ಸಂಜೆ ಹೊತ್ತು ಗೆಳೆಯರ ಬಳಗ ಕಟ್ಟಿಕೊಂಡು ಕ್ರಿಕೆಟ್, ವಾಲಿಬಾಲ್ ಆಟುವ ಎಳೆ ವಯಸ್ಸಿನ ಈ ಹುಡುಗನಿಗೆ ಯಕ್ಷಗಾನದ ಶ್ರೀದೇವಿ ಪಾತ್ರ ನಿರ್ವಹಿಸುವ ಅವಕಾಶ ಬಂದಾಗ ಮೂಗಿನ ಮೇಲೆ ಬೆರಳಿಟ್ಟವರೇ ಹೆಚ್ಚು. ಆದರೆ, ವೇಷತೊಟ್ಟು ರಂಗಕ್ಕಿಳಿದ ನಂತರ ಇವರಿಗೆ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲೆಲ್ಲಾ ಅಪಾರ ಅಭಿಮಾನಿ ಬಳಗ.
ಕಿರಿವಯಸ್ಸಿನಲ್ಲೇ ಕಲೆಯೊಂದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡ ಯುವಕನ ಹೆಸರು ಅಕ್ಷಯ್ ಕುಮಾರ್ ಮಾರ್ನಾಡ್. ಓದಿದ್ದು ಎಂಬಿಎ. ಸೆಳೆದಿದ್ದು ಯಕ್ಷಗಾನ ಕಲೆ. ಎಂಬಿಎ ಮುಗಿಸಿ, ಆಕ್ಸಿಸ್ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಿ ಈಗ ಪ್ರಣವ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಯಕ್ಷಗಾನವನ್ನು ಅದಮ್ಯವಾಗಿ ಪ್ರೀತಿಸುವ ಅಕ್ಷಯ್, 2011ರಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸೇರಿದರು.
‘ಎಂಬಿಎ ಓದಿ ಯಕ್ಷಗಾನ ಸೇರುವುದಾ..’ ಎಂದು ಅವರಿವರು ಪ್ರಶ್ನಿಸಿದರೂ ಕೆಲವೇ ವರ್ಷಗಳಲ್ಲಿ ಅವರ ಪಾತ್ರ ನಿರ್ವಹಣೆಯ ಶೈಲಿಗೆ ಅಭಿಮಾನಿ ಬಳಗ ಸೃಷ್ಟಿಯಾಯಿತು. ಅವರು ಉಡುಪಿ ಜಿಲ್ಲೆಯ ಕಾರ್ಕಳದ ಬಳಿ ’ಮಾರ್ನಾಡ್’ನವರು. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಮಹಾವೀರ ಪಾಂಡಿಕಾ ಎಂಬ ಯಕ್ಷಗಾನ ಗುರುಗಳು ಹೆಜ್ಜೆಗಾರಿಕೆಯ ಧೀಂಕಿಟ ಕಲಿಸಿದರು. ಬಾಲ್ಯದಲ್ಲಿ ರಾತ್ರಿಯಿಡೀ ಯಕ್ಷಗಾನ ನೋಡುತ್ತಿದ್ದ ಅಕ್ಷಯ್‌ಗೆ ಹೆಜ್ಜೆಗಾರಿಕೆಯ ಲಯ ಗೊತ್ತಾಗಲು ಬಹುಕಾಲ ಬೇಕಾಗಲಿಲ್ಲ. ಕಾಲೇಜು ದಿನಗಳಲ್ಲೇ ಹವ್ಯಾಸಿ ಕಲಾವಿದನೆಂದು ಗುರುತಿಸಿಕೊಂಡ ಅವರು ಮೇಳ ಸೇರಿದ ಎರಡು ವರ್ಷ ಇತರ ಸ್ತ್ರೀಪಾತ್ರಮಾಡಿದರು. ಈಗ ಶ್ರೀ ಕಟೀಲು ಮೇಳದ ಜನಪ್ರಿಯ ಯಕ್ಷಗಾನ ಪ್ರಸಂಗ ’ಶ್ರೀದೇವಿಮಹಾತ್ಮೆ’ ಪ್ರದರ್ಶನದಲ್ಲಿ ಶ್ರೀದೇವಿಯಾಗಿ, ಕದಂಬವನದಲ್ಲಿ ಉಯ್ಯಾಲೆಯಾಡುವ ಕೌಶಿಕೆಯಾಗಿ, ಶುಂಭನನ್ನು ವಧಿಸುವ ಶಾಂಭವಿಯಾಗಿ ಶೋಭಿಸುತ್ತಿದ್ದಾರೆ.
‘ನಾನು ಚಿಕ್ಕವನಿದ್ದಾಗ ಕಟೀಲು ಮೇಳ ಯಕ್ಷಗಾನ ನೋಡುತ್ತಿದ್ದೆ. ಆಗ ಪುಂಡರೀಕಾಕ್ಷ ಉಪಾಧ್ಯಾಯರು ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅದನ್ನು ನೋಡುತ್ತ ಬೆಳೆದವನು ನಾನು. ಕೋಳ್ಯೂರು ರಾಮಚಂದ್ರ ರಾಯರು, ಶಶಿಕಾಂತ್ ಶೆಟ್ಟಿ ಕಾರ್ಕಳ, ದೀಪಕ್ ರಾವ್ ಪೇಜಾವರ ಮುಂತಾದವರು ನಿರ್ವಹಿಸಿದ ಸ್ತ್ರೀಪಾತ್ರಗಳನ್ನೂ ತುಂಬ ಮೆಚ್ಚಿಕೊಂಡಿದ್ದೇನೆ’ ಎನ್ನುತ್ತ ಕಲಿತು ಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾರೆ. ದುಬೈ, ಮಸ್ಕತ್‌ನಲ್ಲಿ ನಡೆದ ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಕಾಲೇಜಿನ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಅಕ್ಷಯ್‌ಗೆ ಭಾಗವತಿಕೆ ಕಲಿಯಬೇಕೆಂಬ ಆಸೆ ತೀವ್ರವಾಗಿತ್ತು. ಆದರೆ ಪಾತ್ರಧಾರಿ ಯೋಗವೇ ಒಲಿದು ಬಂತು. ರಾತ್ರಿ ಬಯಲಾಟ, ಹಗಲು ಬ್ಯಾಂಕಿನ ಕೆಲಸವನ್ನು ಸಮತೋಲನದಲ್ಲಿ ನಿರ್ವಹಿಸುವ ಅವರಿಗೆ ಭಾಗವತ, ಮಹಾಭಾರತ, ರಾಮಾಯಣದ ಓದಿನ ಹಿನ್ನೆಲೆಯಿದೆ. ದಿವಂಗತ ಕುಬಣೂರು ಶ್ರೀಧರರಾವ್ ಅವರಂತಹ ಹಿರಿಯ ಭಾಗವತರ ಮಾರ್ಗದರ್ಶನದಿಂದ ಕಲಿಕೆ ಸಾಧ್ಯವಾಯಿತು. ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣುಶರ್ಮ ಸೇರಿದಂತೆ ಹತ್ತಾರು ಹಿರಿಯ ಕಲಾವಿದರು ಯಕ್ಷಗಾನವೆಂಬ ಈ ಬೃಹತ್ ಕ್ಷೇತ್ರದ ಪಾಠಗಳನ್ನು ಹೇಳಿಕೊಡುತ್ತಲೇ ಇದ್ದಾರೆ ಎನ್ನುವ ವಿನಯವಂತ. 2019ರಲ್ಲಿ ಏನು ಯೋಜನೆ ಇದೆ ಎಂದು ಪ್ರಶ್ನಿಸಿದರೆ, ‘ಏನಿಲ್ಲ, ಇನ್ನಷ್ಟು ಓದಬೇಕು’ ಎನ್ನುವ ಜ್ಞಾನಮುಖಿ. ಚಿಕ್ಕಂದಿನಲ್ಲಿಯೇ ಯಕ್ಷಗಾನದ ಗೀಳು ಅಂಟಿಸಿಕೊಂಡ ಅಕ್ಷಯ್ ಅವಸ್ಥೆ ಕಂಡು ತಲೆಬಿಸಿ ಮಾಡಿಕೊಂಡಿದ್ದ ಅಪ್ಪ ಕೃಷ್ಣಪ್ಪ ಪೂಜಾರಿ, ಅಮ್ಮ ಯಶೋದಾ ಅವರಿಗೆ ಈಗ ಖುಷಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.