ತುಂಬಿದ ಬಾರ್‌ನಲ್ಲಿ ಖಾಲಿ ಗ್ಲಾಸುಗಳ
ತುಂಬಿಸುತ್ತ ಅವನು ದಿಟ್ಟಿಸುತ್ತಾನೆ
ಸೊಂಟ ತಿರುಗಿಸುವ, ಮೈ ಕುಣಿಸುವ
ಹೆಣ್ಣುಗಳ ಮೈಮನದ ದಿಗಂಬರತೆಯನ್ನು
ಅವರನ್ನು ಕುಣಿಸುವ ನಿರ್ದಯತೆಯ
ಗೋರಿಯಲ್ಲಿ ಒಂದೊಂದಾಗಿ ಹುಗಿಯುತ್ತಾನೆ
ತನ್ನ ಬಾಲ್ಯದ ಭವ್ಯ ಕನಸುಗಳನ್ನ
ಟೇಬಲುಗಳ ಮಧ್ಯದ ಜಾಗವಾದರೂ
ಎಷ್ಟು ಗಾವುದ ದೂರದ್ದು?
ನಡುಗುವ ಕೈಯೊಂದು ತಡಕಾಡುತ್ತಿದೆ
ಕೋಟಿನ ಮೂಲೆಯ ಕಿಸೆಯಲ್ಲಿ
ಇನ್ನೂ ಇರಬಹುದಾದ ಲೆಕ್ಕಚಾರಗಳ ಪಟ್ಟಿಯನ್ನು
ಅನಿಸುತ್ತದೆ ಅವನಿಗೂ ಕೆಲವೊಮ್ಮೆ ಅವರ ಕುಣಿತದ
ವಿಷಾದ ಸಂಭ್ರಮದಲ್ಲಿ ಹೊಳೆಯಬೇಕಿತ್ತು ತಾರೆ
ಅಗ್ನಿಸ್ಪರ್ಶದಲ್ಲಿ ತೊಳೆಯಬೇಕಿತ್ತು ಆಕಾಶ,
ಉದುರಿದರೆ ಉಲ್ಕೆ ಸೃಷ್ಟಿಸಬೇಕಿತ್ತು ನವ ಸಂವತ್ಸರ.
ಎಲ್ಲಿಯೋ ಬಾಟಲಬಿದ್ದು ಒಡೆದ ಸಪ್ಪಳ.
ತನ್ನದೇ ಕೈಯ ತಟ್ಟೆ ಜಾರಿತೆ
ಬೆರಳ ತುದಿಯಲ್ಲಿ ಬೆವರು ಸೂಸಿ?
ಅಂಗಾಂಗ ಒದ್ದೆಯಾಗುತ್ತದೆ
ಮತ್ತೊಂದು ತಿಂಗಳದ ದುಡಿತದ ಸಂಕಟಕ್ಕೆ
ಊಟ ಒಲೆಯ ಮುಂದೆ ಶೂನ್ಯ ದೃಷ್ಟಿಸುವ
ಅವ್ವನ ಒಂದು ಹೊತ್ತಿನ
ಉಪವಾಸದ ಅನಿವಾರ್ಯತೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.