ADVERTISEMENT

PV Web Exclusive: ಬೆನ್‌ ಕಿಂಗ್‌ಸ್ಲೆ ‘ಗಾಂಧಿ‘ಯಾದ ಕಥನ

ಭಾರತೀಯ ಚಿತ್ರರಂಗದಲ್ಲೂ ‘ಗಾಂಧಿ’ಯಾಗಿ ಪ್ರಭಾವ ಬೀರಿದ ‍ಕಲಾವಿದರು

ರಾಹುಲ ಬೆಳಗಲಿ
Published 2 ಅಕ್ಟೋಬರ್ 2020, 7:46 IST
Last Updated 2 ಅಕ್ಟೋಬರ್ 2020, 7:46 IST
ಮಹಾತ್ಮಾ ಗಾಂಧೀಜಿ ಮತ್ತು ಗಾಂಧೀಜಿ ಪಾತ್ರದಲ್ಲಿ ಬೆನ್‌ ಕಿಂಗ್‌ಸ್ಲೆ
ಮಹಾತ್ಮಾ ಗಾಂಧೀಜಿ ಮತ್ತು ಗಾಂಧೀಜಿ ಪಾತ್ರದಲ್ಲಿ ಬೆನ್‌ ಕಿಂಗ್‌ಸ್ಲೆ   
""

ಒಂದಾನೊಂದು ಕಾಲದಲ್ಲಿ ಗಾಂಧಿ ಎಂಬ ಸಹಜ ವ್ಯಕ್ತಿ ಈ ಭೂಮಿಯ ಮೇಲೆ ಓಡಾಡಿದ್ದರು ಎಂದರೆ, ಮುಂಬರುವ ಪೀಳಿಗೆಗಳು ನಂಬಲಿಕ್ಕಿಲ್ಲ.
–ಅಲ್ಬರ್ಟ್ ಐನ್‌ಸ್ಟೀನ್, ವಿಜ್ಞಾನಿ

**
ಮಾನವೀಯತೆ ಪ್ರಗತಿಯ ಸಂಕೇತ ಗಾಂಧೀಜಿ. ಜೀವನವಿಡೀ ಶಾಂತಿ, ಸಹನೆ ಧ್ಯಾನಿಸಿದರು. ಅಕ್ಷರಶಃ ಪರಿಪಾಲಿಸಿದರು.
–ಮಾರ್ಟಿನ್ ಲುಥರ್ ಕಿಂಗ್ ಜೂನಿಯರ್, ಮಾನವ ಹಕ್ಕುಗಳ ಹೋರಾಟಗಾರ

–ಹೀಗೆ ವ್ಯಾಖ್ಯಾನಿಸಲ್ಪಡುವ ಮಹಾತ್ಮ ಗಾಂಧಿ ಪಾತ್ರ ನಿಭಾಯಿಸುವುದು ಮತ್ತು ನ್ಯಾಯ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆ ನಟ ಬೆನ್‌ ಕಿಂಗ್‌ಸ್ಲೆಗೆ ಕಾಡದೇ ಇರಲಿಲ್ಲ. ರಿಚರ್ಡ್‌ ಅಟೆನ್‌ಬರೊ ನಿರ್ಮಾಣ-ನಿರ್ದೇಶನದ ‘ಗಾಂಧಿ’ ಚಲನಚಿತ್ರದಲ್ಲಿ ತಮಗೆ ಕೊಡಲಾದ ಪಾತ್ರಕ್ಕೆ ಅವರು ಅಕ್ಷರಶಃ ಜೀವ ತುಂಬಿದರು. ಹಲವು ಸವಾಲುಗಳನ್ನು ಎದುರಿಸಿದರು.

ADVERTISEMENT

1982ರಲ್ಲಿ ತೆರೆ ಕಂಡ ‘ಗಾಂಧಿ’ ಚಲನಚಿತ್ರದಲ್ಲಿ ಬೆನ್‌ ಕಿಂಗ್‌ಸ್ಲೆ ಅಭಿನಯ ಯಾವ ಪರಿ ಪರಿಣಾಮ ಬೀರಿತೆಂದರೆ, ಸ್ವತಃ ಗಾಂಧೀಜಿಯೇ ಇದರಲ್ಲಿ ಅಭಿನಯಿಸಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿತು. ಅತ್ಯುತ್ತಮ ನಟ ಸೇರಿದಂತೆ 11ಕ್ಕೂ ಹೆಚ್ಚು ಆಸ್ಕರ್ ಪ್ರಶಸ್ತಿಯನ್ನು ಈ ಚಿತ್ರವು ಬಾಚಿಕೊಂಡಿತು.

ಗುಜರಾತಿ ಕುಟುಂಬದ ಬೆನ್‌ ಕಿಂಗ್‌ಸ್ಲೆ
ಇಂಗ್ಲೆಂಡ್‌ನ ಯಾರ್ಕಶೈರ್‌ನ ಸ್ಕಾರಬರೊದಲ್ಲಿ 1943ರ ಡಿಸೆಂಬರ್ 31ರಂದು ಜನಿಸಿದ ಬೆನ್ ಕಿಂಗ್‌ಸ್ಲೆ ಅವರ ಮೂಲ ಹೆಸರು ಕೃಷ್ಣ ಭಾನಜಿ. ಕೀನ್ಯಾದ ಗುಜರಾತಿ ಕುಟುಂಬದಲ್ಲಿ ಜನಿಸಿದ ಅವರಿಗೆ ವೈದ್ಯ ಡಾ. ರಹೀಮತ್‌ಉಲ್ಲಾ ಹಾರ್ಜಿ ಭಾನಜಿ ತಂದೆಯಾದರೆ, ತಾಯಿ ಇಂಗ್ಲಿಷ್ ನಟಿ ಅನ್ನಾ ಲಿನಾ ಮೇರಿ.

ಡಾ. ರಹೀಮತ್‌ಉಲ್ಲಾ ಅವರ ಪೂರ್ವಜರು ವ್ಯಾಪಾರಸ್ಥರಾಗಿದ್ದು, ಗುಜರಾತ್‌ನಿಂದ ವಲಸೆ ಬಂದು ಹಲವು ವರ್ಷ ತಾಂಜಾನಿಯ ದೇಶದ ಜಾಂಜಿಬಾರ್‌ನಲ್ಲಿ ನೆಲೆಸಿದ್ದರು. 14ನೇ ವಯಸ್ಸಿನಲ್ಲಿ ರಹೀಮತ್‌ಉಲ್ಲಾ ಇಂಗ್ಲೆಂಡ್‌ಗೆ ಬಂದರು. ತಾಯಿಯ ಪ್ರಭಾವದಿಂದ ಕಿರಿಯ ವಯಸ್ಸಿನಲ್ಲೇ ರಂಗಭೂಮಿಯತ್ತ ಆಸಕ್ತಿ ಮೂಡಿಸಿಕೊಂಡ ಬೆನ್ 1960ರಿಂದ ವಿವಿಧ ನಾಟಕಗಳಲ್ಲಿ ಅಭಿನಯಿಸಿತೊಡಗಿದರು.

ಚಿತ್ರನಿರ್ದೇಶಕ ರಿಚರ್ಡ್‌ ಅಟೆನ್‌ಬರೊ ತಮ್ಮ ‘ಗಾಂಧಿ’ ಚಿತ್ರದಲ್ಲಿ ‘ಗಾಂಧಿ’ ಯಾಗಿ ಅಭಿನಯಿಸಲು ಇಚ್ಛಿಸುವಿರಾ ಎಂದು ಕೇಳಿದಾಗ, ಬೆನ್ ಅವರಿಗೆ ಹಲವು ಪ್ರಶ್ನೆಗಳು ಕಾಡಿದವು. ಭವಿಷ್ಯದಲ್ಲಿ ತಲೆದೋರುವ ಸವಾಲುಗಳು ಹೇಗೆ ನಿಭಾಯಿಸುವುದು ಎಂಬ ಚಿಂತೆ ಮೂಡಿತು.ಆದರೆ, ಇಂಥ ಅವಕಾಶ ಒದಗಿ ಬಂದಿರುವಾಗ ಅದನ್ನು ಕಳೆದುಕೊಳ್ಳಬಾರದು ಎಂದು ದೃಢ ನಿಶ್ಚಯವೂ ಮಾಡಿದರು. ರಂಗಭೂಮಿ ಚಟುವಟಿಕೆಯಿಂದ ಬಿಡುವು ಪಡೆದು, ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡರು.

ಭಾರತದಲ್ಲಿ ಚಲನಚಿತ್ರದ ಚಿತ್ರೀಕರಣಕ್ಕೂ ಮುನ್ನ ಬೆನ್‌, ಗಾಂಧೀಜಿ ಕುರಿತು 28ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದರು. ಸ್ಥಿರಚಿತ್ರ, ವಿಡಿಯೊಗಳ ಮೂಲಕ ಗಾಂಧೀಜಿಯ ನಡಿಗೆ, ಹಾವಭಾವ ಅರಿತರು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವುದರ ಜೊತೆ ಅವುಗಳನ್ನು ಹಂತಹಂತವಾಗಿ ರೂಢಿಸಿಕೊಳ್ಳಲು ಪ್ರಯತ್ನಿಸಿದರು. ಕೊಂಚ ದಪ್ಪವಿದ್ದ ಅವರು ದಿನಗಳು ಕಳೆದಂತೆ 20 ಪೌಂಡ್‌ನಷ್ಟು ತೂಕ ಇಳಿಸಿಕೊಂಡರು. ತಲೆ ಬೋಳಿಸಿಕೊಂಡರು. ಕೇವಲ ಸಸ್ಯಾಹಾರ ಸೇವಿಸುವುದನ್ನು ರೂಢಿಸಿಕೊಂಡರು. ಮೈಮೇಲೆ ಬಿಳಿ ಬಟ್ಟೆ ಹಾಕಿಕೊಂಡು, ಲಾಠಿ ಹಿಡಿದು ನಡೆಯುವುದನ್ನು ಕಲಿತರು.

ಚಿತ್ರೀಕರಣದ ವೇಳೆ ನಸುಕಿನಲ್ಲೇ ಏಳುತ್ತಿದ್ದ ಅವರು ಯೋಗಾಭ್ಯಾಸ, ಧ್ಯಾನ ಮಾಡುತ್ತಿದ್ದರು. ಸಂಜೆ ಚರಕ ಸುತ್ತುತ್ತಿದ್ದರು.ಚಿತ್ರ ತೆರೆ ಕಂಡ ಬಳಿಕವೂ ಅವರ ಜೀವನದ ಮೇಲೆ ಇವೆಲ್ಲವೂ ಪ್ರಭಾವ ಬೀರಿದವು.

ದೇಶದ ವಿವಿಧೆಡೆ ಸುತ್ತಿದ್ದು ಅಲ್ಲದೇ ಜನರೊಂದಿಗೆ ಸಂವಾದಿಸಿದಾಗ, ಅವರಿಗೆ ಗಾಂಧಿಯ ವಿವಿಧ ಮುಖಗಳು ಪರಿಚಯವಾದವು. ಬ್ರಿಟಿಷ್ ಸಾಮ್ರಾ‌ಜ್ಯಶಾಹಿ ಮೇಲಿದ್ದ ಸಿಟ್ಟನ್ನು ಗಾಂಧೀಜಿ ಶಾಂತಿ ಮತ್ತು ಅಹಿಂಸೆ ರೂಪದಲ್ಲಿ ಪರಿವರ್ತಿಸಿಕೊಂಡಿದ್ದು ಅವರಿಗೆ ಬೆರಗು ಮೂಡಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನೀಡಿದ ಒಂದು ಕರೆಗೆ ಜನರು ಒಗ್ಗೂಡಿದ್ದು ಅವರಿಗೆ ಅಚ್ಚರಿ ತಂದಿತು.

‘ಗಾಂಧಿ ಚಿತ್ರದ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿರುವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿರುವೆ. ಜನ ನನ್ನನ್ನು ಈಗಲೂ ಗಾಂಧಿಯೆಂದೇ ಗುರುತಿಸುತ್ತಾರೆ. ಇದಕ್ಕಿಂತ ಹೆಮ್ಮೆಯ ಸಂಗತಿ ಇನ್ನೇನಿದೆ’ ಎನ್ನುತ್ತಾರೆ ಬೆನ್‌ ಕಿಂ‌ಗ್‌ಸ್ಲೆ.

ವಿವಿಧ ಪಾತ್ರದಲ್ಲಿ ‘ಗಾಂಧಿ’ಯಾದ ಕಲಾವಿದರು
‘ಗಾಂಧಿ’ ಚಿತ್ರದಲ್ಲಿ ಬೆನ್‌ ಕಿಂಗ್‌ಸ್ಲೆ ಅವರ ಅಭಿನಯದಂತೆಯೇ ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ನ ಕೆಲ ಕಲಾವಿದರು ‘ಗಾಂಧಿ’ಯಾಗಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಕೆಲವೇ ನಿಮಿಷಗಳವರೆಗೆ ಬಂದು ಹೋದರೂ ‘ಗಾಂಧಿ’ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಅಂತಹ ಕೆಲ ಕಲಾವಿದರು ಮತ್ತು ಅಭಿನಯಿಸಿದ ಚಿತ್ರದ ಸಂಕ್ಷಿಪ್ತ ವಿವರ ಹೀಗಿದೆ.

ಮಾರ್ಕ್ ರಾಬ್ಸನ್ ಅವರ ‘9 ಹವರ್ಸ್ ಟು ರಾಮ’ (1963) ಇಂಗ್ಲಿಷ್ ಚಿತ್ರದಲ್ಲಿ ಜೆ.ಎಸ್‌.ಕಾಶ್ಯಪ್ ಗಾಂಧಿ ಪಾತ್ರ ನಿರ್ವಹಿಸಿದರು. ಗಾಂಧಿ ಹತ್ಯೆ ಮಾಡುವ 9 ಗಂಟೆಗೂ ಮುನ್ನ ನಾಥುರಾಮ ಗೋಡ್ಸೆ ಮನಸ್ಥಿತಿ ಹೇಗಿತ್ತು ಎಂಬುದನ್ನು ತೋರಪಡಿಸುವುದು ಚಿತ್ರ ಸಾರಂಶವಾಗಿತ್ತು.

ಕೇತನ್ ಮೆಹ್ತಾ ನಿರ್ದೇಶನದ ‘ಸರ್ದಾರ್’ (1993) ಚಿತ್ರದಲ್ಲಿ ಅನ್ನು ಕಪೂರ್ ಅವರು ಗಾಂಧಿ ಪಾತ್ರ ನಿಭಾಯಿಸಿದ್ದರು. ಸರ್ದಾರ್ ಪಟೇಲ್ ಜೀವನ ಮತ್ತು ಆಗಿನ ಕಾಲಘಟ್ಟವನ್ನು ಈ ಚಿತ್ರವು ಆಧರಿಸಿತ್ತು.

ಶ್ಯಾಮ್ ಬೆನಗಲ್ ಅವರ ‘ದಿ ಮೇಕಿಂಗ್ ಆಫ್ ದಿ ಮಹಾತ್ಮ’ (1996) ಚಿತ್ರದಲ್ಲಿ ರಜತ್ ಕಪೂರ್ ಗಾಂಧಿಯಾಗಿದ್ದರು. ಮಹಾತ್ಮ ರೂಪುಗೊಂಡಿದ್ದು ಹೇಗೆ ಎಂಬುದನ್ನು ಈ ಚಿತ್ರ ಎಳೆಎಳೆಯಾಗಿ ಪ್ರಸ್ತುತಪಡಿಸಿತ್ತು.

ನಟ ಕಮಲ್ ಹಾಸನ್ ಅಭಿನಯದ ‘ಹೇ ರಾಮ್’ (2000) ಚಿತ್ರದಲ್ಲಿ ನಸೀರುದ್ದೀನ್ ಶಾ ಅಭಿನಯಿಸಿದ್ದರು. ದೇಶದ ವಿಭಜನೆ ಮತ್ತು ಗಾಂಧಿ ಹತ್ಯೆ ಆಧರಿಸಿದ ಈ ಚಿತ್ರದಲ್ಲಿ ನಸೀರುದ್ದೀನ್ ಶಾ ವಿಭಿನ್ನವಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಜಬ್ಬಾರ್ ಪಟೇಲ್ ನಿರ್ದೇಶನದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ (2000) ಚಿತ್ರದಲ್ಲಿ ಮೋಹನ್ ಗೋಖಲೆ ಗಾಂಧಿಯಾಗಿ ಅಭಿನಯಿಸಿದ್ದರು. ಈ ಚಿತ್ರವು ಅಂಬೇಡ್ಕರ್ ಜೀವನಗಾಥೆಯ ಗಾಂಧಿ ಪಾತ್ರದ ಮೇಲೆಯೂ ಬೆಳಕು ಚೆಲ್ಲಿತ್ತು.

ಸುರೇಂದ್ರ ರಾಜನ್ ಅವರು ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ (2002), ವೀರ್‌ ಸಾವರ್ಕರ್ (2001) ಮತ್ತು ‘ಬೋಸ್: ದಿ ಫಾರಗಟನ್ ಹೀರೋ (2004) ಚಿತ್ರದಲ್ಲಿ ಗಾಂಧಿಯಾಗಿ ಅಭಿನಯಿಸಿದ್ದರು.

ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶನದ ‘ಗಾಂಧಿ, ಮೈ ಫಾದರ್’ (2007) ಚಿತ್ರದಲ್ಲಿ ದರ್ಶನ ಜರಿವಾಲಾ ಗಾಂಧಿ ಪಾತ್ರದಲ್ಲಿ ನಟಿಸಿದ್ದರು. ಗಾಂಧಿ ಮತ್ತು ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಬಂಧ ಹೇಗಿತ್ತು ಎಂಬುದು ಚಿತ್ರ ಸಾದರಪಡಿಸಿತ್ತು.

ರಾಜ್‌ಕುಮಾರ್ ಹಿರಾನಿ ಅವರ ‘ಲಗೆ ರಹೋ ಮುನ್ನಾಭಾಯ್’ (2006) ಚಿತ್ರದಲ್ಲಿ ದಿಲೀಪ್ ಪ್ರಭಾವಾಲಕರ್ ವಿಶಿಷ್ಟ ಪಾತ್ರ ನಿಭಾಯಿಸಿದ್ದರು. ಈ ಚಿತ್ರದಲ್ಲಿ ನಾಯಕ ನಟ ಸಂಜಯ್‌ ದತ್‌ಗೆ ವಿಶಿಷ್ಟ ರೀತಿಯಲ್ಲಿ ಗಾಂಧಿ ಪ್ರಭಾವ ಬೀರಿದ್ದರು.

‘ಮಹಾತ್ಮ’ (2009) ಎಂಬ ತೆಲುಗು ಚಿತ್ರದಲ್ಲಿ ನಟ ಶ್ರೀಕಾಂತ್ ಗಾಂಧಿ ಪಾತ್ರ ನಿರ್ವಹಿಸಿದ್ದರು.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕೊರ್ಮಾವತಾರ’ (2013) ಕನ್ನಡ ಚಿತ್ರದಲ್ಲಿ ಗಾಂಧಿ ರೂಪದಲ್ಲಿ ರಂಗಕರ್ಮಿ ಶಿಕಾರಿಪುರ ಕೃಷ್ಣಮೂರ್ತಿ ಮತ್ತು ಕಸ್ತರೂಬಾ ರೂಪದಲ್ಲಿ ನಟಿ ಜಯಂತಿ ಅಭಿನಯಿಸಿದ್ದರು.

ಮಹಾತ್ಮ ಗಾಂಧಿ ಮತ್ತು ಬೆನ್‌ ಕಿಂಗ್‌ಸ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.