ADVERTISEMENT

ಓದಲಾಗದ ಮಹಾಕಾವ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

`ಚೀನಾದ ಮಹಾಗೋಡೆ~ ಪ್ರಪಂಚದಲ್ಲಿಯೇ ಹೆಸರುವಾಸಿ. ಹೆಚ್ಚಿನ ದೇಶಗಳಲ್ಲಿ ತಮ್ಮ ರಾಜ್ಯದ ವಾಸಸ್ಥಾನವನ್ನು ಕೇಂದ್ರವಾಗಿಸಿಕೊಂಡು ಕೋಟೆಗೋಡೆಗಳನ್ನು ಕಟ್ಟಿದ್ದರೆ, ಇವರು ತಮ್ಮ ಆಳ್ವಿಕೆಯ ಸೀಮಾ ಭೂಮಿಕೆಗೇ ಕೋಟೆಗೋಡೆ ಕಟ್ಟಿದ್ದಾರೆ! ಕೋಟೆಯ ಒಳಗೆ ಚೀನಿಯರ ಆಳ್ವಿಕೆ, ಕೋಟೆಯ ಹೊರಗೆ ಕಾಲಕ್ಕೆ ತಕ್ಕಂತೆ ಬದಲಾದ ವೈರಿ ಪಡೆಯ ಆಳ್ವಿಕೆ. ಒಂದೆಡೆಯಿಂದ ಕೋಟೆ ಕಟ್ಟಿದ ಚೀನಿಯರ ಬಗ್ಗೆ ಹೆಮ್ಮೆ ಎನಿಸುತ್ತದೆ.

ಆಕ್ರಮಣ ಎದುರಿಸಲು ಮಾಡಿಕೊಂಡ ಸಿದ್ಧತೆಯೇ ಈ ಕೋಟೆ ಎಂದು ಯೋಚಿಸಿದಾಗ ಇವರ ಎದುರಾಳಿಗಳು ಎಷ್ಟು ಬಲಶಾಲಿಗಳು ಎಂಬುದನ್ನೂ ಗೋಡೆ ಬಿಂಬಿಸುತ್ತದೆ ಮತ್ತು ಆ ಕೋಟೆ ಗೋಡೆಯೊಂದಿಗೆ ಎದುರಾಳಿಗಳ ಹೆಸರೂ ಸ್ಥಾಯಿಗೊಂಡಂತಾಗಿದೆ.

ಗುಡ್ಡಬೆಟ್ಟಗಳ ಏರಿಳಿತಗಳಿಗೆ ಹೊಂದಿಕೊಂಡು ವಿಶಾಲವಾದ ಕಣ್ಣೋಟಕ್ಕೆ ಮೀರಿ ಬೆಳೆದು ನಿಂತಿರುವ `ಚೀನಾ ಗೋಡೆ~ ಮನುಜ ನಿರ್ಮಿಸಿದ ಪ್ರಪಂಚದ ಅದ್ಭುತಗಳಲ್ಲೊಂದು ಎಂದಿರುವುದು ಸರಿಯಾಗಿಯೇ ಇದೆ.

ಇದು ಬೆಟ್ಟದ ಮೇಲೆ ಹಾಸಿಕೊಂಡ ಮಹಾ ಹೆಬ್ಬಾವಿನಂತಿದೆ. ನನಗದರ ಏರು ಇಳಿವಿನ ಮಹಾನಡಿಗೆಯು ಡ್ರ್ಯಾಗನ್‌ನಂತೆಯೂ ಕಂಡಿತು. ಸ್ವಲ್ಪ ಕೆಳಗೆ ಬಂದು ನೋಡಿದರೆ, ಈ ಜನ ಬೆಟ್ಟಕ್ಕೆ ಬಟ್ಟೆ ತೊಡಿಸಿದವರು ಎನಿಸಿತು. ಗಿರಿ ಕಂದರಗಳಿಂದ ಕೂಡಿದ ಬೆಟ್ಟಗಳೊಂದಿಗೆ ಕೋಟೆಗೋಡೆ ಹಾಸಿಕೊಂಡಿದ್ದರಿಂದ ಅದು ಕೋಟೆಗೋಡೆಯ ಸೌಂದರ್ಯ ಹೆಚ್ಚಿಸಿದೆಯೋ ಅಥವಾ ಕೋಟೆಗೋಡೆ ಬೆಟ್ಟಕ್ಕೆ ಬೆಟ್ಟವನ್ನೇ ಸುತ್ತಿ ನಿಂತಿದ್ದರಿಂದ ಬೆಟ್ಟದ ಅಂದ ಹೆಚ್ಚಿದೆಯೋ ಬಿಡಿಸಿ ಹೇಳುವುದು ಸಾಧ್ಯವಿಲ್ಲ.

ಬೆಟ್ಟದ ತುತ್ತ ತುದಿಯ ಕೋಟೆಗೋಡೆಯ ಮೇಲೆ ನಿಂತಾಗ; ಈ ಐದು ಅಡಿ ಎತ್ತರದ ಹುಲುಮಾನವ, ವೈರಿಯನ್ನು-ಸೃಷ್ಟಿಯನ್ನು ಗೆಲ್ಲುವುದಕ್ಕೆ ಏನೆಲ್ಲಾ ಸಾಹಸ ಮಾಡಿದ್ದಾನೆ. ಕಾಲದೊಂದಿಗೆ ಪ್ರಕೃತಿಯೊಂದಿಗೆ ಎಷ್ಟು ಸ್ಪರ್ಧೆ ನಡೆಸಿದ್ದಾನೆ ಎನಿಸುತ್ತದೆ.
 
ಈ ಸಾಹಸ - ಸಂಘರ್ಷದ ಸ್ಪರ್ಧೆಯಲ್ಲಿ ಆತ ಸೋತನೋ ಗೆದ್ದನೋ? ಅಳೆದು ಹೇಳುವುದು ಕಷ್ಟ. ಆದರೆ ಆ ಪರ್ವತದ ಕೋಟೆಗೋಡೆಯ ತುದಿಯನ್ನು ಏರಿ ನಿಂತಾಗ ಗೆದ್ದ ಸಂಭ್ರಮ ಎದೆಯೊಳಗಿದ್ದರೂ, ಆ ಬೆಟ್ಟ ಪರ್ವತದ ಗಿರಿಗಳೆದುರು ನಾವೆಷ್ಟು ಚಿಕ್ಕವರು ಎನಿಸಿಬಿಡುತ್ತದೆ. 

ಸೃಷ್ಟಿಯ ನಿರ್ಮಾಣದೆದುರು ನಾವೇನೂ ಅಲ್ಲದಿದ್ದರೂ ನಾವು ಸೃಷ್ಟಿಯೊಂದಿಗೆ ಸ್ಪರ್ಧಿಸುತ್ತಲೇ ಇರುತ್ತೇವೆ. ಕಾಲ ನಿಲ್ಲುವುದಿಲ್ಲ. ಮನುಷ್ಯನೂ ಸುಮ್ಮನಿರುವುದಿಲ್ಲ. ಮನುಜ ನಿರ್ಮಿತವೂ ಸೃಷ್ಟಿ ನಿರ್ಮಿತವೂ ಯಾವುದೂ ಸ್ಥಿರವಲ್ಲ. ನದಿಗಳು ದಿಕ್ಕು ಬದಲಿಸುತ್ತವೆ, ಕಡಲು ಪಾತ್ರ ಬದಲಾಯಿಸುತ್ತದೆ. ಗೋಳದಲ್ಲಿ ಏನೆಲ್ಲಾ ಇತ್ತು ಎನ್ನಿಸಿ, ಇಲ್ಲ ಎನಿಸಿಬಿಡುವುದೂ ಇದೆ. ಕಣ್ಣುಮುಚ್ಚಾಲೆಯ ಆಟದಂತೆ, ಅದು ಬುದ್ಧನ ಕ್ಷಣಿಕ ತತ್ವದಂತೆ!

ಈ ಕೋಟೆಗೋಡೆ ಕಟ್ಟಿದಾಗ ಇ್ದ್ದದುದು ಒಟ್ಟು 8851 ಕಿ.ಮೀ ಉದ್ದ. ಈಗ 2800 ಕಿ.ಮೀ. ಇದ್ದು, ಉಳಿದುದು ಹಾಳಾಗಿದೆ. 2,700 ವರ್ಷಗಳಷ್ಟು ಹಳೆಯದು ಈ ಗೋಡೆ.
ಕೋಟೆಗೆ ಹೋಗುವಾಗ ಬೆಟ್ಟ ತುಂಬ ಕಡಿದಾಗಿದೆ. ಆ ಬೆಟ್ಟದಲ್ಲಿ ಕೋಟೆ ಇರುವುದರಿಂದ ಏರಿಳಿತದ ನಡಿಗೆ ಹೆಚ್ಚಿರಬಹುದೆಂದು ಭಾವಿಸಿದ್ದೆ. ವಾಹನ ನಮ್ಮನ್ನು ಕೋಟೆ ದ್ವಾರದ ಹತ್ತಿರ ಇಳಿಸಿದ್ದರಿಂದ ಬೆಟ್ಟದ ದಾರಿಯಲ್ಲಿ ನಡೆಯುವುದು ಅಷ್ಟೇನೂ ಇರಲಿಲ್ಲ.
 
ಆದರೆ ಕೋಟೆಯೊಳಗಡೆ ನಡೆಯುವುದೂ ಕೆಲವರಿಗೆ ಒಂದು ಸಾಹಸದ ಕೆಲಸವೇ ಆಗಿತ್ತು. ಬೆಟ್ಟಕ್ಕೆ ಅನುಗುಣವಾಗಿಯೇ ಕೋಟೆ ಕಟ್ಟಿದ್ದರಿಂದ ಕೋಟೆ ಹತ್ತಿ ನಡೆಯುವುದು ಎಂದರೆ ಬೆಟ್ಟವೇ ಏರಿದಂತೆ! ಕೆಲವೆಡೆ ಸ್ವಲ್ಪ ಪ್ರಮಾಣದ ಹಾದಿ ಸಮತಟ್ಟಾದ ಸ್ವರೂಪವಿದ್ದರೆ ಇನ್ನು ಕೆಲವೆಡೆ ಕಡಿದು. ಮೆಟ್ಟಿಲುಗಳೇ ಇಲ್ಲದೆ ಇಳಿಜಾರಿನ ಕಲ್ಲುಹಾಸಿಗೆಯ ಮೇಲೆ ಹತ್ತಬೇಕು.

ಇನ್ನೂ ಕೆಲವೆಡೆ ಮೆಟ್ಟಿಲುಗಳಿದ್ದರೂ ಅವುಗಳ ಎತ್ತರ ಒಂದೇ ಸ್ವರೂಪವಿಲ್ಲ. ಈ ವೈವಿಧ್ಯತೆಯ ನಡಿಗೆ ಬೇಗನೆ ಆಯಾಸಕ್ಕೆ ತಳ್ಳುತ್ತದೆ. ನಾನಂತೂ ಕೆಲವೆಡೆ ಮೆಟ್ಟಿಲುಗಳನ್ನೂ ಓಟದ ರೀತಿಯಲ್ಲಿಯೇ ಹತ್ತಿದೆ. ಇಳಿವಾಗ ಇನ್ನೊಂದು ರೀತಿಯ ಅನುಭವ! ನಮ್ಮಲ್ಲಿ ಹೆಸರುವಾಸಿ ದೇವಾಲಯಗಳೆಲ್ಲ ಬೆಟ್ಟದ ಮೇಲೆಯೇ ಇವೆ. ಹೀಗಾಗಿ ದೇವರದರ್ಶನ ಭಾಗ್ಯ ಬೇಕು ಎಂದರೆ ಕಷ್ಟಪಡಬೇಕು ಎಂದು ಹೇಳುತ್ತಾರೆ. ಕಷ್ಟ ಪಡದೆ ಯಾವುದೂ ದೊರೆಯದು.

ವಯಸ್ಸಾದವರಿಗೆ ಕಡಿದಾದ ಭಾಗ ಏರುವುದು ಸ್ವಲ್ಪ ಕಷ್ಟ. ಬೆಟ್ಟವೆಲ್ಲಾ ಏರಿಬಂದ ನಡುವಯಸ್ಸಿನ ಮಹಿಳೆಯೊಬ್ಬರು ಟ್ರ್ಯಾಲಿಯ ಸ್ಟೇಷನ್ ಪಕ್ಕದಲ್ಲಿರುವ, ವಿಶ್ರಾಂತಿಗಾಗಿ ಹಾಕಲಾದ ಆಸನಗಳ ಸ್ಥಳದಲ್ಲಿ ಕುಸಿದು ಬಿದ್ದರು. ಅಕ್ಕಪಕ್ಕದಲ್ಲಿದ್ದ ಕೆಲವರು ನೀರು ಕೊಟ್ಟರೆ ಇನ್ನೂ ಕೆಲವರು ತಮ್ಮದೇ ಆದ ರೀತಿಯಲ್ಲಿ ಆರೈಕೆ ಮಾಡುತ್ತಿದ್ದರು.

ಟ್ರ್ಯಾಲಿ ಟ್ರೇನ್‌ನಲ್ಲಿ ಹೋಗುವುದು ಒಂದು ಬೀಭತ್ಸಾನುಭವ. ಭಯ-ಸಂತಸ-ಸಂಭ್ರಮ ಎಲ್ಲವೂ ಏಕಕಾಲಕ್ಕೆ ಮೈದುಂಬಿ ನಿಲ್ಲುವ ಕ್ಷಣಗಳವು. ಮೇಲಿನಿಂದ ಕೆಳಕ್ಕೆ ನೋಡಲಾಗದಷ್ಟು ಆಳವಾದ ಕಂದರಗಳು. ಬಿದ್ದರೆ ಹೇಗೆ ಎಂಬ ಭಯ ಹುಟ್ಟಿಸಿ ಪಾತಾಳಕ್ಕೆ ಹೋದ ಅನುಭವ. ಕಲ್ಲು ಬೆಟ್ಟದ ಬಂಡೆಗಳೂ ಬೃಹತ್ತಾಗಿ ಹಾಸಿಕೊಂಡಿವೆ.

ಬೆಟ್ಟಕ್ಕೆ ಬೆಟ್ಟವೇ ಉಸಿರಾಡುವಂತೆ ಕಾಣುವ ಸಾವಿರದ ಹಸಿರಿನ ತಾಣ. ಸವಿಯದೆ ಹೇಗಿರಲಿ ಎಂದು ಕಣ್ಣರೆಪ್ಪೆ ಬಡಿಯದಂತೆ ಮಾಡುವ ಸೃಷ್ಟಿ ಸೌಂದರ್ಯ. ಅತ್ತ ಭಯ ಇತ್ತ ಸಂಭ್ರಮ.

ಹೋಗುವಾಗ ಬರುವಾಗ ಭಯದಲ್ಲಿಯೇ ಒಂದು ಕೈಯಿಂದ ಕುರ್ಚಿ ಹಿಡಿದು ಇನ್ನೊಂದು ಕೈಯಲ್ಲಿ ಕ್ಯಾಮರಾ ಹಿಡಿದು ನೋಡಿಯೂ ನೋಡದವನಂತೆ ವಿಡಿಯೋ ಮಾಡಿದೆ. ಕೆಳಗೆ ಬಂದಾಗ `ಅಯ್ಯೋ~ ಎನ್ನುವ ದೊಡ್ಡ ನಿಟ್ಟುಸಿರು. ಕೆಳಗಡೆ ಸಣ್ಣ ಸಣ್ಣ ಅಂಗಡಿಗಳು, ಅಲ್ಲಿ ಹಲವು ವಸ್ತುಗಳು. ನಮ್ಮವರಲ್ಲಿ ಕೆಲವರು ನೆನಪಿಗಾಗಿ ಇರಲಿ ಎಂದು, ಸ್ನೇಹಿತರಿಗೆ ಕಾಣಿಕೆಯಾಗಿ ಕೊಡಲೆಂದು ಚೀನಾವಾಲಿನ ಪ್ರತಿಕೃತಿಗಳನ್ನು ತೆಗೆದುಕೊಂಡರು.

ಈ ಕೋಟೆ ಗೋಡೆಯು 8 ಮೀಟರ್ ಎತ್ತರ, 7 ಮೀಟರ್ ಅಗಲವಿದೆ. ಬೆಟ್ಟದ ತುದಿ ಬಂದಾಗಲೆಲ್ಲ ಕಾವಲು ಗೋಪುರ ನಿರ್ಮಿಸಲಾಗಿದೆ. ಬೆಟ್ಟದ ತುದಿ ಬಾರದೆ ಹೋದಾಗಲೂ ಇಂಥ ಗೋಪುರಗಳಿವೆ. ಸುಮಾರು 200 ಮೀಟರ್ ಅಂತರಕ್ಕೊಂದರಂತೆ ಕಟ್ಟಲಾಗಿದೆ.

ಬೆಟ್ಟದ ಮೇಲೆ ಕಟ್ಟಲಾದ ಕಾವಲುಗೋಪುರಗಳು 12 ಮೀಟರ್ ಎತ್ತರವಾಗಿದ್ದು, ಇಂಥ ಕಾವಲು ಗೋಪುರಗಳು 25 ಸಾವಿರಕ್ಕೂ ಹೆಚ್ಚಿವೆ ಎಂದು ಹೇಳಲಾಗುತ್ತದೆ. ಈ ಮಹಾಗೋಡೆಯ ಜೊತೆಗೆ ಉಪಗೋಡೆ, ಅಡಗುದಾಣ, ಶಸ್ತ್ರಾಸ್ತ್ರ ಸಂಗ್ರಹಾಲಯ, ಗುಹಾತಾಣಗಳಂಥ ಕ್ಷೇತ್ರಗಳೂ ಇರುವುದು ಗಮನಕ್ಕೆ ಬಂತು.

ನಾನು ಚಿಕ್ಕಂದಿನಿಂದ ಬೆಳೆದ ಮನೆ ಕೋಟೆಗೋಡೆಗೆ ಹೊಂದಿಕೊಂಡೇ ಇದ್ದುದರಿಂದ ಇಡೀ ಕೋಟೆಗೋಡೆಯನ್ನು ಸುತ್ತುತ್ತಿದ್ದೆ. ಕೋಟೆಗೋಡೆಯ ಮೇಲೆ ತುಪಾಕಿ ಇಡಲು ಸ್ಥಳಗಳು, ಅಡಗು ತಾಣಗಳು ಕಾಣುತ್ತಿದ್ದವು. ಬಂದೂಕನ್ನು ಗುರಿ ಇಟ್ಟು ಹೊಡೆಯಲು ಸಣ್ಣ ಸಣ್ಣ ಕಿಂಡಿಗಳು ಇರುತ್ತಿದ್ದವು. ಅಂಥವೆಲ್ಲಾ ಇಲ್ಲಿವೆ.

ಇದು ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಯುವಪ್ರೇಮಿಗಳು ಜನಸಂದಣಿ ಇಲ್ಲದ ಕೋಟೆಯ ದಾರಿಯನ್ನು ಶೋಧಿಸಿ ಹೋಗುತ್ತಿದ್ದರು. ರಜೆಯ ದಿನವಾದರೆ ಜನದಟ್ಟಣೆ ಹೆಚ್ಚಿರುತ್ತದೆ ಎಂದು ನಮ್ಮ ಗೈಡ್ ಹಾಗೂ ವಾಹನ ಚಾಲಕ ಹೇಳಿದರು. ಹೀಗಾಗಿ ಶನಿವಾರ ಈ ಜಾಗಕ್ಕೆ ಹೋಗಬೇಕಾಗಿದ್ದ ನಾವು ಶುಕ್ರವಾರವೇ ಹೋಗುವುದೆಂದು ತೀರ್ಮಾನಿಸಿ ಪ್ರಯಾಣದ ದಿಕ್ಕು ಬದಲಿಸಿದರೂ ಜನಸಂದಣಿ ಅಧಿಕವಾಗಿತ್ತು. ರಜೆ ಇಲ್ಲದ ದಿನವೇ ಇಷ್ಟೊಂದು ಜನ!

ಚೌ ಮನೆತನದ ಅರಸರು ಉತ್ತರಚೀನದ ಪಶ್ಚಿಮಭಾಗದಲ್ಲಿ ಆಳಿದರು. ಇವರೇ ಚೀನಾದ ಮಹಾಗೋಡೆಯ ಮೊದಲ ಭಾಗವನ್ನು ಕಟ್ಟಿಸಿದರು ಎನ್ನಲಾಗಿದೆ. ಈ ಕೋಟೆಗೋಡೆಯನ್ನು ಏಕಕಾಲಕ್ಕೆ ಕಟ್ಟಲಾಗಿಲ್ಲ. ಮೊದಲು ತುಂಡು ತುಂಡಾಗಿ ತಮ್ಮ ರಕ್ಷಣೆಗಾಗಿ ಅರಸರು ಕಟ್ಟಿಸಿದರು. ಚೀನಿ ಚಕ್ರವರ್ತಿ ಚಿನ್ ಹ್ವಾಂಗ್ (ಕ್ರಿ.ಪೂ. 320-306) ಇಂಥ ಹಲವಾರು ಗೋಡೆಗಳನ್ನು ಒಂದುಮಾಡಿ ಅದಕ್ಕೊಂದು ಅಖಂಡ ರೂಪ ಕೊಟ್ಟು ಮಹಾಗೋಡೆಯಾಗಿಸಿದ. ಇದನ್ನು ಕೆಲವೆಡೆ ಇಟ್ಟಿಗೆಯಿಂದ ಕಟ್ಟಿದರೆ ಇನ್ನು ಕೆಲವೆಡೆ ಕಲ್ಲಿಂದ ಕಟ್ಟಲಾಗಿದೆ.

ಹಾಳಾದ ಚೀನಾ ಕೋಟೆಯ ಗೋಡೆಯನ್ನು ನೋಡಿದಾಗ ಹಾಳು ಹಂಪೆಯ ನೆನಪಾಯಿತು. ಹಂಪೆಗಿರುವ ಕಲಾತ್ಮಕತೆ ಇದಕ್ಕೆ ಇಲ್ಲವಾದರೂ ಹಾಳಾದ ಗೋಡೆಗೂ ಭಗ್ನತೆಯ ಅಂದವಿದೆ. ಭವ್ಯತೆಯ ಮೆರುಗಿದೆ. ನನಗಿದು, ಪ್ರಪಂಚಕ್ಕೇ ಓದಲಾಗದ ಚೀನಾ ಮಹಾಕಾವ್ಯವೆನಿಸುತ್ತದೆ.

ಎಲ್ಲಿಂದ ಆರಂಭಿಸಬೇಕು ಎಲ್ಲಿಗೆ ಮುಗಿಸಬೇಕು ಅರ್ಥವಾಗುವುದಿಲ್ಲ. ಒಂದೇ ನೋಟಕ್ಕೆ ಮಾನವನ ಕಣ್ಣಿಗೆ ಇದೆಂದೂ ಕಾಣಲಾಗದು. ಬಿದ್ದಭಾಗದ ಮಹಾಗೋಡೆ ಹೆಬ್ಬಾವಿನ ಶರೀರವನ್ನೂ ನಡುನಡುವೆ ಉದ್ದಕ್ಕೆ ಸೀಳಿ ಎಸೆದಂತಿದೆ.

ಚೀನೀಯರ ಆಧುನಿಕ ನಗರದ ಅದ್ಭುತ ಬೆಳವಣಿಗೆ ಹಾಗೂ ಆಧುನಿಕ ತಂತ್ರಜ್ಞಾನ ಗಮನ ಸೆಳೆಯುತ್ತದೆ. ದೈತ್ಯಸ್ವರೂಪಿ ಕೆಲಸಗಾರರಾದ ಇವರು ಒಂದಲ್ಲಾ ಒಂದು ದಿನ ಈ ಹಾಳು ಮಹಾಗೋಡೆ ಕಡೆಗೆ ತಿರುಗಿ ನೋಡಿ ಅದಕ್ಕೆ ಹೊಸ ರೂಪವನ್ನು ಕೊಟ್ಟರೆ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ವಿಶ್ವದ ಜನಮನದಲ್ಲಿ ಈ ಮಹಾಗೋಡೆಯ ಕಾರಣದಿಂದಾಗಿ ಚೀನಾ ಬೇರು ಬಿಟ್ಟು ನಿಂತಿರುವುದು.
 
ಇದರ ಗುಣಾತ್ಮಕ ಸ್ಥಾನವನ್ನು ಕಾಪಾಡುವ ಕಾಲ ಅದಕ್ಕೆ ಎದುರಾಗಬಹುದು. ಯಾರಿಂದಲೂ ಸಮಗ್ರವಾಗಿ ನೋಡಲಾಗದ ಈ ಮಹಾಗೋಡೆಯೆಂಬ ಮಹಾಕಾವ್ಯವನ್ನು ಸುತ್ತಿ ನೋಡಲು ವಿಮಾನ, ಹೆಲಿಕಾಪ್ಟರ್‌ಗಳ ಸವಲತ್ತು ಕಲ್ಪಿಸಿದರೆ ಪ್ರವಾಸಿಗರ ಮನಸೆಳೆಯುವಲ್ಲಿ ಮತ್ತಷ್ಟು ಯಶಸ್ವಿ ಆಗಬಹುದೆನಿಸುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.