳೆದು, ಭಾಷೆಯೂ, ಭಾವವೂ ಏಕಕಾಲಕ್ಕೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಭಾಷೆ ಒಂದು ಕಿಟಕಿ ಇದ್ದ ಹಾಗೆ. ಚರ್ಮದ ರೂಪಕವಾಗಿಯೂ ಭಾಷೆಯನ್ನು ನೋಡಬಹುದು. ಸೂಕ್ಷ್ಮ ಹಾಳೆಯ ಮೇಲೆ ರೂಪುಗೊಂಡಿರುವ ಈ ಕಲಾಕೃತಿಯು ಜಾಲರಿಯಂತೆ ಕಾಣುತ್ತದೆ. ಹೀಗೆ ಕಾಗದದಿಂದ ರೂಪುಗೊಂಡ ಒಟ್ಟು ಏಳು ಕಲಾಕೃತಿಗಳು ‘ಅಂಚುಗಳಲ್ಲಿ ಅಂತ್ಯವಾಗದ ನಾವು’ ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಳ್ಳುತ್ತಿವೆ. 

ನೀಲಿ ಬೆಟ್ಟದಂತೆ ಕಾಣುವ ಕಲಾಕೃತಿ

ಈ ಬಗ್ಗೆ ಕಲಾವಿದ ರವಿಕುಮಾರ್‌ ಕಾಶಿ ಹೇಳುವುದು ಹೀಗೆ, ಅಂಚುಗಳಲ್ಲಿ ಅಂತ್ಯವಾಗದ ನಾವು ಅಂದರೆ ನಾವೆಲ್ಲರೂ ದ್ವೀಪವಲ್ಲ. ನಮ್ಮ ಚರ್ಮವೇ ದೇಹದ ಕೊನೆ ಅಂತ ಅಂದುಕೊಂಡರೂ ಅಲ್ಲಿ ರಾಶಿ ರಾಶಿ ರಂಧ್ರಗಳಿವೆ. ಇದಲ್ಲದೇ ಮನುಷ್ಯ ದೇಹದ ನವರಂಧ್ರಗಳಿಗೆ ತಾತ್ವಿಕ ಚೌಕಟ್ಟಿನಲ್ಲಿ ವಿಶೇಷ ಅರ್ಥಗಳಿವೆ. ಮನುಷ್ಯ ಎಂದಿಗೂ ದ್ವೀಪವಾಗಿ ಉಳಿಯಲಾರ. ಸತತವಾಗಿ ಪರಸ್ಪರ ಕೊಡುವ–ಕೊಳ್ಳುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದನ್ನೇ ಈ ಕಲಾಕೃತಿ ಧ್ವನಿಸುತ್ತದೆ ಎಂದುಕೊಂಡರೂ ಅದೇ ಅಂತಿಮವಲ್ಲ. ನೋಡುಗರ ಚಿಂತನೆಯೊಳಗೆ ಅದು ಬೇರೆ ಬೇರೆ ಅರ್ಥವನ್ನು ಧ್ವನಿಸಲು ಅವಕಾಶ ಮಾಡಿಕೊಡುತ್ತದೆ.  

ಇಪ್ಪತ್ತೈದು ವರ್ಷಗಳಿಂದ ಕಾಗದ ತಯಾರಿಕೆ ಹಾಗೂ ಅದರಲ್ಲಿಯೇ ಕಲಾಕೃತಿ ರೂಪಿಸುವ ಕಾರ್ಯದಲ್ಲಿ ನಿರತರಾಗಿರುವ ಕಾಶಿ ಅವರು, ಸತತ ಪ್ರಯೋಗಗಳಿಂದ ಹೊಸತನವನ್ನು ಕಂಡುಕೊಂಡಿದ್ದಾರೆ. ಡ್ಯಾಪ್ನೆ ಗಿಡದ ನಾರನ್ನು ಬೇಯಿಸಿ, ಗೊಜ್ಜಿನ ರೂಪಕ್ಕೆ ಬಂದ ಅದನ್ನು ಬಾಟಲಿ ಹಾಕಿ ಇಡಲಾಗುತ್ತದೆ. ಪ್ಲಾಸ್ಟಿಕ್‌ ಹಾಳೆಯ ಮೇಲೆ ಅನಿಸಿದ್ದನ್ನು ಬಿಡಿಸಿ, ಅದರ ಮೇಲೆ ಗೊಜ್ಜನ್ನು ಹಾಕಿ ನಾಜೂಕಾಗಿ ಎತ್ತಿದಾಗ ಈ ರೂಪ ಪಡೆದಿದೆ. ಕಳೆದ ಎರಡು ವರ್ಷಗಳಿಂದ ಸತತ ಪ್ರಯೋಗದಿಂದ ಈ ಏಳು ಕಲಾಕೃತಿಗಳು ರೂಪ ತಳೆದಿವೆ. 

ಕಾಗದದ ತಿರುಳು ಹಾಗೂ ಹಾಳೆ ತಯಾರಾಗುವ ಹಂತಗಳಲ್ಲಿ ಹಲವು ಬಗೆಯ ಕಲ್ಪನೆಗಳು ಗರಿಗೆದರುತ್ತವೆ. ಪ್ರಯೋಗಕ್ಕೆ ಇಳಿದಾಗ ಆ ಕಲ್ಪನೆಗಳಿಗೆ ಒಂದು ಸ್ಪಷ್ಟತೆ ಸಿಗುತ್ತದೆ. ಕೆಲವೊಮ್ಮೆ ಸಿಗದೇ ಇನ್ನೇನೋ ಆಗಿ ಬಿಡಬಹುದು. ಅದೂ ಕೂಡ ಪ್ರಯೋಗದ ಹಾದಿಯೇ ಆಗಿರುತ್ತದೆ. ಹಾಳೆಯ ಗೊಜ್ಜು ಆರಂಭದಲ್ಲಿ ಟೊಮೆಟೊ ಕೆಚಪ್‌ನಂತೆ ಮೆತ್ತಗಾಗಿ ಕೈಗೆ ಸಿಗುತ್ತಿರಲಿಲ್ಲ. ಅದಕ್ಕೊಂದು ಸ್ಥಿರತೆ ತರಲು ಹಲವು ಪ್ರಯೋಗಗಳು ಮಾಡಬೇಕಾಯಿತು. ಕಲ್ಪನೆಗೆ ಅನುಸಾರ ಅಕ್ರಿಲಿಕ್‌ ಬಣ್ಣ ಬಳಸಲಾಗಿದೆ. ಈ ಕಾಗದಗಳು ನೈಜವಾಗಿದ್ದು, ಬ್ಲೀಚ್‌ ಮಾಡಿಲ್ಲ. ರೆಸಿನ್ ಹಾಕಿಲ್ಲ. ಯಾವುದೇ ರಾಸಾಯನಿಕವನ್ನೂ ಬಳಸಿಲ್ಲ. ಎಂಥ ಪ್ಲಾಸ್ಟಿಕ್‌ನಲ್ಲಿ ಎಷ್ಟು ಹೊತ್ತು ಒಣಗಿಸಬೇಕು. ಎಷ್ಟು ಬಣ್ಣ ಹಾಕಬೇಕು ಎಂಬುದು ಕೂಡ ನಿರಂತರ ಪ್ರಯೋಗದಿಂದ ಅರಿಯಲಾಗಿದೆ ಎಂದು ಕಲಾಕೃತಿಗಳು ರೂಪುಗೊಂಡ ಕಥೆಯನ್ನು ಹಂಚಿಕೊಂಡರು ರವಿಕುಮಾರ್‌ ಕಾಶಿ. 

ಕಾಗದವೆಂದರೆ ಬಹಳ ಹಗುರವಾಗಿರುವ ಪದಾರ್ಥ. ಅದಕ್ಕಿರುವ ಲಕ್ಷಣವನ್ನು ಉಳಿಸಿಕೊಂಡು, ಅದನ್ನೇ ಮಾಧ್ಯಮವಾಗಿಸಿಕೊಂಡು ಏನು ಹೇಳುವುದಕ್ಕೆ ಸಾಧ್ಯ ಎಂಬುದರತ್ತ ಕಾಶಿ ಅವರು ಗಮನಹರಿಸಿದ್ದಾರೆ. ಈ ಕಲಾಕೃತಿಗಳಿಗೆ ನೆರಳು ಹಾಗೂ ಬೆಳಕು ಕೂಡ ಸಾಥ್‌ ಕೊಡುತ್ತವೆ. ಇಂಥದ್ದೆ ಹಾಗೂ ಇಷ್ಟೆ ಬೆಳಕಿನ ಪ್ರಮಾಣದಲ್ಲಿ ಇವುಗಳನ್ನು ಪ್ರದರ್ಶಿಸಿದರೆ ಅವು ಕೊಡುವ ಅರ್ಥ ಬೇರೆಯದೇ ಆಗಿರುತ್ತದೆ. ಬೆಳಕು ತುಸು ಹೆಚ್ಚಾದರೂ ಅವು ಧ್ವನಿಸುವ ಧಾಟಿ ಭಿನ್ನವಾಗಬಹುದು. ಕಲಾಕೃತಿ ರಚಿಸುವಾಗಷ್ಟೆ ಅಲ್ಲ, ಅದನ್ನು ಒಂದು ಜಾಗದಲ್ಲಿ ಪ್ರದರ್ಶಿಸುವಾಗಲೂ ಹೊಸ ಹೊಸ ಅರ್ಥವನ್ನು ಹೊಳೆಯಿಸುತ್ತದೆ. ದೃಶ್ಯವಾಗುತ್ತಲೇ ಕಾವ್ಯಾತ್ಮಕವಾಗುವುದು ಈ ಕಲಾಕೃತಿಗಳ ಅಗ್ಗಳಿಕೆ. ಗ್ರಹಿಕೆಗೆ ಸಿಕ್ಕರೆ ಪ್ರತಿ ಕಲಾಕೃತಿಯ ಕ್ಯಾನ್ವಾಸ್‌ ವಿಸ್ತರಿಸುತ್ತಲೇ ಸಾಗುತ್ತದೆ. 

ಜೂನ್‌ 15ರವರೆಗೆ ಪ್ರದರ್ಶನ...

ರವಿಕುಮಾರ್‌ ಕಾಶಿ ಅವರ ಕಾಗದದ ಅನನ್ಯ ಕಲಾಕೃತಿಗಳ ಪ್ರದರ್ಶನ  ‘ಪೇಪರ್‌ ಪಲ್ಪ್‌ ಇನ್‌ಸ್ಟಾಲೇಷನ್‌’ಗೆ ಸಾಕ್ಷಿಯಾಗಿದೆ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ ಗ್ಯಾಲರಿ. ಜೂನ್‌ 15ರವರೆಗೆ ಪ್ರದರ್ಶನ ಇರಲಿದೆ. 

ರವಿಕುಮಾರ್‌ ಕಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.