ADVERTISEMENT

ಅಂಬೇಡ್ಕರರ ‘ಘರ್-ವಾಪಸಿ’!

ನನ್ನ ಅಂಬೇಡ್ಕರ್

​ಆರೀಫ್ ರಾಜಾ
Published 14 ಏಪ್ರಿಲ್ 2019, 9:12 IST
Last Updated 14 ಏಪ್ರಿಲ್ 2019, 9:12 IST
   

ಗಾಂಧಿಯಂತೆ ಅಂಬೇಡ್ಕರರನ್ನು ‘ದಲಿತ್ ಬ್ರ್ಯಾಂಡ್’ನಿಂದ ಬಿಡುಗಡೆಗೊಳಿಸಿ, ಹೊಸ ತಲೆಮಾರಿನ ಉತ್ಸಾಹಿ ಯುವ ಮನಸುಗಳಿಗೆ ದಕ್ಕಿಸಬೇಕಾಗಿದೆ.

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ಕೆಲವು ವರ್ಷಗಳ ಹಿಂದೆ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ಕೊಡುತ್ತೇನೆಂದು ಸರ್ಕಾರ ಘೋಷಿಸಿದಾಗ, ‘ಮೊಟ್ಟ ಯಾಕೆ? ಬಾಳೆಹಣ್ಣು ಕೊಡ್ರಿ’ ಎಂದು ಬಲಪಂಥೀಯ ಬುದ್ಧಿಜೀವಿಗಳು, ಮಠಾಧೀಶರು ಬೀದಿಗಿಳಿದು ಪ್ರತಿಭಟಿಸಿದರು. ಸರ್ಕಾರವು ಅಷ್ಟಕ್ಕೆ ಹೆದರಿ ಸುಮ್ಮನಾಯಿತು. ಅಂಬೇಡ್ಕರ್ ನನ್ನೊಳಗೆ ಒಂದು ಪ್ರಬಲ ರೂಪಕವಾಗಿ ಹುಟ್ಟಿಕೊಂಡಿದ್ದು ಆವಾಗಲೆ ಅನಿಸುತ್ತೆ. ದುರಂತವೆಂದರೆ, ಸರ್ಕಾರಿ ಶಾಲೆಯ ಮಕ್ಕಳನ್ನು ಸಮೀಕ್ಷೆಗೊಳಪಡಿಸಿದಾಗ ಶೇ. 90ರಷ್ಟು ಮಕ್ಕಳು ಮೊಟ್ಟೆಯ ಪರವಾಗಿದ್ದರು.

ಕಾರಣ ಆರ್ಥಿಕವಾಗಿ ದುರ್ಬಲರಾದ ಕೆಳವರ್ಗದ ಬಡಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವುದರಿಂದ, ಹೊಟ್ಟಪಾಡಿಗಾಗಿ ಗುಳೆ ಹೋಗುವ ಅವರ ತಂದೆ-ತಾಯಿಗಳು ನಾವು ನಿತ್ಯ ಪಾಠದಲ್ಲಿ ಬೋಧಿಸುವ ‘ಸಮತೋಲನ ಆಹಾರ’ ಒದಗಿಸುವ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ, ಸಹಜವಾಗಿಯೇ ಮಕ್ಕಳು ನೂನ್ಯ ಪೋಷಣೆ ಹೋಗಲಾಡಿಸುವ ರುಚಿಯಾದ ಆರೋಗ್ಯಕರ ಮೊಟ್ಟೆಯ ಕಡೆಗೆ ಒಲವು ತೋರಿದ್ದರು.

ADVERTISEMENT

ರಾಯಚೂರು ಜಿಲ್ಲೆಯ ದೇವದುರ್ಗ ಅತಿ ಹೆಚ್ಚು ಮಕ್ಕಳು ನೂನ್ಯ ಪೋಷಣೆಯಿಂದ

ಬಳಲುತ್ತಿರುವ ಕರ್ನಾಟಕದ ತಾಲೂಕು. ಧರ್ಮದ ಹೆಸರಿನಲ್ಲಿ ನೈತಿಕ ಪೊಲೀಸ್-ಗಿರಿ ನಡೆಸುತ್ತಿರುವ ಹೆಣ್ಣುಮಕ್ಕಳ ಮೇಲಿನ ಅನಾಚಾರಗಳಿಗೆ, ದಿನಾ ಬೆಳಿಗ್ಗೆ ಎದ್ದರೆ ಪತ್ರಿಕೆಯಲ್ಲಿ ವರದಿಯಾಗುವ ದಲಿತರ ಮೇಲಿನ ಜಾತಿ ಅತ್ಯಾಚಾರಗಳಿಗೆ, ಗೋವನ್ನು ಇಟ್ಟುಕೊಂಡು ರಾಜಕೀಯ ಮಾಡುವ ಘನ ಸರ್ಕಾರದ ಪೀತ-ರಾಜಕಾರಣದ ನಿಲುವುಗಳಿಗೆ- ಅಂಬೇಡ್ಕರ್ ಗುರಾಣಿ ಮತ್ತು ಕತ್ತಿಯಂತೆ ಎದುರಾಗುತ್ತಾರೆ. ಅವರೇ ಹೇಳುವ ಹಾಗೆ ತಿನ್ನುವ ಆಹಾರ ಎನ್ನುವುದು ಇಂಡಿಯಾದಲ್ಲಿ ಜಾತಿ ಹಾಗೂ ಧರ್ಮದ ವೇಷ ತೊಟ್ಟು ಅವತರಿಸುವ ಸಾಂಸ್ಕೃತಿಕ ರಾಜಕೀಯವೇ ಆಗಿದೆ.

ಇನ್ನು ಜಾತಿಪದ್ಧತಿಯ ಬಗ್ಗೆ ಹೇಳುವುದೇ ಬೇಡ. ಇಂಡಿಯಾದ ಜಾತಿಪದ್ಧತಿ ಜೇಡರ ಬಲೆಯಂತೆ ತುಂಬ ಸಂಕೀರ್ಣವಾದುದು. ಬ್ರಾಹ್ಮಣರ ಮನೆಯಲ್ಲಿ ಲಿಂಗಾಯತ ಅಸ್ಪೃಶ್ಯ, ಲಿಂಗಾಯತರ ಮನೆಯಲ್ಲಿ ಒಕ್ಕಲಿಗ, ಒಕ್ಕಲಿಗರ ಮನೆಯಲ್ಲಿ ಹೊಲೆಯ ಮತ್ತು ಹೊಲೆಯರ ಮನೆಯಲ್ಲಿ ಇನ್ನ್ಯಾರೋ... ಮುಸ್ಲಿಂರ ಮನೆಯಲ್ಲಿ ಪಿಂಜಾರರಾದರೆ ಇನ್ನು ಹಕ್ಕಿ-ಪಿಕ್ಕಿ ಅಲೆಮಾರಿಗಳ ಕಥೆಯಂತು ಹೇಳುವುದೇ ಬೇಡ. ಸ್ಥಳೈಕ್ಯ, ಕಾಲೈಕ್ಯವಾಗಿರುವ ಬೇರೆ ಎಲ್ಲರ ಅಸ್ಪೃಶ್ಯತೆಯ ಸಮಸ್ಯೆಯು ಆ ನಿದಿಷ್ಟ ಸ್ಥಳ ಮತ್ತು ಕಾಲದಿಂದ ಹೊರ ಬಂದೊಡನೆ ತಾತ್ಕಾಲಿಕವಾಗಿಯಾದರೂ ಸರಿ ಹೋಗಬಹುದೇನೊ...ಆದರೆ ಭೂಮಿಯ ಅಂಚಿಗೆ ಬಂದು ನಿಂತಿರುವ, ಇನ್ನೊಂದೇ ಒಂದು ಹೆಜ್ಜೆ ಇಡಲು ನೆಲ ಗಟ್ಟಿ ಇಲ್ಲದ ಕಟ್ಟಕಡೆಯವರ ವಿಷಯದಲ್ಲಿ ಯಾವ ಆಯ್ಕೆ ಇದೆ?

ಶತಮಾನಗಳಿಂದ ಬಹಿಷ್ಕರಿಸಿ, ಈಗ ಒಮ್ಮಿಂದೊಮ್ಮೆಲೆ ಜ್ಞಾನೋದಯವಾದವರಂತೆ ಅಂಬೇಡ್ಕರರ ಘರ್-ವಾಪಸಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೇಲಿನ ಈ ಎಲ್ಲಾ ಸಿಕ್ಕುಗಳನ್ನು ಹೇಗೆ ಬಿಡಿಸಿಕೊಳ್ಳವುದು?
ನಿಜವಾಗಲು ಅಂಬೇಡ್ಕರರ ದಲಿತ ಚಿಂತನೆಗಳಿಗೆ ಹೊಡೆತ ಬೀಳುತ್ತಿರುವುದು, ನಿಜವಾದ ದಲಿತ ಸಂವೇದನೆಯ ಗಂಧ-ಗಾಳಿಯು ಇಲ್ಲದ ಡೋಂಗಿ ಅಂಬೇಡ್ಕರ್ ವಾದಿಗಳಿಂದ ಮತ್ತು ಲಂಕೇಶರು ಹೇಳಿದಂತೆ ‘ದ್ವೈತ-ಅದ್ವೈತ, ಮಾರ್ಕ್‌್ಸ-ಗಾಂಧೀ, ಎಲ್ಲಾ ಮುಗಿದು ಈಗ ಅಂಬೇಡ್ಕರರಿಗೆ ತಗುಲಿಕೊಂಡಿರುವವರಿಂದ’. ಹಾಗೂ ಮಾತೆತ್ತಿದರೆ ಮೈಕಿನ ಮುಂದೆ ‘ದಲಿತ ದಲಿತ ದಲಿತ’ ಎಂದು ನೂರಾರು ಸಲ ಹೇಳಿ, ಅಂಬೇಡ್ಕರರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ, ಭಾಷಣ ಬಿಗಿದು, ಬಹುಸಂಖ್ಯಾತರಲ್ಲಿ ಕಸಿವಿಸಿಯನ್ನುಂಟು ಮಾಡುತ್ತಿರುವವರಿಂದ.

ಗಾಂಧಿಯಂತೆ ಅಂಬೇಡ್ಕರರನ್ನು ‘ದಲಿತ್ ಬ್ರ್ಯಾಂಡ್’ನಿಂದ ಬಿಡುಗಡೆಗೊಳಿಸಿ, ಹೊಸ ತಲೆಮಾರಿನ ಉತ್ಸಾಹಿ ಯುವ ಮನಸುಗಳಿಗೆ ಅಂಬೇಡಕರ್ ಚಿಂತನೆ ದಕ್ಕುವಂತೆ ಮಾಡುವುದು ‘ನಿಜ ಅಂಬೇಡ್ಕರ್’ ವಾದಿಗಳ ಜವಾಬ್ದಾರಿಯಾಗಿದೆ. ಇಂಡಿಯಾದಲ್ಲಿ ದಲಿತರಲ್ಲದ ಮೇಲ್ವರ್ಗದವನಿಗೆ ಅಂಬೇಡ್ಕರ್ ಬಹುಶಃ ಬದುಕಿನ ಒಂದು ಕಠೋರ ಅನುಭವವಾಗಿಯಲ್ಲ; ಕೇವಲ ಪುಸ್ತಕದ ವಿಚಾರವಾಗಿ ದಕ್ಕುತ್ತಿರುವುದೇ ಒಂದು ದುರಂತ!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.